ನವದೆಹಲಿ(ಮಾ.21): ಮಿಲಿಟರಿ ಮಟ್ಟದ ಸಹಕಾರ, ಮಾಹಿತಿ ವಿನಿಮಯ, ಸರಕು ಸಾಗಣೆಗೆ ನೆರವು ಸೇರಿದಂತೆ ಜಾಗತಿಕ ರಕ್ಷಣೆ ಮತ್ತು ಭದ್ರತಾ ಸಹಕಾರವನ್ನು ಇನ್ನಷ್ಟುಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕ ದೇಶಗಳು ಶನಿವಾರ ನಿರ್ಣಯ ಕೈಗೊಂಡಿವೆ. ಅಲ್ಲದೇ ಇಂಡೋ ಫೆಸಿಫಿಕ್‌ ಪ್ರದೇಶವನ್ನು ಚೀನಾ ಹಿಡಿತದಿಂದ ಬಿಡಿಸಿ ಎಲ್ಲರಿಗೂ ಮುಕ್ತಗೊಳಿಸುವ ನಿಟ್ಟಿನಿಂದ ಒಟ್ಟಾಗಿ ಕಾರ್ಯನಿರ್ವಹಿಸುವ ಬಗ್ಗೆ ಉಭಯ ದೇಶಗಳು ಸಮ್ಮತಿ ಸೂಚಿಸಿವೆ.

ಭಾರತ ಪ್ರವಾಸ ಕೈಗೊಂಡಿರುವ ಅಮೆರಿಕದ ರಕ್ಷಣಾ ಸಚಿವ ಲೋಯ್ಡ್‌ ಆಸ್ಟಿನ್‌ ಅವರ ನೇತೃತ್ವದ ನಿಯೋಗ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಜೊತೆ ಮಾತುಕತೆ ನಡೆಸಿದ್ದು, ಈ ವೇಳೆ ಇಂಡೋ ಪೆಸಿಫಿಕ್‌ ಹಾಗೂ ರಕ್ಷಣಾ ಕ್ಷೇತ್ರದಲ್ಲಿನ ಸಹಕಾರ ವೃದ್ಧಿಗೆ ಸಂಬಂಧಿಸಿದಂತೆ ವಿಸ್ತೃತ ಚರ್ಚೆ ನಡೆಸಲಾಗಿದೆ.

ಮಾತುಕತೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರಾಜನಾಥ್‌ ಸಿಂಗ್‌, ನಾವು ಅಮೆರಿಕದ ನಿಯೋಗದ ಜೊತೆ ನಡೆಸಿದ ಮಾತುಕತೆ ಫಲಪ್ರಧವಾಗಿದೆ. ಜಾಗತಿಕ ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕ ಒಟ್ಟಾಗಿ ಕಾರ್ಯನಿರ್ವಹಿಸುವ ವಾಗ್ದಾನ ಮಾಡಿವೆ ಎಂದು ಹೇಳಿದ್ದಾರೆ.