ಮತ್ತೆ ಮತ್ತೆ ಜಗತ್ತಿನೆದುರು ಬೆತ್ತಲಾಗುತ್ತಿದೆ ಪಾಕಿಸ್ತಾನ!
* ಭಾರತದ ಜಲಾಂತರ್ಗಾಮಿ ನೌಕೆ ಪತ್ತೆ, ಹೇಳಿಕೆ ನೀಡಿ ಗದ್ದಲ ಎಬ್ಬಿಸಿದ್ದ ಪಾಕಿಸ್ತಾನ
* ಪಾಕಿಸ್ತಾನದ ನೀರಿನಲ್ಲಿ ಭಾರತದ ಜಲಾಂತರ್ಗಾಮಿ ಪ್ರವೆಶ ಅಸಾಧ್ಯ
ಗಿರೀಶ್ ಲಿಂಗಣ್ಣ
ಭಾರತದ ಜಲಾಂತರ್ಗಾಮಿ ನೌಕೆಯನ್ನು ತನ್ನ ದೇಶದ ನೀರಿನಲ್ಲಿ ಪತ್ತೆ ಮಾಡಿದ್ದಾಗಿ ಕೇವಲ ಒಂದು ವಾರದ ಕೆಳಗೆ ಹೇಳಿಕೆ ನೀಡಿ, ಪಾಕಿಸ್ತಾನವು ಗದ್ದಲವೆಬ್ಬಿಸಿತ್ತು.
ಭಾರತೀಯ ಜಲಾಂತರ್ಗಾಮಿ ನೌಕೆಯನ್ನು ತಡೆದಿರುವುದಾಗಿ ಹೇಳಿಕೊಂಡಿರುವ ಪಾಕಿಸ್ತಾನ, ಈ ಸಂಬಂಧ ಒಂದು ಚಿತ್ರ ಹಾಗೂ ವೀಡಿಯೋವನ್ನೂ ಬಿಡುಗಡೆ ಮಾಡಿತ್ತು. ಆದರೆ ಭಾರತೀಯ ನೌಕಾಪಡೆ ಈ ಹೇಳಿಕೆಯನ್ನು ತಳ್ಳಿ ಹಾಕಿದೆ. ವೀಡಿಯೋದಲ್ಲಿ ತೋರಿಸಿರುವ ಜಿಪಿಎಸ್ ನಿರ್ದೇಶಾಂಕಗಳು ಈ ಜಲಾಂತರ್ಗಾಮಿ ನೌಕೆ ಕರಾಚಿಯಿಂದ 140-150 ನಾಟಿಕಲ್ ಮೈಲುಗಳಷ್ಟು (1 ನಾಟಿಕಲ್ ಮೈಲು 1.85 ಕಿ.ಮೀ.ಗೆ ಸಮ) ದೂರದಲ್ಲಿ ಇರುವುದನ್ನು ತೋರಿಸುತ್ತದೆ ಎಂದು ಹೇಳಿದೆ.
“ನೀರಿನ ಗಡಿಯು ಕರಾವಳಿಯಿಂದ ಕೇವಲ 12 ನಾಟಿಕಲ್ ಮೈಲುಗಳ ವರೆಗೆ ವಿಸ್ತರಿಸಿದೆ. ಈ ವೀಡಿಯೋದಲ್ಲಿ ತೋರಿಸಿರುವ ಜಲಾಂತರ್ಗಾಮಿ ಬೇರಾವುದೋ ದೇಶದ್ದಾಗಿರಬಹುದು. ಅಲ್ಲದೆ, ವೀಡಿಯೋದ ಸತ್ಯಾಸತ್ಯತೆ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಇದೆ. ಪಾಕಿಸ್ತಾನವು ಈ ಹಿಂದೆಯೂ ಇಂತಹ ಸಂಶಯಾಸ್ಪದ ಹೇಳಿಕೆಗಳನ್ನು ನೀಡಿದೆ” ಎಂದು ನೌಕಾಪಡೆ ಹೇಳಿದೆ.
ತೇಜಸ್ ಯುದ್ಧ ವಿಮಾನಕ್ಕೆ ಶಕ್ತಿ, ಜಿಇ ಇಂಜಿನ್ ಯೋಜನೆ!
