Asianet Suvarna News Asianet Suvarna News

ಅಯೋಧ್ಯೆ ಜಗಮಗ: ಭೂಮಿಪೂಜೆಯ ಧಾರ್ಮಿಕ ವಿಧಿವಿಧಾನ ಆರಂಭ!

ಅಯೋಧ್ಯೆ ಜಗಮಗ| ನಾಳೆ ಮಂದಿರಕ್ಕೆ ಭೂಮಿಪೂಜೆ| ಧಾರ್ಮಿಕ ವಿಧಿವಿಧಾನ ಆರಂಭ| ನಿನ್ನೆ ಗೌರಿ ಗಣೇಶ ಪೂಜೆಯೊಂದಿಗೆ ಪ್ರಕ್ರಿಯೆ ಅರಂಭ| 11 ಪುರೋಹಿತರು ಗಣೇಶ ಪೂಜೆಯಲ್ಲಿ ಭಾಗಿ| ಇದೇ ವೇಳೆ ವಿವಿಧ ದೇಗುಲಗಳಲ್ಲಿ ರಾಮಾಯಣ ಪಠಣ| ಅಯೋಧ್ಯೆಗೆ ಸಿಎಂ ಯೋಗಿ ಭೇಟಿ, ಪರಿಶೀಲನೆ| ಅಯೋಧ್ಯೆ ಈಗ ರಾಮನ ಪ್ರಿಯ ಬಣ್ಣವಾದ ‘ಹಳದಿಮಯ’| ರಸ್ತೆಗಳು, ಸುಮಾರು 40 ಸಾವಿರ ದೇಗುಲಗಳು ಶೃಂಗಾರ

Ram Mandir Bhoomi Poojan Procedures Starts In Ayodhya
Author
Bangalore, First Published Aug 4, 2020, 7:35 AM IST

ಡೆಲ್ಲಿ ಮಂಜು

ಅಯೋಧ್ಯೆ(ಆ.04): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹಿಂದೂಗಳ ಶತಶತಮಾನಗಳ ಕನಸು ನನಸಾಗಿಸುವ ಕ್ಷಣಗಳಿಗೆ ಸೋಮವಾರ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಮಂದಿರ ನಿರ್ಮಾಣದ ಭೂಮಿ ಪೂಜೆ ಬುಧವಾರ ನಡೆಯಲಿದೆಯಾದರೂ ಗೌರಿ-ಗಣೇಶ ಪೂಜೆಯೊಂದಿಗೆ ಸೋಮವಾರ ಬೆಳಗ್ಗೆಯಿಂದಲೇ 3 ದಿನಗಳ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಗಿದೆ.

ಹಿಂದೂಗಳಲ್ಲಿ ಯಾವುದೇ ಧಾರ್ಮಿಕ ಶುಭ ಕಾರ್ಯಗಳು ನಡೆಯಲಿ.. ಅವು ಗಣೇಶ ಪೂಜೆಯೊಂದಿಗೇ ಆರಂಭವಾಗುತ್ತವೆ. ಈ ನಿಮಿತ್ತ ವಾರಾಣಸಿ, ಕಂಚಿ ಹಾಗೂ ದಿಲ್ಲಿಯಿಂದ ಆಗಮಿಸಿದ್ದ 11 ಪುರೋಹಿತರು ಬೆಳಗ್ಗೆ 8 ಗಂಟೆಯ ಶುಭ ಮುಹೂರ್ತದಲ್ಲಿ ಗಣೇಶ ಪೂಜೆ ನೆರವೇರಿಸಿದರು. ಇದೇ ವೇಳೆ ಅಯೋಧ್ಯೆಯಲ್ಲಿನ ದೇಗುಲಗಳಲ್ಲಿ ‘ರಾಮಾಯಣ ಪಾಠ’ವನ್ನು ಏಕಕಾಲಕ್ಕೆ ಪಠಣ ಮಾಡಲಾಯಿತು.

ಅಯೋಧ್ಯೆಯಲ್ಲಿ ರಾಮ ಮಂದಿರ ರೀತಿಯ ರೈಲು ನಿಲ್ದಾಣ; 104 ಕೋಟಿ ರೂ. ಯೋಜನೆ!

ತನ್ಮೂಲಕ 3 ದಿನಗಳ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಗಿದ್ದು, ಬುಧವಾರ ಭೂಮಿಪೂಜೆಯೊಂದಿಗೆ ಕಾರ್ಯಕ್ರಮಗಳು ಅಂತ್ಯಗೊಳ್ಳಲಿವೆ.

