ಮದ್ಯಪಾನ ಮಾಡಿ, ಗುಟ್ಕಾ ತಿನ್ನಿ, ಗಾಂಜಾ ಹೊಡೆಯಿರಿ; ಆದರೆ ನೀರು ಉಳಿಸಿ ಎಂದ BJP ಸಂಸದ..!
ಮಧ್ಯ ಪ್ರದೇಶದ ಬಿಜೆಪಿ ಸಂಸದರೊಬ್ಬರು ಮದ್ಯಪಾನ, ತಂಬಾಕು ಜಗಿಯಲು ಅಥವಾ ಗಾಂಜಾ ಹೊಡೆಯಲು ಸಹ ಅವಕಾಶವಿದೆ. ಆದರೆ, ನೀರಿನ ಮಹತ್ವದ ಬಗ್ಗೆ ಜನರು ಅರಿಯಬೇಕು ಎಂದಿದ್ದಾರೆ.
ಜಲ ಸಂರಕ್ಷಣಾ ಕಾರ್ಯಾಗಾರವೊಂದರಲ್ಲಿ (Water Conservation Event) ಮಾತನಾಡಿದ ಮಧ್ಯ ಪ್ರದೇಶದ (Madhya Pradesh) ಬಿಜೆಪಿ ಸಂಸದ (BJP MP) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಂಸದರ ಕ್ಷೇತ್ರದಲ್ಲೇ ನಡೆದ ಈ ಕಾರ್ಯಕ್ರಮದಲ್ಲಿ ಮತದಾರರಿಗೆ ಒಳ್ಳೆಯ ಉಪದೇಶ ನೀಡುವುದನ್ನು ಬಿಟ್ಟು ಕೆಟ್ಟ ಅಭ್ಯಾಸಗಳನ್ನು ಕಲಿತುಕೊಳ್ಳಿ ಅನ್ನೋ ರೀತಿಯಲ್ಲಿ ಹೇಳಿದ್ದು, ಅವರ ಹೇಳಿಕೆಯ ವಿಡಿಯೋ ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಅವರ ಹೇಳಿಕೆಗೆ ಟೀಕೆಯೂ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ, ಬಿಜೆಪಿ ಸಂಸದರ ಹೇಳಿಕೆ ಏನು ಅಂತೀರಾ…?
ಮಧ್ಯ ಪ್ರದೇಶದ ಬಿಜೆಪಿ ಸಂಸದರೊಬ್ಬರು ಮದ್ಯಪಾನ (Liquor), ತಂಬಾಕು (Tobacco) ಜಗಿಯಲು ಅಥವಾ ಗಾಂಜಾ (Weed) ಹೊಡೆಯಲು ಸಹ ಅವಕಾಶವಿದೆ. ಆದರೆ, ನೀರಿನ (Water) ಮಹತ್ವದ ಬಗ್ಗೆ ಜನರು ಅರಿಯಬೇಕು ಎಂಬ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಮಧ್ಯ ಪ್ರದೇಶದ ರೇವಾ ಸಂಸದ ಜನಾರ್ದನ್ ಮಿಶ್ರಾ ಈ ರೀತಿಯ ಹೇಳಿಕೆ ನೀಡಿದ್ದಾರೆ. ತನ್ನ ಕ್ಷೇತ್ರದಲ್ಲಿ ನಡೆಯುತ್ತಿದ್ದ ಜಲ ಸಂರಕ್ಷಣಾ ಕಾರ್ಯಾಗಾರವೊಂದರಲ್ಲಿ ಈ ಹೇಳಿಕೆ ಹೊರಬಂದಿದೆ.
ಇದನ್ನು ಓದಿ: ಗ್ರಾಮ ಪಂಚಾಯಿತಿ ಸದಸ್ಯನೊಬ್ಬ 15 ಲಕ್ಷ ಲಂಚ ಪಡೆದರೆ ಭ್ರಷ್ಟಾಚಾರವಲ್ಲ: ಸಂಸದ
ನೀರಿಲ್ಲದೆ ಜಮೀನುಗಳು ಒಣಗುತ್ತಿದೆ. ಅದನ್ನು ಉಳಿಸಬೇಕಿದೆ. ಗುಟ್ಕಾ ತಿನ್ನಿ, ಮದ್ಯ ಸೇವಿಸಿ, ಥಿನ್ನರ್, ಸುಲೇಸನ್ (ಒಂದು ರೀತಿಯ ಅಂಟು) ವಾಸನೆ ಕುಡಿಯಿರಿ ಅಥವಾ ಅಯೋಡೆಕ್ಸ್ ತಿನ್ನಿ, ಆದರೆ ನೀರಿನ ಮಹತ್ವದ ಬಗ್ಗೆ ನೆನಪಿಟ್ಟುಕೊಳ್ಳಿ ಎಂದು ಜನಾರ್ದನ್ ಮಿಶ್ರಾ ಈ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಭಾನುವಾರ, ನವೆಂಬರ್ 6 ರಂದು ಜಿಲ್ಲೆಯ ರೇವಾ ಕೃಷ್ಣರಾಜ್ ಕಪೂರ್ ಆಡಿಟೋರಿಯಂನಲ್ಲಿ ಈ ಕಾರ್ಯಾಗಾರ ನಡೆದಿತ್ತು ಎಂದು ತಿಳಿದುಬಂದಿದೆ.
