ಮಧ್ಯಮ ವರ್ಗದವರನ್ನು ತಲುಪಿ; ಸರ್ಕಾರಿ ಯೋಜನೆ ಬಗ್ಗೆ ಮಾಹಿತಿ ನೀಡಿ: ಕೇಂದ್ರ ಸಚಿವರಿಗೆ ಮೋದಿ ಸಲಹೆ
ಫೆಬ್ರವರಿ 1 2024ರ ಲೋಕಸಭೆ ಚುನಾವಣೆಗೂ ಮುನ್ನ ನಡೆಯುವ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿದೆ.
ನವದೆಹಲಿ (ಜನವರಿ 29, 2023): 2024ರ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸ್ಪರ್ಧೆ ಆರಂಭವಾಗಿದೆ. ಅಲ್ಲದೆ, ಈ ವರ್ಷ ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಸಹ ಚುನಾವಣೆ ಇದೆ. ಈ ಹಿನ್ನೆಲೆ, ಪ್ರಧಾನಿ ಮೋದಿ ಕೇಂದ್ರ ಸಚಿವರಿಗೆ ಸಲಹೆ ನೀಡಿದ್ದಾರೆ. ಕೇಂದ್ರ ಸಂಸತ್‌ನ ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ ಭಾನುವಾರ ಕೇಂದ್ರ ಸಚಿವರ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದು, ಈ ವೇಳೆ ಮೋದಿ ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್ 2024 ರ ಸಾರ್ವತ್ರಿಕ ಚುನಾವಣೆಯ ಮೊದಲು ಈ ಸರ್ಕಾರದ ಕೊನೆಯ ಪೂರ್ಣ ಬಜೆಟ್ ಆಗಿರುತ್ತದೆ. ಈ ಹಿನ್ನೆಲೆ ಮೋದಿ ನೇತೃತ್ವದ ಈ ಸಭೆ ಹಲವರಲ್ಲಿ ಗಮನ ಸೆಳೆದಿದೆ.
2014 ರಿಂದ ಇಲ್ಲಿಯವರೆಗೆ ಮೋದಿ ಸರ್ಕಾರ ಕೈಗೊಂಡ ಯೋಜನೆಗಳು ಮತ್ತು ನಿರ್ಧಾರಗಳ ಕುರಿತು ಸಂಪುಟ ಕಾರ್ಯದರ್ಶಿ ಈ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತುತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ಸಚಿವರಿಗೆ ಪ್ರಧಾನಿ ಮೋದಿ ಸಲಹೆ ನೀಡಿದರು ಎಂದು ತಿಳಿದುಬಂದಿದೆ.
ಕೇಂದ್ರ ಸಚಿವರು ಸರ್ಕಾರದ ಯೋಜನೆಗಳತ್ತ ಗಮನ ಹರಿಸಬೇಕು ಮತ್ತು ಈ ಯೋಜನೆಗಳು ಪ್ರತಿ ಮನೆಗೂ ತಲುಪುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಸಭೆಯಲ್ಲಿ ಹೇಳಿದರು. ಅಲ್ಲದೆ, ಕೇಂದ್ರ ಸಚಿವರು ತಮ್ಮ ಸಚಿವಾಲಯದ ಕೆಲಸವನ್ನು ತೀವ್ರವಾಗಿ ಪ್ರಚಾರ ಮಾಡಬೇಕು ಎಂದೂ ಅವರು ಹೇಳಿದರು. ಮಧ್ಯಮ ವರ್ಗದವರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡಿದ ಉಪಕ್ರಮಗಳ ವಿವರಗಳನ್ನು ತಲುಪಿಸುವಾಗ ಕೇಂದ್ರ ಸಚಿವರು ಫ್ಯಾಕ್ಟ್‌ಗಳನ್ನು ಜನರಿಗೆ ಹೇಳಬೇಕೆಂದೂ ಪ್ರಧಾನ ಮಂತ್ರಿ ಬಯಸಿದ್ದರು.
