ನವದೆಹಲಿ(ಫೆ.11): ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ.

ಚುನಾವಣಾ ಆಯೋಗ ದೆಹಲಿಯ 70 ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ಪ್ರಕಟಿಸಿದ್ದು, ಆಡಳಿತಾರೂಢ ಆಪ್ 63 , ಬಿಜೆಪಿ 07 , ಹಾಗೂ ಕಾಂಗ್ರೆಸ್ ಶೂನ್ಯ ಕ್ಷೇತ್ರಗಳಲ್ಲಿ ಜಯ ದಾಖಲಿಸಿವೆ.

ಆಪ್’ ಕಾ ದಿಲ್ಲಿ: ಕೇಜ್ರಿ ಕುಳಿತರು ಮತ್ತೆ ಗದ್ದುಗೆಯಲ್ಲಿ!

ಈ ಮೂಲಕ ಆಪ್ ಮತ್ತೆ ಅಧಿಕಾರ ಪಡೆದಿದ್ದು, ಬಿಜೆಪಿ ಪ್ರಮುಖ ಪ್ರತಿಪಕ್ಷವಾಗಿ ಹೊರ ಹೊಮ್ಮಿದೆ. ಆದರೆ ಕಾಂಗ್ರೆಸ್ ಸ್ಥಾನ ಗಳಿಸುವ ಮೂಲಕ ದೆಹಲಿಯಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ.

ಸತತ ಮೂರನೇ ಬಾರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ದೆಹಲಿ ಗದ್ದುಗೆ ಪಡೆದಿದ್ದು ಹೇಗೆ ಎಂಬುದರ ಕುರಿತು ಇದೀಗ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಜನಪ್ರಿಯತೆಯನ್ನು ಮೀರಿ ಅರವಿಂದ್ ಕೇಜ್ರಿವಾಲ್ ಜಯಗಳಿಸಿದ್ದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಕೇಜ್ರಿವಾಲ್ ನೇತೃತ್ವದ ಆಪ್ ಗೆಲುವಿಗೆ ಕಾರಣ ನೋಡುವುದಾರೆ....
1. ಅಭಿವೃದ್ಧಿಯನ್ನೇ ಚುನಾವಣಾ ಅಜೆಂಡಾ ಮಾಡಿಕೊಂಡಿದ್ದು: ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ತನ್ನ ಐದು ವರ್ಷಗಳ ಅಭಿವೃಧ್ಧಿ ಅಜೆಂಡಾವನ್ನೇ ಮುಂದೆ ಮಾಡಿ ಪ್ರಚಾರಕ್ಕಿಳಿಯಿತು. ಪ್ರಮುಖವಾಗಿ ಮೊಹಲ್ಲಾ ಕ್ಲಿನಿಕ್, ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಶಿಕ್ಷಣ ಗುಣಮಟ್ಟ ಏರಿಸಿದ್ದು ಆಪ್’ಗೆ ಬಲ ನೀಡಿತು.

ಇಷ್ಟೇ ಅಲ್ಲದೇ ಮಹಿಳೆಯರಿಗೆ ನಗರ ಸಾರಿಗೆಯಲ್ಲಿ ಉಚಿತ ಪ್ರಯಾಣ, ಬಿಪಿಎಲ್ ಮನೆಗಳಿಗೆ ಉಚಿತ ವಿದ್ಯುತ್, ಎಲ್ಲ ನಗರಗಳಲ್ಲಿ ಸಿಸಿಟಿವಿ ಅಳವಡಿಕೆಯಂತ ಯೋಜನೆಗಳು ಜನರ ಮೆಚ್ಚುಗೆ ಗಳಿಸಿದವು.

ದೆಹಲಿ ‘ಕಮಲ’ ಮುಡಿಯದಿರಲು ಕಾರಣ: ಬೆರೆಸಲೇ ಇಲ್ಲ ಅಭಿವೃದ್ಧಿಯ ಹೂರಣ!

2. ದೇಶದ ಏಕೈಕ ಲಾಭದಾಯಕ ಮಂಡಿಸಿದ ಹೆಗ್ಗಳಿಕೆ: ಕೇಂದ್ರ ಸರ್ಕಾರವೂ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳೂ ನಷ್ಟದ ಬಜೆಟ್ ಮಂಡಿಸುವುದು ಸಾಮಾನ್ಯ ಸಂಗತಿ. ಆದರೆ ದೆಹಲಿ ಮಾತ್ರ ಲಾಭದ ಬಜೆಟ್ ಮಂಡಿಸಿ ಇಡೀ ದೇಶದ ಗಮನ ಸೆಳೆಯಿತು. ಒಟ್ಟು 7 ಸಾವಿರ ಕೋಟಿ ರೂ. ಲಾಭದ ಬಜೆಟ್ ಮಂಡಿಸಿದ ಹೆಗ್ಗಳಿಕೆ ಕೇಜ್ರಿವಾಲ್ ನೇತೃತ್ವದ ಆಪ್’ಗೆ ಸಲ್ಲುತ್ತದೆ. ಈ ಕುರಿತು ಸಿಎಜಿ ವರದಿ ಕೂಡ ಉಲ್ಲೇಖಿಸಿದ್ದು ಗಮನಾರ್ಹ.

3. ಸೌಮ್ಯ ರಾಜಕಾರಣಕ್ಕೆ ಮುನ್ನಡಿ ಬರೆದ ಕೇಜ್ರಿವಾಲ್: ಬಿಜೆಪಿ ನಾಯಕರು ತಮ್ಮನ್ನು ಭಯೋತ್ಪಾದಕ ಎಂದರೂ ಕೆರಳದ ಅರವಿಂದ್ ಕೇಜ್ರಿವಾಲ್, ನಾನು ಭಯೋತ್ಪಾದಕ ಎಂದೆನಿಸಿದರೆ ದೆಹಲಿ ಜನತೆ ಬಿಜೆಪಿಗೆ ಮತ ನೀಡಿ ಎಂದು ಹೇಳುವ ಮೂಲಕ ಸಂಯಮ ಪ್ರದರ್ಶಿಸಿದ್ದು ಪ್ರಸ್ತುತ ರಾಜಕಾರಣದಲ್ಲಿ ವಿರಳ ಉದಾಹರಣೆಯಾಗಿದೆ. 

ವಿರೋಧಿಗಳನ್ನು ಅದರಲ್ಲೂ ಪ್ರಧಾನಿ ಮೋದಿ ಕುರಿತು ಸೌಮ್ಯವಾಗಿಯೇ ಎದುರು ಹಾಕಿಕೊಂಡ ಕೇಜ್ರಿವಾಲ್, ಅಪ್ಪಿತಪ್ಪಿಯೂ ವಿರೋಧಿ ನಾಯಕರನ್ನು ಅವಹೇಳನಕಾರಿಯಾಗಿ ತರಾಟೆಗೆ ತೆಗೆದುಕೊಳ್ಳಲಿಲ್ಲ.

ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಸೋಲಿಸಿ ಎಂಬ ಪಾಕ್ ಸಚಿವ ಫವಾದ್ ಚೌಧರಿ ಟ್ವೀಟ್’ನ್ನು ಖಂಡಿಸಿದ್ದ ಕೇಜ್ರಿವಾಲ್, ದೆಹಲಿ ಚುನಾವಣೆ ಭಾರತದ ಆಂತರಿಕ ರಾಜಕಾರಣವಾಗಿದ್ದು ಪ್ರಧಾನಿ ಮೋದಿ ನನ್ನ ಪ್ರಧಾನಿ ಕೂಡ ಎಂದು ಹೇಳುವ ಮೂಲಕ ಪ್ರಬುದ್ಧತೆ ಮೆರೆದರು.

ಕಾಂಗ್ರೆಸ್‌ನ್ನು ಕಂಗಾಲು ಮಾಡಿದ ದೆಹಲಿ: ಕೈ ಸೋಲಿಗೆ ಕಾರಣಗಳಿವೆ ಇಲ್ಲಿ!

4. ಶಾಹೀನ್ ಬಾಗ್ ಪ್ರತಿಭಟನೆಯಿಂದ ಅಂತರ: ಇಡೀ ದೇಶದ ಗಮನ ಸೆಳೆದಿದ್ದ ದೆಹಲಿಯ ಸಿಎಎ ವಿರೋಧಿ ಶಾಹೀನ್ ಬಾಗ್ ಪ್ರತಿಭಟನೆಯಿಂದ ಅರವಿಂದ್ ಕೇಜ್ರಿವಾಲ್ ಹಾಗೂ ಆಪ್ ಪಕ್ಷ ಅಂತರ ಕಾಯ್ದುಕೊಂಡಿತು. ಶಾಹೀನ್ ಬಾಗ್ ವಿರೋಧಿ ಹಾಗೂ ಪರ ಹೇಳಿಕೆ ನೀಡದೇ ಜಾಣತನ ಮೆರೆಯಿತು.

ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿ ತನ್ನ ಪ್ರಚಾರಗಳಲ್ಲಿ ಕೇವಲ ಶಹೀನ್ ಬಾಗ್, ಪಾಕಿಸ್ತಾನವನ್ನು ಪ್ರಸ್ತಾಪಿಸಿ ಸ್ಥಳೀಯ ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರಗಳ ಕುರಿತು ಉಲ್ಲೇಖವನ್ನೇ ಮಾಡಲಿಲ್ಲ.

