ರಾಷ್ಟ್ರಪತ್ನಿ ಹೇಳಿಕೆ, ದ್ರೌಪದಿ ಮುರ್ಮು ಬಳಿ ಕ್ಷಮೆ ಕೇಳಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್!
ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಭಾರಿ ವಿವಾದ ಸೃಷ್ಟಿಸಿದ್ದರು. ಅಧೀರ್ ಹಾಗೂ ಕಾಂಗ್ರೆಸ್ ವಿರುದ್ಧ ಹೋರಾಟ, ಪ್ರತಿಭಟನೆ ಹೆಚ್ಚಾದ ಬೆನ್ನಲ್ಲೇ ಅಧೀರ್ ರಂಜನ್ ಭೇಷರತ್ ಕ್ಷಮೆ ಕೇಳಿದ್ದಾರೆ.
ನವದೆಹಲಿ(ಜು.29): ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನೀಡಿದ ರಾಷ್ಟ್ರಪತ್ನಿ ಹೇಳಿಕೆ ಭಾರಿ ಕೋಲಾಹಲವನ್ನೇ ಸೃಷ್ಟಿಸಿತ್ತು. ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕೆರದ ಅಧೀರ್ ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ ಭಾರಿ ಪ್ರತಿಭಟನೆ ನಡೆಸಿತ್ತು. ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿತ್ತು. ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಅಧೀರ್ ರಂಜನ್ ಚೌಧರಿ ಯೂ ಟೂರ್ನ್ ಹೊಡೆದಿದ್ದರೆ. ದ್ರೌಪದಿ ಮುರ್ಮು ಬಳಿ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. ನಾಲಿಗೆ ಸ್ಲಿಪ್ ಆಗಿ ಈ ಮಾತು ಬಂದಿದೆ. ತಮ್ಮನ್ನು ಕ್ಷಮಿಸಬೇಕು ಎಂದಿದ್ದಾರೆ. ಇಷ್ಟು ದಿನ ತಮ್ಮ ಹೇಳಿಕೆ ಪರ ನಿಂತಿದ್ದ ಅಧೀರ್ ರಂಜನ್ ಚೌಧರಿ ಇದೀಗ ಮೆತ್ತಗಾಗಿದ್ದಾರೆ. ಇತ್ತ ಕಾಂಗ್ರೆಸ್ ಕೂಡ ಸೈಲೆಂಟ್ ಆಗಿದೆ.
ಅಧೀರ್ ರಂಜನ್ ಚೌಧರಿ ರಾಷ್ಟ್ರಪತಿಯನ್ನು ರಾಷ್ಟ್ರಪತ್ನಿ ಎಂದು ಕರೆಯುವ ಮೂಲಕ ಬುಡಕಟ್ಟು ಸಮುದಾಯಕ್ಕೆ, ಮಹಿಳೆ, ಭಾರತದ ಅತ್ಯುನ್ನತ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಹೀಗಾಗಿ ಅಧೀರ್ ರಂಜನ್ ಚೌಧರಿ ಹಾಗೂ ಕಾಂಗ್ರೆಸ್ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದು ಹೋರಾಟ ಆರಂಭಿಸಿತ್ತು. ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸದನದ ಬಾವಿಗಿಳಿದು ಪ್ರತಿಭಟಿಸಿದರು. ಆಗ ಬಿಜೆಪಿ ಸಂಸದರು ಮತ್ತು ಸಚಿವರು ಸೋನಿಯಾ ಗಾಂಧಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಪ್ರತಿಭಚಿಸಿದ್ದರು. ಬುಡಕಟ್ಟು ಸಮುದಾಯಕ್ಕೆ ಅವಮಾನ ಮಾಡಿದರೆ ಬಿಜೆಪಿ ಸಹಿಸಿಕೊಳ್ಳುವುದಿಲ್ಲ. ಸೋನಿಯಾ ಗಾಂಧಿ ಕ್ಷಮೆ ಕೇಳಿದ ನಂತರವಷ್ಟೇ ಕಲಾಪ ನಡೆಯಲಿದೆ’ ಎಂದು ಹೇಳಿದರು. ಜು.18ರಿಂದ ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಈವರೆಗೆ 10 ದಿನಗಳ ಕಲಾಪ ಸಂಪೂರ್ಣ ವ್ಯರ್ಥವಾಗಿದೆ. ಗುರುವಾರಕ್ಕಿಂತ ಹಿಂದಿನ ಕಲಾಪಗಳು ಜಿಎಸ್‌ಟಿ ಏರಿಕೆ ವಿಷಯದಲ್ಲಿ ವ್ಯರ್ಥವಾಗಿದ್ದರೆ, ಗುರುವಾರದ ಕಲಾಪ ‘ರಾಷ್ಟ್ರಪತ್ನಿ’ ವಿವಾದದಿಂದ ವ್ಯರ್ಥವಾಗಿತ್ತು.