ಇದನ್ನು ಓದಿ: ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಬಂಪರ್?
ನಿಮ್ಮ ಸಚಿವಾಲಯದ ಕೆಲಸದ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ತಿಳಿಸಬೇಕು. ಜಿ 20 ಅಧ್ಯಕ್ಷ ಸ್ಥಾನವು ಭಾರತಕ್ಕೆ ದೊಡ್ಡ ಸಾಧನೆಯಾಗಿದೆ ಮತ್ತು ಶೃಂಗಸಭೆಯನ್ನು ಹೆಚ್ಚು ಪ್ರಚಾರ ಮಾಡಬೇಕು ಎಂದು ಪ್ರಧಾನಿ ಹೇಳಿದರು ಎಂದೂ ಮೂಲಗಳು ತಿಳಿಸಿವೆ. ಅಲ್ಲದೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಾಧನೆಗಳನ್ನು ಉತ್ತೇಜಿಸಲು ತಮ್ಮ ಸಚಿವರನ್ನು ಒತ್ತಾಯಿಸಿದ ಪ್ರಧಾನ ಮಂತ್ರಿಗಳು ಬಡವರ ಕಲ್ಯಾಣ ಯೋಜನೆಗಳನ್ನು ಜನರಿಗೆ ಉತ್ತಮವಾಗಿ ತಿಳಿಸಬೇಕು ಎಂದೂ ಹೇಳಿದರು. ಈ ಮಧ್ಯೆ, 9 ರಾಜ್ಯಗಳ ವಿಧಾನಸಭಾ ಚುನಾವಣೆಯ ಮುನ್ನ ಕ್ಯಾಬಿನೆಟ್ ಪುನರ್‌ರಚನೆ ನಡೆಯಬಹುದು ಎಂಬ ಊಹಾಪೋಹವಿತ್ತು. ಅಲ್ಲದೆ, ಕೇಂದ್ರ ಸಚಿವರಿಗೆ ಈ ವರ್ಷದ ಮೊದಲ ಸಚಿವ ಸಂಪುಟ ಸಭೆಯೂ ಆಗಿದೆ.
ಫೆಬ್ರವರಿ 1 2024ರ ಲೋಕಸಭೆ ಚುನಾವಣೆಗೂ ಮುನ್ನ ನಡೆಯುವ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿದೆ. ಈ ಹಿನ್ನೆಲೆ ಈ ಬಜೆಟ್ ಮೇಲೆ ಹಲವರ ಕಣ್ಣಿದ್ದು, ಕೇಂದ್ರ ಸರ್ಕಾರ ಜನರ ನಿರೀಕ್ಷೆಗಳನ್ನು ಯಾವ ರೀತಿ ಈಡೇರಿಸುತ್ತೋ ಎಂಬುದನ್ನು ಬುಧವಾರದವರೆಗೆ ಕಾದು ನೋಡಬೇಕಾಗಿದೆ. ಇನ್ನೊಂದೆಡೆ, ಕಾಂಗ್ರೆಸ್ ಬಾಋತ್ ಜೋಡೋ ಯಾತ್ರೆ ಮೂಲಕ ಹಲವು ಪಕ್ಷಗಳ ಬೆಂಬಲ ಪಡೆದು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಸಜ್ಜಾಗುತ್ತಿದೆ. ಈ ಹಿನ್ನೆಲೆ ಕೇಂದ್ರ ಸಚಿವರಿಗೆ ಮೋದಿಯ ಸಲಹೆ ಪ್ರಾಮುಖ್ಯತೆ ಪಡೆದುಕೊಂಡಿದೆ.
ಇದನ್ನೂ ಓದಿ: ನೇಕಾರರಿಗೆ ಬಜೆಟ್‌ನಲ್ಲಿ ಮತ್ತಷ್ಟು ಸ್ಕೀಂ: ಸಿಎಂ ಬೊಮ್ಮಾಯಿ