Asianet Suvarna News Asianet Suvarna News

Punjab Elections 2022: ಆಪ್ ಕೈಗೆ ಅಧಿಕಾರ ಸಾಧ್ಯತೆ, ಚುನಾವಣಾ ಪೂರ್ವ ಸಮೀಕ್ಷೆ ವರದಿ

  • ಚುನಾಣೋತ್ತರ ಸಮೀಕ್ಷೆ ವರದಿ ಬಿಡುಗಡೆ
  • ಪಂಜಾಬ್‌ನಲ್ಲಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿರುವ ಎಎಪಿ
  • 50 ರಿಂದ 56 ಸೀಟು ಗೆಲ್ಲುವ ಸಾಧ್ಯತೆ
pre poll survey AAP may emerge as largest party in Punjab akb
Author
Bangalore, First Published Jan 31, 2022, 11:03 AM IST

ಪಂಜಾಬ್‌(ಜ.31): ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದ್ದು, ಕೆಲ ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು, ಆ ಸಮೀಕ್ಷೆಯಲ್ಲಿ ಪಂಜಾಬ್‌ನಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಹಿಂದಿಕ್ಕಿ ಅರವಿಂದ್ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವೂ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.  

ಈ ಬಾರಿ ಪಂಜಾಬ್ ಬಹುಕೋನ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಪಂಜಾಬ್‌ನ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳದ ಸುದ್ದಿಯಿದ್ದು,ಕಾಂಗ್ರೆಸ್ ಹೈಕಮಾಂಡ್ ಕೂಡ ಅಧಿಕಾರ ಉಳಿಸಿಕೊಳ್ಳಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಮತ್ತೊಂದೆಡೆ ಭಾರತೀಯ ಜನತಾ ಪಕ್ಷ ಮತ್ತು ಶಿರೋಮಣಿ ಅಕಾಲಿದಳ ನಡುವಿನ ದೀರ್ಘಾವಧಿಯ ಮೈತ್ರಿಯು ಕೃಷಿ ಕಾನೂನಿನ ವಿವಾದದಿಂದಾಗಿ ಅಂತ್ಯಗೊಂಡಿದೆ. ಅಕಾಲಿದಳ ಮಾಯಾವತಿ (Mayawati) ನೇತೃತ್ವದ ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಇತ್ತ ಪಂಜಾಬ್‌ನ ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ತನ್ನ ನೆಲೆಯನ್ನು ಬಲಪಡಿಸಲು ಶ್ರಮಿಸುತ್ತಿದೆ. ಇದೆಲ್ಲದರ ಮಧ್ಯೆ ಆಮ್ ಆದ್ಮಿ ಪಕ್ಷ ಒಂದು ಅವಕಾಶವನ್ನು ನಿರೀಕ್ಷಿಸುತ್ತದೆ. 

Punjab Election 2022 : ತಪ್ಪು ಮಾಡಿದೆ, ಆಗಲೇ ಕ್ರಮ ಕೈಗೊಳ್ಳಬೇಕಿತ್ತು ಅಂತಾ ಕ್ಯಾಪ್ಟನ್ ಅಮರೀಂದರ್ ಹೇಳಿದ್ದೇಕೆ?

ಉತ್ತರಾಖಂಡ, ಪಂಜಾಬ್ ಮತ್ತು ಗೋವಾ ವಿಧಾನಸಭಾ ಚುನಾವಣೆಗಳು ಒಂದೇ ಹಂತದಲ್ಲಿ ನಡೆಯಲಿದ್ದು, ಉತ್ತರ ಪ್ರದೇಶ ಮತ್ತು ಮಣಿಪುರ ವಿಧಾನಸಭಾ ಚುನಾವಣೆಗಳು ಕ್ರಮವಾಗಿ ಏಳು ಮತ್ತು ಎರಡು ಹಂತಗಳಲ್ಲಿ ನಡೆಯಲಿವೆ. ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ  14 ರಂದು ಚುನಾವಣೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಶನಿವಾರ ಜನವರಿ 8 ರಂದು ಘೋಷಣೆ ಮಾಡಿತ್ತು. 

ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ, ಪಂಜಾಬ್‌ನಲ್ಲಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಆಮ್ ಆದ್ಮಿ ಪಕ್ಷವು 50 ರಿಂದ 56 ಸ್ಥಾನಗಳನ್ನು ಗೆದ್ದು ಗೆಲ್ಲಬಹುದಾದರೂ ಇದು ಅಧಿಕಾರಕ್ಕೇರುವಷ್ಟು ಬಹುಮತ ಪಡೆಯಲು ವಿಫಲವಾಗಲಿದೆಯಾದರೂ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ. ಹಾಗೆಯೇ ಆಡಳಿತಾರೂಢ ಕಾಂಗ್ರೆಸ್ 42 ರಿಂದ 48 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದು, ಶಿರೋಮಣಿ ಅಕಾಲಿದಳ (Shiromani Akali Dal) 1 ರಿಂದ 17 ಸ್ಥಾನಗಳನ್ನು ಪಡೆಯಲಿದೆ. ಇತ್ತ ಬಿಜೆಪಿ  ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಎಸ್‌ಎಡಿ (ಶಿರೋಮಣಿ ಅಕಾಲಿದಳ ಸಂಯುಕ್ತ) ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವ ಬಿಜೆಪಿ 1 ರಿಂದ 3 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. 

Punjab Elections: ಸಿಧು ದುರಹಂಕಾರ ಕೊನೆಗಾಣಿಸಲು ಪ್ರಮುಖ ಅಭ್ಯರ್ಥಿ ಕಣಕ್ಕಿಳಿಸಿದ ಅಕಾಲಿ ದಳ!

ಒಂದು ವೇಳೆ ಚುನಾವಣಾ ಪೂರ್ವ ಸಮೀಕ್ಷೆ  ನಿಜವಾದಲ್ಲಿ  ಎಎಪಿಯೂ ಶಿರೋಮಣಿ ಅಕಾಲಿದಳ (SAD)ಹಾಗೂ ಇತರ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೇರಬಹುದು.  ಇತ್ತ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಪಕ್ಷದೊಂದಿಗೆ ಕೈಜೋಡಿಸಿರುವ ಬಿಜೆಪಿಗೆ ಸಮೀಕ್ಷೆಯಲ್ಲಿ ಎರಡು ಸ್ಥಾನಗಳ ಭವಿಷ್ಯ  ನೋಡಿದರೆ, ಅದು ರದ್ದಾದ ಕೃಷಿ ಕಾನೂನುಗಳ ಮೇಲಿನ ರೈತರ ಆಕ್ರೋಶದ ಪರಿಣಾಮ ಎಂದರೆ ತಪ್ಪಾಗಲಾರದು.

ಕಳೆದ 2017ರ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಪಡೆಯುವ ಮೂಲಕ ಜನಾದೇಶವನ್ನು ಗೆದ್ದುಕೊಂಡಿತ್ತು ಮತ್ತು ಎಎಪಿ 20 ಕ್ಷೇತ್ರಗಳನ್ನು ಗೆದ್ದು ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿತ್ತು. ಇತ್ತೀಚೆಗೆ ಚಂಡೀಗಢ ( Chandigarh) ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಎಪಿ ಉತ್ತಮ ಸಾಧನೆ ಮಾಡುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಬೆರಗುಗೊಳಿಸಿತ್ತು. ಇಲ್ಲಿ 35 ವಾರ್ಡ್‌ಗಳಲ್ಲಿ 14 ರಲ್ಲಿ ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಎಎಪಿ ( AAP) ಹೊರಹೊಮ್ಮಿತು. ಆಡಳಿತಾರೂಢ ಬಿಜೆಪಿ ಅಲ್ಲಿ 12 ಸ್ಥಾನ  ಗೆದ್ದಿತ್ತು.

403 ಸದಸ್ಯ ಬಲದ ಉತ್ತರ ಪ್ರದೇಶ (Uttar Pradesh) ವಿಧಾನಸಭೆಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ (Manipur) ಫೆಬ್ರವರಿ27 ಮತ್ತು ಮಾರ್ಚ್ 3 ರಂದು  ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಗೋವಾ (Goa) ಮತ್ತು ಉತ್ತರಾಖಂಡ್‌ನಲ್ಲಿ (Uttarakhand) ಫೆಬ್ರವರಿ 14 ರಂದು ಮತದಾನ ನಡೆಯಲಿದ್ದು, ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಎಲ್ಲಾ ಚುನಾವಣೆಗಳ ಮತಗಳ ಎಣಿಕೆ ಕಾರ್ಯ ಮಾರ್ಚ್ 10 ರಂದು ನಡೆಯಲಿದೆ.

Follow Us:
Download App:
  • android
  • ios