ಬಿಗಿ ಭದ್ರತೆಯ ನಡುವೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ವೈಭವದಿಂದ ರಾಮನವಮಿ ಶೋಭಾಯಾತ್ರೆಯನ್ನು ಆಚರಣೆ ಮಾಡಲಾಗಿದೆ. ಕಾಶ್ಮೀರಿ ಪಂಡಿತರು ಹರಿ ರಾಮ, ಹರಿ ರಾಮ ಎನ್ನುವ ಘೋಷಣೆ ಕೂಗುತ್ತಾ ರಸ್ತೆಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. 

ಶ್ರೀನಗರ (ಮಾ.30): ಕಾಶ್ಮೀರಿ ಪಂಡಿತರು ಗುರುವಾರ ಶ್ರೀನಗರದಲ್ಲಿ ರಾಮ ನವಮಿಯ ಶುಭ ಸಂದರ್ಭದಲ್ಲಿ ಆಕರ್ಷಕ ಶೋಭಾಯಾತ್ರೆಯನ್ನು ಕೈಗೊಂಡರು. ಇಡೀ ನಗರದಲ್ಲಿ ಶ್ರದ್ಧಾ, ಉತ್ಸಾಹದಿಂದ ಸಂಭ್ರಮದಲ್ಲಿ ಹಬ್ಬವನ್ನು ಆಚರಣೆ ಮಾಡಲಾಗಿದೆ. ಶ್ರೀನಗರದ ಟಂಕಿಪೋರಾ ಪ್ರದೇಶದ ಕತ್ಲೇಶ್ವರ ದೇವಸ್ಥಾನದಿಂದ ಸಾಂಪ್ರದಾಯಿಕ ಉಡುಗೆ ತೊಟ್ಟ ಮಕ್ಕಳು ಹಾಗೂ ಹಿರಿಯರ ಜೊತೆ, ಯಾತ್ರೆಯನ್ನು ಹಬ್ಬಕದಲ್, ಗಣಪತಿಯಾರ್, ಬಾರ್ಬರ್ ಷಾ, ರೀಗಲ್ ಚೌಕ್, ಲಾಲ್ ಚೌಕ್, ಹರಿಸಿಂಗ್ ಹೈ ಸ್ಟ್ರೀಟ್ ಮತ್ತು ಜಹಾಂಗೀರ್ ಚೌಕ್ ರಸ್ತೆಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆಗಳೊಂದಿಗೆ ನಡೆಸಲಾಯಿತು. "ಹರಿ ರಾಮ ಹರಿ ರಾಮ" ಘೋಷಣೆಗಳನ್ನು ಕೂಗುತ್ತಾ ಸಾಕಷ್ಟು ಸಂಖ್ಯೆಯ ಕಾಶ್ಮೀರಿ ಪಂಡಿತರು ಶಾಂತಿಯುತವಾಗಿ ಸಾಗಿದ ಯಾತ್ರೆಯ ಜೊತೆಯಲ್ಲಿ ಭಾಗಿಯಾಗಿದ್ದರು. ಬಹುಸಂಖ್ಯಾತ ಸಮುದಾಯದ ಜನರು ಶ್ರೀನಗರ ನಗರದ ವಿವಿಧೆಡೆ ರಸ್ತೆಬದಿಯಲ್ಲಿ ಅವರನ್ನು ಸ್ವಾಗತಿಸುತ್ತಿರುವುದು ಕಂಡುಬಂತು. ಮುಂಜಾಗ್ರತಾ ಕ್ರಮವಾಗಿ ವಿವಿಧೆಡೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರದ ಹಿಂದೂ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ಚುನ್ನಿ ಲಾಲ್ ಮಾತನಾಡಿ, ಶೋಭಾಯಾತ್ರೆಯನ್ನು ಮಾಡುವುದರೊಂದಿಗೆ ಶ್ರೀರಾಮನ ಜನ್ಮದಿನದ ಒಂಬತ್ತು ದಿನಗಳ ಸಂಭ್ರಮ ಕೊನೆಯಾಗುತ್ತದೆ' ಎಂದು ಮಾಹಿತಿ ನೀಡಿದ್ದಾರೆ. ಈ ಎಲ್ಲಾ ದಿನಗಳಲ್ಲಿ ದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಶಾಂತಿ ಮತ್ತು ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಯಿತು ಎಂದು ಅವರು ಹೇಳಿದರು.

ರಾಮನವಮಿ ದಿನವೇ ದೇಗುಲದಲ್ಲಿ ದುರಂತ: ಬಾವಿ ಚಾವಣಿ ಕುಸಿದು 8 ಭಕ್ತರ ದುರ್ಮರಣ

'ನಾವು ಕಳೆದ 16 ವರ್ಷಗಳಿಂದ ಶೋಭಾ ಯಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಮೊದಲು ಕಣಿವೆಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದರಿಂದ ಯಾತ್ರೆಯನ್ನು ನಿಲ್ಲಿಸಲಾಗಿತ್ತು' ಎಂದು ಆಯೋಜಕ ಪವನ್ ಚೈತನ್ಯದಾಸ್‌ ತಿಳಿಸಿದ್ದಾರೆ.

ರಾಮ ನವಮಿ ಶೋಭ ಯಾತ್ರೆ ಮೇಲೆ ಕಲ್ಲು ತೂರಾಟ, ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದ ಪೊಲೀಸ್!

ನಾವು ಕಾಶ್ಮೀರದ ಜನರ ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತೇವೆ. ರಕ್ತಪಾತವು ಏನನ್ನೂ ನೀಡುವುದಿಲ್ಲವಾದ್ದರಿಂದ ಎಲ್ಲರೂ ಸಾಮರಸ್ಯದಿಂದ ಬದುಕಬೇಕೆಂದು ಬಯಸುತ್ತೇವೆ. ಮೆರವಣಿಗೆ ನಡೆಸಲು ಬೆಂಬಲ ನೀಡಿದ ಕಾಶ್ಮೀರಿ ಮುಸ್ಲಿಮರು ಮತ್ತು ಕಾಶ್ಮೀರಿ ಪಂಡಿತರಿಗೆ ಅವರು ಧನ್ಯವಾದವನ್ನೂ ಸಲ್ಲಿಸಿದ್ದಾರೆ.