ಪ್ರಧಾನಿ ನರೇಂದ್ರ ಮೋದಿ ಭಾರತದ ಕೊನೆಯ ಗ್ರಾಮ ಮನಾಗೆ ಭೇಟಿ ನೀಡಿದ್ದಾರೆ. ಈ ವೇಳೆ ಸಾಂಪ್ರದಾಯಿಕ ಶೈಲಿಯಲ್ಲಿ ಮೋದಿಗೆ ಸ್ವಾಗತ ಕೋರಲಾಗಿದೆ. ಚೀನಾ ಗಡಿಯಲ್ಲಿರುವ ಈ ಗ್ರಾಮದಲ್ಲಿ ನಿಂತ ಮೋದಿ ವಿಶೇಷ ಸಂದೇಶ ಸಾರಿದ್ದಾರೆ.
ಉತ್ತರಖಂಡ(ಅ.21): ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಡುವಿಲ್ಲದೆ ಪ್ರವಾಸ ಮಾಡುತ್ತಿದ್ದಾರೆ. ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಿಲನ್ಯಾಸ, ಕಾಮಾಗಾರಿ ಪರಿಶೀಲನೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ಮೋದಿ ಬ್ಯೂಸಿಯಾಗಿದ್ದಾರೆ. ಇಂದು ಉತ್ತರಖಂಡದ ಪವಿತ್ರ ಕ್ಷೇತ್ರ ಕೇದಾರಾನಾಥಕ್ಕೆ ಭೇಟಿ ನೀಡಿದ ಮೋದಿ, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಭಾರತ ಚೀನಾ ಗಡಿಯಲ್ಲಿರುವ ಭಾರತದ ಕೊನೆಯ ಗ್ರಾಮ ಮನಾಗೆ ಮೋದಿ ಭೇಟಿ ನೀಡಿದರು. ಈ ವೇಳೆ ಮೋದಿಗೆ ಸ್ಥಳೀಯರು ಸಾಂಪ್ರದಾಯಿಕ ಶೈಲಿಯಲ್ಲಿ ಭವ್ಯ ಸ್ವಾಗತ ಕೋರಿದರು. ಚೀನಾ ಸಮೀಪದ ಗ್ರಾಮದಲ್ಲಿ ನಿಂತು ಮೋದಿ ಸ್ಥಳೀಯ ಉತ್ಪನ್ನಗಳ ಬಳಕೆಗೆ ಕರೆ ನೀಡಿದರು. ಇಷ್ಟೇ ಅಲ್ಲ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಎಲ್ಲಾ ಗ್ರಾಮಗಳನ್ನು ಭಾರತದ ಮೊದಲ ಗ್ರಾಮ ಎಂದು ಘೋಷಿಸಿದ್ದಾರೆ.
ಭಾರತದ ಕೊನೆಯ ಗ್ರಾಮ ಮನಾ ಪ್ರವಾಸಿಗರ ಸ್ವರ್ಗವಾಗಿದೆ. ಅತೀ ಹೆಚ್ಚಿನ ಪ್ರವಾಸಿಗರು ಈ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಇದೀಗ ಇದೇ ಗ್ರಾಮಕ್ಕೆ ಭೇಟಿ ನೀಡಿದ ಮೋದಿ, ಪ್ರವಾಸಿಗರು ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸಿ ಎಂದು ಮನವಿ ಮಾಡಿದ್ದಾರೆ. ಭಾರತದಲ್ಲಿ ಪ್ರವಾಸ ಮಾಡುವ ಪ್ರವಾಸಿದರು ತಮ್ಮ ಒಟ್ಟು ಮೊತ್ತದ ಶೇಕಡಾ 5 ರಷ್ಟು ಹಣದಲ್ಲಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ ಎಂದು ಮೋದಿ ಮನವಿ ಮಾಡಿದ್ದಾರೆ. ಇನ್ನು ಮುಂದೆ ಅಂತಾರಾಷ್ಟ್ರೀಯ ಗಡಿಯಂಚಿನಲ್ಲಿರುವ ಎಲ್ಲಾ ಗ್ರಾಮಗಳನ್ನು ಭಾರತದ ಮೊದಲ ಗ್ರಾಮ ಎಂದು ಕರೆಯಲಾಗುವುದು. ಇನ್ಮುಂದೆ ಈ ಗ್ರಾಮಗಳು ಭಾರತದ ಕೊನೆಯ ಗ್ರಾಮವಲ್ಲ ಎಂದು ಮೋದಿ ಘೋಷಿಸಿದ್ದಾರೆ.