Rashtrapatni Controversy: ರಾಷ್ಟ್ರಪತಿ.. ರಾಷ್ಟ್ರಪತ್ನಿ..? ಇಲ್ಲಿದೆ ಉತ್ತರ
ಅಧೀರ್ ಹೇಳಿಕೆ ಖಂಡಿಸಿದ್ದ ಮಹಿಳಾ ಆಯೋಗ
ಅಧೀರ್ ರಂಜನ್ ಚೌಧರಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ‘ರಾಷ್ಟ್ರಪತ್ನಿ’ ಎಂದಿದ್ದಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ 12 ರಾಜ್ಯ ಮಹಿಳಾ ಆಯೋಗಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇಂತಹ ಹೇಳಿಕೆಗಳು ಕೀಳು ಹಾಗೂ ತೀವ್ರ ಅವಮಾನಕಾರಿಯಾಗಿವೆ ಎಂದು ಆಯೋಗ ಕಿಡಿಕಾರಿತ್ತು. ‘ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಾಗೂ ಎಲ್ಲ ರಾಜ್ಯ ಮಹಿಳಾ ಆಯೋಗಗಳು ರಾಷ್ಟ್ರಪತಿಯ ವಿರುದ್ಧ ಅಧೀರ್ ರಂಜನ್ ಚೌಧರಿ ಅಪಮಾನಕರ ಹಾಗೂ ಕೀಳು ಹೇಳಿಕೆ ನೀಡಿದ್ದನ್ನು ಖಂಡಿಸುತ್ತವೆ. ರಾಷ್ಟ್ರೀಯ ಮಹಿಳಾ ಆಯೋಗ ಅವರಿಗೆ ಸಮನ್ಸ್ ಜಾರಿ ಮಾಡಲಿದೆ’ ಎಂದು ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಟ್ವೀಟ್ ಮಾಡಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತ್ರಿಪುರಾ ಸೇರಿ 12 ರಾಜ್ಯ ಆಯೋಗಗಳು ಹೇಳಿಕೆಯನ್ನು ಖಂಡಿಸಿವೆ.
ಕಳೆದ ಮಂಗಳವಾರ ಸೋನಿಯಾ ಗಾಂಧಿ ಇ.ಡಿ. ವಿಚಾರಣೆ ವಿರೋಧಿಸಿ, ರಾಷ್ಟ್ರಪತಿ ಭವನಕ್ಕೆ ಹೋಗಿ ದೂರು ನೀಡಲು ಕಾಂಗ್ರೆಸ್ ನಿರ್ಧರಿಸಿತ್ತು. ಆಗ ಪತ್ರಕರ್ತರೊಬ್ಬರು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ವಿಜಯ ಚೌಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಧೀರ್‌ರನ್ನು ಪ್ರಶ್ನಿಸಿದ್ದರು. ಆಗ ಅಧೀರ್, ‘ರಾಷ್ಟ್ರಪತ್ನಿ ಭೇಟಿಗೆ ಹೊರಟಿರುವೆ’ ಎಂದುಬಿಟ್ಟರು. ಇದು ವಿವಾದಕ್ಕೆ ಕಾರಣಾಗಿತ್ತು.