ಈ ಪ್ರತ್ಯುತ್ತರದೊಂದಿಗೆ ವಿಷಯ ಮುಕ್ತಾಯ ಕಂಡಿದ್ದರೂ, ನೆರೆಯ ದೇಶದ ಹಕ್ಕುಗಳನ್ನು ನೋಡುವಾಗ ಈ ಘಟನೆಯು ನಮ್ಮ ಚಿಂತನೆಗೆ ಸರಕನ್ನು ಒದಗಿಸುತ್ತದೆ. ಪಾಕಿಸ್ತಾನದ ನೀರಿನಲ್ಲಿ ಜಲಾಂತರ್ಗಾಮಿಯು ಪ್ರವೇಶಿಸಲು ಸಾಧ್ಯವಿಲ್ಲ ಎನ್ನುವ ಸಂಕೀರ್ಣ ವಿಷಯವನ್ನು ವಿವರಿಸಲು ಸ್ವಲ್ಪ ಅಧ್ಯಯನಾತ್ಮಕವಾಗಿ ಹೋಗಬೇಕೆಂದು ನಾನು ಯೋಚಿಸಿದೆ.
ಮೊದಲನೆಯದಾಗಿ ಅರಬ್ಬಿ ಸಮುದ್ರದ ಜಲಶಾಸ್ತ್ರವನ್ನು ಅರ್ಥಮಾಡಿಕೊಳ್ಳೋಣ. ಇದು ನೀರೊಳಗಿನ ಗ್ರೇಡಿಯಂಟ್‌ನಿಂದಾಗಿ ತುಂಬ ನಿರ್ಬಂಧಿಸಲ್ಪಟ್ಟಿದೆ. ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳಿಗೆ ಪರವಾಗಿಲ್ಲ. ಆದರೆ, ಆಳವಾಗಿ ಧುಮುಕುವ ಪರಮಾಣು ಜಲಾಂತರ್ಗಾಮಿ ನೌಕೆಗೆ ಈ ಪ್ರದೇಶವು ಸೂಕ್ತವಲ್ಲ.
ತನ್ನ ವ್ಯಾಪ್ತಿಯ ನೀರಿನೊಳಗೆ ಜಲಾಂತರ್ಗಾಮಿ ನೌಕೆಯನ್ನು ನೋಡಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದ್ದು ಮತ್ತೆ ಸುಳ್ಳು ಪ್ರಚಾರವೇ ಆಗಿದೆ. ಏಕೆಂದರೆ, ಕರಾಚಿಯ ಸಮೀಪ ಸುಮಾರು 50 ಕಿ.ಮೀ. ದೂರದ ವರೆಗೆ ಸಮುದ್ರದ ಆಳ ಕೇವಲ 50 ಮೀಟರ್ ಅಷ್ಟೇ ಇದೆ. ಈ ನೀರಿನಲ್ಲಿ ಜಲಾಂತರ್ಗಾಮಿ ನೌಕೆ ಪ್ರವೇಶಿಸಿದರೆ ಅದು ಸುಲಭವಾಗಿ ಕಣ್ಣಿಗೆ ಬೀಳುತ್ತದೆ, ಅಷ್ಟೇ ಅಲ್ಲದೆ, ಅದರ ಗೋಚರತೆಯನ್ನು ಪರಿಗಣಿಸಿ ದಾಳಿಗೊಳಗಾಗುವ ಸಾಧ್ಯತೆಯೂ ಜಾಸ್ತಿಯಿರುತ್ತದೆ.
ಭಾರತೀಯ ವಾಯುಸೇನೆಗೆ ಶಕ್ತಿ ತುಂಬಲಿದೆ AMCA!
ಇದಲ್ಲದೆ, ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳು ಉಸಿರಾಡಲು ಅಥವಾ ತಮ್ಮ ಬ್ಯಾಟರಿಗಳನ್ನು ರೀಚಾರ್ಜ್ ಮಾಡಲು ಆಗಾಗ್ಗೆ ನೀರಿನ ಮೇಲ್ಭಾಗಕ್ಕೆ ಬರಬೇಕಾಗುತ್ತದೆ. ಶತ್ರು ನೆಲೆಯ ಸಮೀಪ ಬೇಹುಗಾರಿಕೆ ಕಾರ್ಯಾಚರಣೆ ನಡೆಸುತ್ತಿದ್ದರೆ ಉಸಿರಾಡಲು ಸ್ನಾರ್ಕೆಲ್ ಅನ್ನು ಎತ್ತುವ ಮೂಲಕ ತನ್ನ ಇರವನ್ನು ಪತ್ತೆ ಮಾಡಿಕೊಡಲು ಯಾವ ಜಲಾಂತರ್ಗಾಮಿಯೂ ಧೈರ್ಯ ಮಾಡುವುದಿಲ್ಲ.
