ಭಾರತದ ಸೇನಾ ದಾಳಿಗೆ ಪಾಕ್‌ ಬಳಿ ಕ್ಷಮೆ ಕೇಳಿದ ಯೂಟ್ಯೂಬರ್‌ ರಣವೀರ್‌ ಈಗ ತಮ್ಮ ಪೋಸ್ಟ್‌ ಡಿಲೀಟ್ ಮಾಡಿದ್ದಾರೆ.ಮತ್ತೊಂದೆಡೆ ಕ್ಷಿಪಣಿ ದಾಳಿಯಿಂದ ಆಸೀಸ್‌ನ ನಾಲ್ವರು ಕ್ರಿಕೆಟಿಗರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಭಾರತದ ಸೇನಾ ದಾಳಿಗೆ ಪಾಕ್‌ ಬಳಿ ಕ್ಷಮೆ ಕೇಳಿದ ಯೂಟ್ಯೂಬರ್‌ ರಣವೀರ್‌

ನವದೆಹಲಿ: ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಯೂಟ್ಯೂಬರ್‌ ರಣವೀರ್‌ ಅಲಹಾಬಾದಿಯಾ ಇದೀಗ ಮತ್ತೊಂದು ವಿವಾದದ ಕೇಂದ್ರಬಿಂದುವಾಗಿದ್ದಾರೆ. ಶನಿವಾರ ರಣವೀರ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದರು. ಅದರಲ್ಲಿ ‘ಪ್ರೀತಿಯ ಪಾಕಿಸ್ತಾನಿ ಸೋದರ ಮತ್ತು ಸೋದರಿಯರೇ , ಅನೇಕ ಭಾರತೀಯರಂತೆ ನನ್ನ ಹೃದಯದಲ್ಲಿ ನಿಮ್ಮ ಬಗ್ಗೆ ದ್ವೇಷವಿಲ್ಲ. 

ನಮ್ಮಲ್ಲಿ ಹಲವರು ಶಾಂತಿ ಬಯಸುತ್ತಾರೆ. ನಾವು ಪಾಕಿಸ್ತಾನಿಗಳನ್ನು ಭೇಟಿಯಾದಾಗೆಲ್ಲಾ ನೀವು ನಮ್ಮನ್ನು ಪ್ರೀತಿಯಿಂದ ಸ್ವಾಗತಿಸುತ್ತೀರಿ. ನಾವು ದ್ವೇಷವನ್ನು ಹರಡುತ್ತಿದ್ದೇವೆ ಎಂದು ನಿಮಗೆ ಅನಿಸಿದರೆ ನಾನು ಹೃದಯಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ .ಇದಕ್ಕಾಗಿ ನಾನು ಅನೇಕ ಭಾರತೀಯರಿಂದ ದ್ವೇಷ ಎದುರಿಸಬೇಕಾಗುತ್ತದೆ. ’ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ಹಲವರು ಕಿಡಿ ಕಾರಿದ ಬೆನ್ನಲ್ಲೇ ರಣವೀರ್‌ ಪೋಸ್ಟ್‌ ಡಿಲೀಟ್‌ ಮಾಡಿದ್ದಾರೆ.

ಕ್ಷಿಪಣಿ ದಾಳಿಯಿಂದ ಆಸೀಸ್‌ನ 4 ಕ್ರಿಕೆಟಿಗರು ಸ್ವಲ್ಪದರಲ್ಲೇ ಪಾರು

ಕರಾಚಿ: ಪಾಕಿಸ್ತಾನ ಸೂಪರ್ ಲೀಗ್‌ (ಪಿಎಸ್‌ಎಲ್‌) ಮುಂದೂಡಲ್ಪಟ್ಟ ಹಿನ್ನೆಲೆ ಪಾಕ್‌ನಿಂದ ತೆರಳುತ್ತಿದ್ದ ಆಸ್ಟ್ರೇಲಿಯಾದ ನಾಲ್ವರು ಕ್ರಿಕೆಟಿಗರು ನೂರ್‌ ಖಾನ್ ವಾಯುನೆಲೆ ಮೇಲೆ ಭಾರತ ನಡೆಸಿದ್ದ ಕ್ಷಿಪಣಿ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದ ವಿಷಯ ಬೆಳಕಿಗೆ ಬಂದಿದೆ. ಶನಿವಾರ ಭಾರತವು ಪಾಕಿಸ್ತಾನದ ನೂರ್‌ ಖಾನ್ ವಾಯುನೆಲೆ ಸೇರಿದಂತೆ ಮೂರು ಪಾಕಿಸ್ತಾನಿ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಗೂ ಮುಂಚೆ ನೂರ್‌ ಖಾನ್ ವಾಯುನೆಲೆಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಶಾನ್‌ ಅಬಾಟ್, ಬೆನ್‌ ದ್ವಾರಶುಯಿಸ್‌, ಆ್ಯಸ್ಟನ್‌ ಟರ್ನರ್‌ ಮತ್ತು ಮಿಚ್‌ ಓವನ್ ಮತ್ತು ಅಧಿಕಾರಿಗಳಿದ್ದರು. 