ಅಯೋಧ್ಯೆ ಹಳದಿಮಯ:

ರಾಮನಿಗೆ ಇಷ್ಟವಾದ ಬಣ್ಣವೆಂದರೆ ಹಳದಿ. ಹೀಗಾಗಿ ರಾಮಮಂದಿರ ಭೂಮಿಪೂಜೆಯ ಹಿನ್ನೆಲೆಯಲ್ಲಿ ಅಯೋಧ್ಯೆಯ ರಸ್ತೆಗಳ ಇಕ್ಕೆಲಗಳ ಕಟ್ಟಡಗಳು, ಗೋಡೆಗಳಿಗೆ ಹಳದಿ ಬಣ್ಣ ಬಳಿಯಲಾಗಿದೆ. ಹೀಗಾಗಿ ಕೇಸರಿ ಧ್ವಜ, ರಾಮನ ಧ್ವಜ ಹಾಗೂ ಹಳದಿ ಬಣ್ಣದಿಂದ ರಾಮನ ಜನ್ಮನಗರಿ ಕಂಗೊಳಿಸುತ್ತಿದೆ. ಅಯೋಧ್ಯೆಯಲ್ಲಿ ಸುಮಾರು 40 ಸಾವಿರ ದೇಗುಲಗಳಿವೆ. ಇಲ್ಲಿ ದೇವಾಲಯ ಇಲ್ಲದ ಬೀದಿಗಳಿಲ್ಲ ಎಂಬುದು ಅಚ್ಚರಿ ಎನ್ನಿಸಿದರೂ ಸತ್ಯ.

ಪ್ರಸಿದ್ಧ ಹನುಮಾನ್‌ಗಢಿ ದೇವಾಲಯ ಹಾಗೂ ಸುತ್ತಮುತ್ತ ಅಂಗಡಿಗಳಲ್ಲಿ ಹನುಮಂತನ ಪ್ರಿಯವಾದ ಲಡ್ಡು ಮಾರಾಟ ಭರ್ಜರಿಯಾಗಿ ನಡೆದಿದೆ. ಶಿಲಾನ್ಯಾಸಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಹನುಮಾನ್‌ಗಢಿ ದೇಗುಲಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. ‘ಶುಭಗಳಿಗೆ ಹತ್ತಿರ ಆಗುತ್ತಿದ್ದು, ಅದಕ್ಕಾಗಿ ಕಾತರದಿಂದ ಕಾಯುತ್ತಿದ್ದೇವೆ’ ಎಂದು ಅಯೋಧ್ಯೆಯ ಜನರು ಹರ್ಷಿಸಿದ್ದಾರೆ.

ಮೊದಲ ಆಮಂತ್ರಣ ಪತ್ರ ಸ್ವೀಕರಿಸಿ ಇದು ಶ್ರೀರಾಮನ ಇಚ್ಚೆ ಎಂದ ಅಯೋಧ್ಯೆ ವಿವಾದ ದಾವೆದಾರ ಇಕ್ಬಾಲ್ ಅನ್ಸಾರಿ!

ಭದ್ರತೆ:

ಪ್ರಧಾನಿ ಹಾಗೂ ಗಣ್ಯರ ಆಗಮನದ ಹಿನ್ನೆಲೆಯಲ್ಲಿ ಎಸ್‌ಪಿಜಿ ಪಡೆ ಈಗಾಗಲೇ ಅಯೋಧ್ಯೆಗೆ ಆಗಮಿಸಿದೆ. ವಿವಿಧ ಪಡೆಗಳು ಪಥಸಂಚಲನ ನಡೆಸುತ್ತಿವೆ. ವಾಯುಸೇನಾ ಹೆಲಿಕಾಪ್ಟರ್‌ಗಳು ಆಗಸದಲ್ಲಿ ಸಂಚರಿಸುತ್ತ ಎಲ್ಲ ವಿದ್ಯಮಾನಗಳ ಮೇಲೆ ಹದ್ದಿನ ಕಣ್ಣು ಇರಿಸಿವೆ. ಸುಮಾರು 3500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ರಾಮ ಮಂದಿರ ಕಾರ್ಯಕ್ರಮದಿಂದ ಉಮಾ ಭಾರತಿ ದೂರ: ಕಾರಣವೂ ಬಹಿರಂಗ!

ಯೋಗಿ ಭೇಟಿ:

ಈ ನಡುವೆ, ಭೂಮಿಪೂಜೆ ಸಿದ್ಧತೆಗಳನ್ನು ಪರಿಶೀಲಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸೋಮವಾರ ಅಯೋಧ್ಯೆಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ‘ಕೊರೋನಾ ಕಾರಣ ಆಗಸ್ಟ್‌ 5ರ ಕಾರ್ಯಕ್ರಮದ ವೇಳೆ ಶಿಷ್ಟಾಚಾರಗಳನ್ನು ಅತ್ಯಂತ ಕಠಿಣವಾಗಿ ಪಾಲಿಸಲಾಗುವುದು. ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಸಮಾರಂಭಕ್ಕೆ ಆಗಮಿಸುತ್ತಿದ್ದು, ಕೇವಲ ಆಹ್ವಾನಿತರು ಮಾತ್ರ ಭಾಗವಹಿಸಬೇಕು ಎಂದು ಕೋರಿದರು. ಕೊರೋನಾ ವೈರಸ್‌ ಹಾವಳಿ ಮುಗಿದ ನಂತರ ಸರ್ವರಿಗೂ ಅಯೋಧ್ಯೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios