ಇಲಿಗಳು 580 ಕೆಜಿ ಗಾಂಜಾ ಭಕ್ಷಿಸಿವೆ ಎಂದ ಪೊಲೀಸ್: ಸಾಕ್ಷಿ ನೀಡಲು ಕೋರ್ಟ್ ತಾಕೀತು
ಇಲಿಗಳ ಕಾಟವನ್ನು ನಿಯಂತ್ರಿಸಿ ಎಂದು ಮಥುರಾದ ಎಸ್‌ಎಸ್‌ಪಿ ಅಭಿಷೇಕ್ ಯಾದವ್ ಅವರಿಗೆ ಆದೇಶಿಸಿದ್ದಾರೆ. ಇಷ್ಟಕ್ಕೇ ಸುಮ್ಮನಾಗದೆ ಪೊಲೀಸರು ಹೇಳಿದಂತೆ 60 ಲಕ್ಷ ರೂ. ಮೌಲ್ಯದ 581 ಕೆಜಿ ಗಾಂಜಾವನ್ನು ನಿಜಕ್ಕೂ ಇಲಿಗಳು ತಿಂದು ತೇಗಿವೆ ಎಂಬುದಕ್ಕೆ ಸಾಕ್ಷಿಯನ್ನು ಕೊಡಿ ಎಂದೂ ಕೋರ್ಟ್ ತಾಕೀತು ಮಾಡಿದೆ.
ದೇಶದಲ್ಲಿ ಇತ್ತೀಚೆಗೆ ಮಾದಕ ವ್ಯಸನದ (Drug Addiction) ವಿರುದ್ಧ ಅಭಿಯಾನ ಜೋರಾಗುತ್ತಿದೆ. ಹಲವು ಕಡೆ ಮಾದಕ ಸಾಗಣೆ ಹಾಗೂ ಸೇವನೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಗಾಂಜಾ (Marijuana), ಹೆರಾಯಿನ್ (Heroin) ಮುಂತಾದ ಡ್ರಗ್ಸ್ ಸಾಗಾಟದ ವಿರುದ್ಧ ಪೊಲೀಸರು ಹಾಗೂ ಎನ್‌ಡಿಆರ್‌ಎಫ್ (NDRF) ಹೆಡೆಮುರಿ ಕಟ್ಟುತ್ತಿದೆ. ಈ ಹಿನ್ನೆಲೆ ಹೆಚ್ಚು ಡ್ರಗ್ಸ್‌ಗಳನ್ನು ಸೀಜ್ ಮಾಡಲಾಗುತ್ತಿದೆ. ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎದುರೇ ಈವರೆಗೆ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ನಾಶ ಮಾಡಲಾಗಿದೆ. ಆದರೆ, ನಾವೀಗ ಹೇಳಲು ಹೊರಟಿರುವ ಸ್ಟೋರಿ ವಿಭಿನ್ನ. ಉತ್ತರ ಪ್ರದೇಶದ (Uttar Pradesh) ಮಥುರಾ ಪೊಲೀಸರು (Mathura Police) ಕೋರ್ಟ್‌ಗೆ ನೀಡಿರುವ ವರದಿಯೇ ಅಂತದ್ದು.
ಇಲಿಗಳು ನಾವು ಸೀಜ್ ಮಾಡಿಟ್ಟುಕೊಂಡಿದ್ದ 500 ಕೆಜಿಗೂ ಹೆಚ್ಚು ಗಾಂಜಾವನ್ನು ತಿಂದು ಹಾಕಿವೆ ಎಂದು ವಿಶೇಷ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಕಾಯ್ದೆ (Narcotic Drugs and Psychotropic Substances Act) (ಎನ್‌ಡಿಪಿಎಸ್) (1985) ಕೋರ್ಟ್‌ಗೆ ಉತ್ತರ ಪ್ರದೇಶದ ಮಥುರಾ ಪೊಲೀಸರು ವರದಿ ನೀಡಿದ್ದಾರೆ. ಶೇರ್‌ಗಢ್ ಹಾಗ ಹೆದ್ದಾರಿ ಪೊಲೀಸ್ ಠಾಣೆಗಳ ಗೋಡೌನ್‌ಗಳಲ್ಲಿ ನಾವು ಸೀಜ್ ಮಾಡಿ ಶೇಖರಿಸಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಗಾಂಜಾವನ್ನು ಭಕ್ಷ್ಯ ಮಾಡಿವೆ ಎಂದು ಹೇಳಿಕೊಂಡಿದ್ದಾರೆ. ಪ್ರಕರಣವೊಂದರಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಎನ್‌ಡಿಪಿಎಸ್ ಹಸ್ತಾಂತರ ಮಾಡಿ ಎಂದು ಕೋರ್ಟ್ ಹೇಳಿದ ಬಳಿಕ ಮಥುರಾ ಪೊಲೀಸರು ಈ ರೀತಿ ವರದಿ ನೀಡಿದ್ದಾರೆ ನೋಡಿ.
ಇದನ್ನು ಓದಿ: ಮದ್ಯಪಾನ ಮಾಡಿ, ಗುಟ್ಕಾ ತಿನ್ನಿ, ಗಾಂಜಾ ಹೊಡೆಯಿರಿ; ಆದರೆ ನೀರು ಉಳಿಸಿ ಎಂದ BJP ಸಂಸದ..!
