ಮುಂಬೈ ಪೊಲೀಸರಿಗೆ ಮಹತ್ವದ ಕರೆಯೊಂದು ಬಂದಿದೆ. ಈ ಕರೆ ಬೆನ್ನಲ್ಲೇ ಹಲವೆಡೆ ಭದ್ರತೆ ಹೆಚ್ಚಿಸಲಾಗಿದೆ. ಮುಂಬೈ ಪ್ರವೇಶಿಸಿ ಪಾಕಿಸ್ತಾನಿ ಉಗ್ರರು ಇದೀಗ RDX ತುಂಬಿದ ಟ್ಯಾಂಕರ್ ಮೂಲಕ ಗೋವಾದತ್ತ ಹೊರಟಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಇತ್ತ ಗೋವಾ ಪೊಲೀಸರಿಗೂ ಮಾಹಿತಿ ನೀಡಲಾಗಿದೆ.

ಮುಂಬೈ(ಜು.23) ಭಾರತದಲ್ಲಿ ವಿದ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಹಲವು ಉಗ್ರರನ್ನು ಈಗಾಗಲೇ ಬಂಧಿಸಲಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸರಣಿ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದ ಪಾಕಿಸ್ತಾನ ಮೂಲದ ಲಷ್ಕರ್‌-ಇ-ತೋಯ್ಬಾ ಉಗ್ರ ಸಂಘಟನೆಯ ಐವರನ್ನು ಬಂಧಿಸಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಮುಂಬೈನಿಂದ RDX ಸ್ಫೋಟಕ ತುಂಬಿ ಇಬ್ಬರು ಪಾಕಿಸ್ತಾನಿ ಉಗ್ರರು ಗೋವಾದತ್ತ ಹೊರಟಿದ್ದಾರೆ ಅನ್ನೋ ಕರೆಯೊಂದು ಮುಂಬೈ ಪೊಲೀಸರ ಕಂಟ್ರೋಲ್ ರೂಂಗೆ ಬಂದಿದೆ. ಈ ಮಾಹಿತಿ ಬೆನ್ನಲ್ಲೇ ಅಲರ್ಟ್ ಆದ ಮುಂಬೈ ಪೊಲೀಸರು, ಭದ್ರತೆ ಹೆಚ್ಚಿಸಿದ್ದಾರೆ. ಇತ್ತ ಕೋಸ್ಟಲ್ ಗಾರ್ಡ್‌ಗೆ ಮಾಹಿತಿ ನೀಡಲಾಗಿದೆ. ಇತ್ತ ಗೋವಾ ಪೊಲೀಸರಿಗೂ ಮಾಹಿತಿ ರವಾನಿಸಲಾಗಿದೆ.

ಇಂದು ಬೆಳಗ್ಗೆ ಪಾಂಡೆ ಅನ್ನೋ ವ್ಯಕ್ತಿ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ, ಮಂಬೈನಿಂದ ಇಬ್ಬರು ಪಾಕಿಸ್ತಾನಿ ಮೂಲದ ಉಗ್ರರು ಸ್ಫೋಟಕ ತುಂಬಿದ ಟ್ಯಾಂಕರ್ ಜೊತೆ ಗೋವಾದತ್ತ ಹೊರಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಕೇಳಿದ ಪೊಲೀಸರಿಗೆ ಲಭ್ಯವಾಗಿಲ್ಲ. ಆದರೆ ಸ್ಫೋಟಕ, ಉಗ್ರದ ಕಾರಣದಿಂದ ಮುಂಬೈ ಪೊಲೀಸರು ಕರೆಯಲ್ಲಿ ಸಿಕ್ಕ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದೆ.

