ಪಾಕುಡ್‌ (ಜಾರ್ಖಂಡ್‌) [ಡಿ.17] : ಅಯೋಧ್ಯೆಯ ಭೂಮಿಯನ್ನು ಹಿಂದೂಗಳಿಗೆ ನೀಡಿ ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು ಪ್ರಕಟಿಸಿದ ತಿಂಗಳೊಪ್ಪತ್ತಿನಲ್ಲೇ, ಮಂದಿರ ನಿರ್ಮಾಣ ಕುರಿತು ಕೇಂದ್ರ ಗೃಹ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮಹತ್ವದ ಘೋಷಣೆ ಮಾಡಿದ್ದಾರೆ. ದಶಕಗಳ ಕಾಲ ಕಗ್ಗಂಟಾಗಿದ್ದ ರಾಮಜನ್ಮಭೂಮಿ ವಿವಾದಕ್ಕೆ ಸುಪ್ರೀಂಕೋರ್ಟ್‌ ಕಳೆದ ತಿಂಗಳು ತೆರೆ ಎಳೆದಿರುವ ಹಿನ್ನೆಲೆಯಲ್ಲಿ ಮುಂದಿನ ನಾಲ್ಕು ತಿಂಗಳೊಳಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಅಮಿತ್‌ ಶಾ ಘೋಷಿಸಿದ್ದಾರೆ.

ಆದರೆ, 4 ತಿಂಗಳಿನಲ್ಲಿ ದೇಗುಲ ನಿರ್ಮಾಣ ಕಾಮಗಾರಿ ಆರಂಭವಾಗುತ್ತದೆಯೋ ಅಥವಾ ನಿರ್ಮಾಣ ಪೂರ್ಣಗೊಳ್ಳಲಿದೆಯೋ ಎಂಬ ಬಗ್ಗೆ ಅವರು ಸ್ಪಷ್ಟವಿವರಣೆ ನೀಡಿಲ್ಲ.

ಜಾರ್ಖಂಡ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಾಕುಡ್‌ನಲ್ಲಿ ಪ್ರಚಾರ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅವರು, ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂಕೋರ್ಟ್‌ ಈಗಾಗಲೇ ತೀರ್ಪು ನೀಡಿದೆ. ವಿಶ್ವಾದ್ಯಂತ ಇರುವ ಭಾರತೀಯರ ಬಯಕೆಯಂತೆ ಮುಂದಿನ 4 ತಿಂಗಳ ಒಳಗಾಗಿ ಅಯೋಧ್ಯೆಯಲ್ಲಿ ಮುಗಿಲೆತ್ತರದ ರಾಮಮಂದಿರ ಕಟ್ಟಲಾಗುವುದು ಎಂದು ಹೇಳಿದರು.

ಶ್ರೀರಾಮಚಂದ್ರ ಜನಿಸಿದ ಸ್ಥಳದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ಭಾರತೀಯರು ನೂರಾರು ವರ್ಷಗಳಿಂದ ಬಯಕೆ ಹೊಂದಿದ್ದಾರೆ. ಹೀಗಾಗಿ ರಾಮಮಂದಿರ ನಿರ್ಮಾಣ ಮಾಡಬೇಕೋ ಬೇಡವೋ ಹೇಳಿ ಎಂದು ರಾರ‍ಯಲಿಯಲ್ಲಿ ನೆರೆದಿದ್ದ ಜನರನ್ನು ಪ್ರಶ್ನಿಸಿದರು, ಬೇಕು ಎಂಬ ಧ್ವನಿ ಮೊಳಗಿತು.

ಪೌರತ್ವ ಕಾಯ್ದೆಯಲ್ಲಿ ಬದಲಾವಣೆ?: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸುಳಿವು!...

ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಅವರು, ಅಯೋಧ್ಯೆ ಪ್ರಕರಣವನ್ನು ಅನಿರ್ದಿಷ್ಟಾವಧಿಗೆ ವಿಳಂಬ ಮಾಡಲು ಆ ಪಕ್ಷ ಪ್ರಯತ್ನಿಸಿತ್ತು. ಕಾಂಗ್ರೆಸ್‌ ಮುಖಂಡ ಹಾಗೂ ವಕೀಲ ಕಪಿಲ್‌ ಸಿಬಲ್‌ ಅವರು, ಪ್ರಕರಣವನ್ನು ನಂತರ ವಿಚಾರಣೆಗೆ ತೆಗೆದುಕೊಳ್ಳಿ ಎಂದು ಹೇಳಿದ್ದರು. ಅವರ ಹೊಟ್ಟೆಯಲ್ಲಿದ್ದ ನೋವಾದರೂ ಎಂತಹದ್ದು ಎಂದು ಅಮಿತ್‌ ಶಾ ಪ್ರಶ್ನಿಸಿದರು.

ಐತಿಹಾಸಿಕ ತೀರ್ಪು:

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಮ್ಮತಿ ನೀಡಿ ನ.9ರಂದು ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ಅಲ್ಲದೆ ಮುಸ್ಲಿಮರಿಗೆ ಅಯೋಧ್ಯೆಯಲ್ಲೇ 5 ಎಕರೆ ಜಮೀನು ಮಂಜೂರು ಮಾಡುವಂತೆಯೂ ಸೂಚನೆ ನೀಡಿತ್ತು. ದೇಗುಲ ನಿರ್ಮಾಣಕ್ಕಾಗಿ ಮೂರು ತಿಂಗಳಲ್ಲಿ ಟ್ರಸ್ಟ್‌ ರಚಿಸಲು ನಿರ್ದೇಶನ ಕೊಟ್ಟಿತ್ತು. ಇದನ್ನು ಪ್ರಕರಣದಲ್ಲಿ ಮುಸ್ಲಿಮರ ಪರ ಅರ್ಜಿ ಸಲ್ಲಿಸಿದ್ದ ಸುನ್ನಿ ವಕ್ಫ್ ಮಂಡಳಿ ಒಪ್ಪಿಕೊಂಡಿತ್ತು.

ಈ ನಡುವೆ, ಈ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ 19 ಮೇಲ್ಮನವಿಗಳನ್ನು ಕಳೆದ ವಾರ ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿತ್ತು. ಅರ್ಜಿದಾರರಿಗೆ ಕ್ಯುರೇಟಿವ್‌ ಅರ್ಜಿ ಸಲ್ಲಿಸುವ ಅವಕಾಶ ಮಾತ್ರ ಬಾಕಿ ಉಳಿದಿದೆ. ಈವರೆಗೆ ಯಾರೂ ಆ ಆಯ್ಕೆಯನ್ನು ಬಳಸಿಕೊಂಡಿಲ್ಲ. ಕ್ಯುರೇಟಿವ್‌ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದರೆ, ಅಯೋಧ್ಯೆ ಪ್ರಕರಣದಲ್ಲಿ ಕಾನೂನು ಸಮರ ಮುಕ್ತಾಯವಾಗಲಿದೆ.