ದೆಹಲಿಯ ಪಹರ್‌ಗಂಜ್‌ನಲ್ಲಿ ರಂಜಾನ್ ಆಚರಣೆಯ ಸಂದರ್ಭದಲ್ಲಿ, ಮನೆಯ ಹೊರಗೆ ಆಡುತ್ತಿದ್ದ ಎರಡು ವರ್ಷದ ಮಗುವಿಗೆ 15 ವರ್ಷದ ಬಾಲಕನೊಬ್ಬ ಕಾರು ಚಲಾಯಿಸಿದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಾಲಕನ ತಂದೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಘಟನೆ ದುಃಖವನ್ನುಂಟುಮಾಡಿದೆ.
ದೆಹಲಿ (ಏ.01): ರಂಜಾನ್ ಆಚರಣೆಯ ನಡುವೆ 2 ವರ್ಷದ ಮಗುವಿನ ಸಾವು ಕುಟುಂಬದ ಸಂತೋಷವನ್ನು ಕಸಿದುಕೊಂಡಿದೆ. 15 ವರ್ಷದ ಬಾಲಕ ಚಲಾಯಿಸುತ್ತಿದ್ದ ಕಾರು ಹರಿದು ಹೋದ ಪರಿಣಾಮ ಮಗು ದಾರುಣವಾಗಿ ಸಾವನ್ನಪ್ಪಿದೆ.
ಮನೆಯ ಹೊರಗೆ ಆಡುತ್ತಿದ್ದ ಅನಾಬಿಯಾ (2) ಎಂಬ ಮಗುವಿನ ಮೇಲೆ 15 ವರ್ಷದ ಅಪ್ರಾಪ್ತ ಬಾಲಕ ಹ್ಯುಂಡೈ ವೆನ್ಯೂ ಕಾರು ಚಲಾಯಿಸಿದ್ದಾನೆ. ಕಾರು ಹರಿದ ಪರಿಣಾಮ ಸ್ಥಳದಲ್ಲಿಯೇ ಮಗು ಸಾವನ್ನಪ್ಪಿದೆ. ದೆಹಲಿಯ ಪಹರ್‌ಗಂಜ್‌ನಲ್ಲಿ ಭಾನುವಾರ ಈ ಭೀಕರ ದುರ್ಘಟನೆ ಸಂಭವಿಸಿದೆ.
ಪಹರ್‌ಗಂಜ್‌ನಲ್ಲಿರುವ ತನ್ನ ಮನೆಯ ಹೊರಗಿನ ರಸ್ತೆಯಲ್ಲಿ ಆಡುತ್ತಿದ್ದ ಮಗುವಿನ ಮೇಲೆ ಅಪ್ರಾಪ್ತ ಬಾಲಕನೊಬ್ಬ ಹ್ಯುಂಡೈ ಕಾರನ್ನು ಚಲಾಯಿಸಿದ್ದಾನೆ. ಅಪಘಾತದ ಸಿಸಿಟಿವಿ ದೃಶ್ಯಗಳು ಬಿಡುಗಡೆಯಾಗಿವೆ. ಅನಾಬಿಯಾ ಇತರ ಮಕ್ಕಳೊಂದಿಗೆ ಕಾರು ಬರುವುದನ್ನು ಮತ್ತು ಪಕ್ಕದಲ್ಲಿ ನಿಲ್ಲಿಸುವುದನ್ನು ವೀಡಿಯೊದಲ್ಲಿ ಕಾಣಬಹುದು. ಇದ್ದಕ್ಕಿದ್ದಂತೆ ಕಾರ್ ಮುಂದೆ ಬಂದು ಮಗುವಿನ ದೇಹದ ಮೇಲೆ ಹರಿದಿದೆ.
ಇದನ್ನೂ ಓದಿ: ಬೆಂಗಳೂರಿನ ಅತ್ಯಂತ ದುಬಾರಿ ಮುತ್ತು; ಒಂದು ಕಿಸ್ಸಿಗೆ 50 ಸಾವಿರ ರೂ. ಚಾರ್ಜ್ ಮಾಡುವ ಕಿಸ್ಸಿಂಗ್ ಟೀಚರ್!
ಘಟನೆ ನೋಡಿದವರು ಓಡಿ ಬಂದು ಕಾರನ್ನು ತಳ್ಳಿ ಮಗುವನ್ನು ಹೊರತೆಗೆದು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಮಗು ಮೃತಪಟ್ಟಿದೆ. ಅನಾಬಿಯಾಳ ನೆರೆಮನೆಯವರ ಕಾರು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ಸಂಭವಿಸಿದಾಗ 15 ವರ್ಷದ ಮಗ ವಾಹನ ಚಲಾಯಿಸುತ್ತಿದ್ದ ಎಂದು ಸಿಸಿಟಿವಿ ದೃಶ್ಯಗಳಿಂದ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧ ಕಾರು ಮಾಲೀಕ ಮತ್ತು ಆತನ ಮಗನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕನ ತಂದೆ ಪಂಕಜ್ ಅಗರ್ವಾಲ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
