ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ 158 ವರ್ಷಗಳ ನಂತರ 'ಸಯನಾಂತಸ್ ಹೂಕರಿ(Cyananthus Hookeri)' ಎಂಬ ಅಪರೂಪದ ಹೂವಿನ ಗಿಡವನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. 1867ರಲ್ಲಿ ಸಿಕ್ಕಿಂನಲ್ಲಿ ಕೊನೆಯದಾಗಿ ಕಂಡಿದ್ದ ಈ ಸಸ್ಯ, ಅರಳಿರುವುದು ಸಸ್ಯಶಾಸ್ತ್ರೀಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು.
Cyananthus Hookeri: ಸುಮಾರು 158 ವರ್ಷಗಳ ಸುದೀರ್ಘ ಅಂತರದ ಬಳಿಕ, 'ಸಯನಾಂತಸ್ ಹೂಕರಿ' (Cyananthus hookeri) ಎಂಬ ಅತ್ಯಂತ ಅಪರೂಪದ ಹಿಮಾಲಯನ್ ಹೂವಿನ ಗಿಡ ಭಾರತದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ಸಂಶೋಧಕರು ಇದನ್ನು ಪತ್ತೆಹಚ್ಚಿದ್ದು, ಇದು ದೇಶದ ಸಸ್ಯಶಾಸ್ತ್ರೀಯ ಇತಿಹಾಸದಲ್ಲಿ ಒಂದು ಮಹತ್ವದ ಬೆಳವಣಿಗೆಯಾಗಿದೆ.
ಸಿಕ್ಕಿಂನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಹೂವು
ಭಾರತದಲ್ಲಿ ಈ ಸಸ್ಯವನ್ನು ಕೊನೆಯ ಬಾರಿಗೆ 1867ರಲ್ಲಿ ಸಿಕ್ಕಿಂ ರಾಜ್ಯದಲ್ಲಿ ದಾಖಲಿಸಲಾಗಿತ್ತು, ಅಂದಿನಿಂದ ಇದು ಎಲ್ಲೂ ಕಾಣಿಸಿರಲಿಲ್ಲ. ಬಹುತೇಕ ಈ ಸಸ್ಯ ಕಣ್ಮರೆ ಆಯ್ತು ಎಂದೇ ಭಾವಿಸಲಾಗಿತ್ತು. 'ಕ್ಯಾಂಪನುಲೇಸಿ' (Campanulaceae) ಅಥವಾ ಬೆಲ್‌ಫ್ಲವರ್ ಕುಟುಂಬಕ್ಕೆ ಸೇರಿದ ಈ ಗಿಡವು ವಿಶಿಷ್ಟವಾದ ನೇರಳೆ-ನೀಲಿ ಬಣ್ಣದ ಹೂವುಗಳನ್ನು ಬಿಡುತ್ತದೆ. ಸಮುದ್ರ ಮಟ್ಟದಿಂದ ಸುಮಾರು 3,600 ಮೀಟರ್ ಎತ್ತರದಲ್ಲಿರುವ ಪೂರ್ವ ಹಿಮಾಲಯದ ಹುಲ್ಲುಗಾವಲು ಮತ್ತು ಕಲ್ಲಿನ ಇಳಿಜಾರುಗಳಲ್ಲಿ ಇದು ಪತ್ತೆಯಾಗಿದೆ. ಈ ಸಸ್ಯದ ಮರುಶೋಧನೆಯು ಹಿಮಾಲಯದ ಕಠಿಣ ವಾತಾವರಣದಲ್ಲೂ ಇಂತಹ ಅಪರೂಪದ ಪ್ರಭೇದಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಭಾರತದಲ್ಲಿ ಅಳಿವಿನಂಚಿನಲ್ಲಿದೆ ಈ ಸಸ್ಯ?
ಭೂತಾನ್, ಚೀನಾ ಮತ್ತು ನೇಪಾಳದ ಕೆಲವು ಭಾಗಗಳಲ್ಲಿ ಈ ಸಸ್ಯ ಕಂಡುಬಂದರೂ, ಭಾರತದಲ್ಲಿ ಇದರ ಇರುವಿಕೆ ಅತ್ಯಂತ ವಿರಳ. ದುರ್ಗಮ ಭೂಪ್ರದೇಶ ಮತ್ತು ಸಸ್ಯಶಾಸ್ತ್ರೀಯ ಸಮೀಕ್ಷೆಗಳ ಕೊರತೆಯಿಂದಾಗಿ ದಶಕಗಳ ಕಾಲ ಇದು ದಾಖಲಾಗದೆ ಉಳಿದಿತ್ತು. ಇದೀಗ ಭಾರತದಲ್ಲಿ ಇದರ ಸಂಖ್ಯೆ ತೀರಾ ಕಡಿಮೆ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟದ (IUCN) ನಿಯಮಗಳ ಅಡಿಯಲ್ಲಿ ಭಾರತದಲ್ಲಿ ಈ ಸಸ್ಯವನ್ನು 'ಅಳಿವಿನಂಚಿನಲ್ಲಿರುವ ಪ್ರಭೇದ' (Endangered) ಎಂದು ವರ್ಗೀಕರಿಸಲು ಸಂಶೋಧಕರು ಶಿಫಾರಸು ಮಾಡಿದ್ದಾರೆ. ಸಸ್ಯವನ್ನು ಪತ್ತೆಹಚ್ಚುವುದು ಮೊದಲ ಹೆಜ್ಜೆ ಮಾತ್ರ, ಅದರ ಹರಡುವಿಕೆ ಮತ್ತು ಉಳಿವಿಗೆ ಇನ್ನಷ್ಟು ಪರಿಸರ ಅಧ್ಯಯನಗಳು ಹಾಗೂ ನಿಗಾ ಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ, ಅರುಣಾಚಲ ಪ್ರದೇಶದಲ್ಲಿನ ಈ ಮರುಶೋಧನೆಯು ಭಾರತದ ಸಸ್ಯಶಾಸ್ತ್ರೀಯ ಇತಿಹಾಸದಲ್ಲಿದ್ದ ಒಂದು ದೊಡ್ಡ ಕಂದಕವನ್ನು ಮುಚ್ಚಿದೆ. ಹಿಮಾಲಯದ ದೂರದ ಪ್ರದೇಶಗಳಲ್ಲಿ ಇನ್ನೂ ಪತ್ತೆಯಾಗದ ಅಪಾರ ಜೀವಿವೈವಿಧ್ಯ ಅಡಗಿದೆ ಎಂಬುದನ್ನು ಇದು ಮತ್ತೊಮ್ಮೆ ನೆನಪಿಸಿದೆ. 1867ರ ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ ಖಚಿತವಾಗಿ ಪತ್ತೆಯಾಗಿರುವ 'ಸಯನಾಂತಸ್ ಹೂಕರಿ', ದೇಶದ ಸಸ್ಯಶಾಸ್ತ್ರದ ದಾಖಲೆಗೆ ಮರುಸೇರ್ಪಡೆಯಾಗಿದೆ.