5. ಮತದಾರನನ್ನು ತಲುಪುವಲ್ಲಿ ಯಶಸ್ವಿ: ತನ್ನ ಐದು ವರ್ಷಗಳ ಕಾರ್ಯವೈಖರಿಯನ್ನೇ ನೆಚ್ಚಿಕೊಂಡು ಚುನಾವಣಾ ಅಖಾಡಕ್ಕಿಳಿದಿದ್ದ ಆಪ್, ಮತದಾರರ ಮನ ಮುಟ್ಟುವಲ್ಲಿ ಯಶಸ್ವಿಯಾಯಿತು.  ಯಾವುದೇ ಪ್ರಚೋದನಕಾರಿ ಹೇಳಿಕೆಗಳಿಗೆ ಮೊರೆ ಹೋಗದೇ ಕೇವಲ ಮಾಡಿದ ಅಭಿವೃದ್ಧಿ ಕಾರ್ಯಗಳ ಕುರಿತು ಮಾತ್ರ ಆಪ್ ಪ್ರಚಾರ ಸಭೆಗಳಲ್ಲಿ ಮಾತನಾಡಿತು.

6. ಸೌಮ್ಯ ಹಿಂದುತ್ವದ ಮೊರೆ ಹೋದ ಕೇಜ್ರಿ: ತಮ್ಮನ್ನು ಹನುಮಾನ್ ಭಕ್ತ ಎಂದು ಹೇಳಿಕೊಂಡ ಕೇಜ್ರಿವಾಲ್ ಅವರನ್ನು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿಯಾದಿಗಾಗಿ ಎಲ್ಲಾ ಬಿಜೆಪಿ ನಾಯಕರು ವ್ಯಂಗ್ಯವಾಡಿದರು. ಅಲ್ಲದೇ ಕೇಜ್ರಿ ಹನುಮಾನ್ ಮಂದಿರಕ್ಕೆ ಹೋದಾಗ ಮಂದಿರ ಪವಿತ್ರವಾಯಿತು ಎಂದು ಗೇಲಿ ಮಾಡಿದರು. ಇದಕ್ಕೆ ತಿರುಗೇಟು ನೀಡಲು ಹೋಗದ ಕೇಜ್ರಿ ಮೌನವಾಗಿದ್ದುಕೊಂಡೇ ವಿರೋಧಿಗಳ ಹೇಳಿಕೆಯ ಲಾಭ ಪಡೆದರು.

ಯಾರೀಕೆ ಹರ್ಷಿತಾ ಕೇಜ್ರಿವಾಲ್? ಇವಳೇಕೆ ಸುದ್ದಿಯಲ್ಲಿದ್ದಾಳೆ?

ಇದಕ್ಕೆ ಪೂರಕವಾಗಿ ಕೇಜ್ರಿವಾಲ್ ಪುತ್ರಿ ಹರ್ಷಿತಾ ಕೂಡ ತಮ್ಮ ತಂದೆಯ ನಂಬಿಕೆಯನ್ನು ಪ್ರಶ್ನಿಸುತ್ತಿರುವುದು ಖಂಡನಾರ್ಹ ಎಂದು ಹೇಳಿದ್ದಲ್ಲದೇ, ಹನುಮಾನ್ ಭಕ್ತನನ್ನು ಉಗ್ರವಾದಿ ಎಂದು ಕರೆಯುತ್ತಿರುವುದು ತುಂಬ ನೋವಿನ ಸಂಗತಿ ಎಂದು ಹೇಳುವ ಮೂಲಕ ವಿವಾದಕ್ಕೆ ಭಾವನಾತ್ಮಕ ಸ್ಪರ್ಶ ನೀಡಿದರು. ಇದು ಮತದಾರರನ್ನು ಸೆಳೆಯುವಲ್ಲಿ ಖಂಡಿತವಾಗಿಯೂ ಯಶಸ್ವಿಯಾಯಿತು.

7. ಯುವ ಸಮುದಾಯಕ್ಕೆ ಆಶಾಕಿರಣವಾಗಿ ಕಂಡ ಕೇಜ್ರಿವಾಲ್: ನಿರದ್ಯೋಗದಿಂದ ತತ್ತರಿಸಿದ ಯುವ ಜನತೆಗೆ ಅರವಿಂದ್ ಕೇಜ್ರಿವಾಲ್ ಆಶಾಕಿರಣವಾಗಿ ಕಂಡಿದ್ದರಲ್ಲಿ ಆಶ್ವರ್ಯವಿಲ್ಲ. ಲಾಭದಾಯಕ ಬಜೆಟ್ ಮಂಡಿಸಿದ್ದ ಕೇಜ್ರಿವಾಲ್ ಉದ್ಯೋಗ ಸೃಷ್ಟಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂದು ನಂಬಿದ ಯುವ ಮತದಾರರು ಆಪ್’ಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುವ ಸತ್ಯವಾಗಿದೆ.