ಇನ್ನು, ಇದೇ ಕ್ಲಿಪ್‌ನಲ್ಲಿ ಯಾವುದಾದರೂ ಸರ್ಕಾರ ನೀರಿನ ತೆರಿಗೆಯನ್ನು ಮನ್ನಾ ಮಾಡುತ್ತೇವೆ ಎಂದು ಘೋಷಿಸಿದರೆ, ನಾವು ನೀರಿನ ತೆರಿಗೆ ಕಟ್ಟುತ್ತೇವೆ, ಆದರೆ ವಿದ್ಯುತ್ ಬಿಲ್ ಸೇರಿ ಇತರೆ ತೆರಿಗೆಗಳನ್ನು ಮನ್ನಾ ಮಾಡಬಹುದು ಎಂದು ಹೇಳಿ ಎಂದೂ ಬಿಜೆಪಿ ಸಂಸದ ಹೇಳಿರುವುದು ವಿಡಿಯೋ ಕ್ಲಿಪ್‌ನಲ್ಲಿ ಕೇಳಬಹುದಾಗಿದೆ.
ಮಧ್ಯ ಪ್ರದೇಶದ ಬಿಜೆಪಿಯ ರೇವಾ ಸಂಸದ ಜನಾರ್ದನ ಮಿಶ್ರಾ ತನ್ನ ವಿವಾದಾತ್ಮಕ ಹೇಳಿಕೆಗಳಿಂದ ವಿವಾದಕ್ಕೆ ಈಡಾಗುತ್ತಿರುವುದು ಇದೇ ಮೊದಲಲ್ಲ. ಅವರು ಇತ್ತೀಚೆಗಷ್ಟೇ ಟಾಯ್ಲೆಟ್ ಅನ್ನು ಬರಿಗೈಯಲ್ಲಿ ಸ್ವಚ್ಛಗೊಳಿಸಿದ್ದರು. ಹೌದು, ಕೆಲ ದಿನಗಳ ಹಿಂದೆ ಅವರು ಬರಿಗೈಯಲ್ಲಿ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ತನ್ನ ಸಂಸತ್ ಕ್ಷೇತ್ರದ ಬಾಲಕಿಯರ ಶಾಲೆಯೊಂದರ ಟಾಯ್ಲೆಟ್ ಅನ್ನು ಜನಾರ್ದನ ಮಿಶ್ರಾ ಕ್ಲೀನ್ ಮಾಡಿದ್ದರು. ಸಸಿ ನೆಡುವ ಕಾರ್ಯಕ್ರಮಕ್ಕೆ ಅವರನ್ನು ಮುಖ್ಯ ಅತಿಥಿಯನ್ನಾಗಿ ಕರೆಯಲಾಗಿತ್ತಾದರೂ ಅವರು ಅದೇ ಶಾಲೆಯ ಟಾಯ್ಲೆಟ್ ಕ್ಲೀನ್ ಮಾಡಿ ಸುದ್ದಿಯಾಗಿದ್ದರು.
ಇದನ್ನೂ ಓದಿ: Helmet ಹಾಕದಿದ್ದವರಿಗೆ ಈ ಊರಲ್ಲಿ ಸಾರಾಯಿ ಸಿಗಲ್ಲ..!
ಇನ್ನೊಂದೆಡೆ, ಕಳೆದ ವರ್ಷವೂ ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಿದ್ದು ವೈರಲ್ ಆಗಿತ್ತು. ರೇವಾನಲ್ಲಿ ನಡೆದ ಸೆಮಿನಾರ್‌ವೊಂದರಲ್ಲಿ ಅವರು, ಜನರು ತನ್ನ ಬಳಿ ಭ್ರಷ್ಟಾಚಾರದ ಬಗ್ಗೆ ದೂರು ನೀಡಿದರೆ, 15 ಲಕ್ಷ ರೂ. ವರೆಗಿನ ಭ್ರಷ್ಟಾಚಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ನಾನು ಹೇಳುತ್ತೇನೆ ಎಂದು ಅವರು ಜೋಕ್ ಮಾಡಿದ್ದರು. ಪಂಚಾಯಿತಿ ಮುಖ್ಯಸ್ಥರ ಭ್ರಷ್ಟಾಚಾರದ ಬಗ್ಗೆ ಜನರು ದೂರು ನೀಡಲು ಬಂದಾಗ, ನಾನು ಅವರಿಗೆ 15 ಲಕ್ಷ ರೂ. ಗೂ ಹೆಚ್ಚು ಭ್ರಷ್ಟಾಚಾರವಾಗದಿದ್ದರೆ ನನಗೆ ಹೇಳಬೇಡಿ ಎಂದು ನಾನು ತಮಾಷೆಯಾಗಿ ಹೇಳುತ್ತೇನೆ. 15 ಲಕ್ಷ ರೂ. ಗೂ ಹೆಚ್ಚು ಮೊತ್ತದ ಭ್ರಷ್ಟಾಚಾರ ನಡೆದಿದ್ದರೆ ಮಾತ್ರ ಅದನ್ನು ಭ್ರಷ್ಟತೆ ಎನ್ನಬಹುದು ಎಂದೂ ಬಿಜೆಪಿ ಸಂಸದ ಜನಾರ್ದನ ಮಿಶ್ರಾ ಹೇಳಿದ್ದರು.