Punjab Elections 2022: ಪಂಜಾಬ್ ಚುನಾವಣೆ ಬೆನ್ನಲ್ಲೇ ಡೇರಾ ಮುಖ್ಯಸ್ಥ ರಾಮ್ ರಹೀಮ್ ಜೈಲಿನಿಂದ ಹೊರಕ್ಕೆ!
ಪಂಜಾಬ್ ಚುನಾವಣೆಗೆ ಎರಡು ವಾರಗಳು ಬಾಕಿ ಇರುವಂತೆಯೇ ಗುರ್ಮೀತ್ ರಾಮ್ ರಹೀಮ್ ಬಿಡುಗಡೆಯಾಗಿದೆ. ಹರಿಯಾಣದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಂಜಾಬ್‌ನಲ್ಲಿ ಕಾಂಗ್ರೆಸನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೇರಲು ಎದುರು ನೋಡುತ್ತಿದೆ
ಚಂಡೀಗಢ (ಫೆ. 07): ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್‌ಗೆ ಹರಿಯಾಣ ಸರ್ಕಾರ 21 ದಿನಗಳ ಫರಲೋ (furlough) ನೀಡಿದೆ. ಪ್ರಸ್ತುತ ಅವರನ್ನು ಹರಿಯಾಣದ ರೋಹ್ಟಕ್‌ನಲ್ಲಿರುವ ಸುನಾರಿಯಾ ಜೈಲಿನಲ್ಲಿ ಇರಿಸಲಾಗಿದೆ. ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ 2002 ರಲ್ಲಿ ತನ್ನ ಮ್ಯಾನೇಜರ್‌ನ ಕೊಲೆ ಮತ್ತು ಇನ್ನೊಬ್ಬ ಪತ್ರಕರ್ತನ ಹತ್ಯೆಗೆ ಜೀವಾವಧಿ ಶಿಕ್ಷೆ ಮತ್ತು ಅತ್ಯಾಚಾರಕ್ಕಾಗಿ 20 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದಾರೆ
ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯನ್ನು ಭೇಟಿ ಮಾಡಲು ಮತ್ತು ವೈದ್ಯಕೀಯ ತಪಾಸಣೆಗಳನ್ನು ಪಡೆಯಲು ಅವರಿಗೆ ಈ ಹಿಂದೆ ಮೂರು ತುರ್ತು (ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ) ಪೆರೋಲ್‌ಗಳನ್ನು ನೀಡಲಾಗಿತ್ತು. ಆದರೆ ಪ್ರಸ್ತುತ ಬೆಳವಣಿಗೆ ಪಂಜಾಬ್ ಚುನಾವಣೆಗೆ ಎರಡು ವಾರಗಳು ಬಾಕಿ ಇರುವಂತೆಯೇ ನಡೆದಿದೆ. ಹರಿಯಾಣದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಂಜಾಬ್‌ನಲ್ಲಿ ಕಾಂಗ್ರೆಸನ್ನು ಹೊರಹಾಕಲು ಎದುರು ನೋಡುತ್ತಿದೆ ಎಂಬುದು ಉಲ್ಲೇಖನೀಯ.
ಇದನ್ನೂ ಓದಿ: Punjab Elections 2022: ಆಪ್ ಕೈಗೆ ಅಧಿಕಾರ ಸಾಧ್ಯತೆ, ಚುನಾವಣಾ ಪೂರ್ವ ಸಮೀಕ್ಷೆ ವರದಿ
ಚುನಾವಣೆ ಯಾವುದೇ ಸಂಬಂಧವಿಲ್ಲ: ಈ ಬೆನ್ನಲ್ಲೇ ಸೋಮವಾರ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹರಿಯಾಣ ಮುಖ್ಯಮಂತ್ರಿ ಎಂಎಲ್ ಖಟ್ಟರ್ (ML Khattar), ಫರ್ಲೋಗೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಖಟ್ಟರ್ ಮತ್ತು ರಾಜ್ಯದ ಜೈಲು ಸಚಿವ ರಂಜಿತ್ ಸಿಂಗ್ ಚೌತಾಲಾ ಇಬ್ಬರೂ ಡೇರಾ ಮುಖ್ಯಸ್ಥರಿಗೆ ಸ್ಥಾಪಿತ ಪ್ರೋಟೋಕಾಲ್ ಪ್ರಕಾರ ರಜೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಡೇರಾ ಅನುಯಾಯಿಗಳು ಮತ್ತು ವಿಶೇಷವಾಗಿ ರಾಮ್ ರಹೀಮ್ ಸಿಂಗ್ ಅವರ ಅನುಯಾಯಿಗಳು ಪಂಜಾಬ್‌ನ ಮಾಲ್ವಾ ಪ್ರದೇಶದಲ್ಲಿ ಪ್ರಭಾವಶಾಲಿಯಾಗಿದ್ದಾರೆ, ಅವರ ಮತಗಳು ಸಂಸದೀಯ ಮತ್ತು ಶಾಸಕಾಂಗ ಚುನಾವಣೆಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮಾಲ್ವಾ ಪ್ರದೇಶವು ಪಂಜಾಬ್ ಅಸೆಂಬ್ಲಿಯ 117 ಸ್ಥಾನಗಳಲ್ಲಿ ಅರ್ಧದಷ್ಟು ಕ್ಷೇತ್ರಗಳನ್ನು ಹೊಂದಿದ್ದು ಒಟ್ಟು 69 ವಿಧನಾಸಭಾ ಕ್ಷೇತ್ರಗಳಿವೆ.
