1982ರಲ್ಲಿ ಬೇಗಂಪೇಟ್ ವಿಮಾನ ನಿಲ್ದಾಣದಲ್ಲಿ ಅಂದಿನ ಸಿಎಂ ಟಿ. ಅಂಜಯ್ಯ ಅವರನ್ನು ರಾಜೀವ್ ಗಾಂಧಿ ಸಾರ್ವಜನಿಕವಾಗಿ ಅವಮಾನಿಸಿದ್ದರು. ಈ ಘಟನೆಯು 'ತೆಲುಗು ಆತ್ಮಗೌರವ'ಕ್ಕೆ ಧಕ್ಕೆ ತಂದು, ಎನ್‌ಟಿಆರ್ ಅವರ ಟಿಡಿಪಿ ಪಕ್ಷದ ಉದಯಕ್ಕೆ ಕಾರಣವಾಯಿತು.

ಬೆಂಗಳೂರು (ಅ.13): ರಾಜಕೀಯದಲ್ಲಿ ನಾಯಕರ ದುರಹಂಕಾರದ ಒಂದು ಸಣ್ಣ ನಡವಳಿಕೆ, ಸಾರ್ವಜನಿಕವಾಗಿ ಮಾಡುವ ಒಂದು ಅವಮಾನ ಇಡೀ ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿಬಿಡುತ್ತದೆ ಎಂಬುದಕ್ಕೆ 1982 ರಲ್ಲಿ ಆಂಧ್ರಪ್ರದೇಶದ ಬೆಗಂಪೇಟ್ ವಿಮಾನ ನಿಲ್ದಾಣದಲ್ಲಿ ನಡೆದ ಆ ಐತಿಹಾಸಿಕ ಘಟನೆ ಇಂದಿಗೂ ಉದಾಹರಣೆ. ಅಂದಿನ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜೀವ್ ಗಾಂಧಿ (Rajiv Gandhi) ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಟಿ. ಅಂಜಯ್ಯ (T. Anjaiah) ಅವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡು ಮಾಡಿದ ತೇಜೋವಧೆ, 'ತೆಲುಗು ಆತ್ಮಗೌರವ' (Telugu Atmagauravam) ಎಂಬ ದೈತ್ಯ ಪ್ರಾದೇಶಿಕ ಚಳವಳಿಗೆ ಜನ್ಮ ನೀಡಿತು. ಈ ಘಟನೆಯೇ ಮುಂದೆ ತೆಲುಗು ಚಿತ್ರರಂಗದ ಮಹಾನಟ ಎನ್‌ಟಿ ರಾಮರಾವ್ (NTR) ಅವರು 'ತೆಲುಗು ದೇಶಂ ಪಾರ್ಟಿ' (TDP) ಸ್ಥಾಪಿಸಿ, ದಶಕಗಳ ಕಾಲ ಆಂಧ್ರವನ್ನು ಆಳಿದ್ದ ಕಾಂಗ್ರೆಸ್‌ ಅನ್ನು ಧೂಳಿಪಟ ಮಾಡಲು ದಾರಿಯಾಯಿತು.