ಭಾರತದ ಕ್ಷಿಪಣಿ ದಾಳಿ ನಡೆಸುವ ಮೂರು ಗಂಟೆಗೂ ಮುನ್ನ ಪಿಎಸ್‌ಎಲ್‌ ಮುಂದೂಡಿಕೆ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ವ್ಯವಸ್ಥೆ ಮಾಡಿದ್ದ ವಿಮಾನದಲ್ಲಿ ದುಬೈಗೆ ತೆರಳಿದ್ದು, ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ. ಈ ಬಗ್ಗೆ ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

ಪಾಕ್‌ ದಾಳಿಗೆ ಬಲಿಯಾದ ಆಂಧ್ರ ಅಗ್ನಿವೀರ ಮುರಳಿಗೆ ₹50 ಲಕ್ಷ ಪರಿಹಾರ ಪ್ರಕಟ

ಕಲ್ಲಿತಾಂಡ: ಜಮ್ಮು ಕಾಶ್ಮೀರದ ಪೂಂಛ್‌ನಲ್ಲಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಹುತಾತ್ಮರಾದ ಆಂಧ್ರಪ್ರದೇಶದ ಯೋಧ (ಅಗ್ನಿವೀರ) ಮುದಾವತ್‌ ಮರುಳಿ ನಾಯಕ್‌ಗೆ ಆಂಧ್ರ ಸರ್ಕಾರ 50 ಲಕ್ಷ ರು. ಪರಿಹಾರ ಘೋಷಿಸಿದೆ. ಮುರುಳಿ ಪಾರ್ಥಿವ ಶರೀರ ಶನಿವಾರ ಆಂಧ್ರದ ಸತ್ಯಸಾಯಿ ಜಿಲ್ಲೆಯಲ್ಲಿರುವ ಅವರ ನಿವಾಸ ತಲುಪಿದ್ದು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್‌ ಯೋಧನ ಅಂತಿಮ ದರ್ಶನ ಪಡೆದು, ವೈಯಕ್ತಿಕವಾಗಿ 25 ಲಕ್ಷ ರು. ಪರಿಹಾರ ಘೋಷಿಸಿದರು. 

ಇದೇ ವೇಳೆ ಮಾತನಾಡಿದ ಅವರು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 50 ಲಕ್ಷ ರು., ಐದು ಎಕರೆ ಕೃಷಿ ಭೂಮಿ, 300 ಚದರ ಮೀಟರ್‌ ನಿವೇಶನ ಭೂಮಿ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ಸಂಪುಟದಲ್ಲಿ ಚರ್ಚಿಸಿದ ಬಳಿಕ ಅವರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದಿದ್ದಾರೆ.

ಕದನ ವಿರಾಮ ಉಲ್ಲಂಘಸಿದರೆ ಪಾಕ್‌ಗೆ ತಕ್ಕ ಉತ್ತರ ನೀಡುವ ಅಧಿಕಾರ ಕಮಾಂಡರ್‌ಗಳಿಗೆ

ನವದೆಹಲಿ: ಅಮೆರಿಕದ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟಿದ್ದ ಕದನ ವಿರಾಮಕ್ಕೆ ಅನಿವಾರ್ಯವಾಗಿ ಒಪ್ಪಿದ್ದ ಪಾಕ್‌, ಕೆಲವೇ ಗಂಟೆಗಳಲ್ಲಿ ಅದನ್ನು ಉಲ್ಲಂಘಿಸಿದ ಬೆನ್ನಲ್ಲೇ, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವ ಅಧಿಕಾರವನ್ನು ಸೇನಾ ಮುಖ್ಯಸ್ಥ ಜ. ಉಪೇಂದ್ರ ದ್ವಿವೇದಿ ಅವರು ಸೇನಾ ಕಮಾಂಡರ್‌ಗಳಿಗೆ ನೀಡಿದ್ದಾರೆ.

ಶನಿವಾರ ಸಂಜೆ, ಭೂಮಿ, ವಾಯು ಮತ್ತು ಸಮುದ್ರದದಿಂದ ನಡೆಯುವ ಎಲ್ಲಾ ಗುಂಡಿನ ದಾಳಿ ಮತ್ತು ಸೇನಾ ಕಾರ್ಯಾಚರಣೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವ ಒಪ್ಪಂದಕ್ಕೆ ಬಂದಿರುವುದಾಗಿ ಭಾರತ ಮತ್ತು ಪಾಕಿಸ್ತಾನ ಘೋಷಿಸಿದ್ದವು. ಆದರೆ ಈ ಘೋಷಣೆಯಾದ ಕೆಲ ಗಂಟೆಗಳಲ್ಲೇ ಪಾಕ್‌ ಪಡೆ ಗುಂಡು ಹಾರಿಸತೊಡಗಿದ್ದು, ಭಾರತೀಯ ಯೋಧರೂ ಅದಕ್ಕೆ ತಕ್ಕ ಉತ್ತರ ನೀಡಿದ್ದರು. ಇದಾದ ಬಳಿಕ ಪಶ್ಚಿಮ ಗಡಿಯಲ್ಲಿ ಕಮಾಂಡರ್‌ಗಳೊಂದಿಗೆ ಭದ್ರತಾ ಪರಿಸ್ಥಿತಿ ಪರಿಶೀಲಿಸಿದ ದ್ವಿವೇದಿ, ಪಾಕ್‌ ಪ್ರಚೋದನೆಗೆ ಸೂಕ್ತ ಉತ್ತರ ನೀಡುವ ಅಧಿಕಾರವನ್ನು ಕಮಾಂಡರ್‌ಗಳಿಗೆ ನೀಡಿದ್ದಾರೆ.