ನಾಯಕರ ಆದೇಶಗಳಿಗೆ ಅನುಗುಣವಾಗಿ ಮತ: ಡೇರಾ ಅನುಯಾಯಿಗಳು ಕೋಟ್ಯಂತರ ಸಂಖ್ಯೆಯಲ್ಲಿರದ್ದು ರಹೀಮ್ ಸಿಂಗ್ ಅವರನ್ನು ಜೈಲಿಗೆ ಹಾಕಿದಾಗಿನಿಂದ ತುಲನಾತ್ಮಕವಾಗಿ ಸಕ್ರಿಯರಾಗಿಲ್ಲ. ಆದರೆ ಈ ಅನುಯಾಯಿಗಳು ವ್ಯಾಪಕವಾಗಿ ಪಂಥದ ನಾಯಕರ ಆದೇಶಗಳಿಗೆ ಅನುಗುಣವಾಗಿ ಮತ ಚಲಾಯಿಸುತ್ತಿದ್ದಾರೆ. 2012ರ ಚುನಾವಣೆಗೆ ರಾಜಕೀಯ ಪಕ್ಷಗಳ ಬದಲಿಗೆ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಪಂಗಡ ವಿಭಿನ್ನ ಹೆಜ್ಜೆ ಇಟ್ಟಿತ್ತು. 2017 ರಲ್ಲಿ, ಅದು ಬಿಜೆಪಿ-ಅಕಾಲಿದಳ ದಳ ಮೈತ್ರಿಯನ್ನು ಬೆಂಬಲಿಸಿತ್ತು ಆದರೆ ಚುನಾವಣೆಯಲ್ಲಿ ಸೋಲು ಕಂಡಿದ್ದರು.
ಇದನ್ನೂ ಓದಿ: Punjab Elections: ಚುನಾವಣೆಗೂ ಮುನ್ನ ಚನ್ನಿ ಸರ್ಕಾರಕ್ಕೆ ಬಿಗ್ ಶಾಕ್, ಚಾಟಿ ಬೀಸಿದ ಹೈಕೋರ್ಟ್!
ಈ ಬಾರಿ ಎಲ್ಲಾ ಪ್ರಮುಖ ಪಕ್ಷಗಳು ಕಾಂಗ್ರೆಸ್, ಬಿಜೆಪಿ, ಮತ್ತು ಅಕಾಲಿದಳ, ಹಾಗೆಯೇ ಎಎಪಿ ಸೇರಿದಂತೆ ಅನುಯಾಯಿಗಳ ಮತಗಳನ್ನು ಗೆಲ್ಲುವ ಪ್ರಯತ್ನದಲ್ಲಿ ಡೇರಾ ಪಂಗಡದ ನಾಯಕರೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ಪಂಜಾಬ್‌ನ ಮಾಲ್ವಾ ಪ್ರದೇಶವು ಬಟಿಂಡಾ, ಮುಕ್ತಸರ್, ಸಂಗ್ರೂರ್, ಮಾನ್ಸಾ, ಪಟಿಯಾಲ, ಬರ್ನಾಲಾ, ಫರೀದ್‌ಕೋಟ್, ಮೊಗಾ, ಫಿರೋಜ್‌ಪುರ, ಲುಧಿಯಾನ ಮತ್ತು ಮೊಹಾಲಿ ಜಿಲ್ಲೆಗಳನ್ನು ಒಳಗೊಂಡಿದೆ. ಫೆಬ್ರವರಿ 20 ರಂದು ಪಂಜಾಬ್‌ನಲ್ಲಿ ಏಕ-ಹಂತದ ಚುನಾವಣೆ ನಡೆಯಲಿದೆ.
ಫರ್ಲೋ ಮತ್ತು ಪೆರೋಲ್ ನಡುವಿನ ವ್ಯತ್ಯಾಸ: ಇತ್ತೀಚೆಗೆ, ಸುಪ್ರೀಂ ಕೋರ್ಟ್ ಫರ್ಲೋ ಮತ್ತು ಪೆರೋಲ್ ನಡುವಿನ ವ್ಯತ್ಯಾಸ ಮತ್ತು ಅವುಗಳನ್ನು ನೀಡುವುದಕ್ಕೆ ಸಂಬಂಧಿಸಿದ ಅಂಶಗಳನ್ನು ವಿವರಿಸಿದೆ. ನಿರ್ದಿಷ್ಟ ಅವಧಿಗೆ ಜೈಲಿನಲ್ಲಿದ್ದ ನಂತರ ಖೈದಿಗಳಿಗೆ ಫರ್ಲೋ ನೀಡಬಹುದು ಮತ್ತು ನಿರ್ದಿಷ್ಟ ಅವಶ್ಯಕತೆಗಾಗಿ ಪೆರೋಲ್ ನೀಡಬಹುದು ಎಂದು ನ್ಯಾಯಾಲಯ ಹೇಳಿದೆ. ಏಕತಾನತೆಯನ್ನು ಮುರಿಯಲು ಫರ್ಲೋಗಳನ್ನು ನೀಡಲಾಗುತ್ತದೆ ಮತ್ತು ಆದ್ದರಿಂದ ಖೈದಿಯು ಸಾಮಾಜಿಕ ಮತ್ತು ಕೌಟುಂಬಿಕ ಸಂಬಂಧಗಳನ್ನು ಹೊಂದಬಹುದು. ಆದರೆ ಖೈದಿಗೆ ಇದರ ಸಂಪೂರ್ಣ ಹಕ್ಕಿಲ್ಲ.