ಬಡತನದಿಂದ ಸಿಎಂ ಪೀಠಕ್ಕೇರಿದ್ದ 'ಸಾಮಾನ್ಯರ ನಾಯಕ' ಟಿ. ಅಂಜಯ್ಯ

ಮೆದಕ್ ಜಿಲ್ಲೆಯ ಭಾನುರ್ ಎಂಬಲ್ಲಿ ಜನಿಸಿದ್ದ ಟಿ. ಅಂಜಯ್ಯ (ತಂಗುಟೂರಿ ಅಂಜಯ್ಯ) ಅವರ ಆರಂಭಿಕ ಜೀವನ ತೀವ್ರ ಬಡತನದಿಂದ ಕೂಡಿತ್ತು. ಆರ್ಥಿಕ ಸಂಕಷ್ಟದಿಂದಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿದ್ದ ಅವರು, ಹೈದರಾಬಾದ್‌ನ ಆಲ್ವಿನ್ (Allwyn) ಕಂಪನಿಯಲ್ಲಿ ಕೇವಲ ಆರು ಪೈಸೆ ದೈನಂದಿನ ಕೂಲಿಗೆ ಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಂಡರು. ಆದರೆ, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಾ ಹೈದರಾಬಾದ್ ಆಲ್ವಿನ್ ಕಾರ್ಮಿಕ ಸಂಘಟನೆಯ ಯೂನಿಯನ್ ನಾಯಕರಾಗಿ ಹೊರಹೊಮ್ಮಿದರು.

ಇಂದಿರಾ ಗಾಂಧಿಯವರ ತೀವ್ರ ನಿಷ್ಠರಾಗಿದ್ದ ಅಂಜಯ್ಯ ಕಾಂಗ್ರೆಸ್ ಸೇರಿ, ಹಂತ ಹಂತವಾಗಿ ಬೆಳೆದು ಕೇಂದ್ರ ಕಾರ್ಮಿಕ ಸಚಿವರಾದರು. 1980 ರಲ್ಲಿ ಆಂಧ್ರಪ್ರದೇಶದ ಅಂದಿನ ಸಿಎಂ ಮರ್ರಿ ಚೆನ್ನಾರೆಡ್ಡಿ ಅವರ ಆಡಳಿತದ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಾಗ, ಇಂದಿರಾ ಗಾಂಧಿಯವರ ನಿರ್ದೇಶನದಂತೆ ಟಿ. ಅಂಜಯ್ಯ ಅವರನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ನೇಮಿಸಲಾಯಿತು. ಆಡಳಿತ ನೈಪುಣ್ಯಕ್ಕಿಂತಲೂ ಇಂದಿರಾ ಗಾಂಧಿಯವರಿಗೆ ಅತ್ಯಂತ ನಿಷ್ಠ ಎನ್ನುವ ಕಾರಣಕ್ಕೆ, ಈ ಸರಳ ನಾಯಕನಿಗೆ ಸಿಎಂ ಪಟ್ಟ ಒಲಿದಿದ್ದು ಒಂದು ಪವಾಡವೇ ಆಗಿತ್ತು.

ಬೆಗಂಪೇಟ್ ಏರ್‌ಪೋರ್ಟ್‌ನಲ್ಲಿ ನಡೆದ ಅವಮಾನ

ವಿವಾದದ ಮೂಲ ಆರಂಭವಾಗಿದ್ದು 1982 ರ ಫೆಬ್ರವರಿಯಲ್ಲಿ. ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಹಾಗೂ ನೂತನವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜೀವ್ ಗಾಂಧಿ ಅವರು ಖಾಸಗಿ ಪ್ರವಾಸಕ್ಕಾಗಿ ಹೈದರಾಬಾದ್‌ಗೆ ಆಗಮಿಸಿದ್ದರು. ರಾಜೀವ್ ಗಾಂಧಿ ಸರ್ಕಾರದಲ್ಲಿ ಯಾವುದೇ ಅಧಿಕೃತ ಹುದ್ದೆ ಹೊಂದಿರದಿದ್ದರೂ, ಹೈಕಮಾಂಡ್ ಒಲಿಸಿಕೊಳ್ಳುವ ಭರದಲ್ಲಿದ್ದ ಸಿಎಂ ಟಿ. ಅಂಜಯ್ಯ ಅವರು ರಾಜೀವ್‌ಗೆ ಭಾರಿ ರಾಜಮರ್ಯಾದೆಯ ಸ್ವಾಗತ ಕೋರಲು ನಿರ್ಧರಿಸಿದರು.

ವಿಮಾನಗಳನ್ನು ಬಾಡಿಗೆಗೆ ತೆಗೆದುಕೊಂಡು, ಹೆಲಿಪ್ಯಾಡ್‌ಗಳನ್ನು ನಿರ್ಮಿಸಿ, ವಿಮಾನ ನಿಲ್ದಾಣದ ಸುತ್ತ ನೂರಾರು ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿತ್ತು. ಫೆಬ್ರವರಿಯಲ್ಲಿ ರಾಜೀವ್ ಗಾಂಧಿ ಅವರ ವಿಮಾನ ಹೈದರಾಬಾದ್‌ನ ಬೆಗಂಪೇಟ್ ವಿಮಾನ ನಿಲ್ದಾಣದಲ್ಲಿ (Begumpet Airport) ಇಳಿಯುತ್ತಿದ್ದಂತೆ, ಸಿಎಂ ಅಂಜಯ್ಯ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು, 5 ಜನ ಸಚಿವರ ಬಳಗ, ಮೇಳ-ತಾಳ, ಡೊಳ್ಳು ಕುಣಿತ ಹಾಗೂ ಹೂಮಾಲೆಗಳೊಂದಿಗೆ ಭಾರಿ ಆರ್ಭಟದ ಸ್ವಾಗತ ಕೋರಿದರು. ಸರ್ಕಾರದ ಆಡಳಿತ ಯಂತ್ರ ಪಕ್ಷದ ನಾಯಕನ ಖಾಸಗಿ ಪ್ರವಾಸಕ್ಕೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ವಿಪಕ್ಷಗಳು ಟೀಕೆ ಮಾಡಲು ಆರಂಭಿಸಿದ್ದವು.

ಆದರೆ, ವಿಮಾನದಿಂದಿಳಿದ ರಾಜೀವ್ ಗಾಂಧಿ ಈ ಭಾರಿ ಹಂಗಾಮಾವನ್ನು ನೋಡಿ ತೀವ್ರ ಕೋಪಗೊಂಡರು. ಸಾರ್ವಜನಿಕರ ಹಾಗೂ ಮಾಧ್ಯಮಗಳ ಎದುರಲ್ಲೇ ಸಿಎಂ ಟಿ. ಅಂಜಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ರಾಜೀವ್ ಗಾಂಧಿ, ಅವರನ್ನು "ಬಫೂನ್" (Buffoon - ಕೋಡಂಗಿ) ಎಂದು ಸಾರ್ವಜನಿಕವಾಗಿ ಕರೆದು ನಿಂದಿಸಿದರು! "15 ನಿಮಿಷದಲ್ಲಿ ಈ ಗದ್ದಲ ಮುಗಿಯದಿದ್ದರೆ ನಾನು ತಕ್ಷಣವೇ ವಾಪಸ್ ದೆಹಲಿಗೆ ಹೋಗುತ್ತೇನೆ" ಎಂದು ಅಬ್ಬರಿಸಿದರು.

ತಮ್ಮ ನೆಚ್ಚಿನ ನಾಯಕನ ಮಗನ ಈ ನಡವಳಿಕೆಯಿಂದ ಕಂಗಾಲಾದ ಸಿಎಂ ಅಂಜಯ್ಯ ಕಣ್ಣೀರು ಹಾಕುತ್ತಾ ಕ್ಷಮೆ ಕೋರಿದರು. ರಾಜೀವ್ ಗಾಂಧಿ ನೀಡಿದ ಹೂಮಾಲೆಗಳನ್ನು ಸ್ವೀಕರಿಸಲು ನಿರಾಕರಿಸಿ, ನೇರವಾಗಿ ದೆಹಲಿಗೆ ವಾಪಸ್ ಹೋಗಲು ವಿಮಾನ ಟಿಕೆಟ್ ಬುಕ್ ಮಾಡಿದರು. ನಂತರ ನಾಯಕರ ವಿನಂತಿಗೆ ಒಪ್ಪಿ ತಿರುಪತಿಗೆ ತೆರಳಿದರೂ, ಸಿಎಂ ಅಂಜಯ್ಯ ಅವರನ್ನು ತಮ್ಮೊಂದಿಗೆ ಕರೆದೊಯ್ಯದೆ ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋದರು.