ಜುನೈದ್‌ ಸೆರೆಗೆ ರೆಡ್‌ ಕಾರ್ನರ್‌ ನೋಟಿಸ್‌ ನೀಡಲು ಸಿಸಿಬಿ ನಿರ್ಧಾರ

ಮುಂಬೈ ಮೇಲೆ ನಡೆದ ದಾಳಿ ರೀತಿ ಗೋವಾದಲ್ಲಿ ವಿದ್ವಂಸಕ ಕೃತ್ಯ ಎಸಗಲು ಉಗ್ರರು ತಯಾರಿ ಮಾಡಿರುವ ಸಾಧ್ಯತೆ ಇದೆ. ಹೀಗಾಗಿ ಅಪಾಯ ತಪ್ಪಿಸಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಪಾಂಡೆ ಅನ್ನೋ ವ್ಯಕ್ತಿ ಮಾಡಿದ ಕರೆ ಹುಸಿಯೇ? ಅಥವಾ ನಿಜಗವಾಗಲೂ ಈ ರೀತಿಯ ಬೆಳವಣಿಗೆ ನಡೆದಿದೆಯಾ ಅನ್ನೋ ಕುರಿತು ತನಿಖೆ ನಡೆಯುತ್ತಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಬಂಧಿಸಿರುವ ಐವರು ಶಂಕಿತ ಉಗ್ರರ ಸಂಪರ್ಕ ಜಾಲವನ್ನು ಬೇಧಿಸಲು ಇದೀಗ ಅವರ ಮೊಬೈಲ್‌ನಲ್ಲಿ ಅಡಕವಾಗಿರುವ ‘ರಹಸ್ಯ’ಗಳ ಶೋಧನಾ ಕಾರ್ಯವನ್ನು ಸಿಸಿಬಿ ಆರಂಭಿಸಿದೆ. ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದಾಗ ಹೆಬ್ಬಾಳ ಸಮೀಪದ ಸುಲ್ತಾನ್‌ಪಾಳ್ಯದ ಸೈಯದ್‌ ಸುಹೇಲ್‌ಖಾನ್‌ ಮನೆ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ಆಗ ಸುಹೇಲ್‌, ಪುಲಕೇಶಿ ನಗರದ ಮೊಹಮದ್‌ ಫೈಜಲ್‌ ರಬ್ಬಾನಿ, ಕೊಡಿಗೇಹಳ್ಳಿಯ ಮಹಮದ್‌ ಉಮರ್‌, ಜಾಹೀದ್‌ ತಬ್ರೇಜ್‌ ಹಾಗೂ ಆರ್‌.ಟಿ.ನಗರದ ಸೈಯದ್‌ ಮುದಾಸೀರ್‌ ಪಾಷ ಬಂಧಿಸಿದ ಪೊಲೀಸರು, ಆರೋಪಿಗಳಿಂದ 7 ನಾಡಾ ಪಿಸ್ತೂಲ್‌ಗಳು, 45 ಜೀವಂತ ಗುಂಡುಗಳು, ವಾಕಿಟಾಕಿ ಸೆಟ್ಸ್‌, ಡ್ಯಾಗರ್‌ ಹಾಗೂ 12 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದರು.

Suspected terrorists bengaluru: ಶಂಕಿತರಿಂದ ಸಿಕ್ಕಿದ್ದು ವಾಕಿಟಾಕಿ ಅಲ್ಲ, ‘ಬಾಂಬ್‌ ರಿಮೋಟ್‌’?

ವಿಧ್ವಂಸಕ ಕೃತ್ಯದ ಪೂರ್ವಸಿದ್ಧತೆ ಮಾಡಿಕೊಂಡಿದ್ದ ಶಂಕಿತ ಉಗ್ರರಿಗೆ ಗ್ರೆನೇಡ್‌, ವಾಕಿಟಾಕಿ ಸೆಟ್‌, ಪಿಸ್ತೂಲ್‌, ಜೀವಂತ ಗುಂಡುಗಳು ಪೂರೈಕೆಯಾಗಿದ್ದವು. ಅಲ್ಲದೆ ಬಂಧಿತರಿಗೆ ಅಪರಿಚಿತ ಮೂಲಗಳಿಂದ ಹಣಕಾಸು ನೆರವು ಸಿಕ್ಕಿತು. ಹೀಗಾಗಿ ಈ ವಿಧ್ವಂಸಕ ಕೃತ್ಯದ ಮಾಸ್ಟರ್‌ ಮೈಂಡ್‌ ಎನ್ನಲಾದ ವಿದೇಶದಲ್ಲಿ ಅಡಗಿರುವ ಎಲ್‌ಇಟಿ ಉಗ್ರ ಮಹಮ್ಮದ್‌ ಜುನೈದ್‌ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೇರಳ ಮೂಲದ ಎಲ್‌ಇಟಿ ಶಂಕಿತ ಉಗ್ರ ನಸೀರ್‌ ಜೊತೆ ಈಗ ಸಿಕ್ಕಿಬಿದ್ದಿರುವ ಶಂಕಿತ ಉಗ್ರರ ಸಂವಹನಕ್ಕೆ ಕೊಂಡಿಯಾಗಿದ್ದವರು ಯಾರು ಮತ್ತು ಹೇಗೆಲ್ಲ ಮಾತುಕತೆ ನಡೆದಿವೆ ಎಂಬ ವಿಚಾರ ಮೊಬೈಲ್‌ನಲ್ಲಿ ಅಡಕವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.