ಪೊಲೀಸರ ಈ ವರದಿ ನೋಡಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಇಲಿಗಳ ಕಾಟವನ್ನು ನಿಯಂತ್ರಿಸಿ ಎಂದು ಮಥುರಾದ ಎಸ್‌ಎಸ್‌ಪಿ ಅಭಿಷೇಕ್ ಯಾದವ್ ಅವರಿಗೆ ಆದೇಶಿಸಿದ್ದಾರೆ. ಇಷ್ಟಕ್ಕೇ ಸುಮ್ಮನಾಗದೆ ಪೊಲೀಸರು ಹೇಳಿದಂತೆ 60 ಲಕ್ಷ ರೂ. ಮೌಲ್ಯದ 581 ಕೆಜಿ ಗಾಂಜಾವನ್ನು ನಿಜಕ್ಕೂ ಇಲಿಗಳು ತಿಂದು ತೇಗಿವೆ ಎಂಬುದಕ್ಕೆ ಸಾಕ್ಷಿಯನ್ನು ಕೊಡಿ ಎಂದೂ ತಾಕೀತು ಮಾಡಿದ್ದಾರೆ.
ಇಲಿಗಳಿಗೆ ಪೊಲೀಸರ ಭಯವೇ ಇಲ್ಲ ಎಂದ ಅಧಿಕಾರಿಗಳು..!
ಇನ್ನು, ಸಾರ್ವಜನಿಕ ಗೋಡೌನ್‌ಗಳಲ್ಲಿ ಸ್ಟೋರ್ ಮಾಡಲಾದ ಗಾಂಜಾವನ್ನು ಹರಾಜು ಹಾಕಲು ಅಥವಾ ವಿಲೇವಾರಿ ಮಾಡಲು ಐದು - ಪಾಯಿಂಟ್ ನಿರ್ದೇಶನಗಳನ್ನು ಕೋರ್ಟ್ ನೀಡಿದೆ. ಕೋರ್ಟ್ ಆದೇಶದಂತೆ ಕಾಲಮಿತಿಯಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಮಥುರಾದ ಎಸ್‌ಎಸ್‌ಪಿ ಮಾತಾಂಡ್ ಪಿ. ಸಿಂಗ್ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಗಡಿಯಲ್ಲಿ ಗಾಂಜಾ ಘಮಲು; ಪೊಲೀಸರಿಗೆ ಸವಾಲು
ಈ ಪ್ರಕರಣ ಸಂಬಂಧ ಮಾಹಿತಿ ನೀಡಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರಣ್ವೀರ್ ಸಿಂಗ್, ‘’ಶೇರ್‌ಗಢ ಹಾಗೂ ಹೆದ್ದಾರಿ ಪೊಲೀಸ್ ಠಾಣೆಗಳು ಗೋಡೌನ್‌ಗಳಲ್ಲಿ ಶೇಖರಿಸಿಟ್ಟಿದ್ದ 581 ಕೆಜಿ ಗಾಂಜಾವನ್ನು ಇಲಿಗಳು ತಿಂದು ಹಾಕಿವೆ ಎಂದು ಹೇಳಿಕೊಂಡಿದ್ದಾರೆ. ಆ ಪ್ರದೇಶಗಳಲ್ಲಿ ಸಂಗ್ರಹಿಸಿದ ವಸ್ತುಗಳನ್ನು ರಕ್ಷಿಸುವುದು ಕಷ್ಟ ಎಂದೂ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಹೇಳಿಕೆ ಸಂಬಂಧ ಸಾಕ್ಷ್ಯ ನೀಡಲು ಕೋರ್ಟ್ ಆದೇಶ ನೀಡಿದೆ. ಹಾಗೂ, ನವೆಂಬರ್ 26 ರಂದು ಮುಂದಿನ ವಿಚಾರಣೆ ನಡೆಯಲಿದೆ ಎಂದೂ ಕೋರ್ಟ್ ನಿಗದಿಪಡಿಸಿದೆ ಎಂದು ಹೇಳಿದ್ದಾರೆ.
ಇನ್ನು, ಕೋರ್ಟ್‌ಗೆ ಸ್ಪಷ್ಟನೆ ನೀಡಿದ ಮಥುರಾ ಪೊಲೀಸರು, ಗಾತ್ರದಲ್ಲಿ ಚಿಕ್ಕದಾಗಿದ್ದರೂ ಇಲಿಗಳಿಗೆ ಪೊಲೀಸರ ಭಯವೇ ಇಲ್ಲ. ಸ್ಟೇಷನ್ ಹೌಸ್ ಅಧಿಕಾರಿಗಳು ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡಲು ತಜ್ಞರಾಗಲು ಸಾಧ್ಯವಿಲ್ಲ ಎಂದೂ ಕೋರ್ಟ್‌ಗೆ ಹೇಳಿಕೆ ನೀಡಿದೆ.
ಇದನ್ನೂ ಓದಿ: ಗಾಂಜಾ ಮಾಫಿಯಾದಿಂದ ದಾಳಿ: ಕಲಬುರಗಿ ಇನ್ಸ್‌ಪೆಕ್ಟರ್ ಗಂಭೀರ..!
2021 ರಲ್ಲಿ ಇದೇ ರೀತಿ, ಸೀಜ್ ಮಾಡಲಾದ 35 ಲಕ್ಷ ರೂ. ಮೌಲ್ಯದ 1400 ಕಾರ್ಟನ್ ಮದ್ಯವನ್ನು ಇಲಿ, ಹೆಗ್ಗಣಗಳು ಕುಡಿದಿವೆ ಎಂದು ಪೊಲೀಸರು ಹೇಳಿಕೊಂಡಿದ್ದರು. ಆದರೆ, ಈ ಬಗ್ಗೆ ತನಿಖೆ ನಡೆಸಿದ ನಂತರ ಮದ್ಯದ ಬಾಟಲ್‌ಗಳನ್ನು ಮಾರಾಟ ಮಾಡಿದ್ದ ಸ್ಟೇಷನ್ ಹೌಸ್ ಅಧಿಕಾರಿ ಹಾಗೂ ಮುಖ್ಯ ಕ್ಲರ್ಕ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.