ಇಂದಿರಾ ಗಾಂಧಿಯಿಂದ ವಜಾ ಮತ್ತು ಅಂಜಯ್ಯ ಅವರ ಭಾವುಕ ನುಡಿ

ಈ ಘಟನೆಯಾದ ಕೆಲವೇ ದಿನಗಳಲ್ಲಿ, ವಿಶಾಖಪಟ್ಟಣ ಹಾಗೂ ವಿಜಯವಾಡ ಪುರಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿದೆ ಎಂಬ ನೆಪವೊಡ್ಡಿ ಇಂದಿರಾ ಗಾಂಧಿ, ಟಿ. ಅಂಜಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಳಿಸಿದರು. ತಮ್ಮನ್ನು ಹುದ್ದೆಯಿಂದ ತೆಗೆದುಹಾಕಿದರೂ ಇಂದಿರಾ ಗಾಂಧಿ ಮೇಲಿದ್ದ ನಿಷ್ಠೆಯನ್ನು ಬಿಡದ ಅಂಜಯ್ಯ, "ನಾನು ಅಧಿಕಾರಕ್ಕೆ ಬಂದಿದ್ದು ಮೇಡಮ್‌ (ಇಂದಿರಾ ಗಾಂಧಿ) ಅವರ ಕೃಪೆಯಿಂದ, ಈಗ ಅವರ ಆಜ್ಞೆಯಂತೆಯೇ ಹುದ್ದೆ ತೊರೆಯುತ್ತಿದ್ದೇನೆ. ನಾನು ಹೇಗೆ ಸಿಎಂ ಆದೆ ಹಾಗೂ ಏಕೆ ನಿರ್ಗಮಿಸುತ್ತಿದ್ದೇನೆ ಎಂಬುದು ನನಗೇ ಗೊತ್ತಿಲ್ಲ" ಎಂದು ಭಾವುಕರಾಗಿ ನುಡಿದಿದ್ದರು.

'ತೆಲುಗು ಆತ್ಮಗೌರವ'ದ ಉದಯ ಹಾಗೂ ಕಾಂಗ್ರೆಸ್ ಸರ್ವನಾಶ

ದೆಹಲಿಯ ಎಐಸಿಸಿ ಒಬ್ಬ ಪ್ರಧಾನ ಕಾರ್ಯದರ್ಶಿ, ಒಂದು ದೊಡ್ಡ ರಾಜ್ಯದ ಜನಪ್ರತಿನಿಧಿಯಾದ ಮುಖ್ಯಮಂತ್ರಿಯನ್ನು ಒಬ್ಬ ಆಳಿನಂತೆ ನಡೆಸಿ ಸಾರ್ವಜನಿಕವಾಗಿ ಅಪಮಾನ ಮಾಡಿದ್ದು ಆಂಧ್ರಪ್ರದೇಶದ ಜನರ ಮನಸ್ಸಿಗೆ ತೀವ್ರವಾಗಿ ಘಾಸಿ ಮಾಡಿತ್ತು. ಇದನ್ನು ಕೇವಲ ಅಂಜಯ್ಯ ಅವರಿಗೆ ಆದ ಅಪಮಾನವೆಂದು ಭಾವಿಸದ ತೆಲುಗು ಜನರು, ದೆಹಲಿ ಹೈಕಮಾಂಡ್ 'ತೆಲುಗು ಜನರಿಗೆ ಮತ್ತು ರಾಜ್ಯದ ಹೆಮ್ಮೆಗೆ ಮಾಡಿದ ಭಾರಿ ಅಪಮಾನ' ಎಂದು ಪರಿಗಣಿಸಿದರು.