ಪಾಕಿಸ್ತಾನ ಈ ಮೊದಲು 2019ರಲ್ಲೂ ಇಂತಹ ಹೇಳಿಕೆಗಳನ್ನು ಕೊಟ್ಟಿತ್ತು. ಆದರೆ, ಆ ಹೇಳಿಕೆಗಳನ್ನೂ ನೌಕಾಪಡೆ ತಳ್ಳಿಹಾಕಿತ್ತು. ಆರ್ಥಿಕ ದಿವಾಳಿತನದ ಅಂಚಿನಲ್ಲಿರುವ ಪಾಕಿಸ್ತಾನವು ಹತಾಶೆಯಿಂದ ಇಂತಹ ಅಪಪ್ರಚಾರಗಳನ್ನು ಮಾಡುತ್ತಿದೆ ಅಷ್ಟೇ.
ಭಾರತವು ಅದ್ಭುತವಾದ ನೌಕಾ ಇತಿಹಾಸವನ್ನು ಹೊಂದಿದೆ. ಅಲ್ಲಿ ಚೋಳರು, ವಿಶೇಷವಾಗಿ ರಾಜ ರಾಜ ಚೋಳರು ಅಸಾಧಾರಣ ನೌಕಾಪಡೆಯನ್ನು ನಿರ್ಮಿಸಿದ್ದರು. ಅದರಿಂದ ಆಗ್ನೇಯ ಏಷ್ಯಾದ ರಾಷ್ಟ್ರಗಳು ಮತ್ತು ಶ್ರೀಲಂಕಾವನ್ನು ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಯಿತು. ಆಗ ಭಾರತವನ್ನು ಬಹು ವಿಸ್ತಾರವಾಗಿ ಪರಿಗಣಿಸಲಾಗಿತ್ತು. ಮರಾಠಾ ಸಾಮ್ರಾಜ್ಯವನ್ನು, ವಿಶೇಷವಾಗಿ ಶಿವಾಜಿಯನ್ನು, ಭಾರತೀಯ ನೌಕಾಪಡೆಯ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ಅವರು ಯುದ್ಧನೌಕೆಗಳನ್ನು ನಿರ್ಮಿಸಿದರು ಮತ್ತು ನಾವಿಕರಿಗೆ ತರಬೇತಿ ನೀಡಿದರು. ಆರ್ಥಿಕತೆಯನ್ನು ಉತ್ತೇಜಿಸಲು ಸಮುದ್ರಗಳನ್ನು ನಿಯಂತ್ರಿಸುವ ಮಹತ್ವವನ್ನು ಪರಿಗಣಿಸಿ ಅವರು ಸಮುದ್ರ ಕೋಟೆಯನ್ನೂ ನಿರ್ಮಿಸಿದ್ದಾರೆ.
ರಷ್ಯಾ ನಿರ್ಮಿತ ಫೈಟರ್ ಜೆಟ್‌ಗೆ ಹೊಸ ರೂಪ ಕೊಟ್ಟ HAL: ಇದು ಸ್ವದೇಶೀ ಸುಖೋಯ್ ಕಥೆ!
ಮೊಗಲರು ಸಮುದ್ರ ವ್ಯಾಪಾರಕ್ಕೆ ಉತ್ತೇಜನ ನೀಡಿದರೂ, ತಮ್ಮದೇ ಆದ ನೌಕಾಪಡೆಯೊಂದನ್ನು ಕಟ್ಟುವ ಪರಿಕಲ್ಪನೆ ಅವರಲ್ಲಿರಲಿಲ್ಲ. ಈ ಇತಿಹಾಸವು ಸಮುದ್ರ ಯುದ್ಧದ ಪರಿಪಕ್ವತೆ ಮತ್ತು ಕಲ್ಪನೆಗಳನ್ನು ಉಲ್ಲೇಖಿಸುತ್ತದೆ. ಭಾರತೀಯ ನೌಕಾಪಡೆ, ನೌಕಾ ಶಕ್ತಿಯು ಅರ್ಧದಷ್ಟೂ ಇಲ್ಲದ ಪಾಕಿಸ್ತಾನದ ಹೇಳಿಕೆಗಳ ಬಗ್ಗೆ ಬಗ್ಗೆ ಭಾರತೀಯರು ತಲೆಕೆಡಿಸಿಕೊಳ್ಳಬಾರದು. ಆಳವಿಲ್ಲದ ನೀರಿನಲ್ಲಿ ಇಳಿಯುವಂತಹ ಪ್ರಮಾದವನ್ನು ಭಾರತವು ಖಂಡಿತವಾಗಿಯೂ ಮಾಡುವುದಿಲ್ಲ. ಪಾಕಿಸ್ತಾನ ಮತ್ತೆ ಮತ್ತೆ ಜಗತ್ತಿನೆದುರು ಬೆತ್ತಲಾಗುತ್ತಿದೆ.
- ಲೇಖಕರು- ಗಿರೀಶ್ ಲಿಂಗಣ್ಣ, ನಿರ್ದೇಶಕರು, ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್.