ಗಿರಿಧ್‌[ಡಿ.16]: ವಿವಾದಿತ ಪೌರತ್ವ (ತಿದ್ದುಪಡಿ) ಕಾಯ್ದೆಯಲ್ಲಿ ‘ಕೆಲವು ಬದಲಾವಣೆ’ ತರಬಹುದು ಎಂಬ ಸೂಚನೆಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ್ದಾರೆ. ಕಾಯ್ದೆಗೆ ಬಾಂಗ್ಲಾದೇಶೀ ನುಸುಳುಕೋರರ ಉಪಟಳ ತೀವ್ರವಾಗಿರುವ ಈಶಾನ್ಯ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಶಾ ಅವರಿಂದ ಈ ಸುಳಿವು ಬಂದಿದೆ.

ಜಾರ್ಖಂಡ್‌ ವಿಧಾನಸಭಾ ಚುನಾವಣಾ ರಾರ‍ಯಲಿಯಲ್ಲಿ ಮಾತನಾಡಿದ ಶಾ, ‘ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್‌ ಸಂಗ್ಮಾ ಹಾಗೂ ಅವರ ಮಂತ್ರಿಮಂಡಲದ ಸಚಿವರು ಶುಕ್ರವಾರ ನನ್ನನ್ನು ಭೇಟಿ ಮಾಡಿದ್ದರು. ಕಾಯ್ದೆಯಿಂದ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ಆದರೆ ಯಾವುದೇ ಸಮಸ್ಯೆ ಇಲ್ಲ ಎಂದು ನಾನು ಅವರಿಗೆ ತಿಳಿಹೇಳಲು ಯತ್ನಿಸಿದೆ’ ಎಂದರು.

‘ಆದರೆ ಕಾಯ್ದೆಯಲ್ಲಿ ಕೆಲವು ಬದಲಾವಣೆ ಆಗಲೇಬೇಕು ಎಂದು ಅವರು ಪಟ್ಟು ಹಿಡಿದರು. ಆಗ ನಾನು ‘ಕ್ರಿಸ್‌ಮಸ್‌ ನಂತರ ನನ್ನನ್ನು ಭೇಟಿ ಮಾಡಿ’ ಎಂದು ಅವರಿಗೆ ಸೂಚಿಸಿದೆ. ಆ ವೇಳೆ ರಚನಾತ್ಮಕ ಚರ್ಚೆ ನಡೆಸುವ ಭರವಸೆಯನ್ನು ನಾನು ಅವರಿಗೆ ನೀಡಿದೆ ಹಾಗೂ ಮೇಘಾಲಯದ ಸಮಸ್ಯೆಗಳ ಬಗ್ಗೆ ಪರಿಹಾರ ಒದಗಿಸುವ ಆಶ್ವಾಸನೆ ಕೊಟ್ಟೆ’ ಎಂದು ಗೃಹ ಮಂತ್ರಿ ಹೇಳಿದರು.

ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ಬಂದ ನಂತರ ಬಾಂಗ್ಲಾದೇಶ, ಆಷ್ಘಾನಿಸ್ತಾನ ಹಾಗೂ ಪಾಕಿಸ್ತಾನದ ನಿರಾಶ್ರಿತ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ಲಭಿಸಲಿದೆ. ಈ ರೀತಿ ಅವರಿಗೆ ಪೌರತ್ವ ಲಭಿಸಿದರೆ ಬಾಂಗ್ಲಾದೇಶೀ ನಿರಾಶ್ರಿತರು ಹೆಚ್ಚಿರುವ ಈಶಾನ್ಯ ರಾಜ್ಯಗಳಿಗೆ ತೊಂದರೆಯಾಗಲಿದೆ. ಈಶಾನ್ಯದ ಮೂಲನಿವಾಸಿಗಳ ಸೌಲಭ್ಯಗಳನ್ನು ನಿರಾಶ್ರಿತ ವಲಸಿಗರು ಕಸಿಯಲಿದ್ದಾರೆ ಎಂಬುದು ಮೇಘಾಲಯ ಸೇರಿ ಈಶಾನ್ಯ ರಾಜ್ಯಗಳ ಆತಂಕ.