ಈ ಘಟನೆಯಿಂದ ತೀವ್ರ ಪ್ರಚೋದಿತರಾದ ಟಾಲಿವುಡ್‌ನ ಜಗತ್ಪ್ರಸಿದ್ಧ ನಟ ಎನ್‌ಟಿ ರಾಮರಾವ್ (NTR), 'ತೆಲುಗು ಆತ್ಮಗೌರವ' (Telugu Self-Respect) ಎಂಬ ಘೋಷಣೆಯೊಂದಿಗೆ 'ತೆಲುಗು ದೇಶಂ ಪಾರ್ಟಿ' (TDP) ಯನ್ನು ಸ್ಥಾಪಿಸಿದರು. ಕಾಂಗ್ರೆಸ್‌ನ ಈ ಅಹಂಕಾರದ ವಿರುದ್ಧ ಚೈತನ್ಯ ರಥಯಾತ್ರೆ ನಡೆಸಿ ಇಡೀ ರಾಜ್ಯವನ್ನು ಜಾಗೃತಗೊಳಿಸಿದರು.

ಪರಿಣಾಮವಾಗಿ, 1983 ರ ಆಂಧ್ರಪ್ರದೇಶ ಚುನಾವಣೆಯಲ್ಲಿ 3 ದಶಕಗಳ ಕಾಲ ಸುದೀರ್ಘವಾಗಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷವನ್ನು ಮಣ್ಣು ಮುಕ್ಕಿಸಿ, ಎನ್‌ಟಿಆರ್ ನೇತೃತ್ವದ ಟಿಡಿಪಿ 2/3 ಕ್ಕೂ ಹೆಚ್ಚು ಭಾರಿ ಬಹುಮತದೊಂದಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿತು. 1984 ರ ಲೋಕಸಭೆ ಚುನಾವಣೆಯಲ್ಲಿ ರಾಜೀವ್ ಗಾಂಧಿ ದೇಶಾದ್ಯಂತ 400ಕ್ಕೂ ಹೆಚ್ಚು ಸೀಟು ಗೆದ್ದು ಪ್ರಧಾನಿ ಪಟ್ಟಕ್ಕೇರಿದರೂ, ಆಂಧ್ರಪ್ರದೇಶದ 44 ಸೀಟುಗಳ ಪೈಕಿ ಕಾಂಗ್ರೆಸ್‌ಗೆ ಸಿಕ್ಕಿದ್ದು ಕೇವಲ 6 ಸೀಟುಗಳು.

ತೆಲಂಗಾಣ ಉದಯಕ್ಕೂ ಸಿಕ್ಕಿದ ಅಪಮಾನದ ನಂಟು

ವಿಶೇಷವೆಂದರೆ, ಆಂಧ್ರದಲ್ಲಿ ದೆಹಲಿ ಹೈಕಮಾಂಡ್‌ನಿಂದ ಅಂಜಯ್ಯಗೆ ಆದ ಅಪಮಾನ ಹೇಗೆ ಟಿಡಿಪಿಗೆ ಜನ್ಮ ನೀಡಿತೋ, ಅದೇ ರೀತಿ ಮುಂದೆ ತೆಲಂಗಾಣ ರಾಜ್ಯ ರಚನೆಗೂ ಇಂತಹುದೇ ಒಂದು ರಾಜಕೀಯ ತಿರಸ್ಕಾರ ಕಾರಣವಾಯಿತು.

1995 ರಲ್ಲಿ ಎನ್‌ಟಿಆರ್ ವಿರುದ್ಧ ಬಂಡಾಯ ಎದ್ದು ಸಿಎಂ ಆದ ಚಂದ್ರಬಾಬು ನಾಯ್ಡು ಅವರು 1999 ರ ಚುನಾವಣೆಯ ಬಳಿಕ ಕೆ. ಚಂದ್ರಶೇಖರ ರಾವ್ (KCR) ಅವರಿಗೆ ಸಚಿವ ಸಂಪುಟದ ಸ್ಥಾನ ನೀಡದೆ ನಿರಾಕರಿಸಿ, ಡೆಪ್ಯೂಟಿ ಸ್ಪೀಕರ್ ಹುದ್ದೆ ನೀಡಿದರು. ಈ ತಿರಸ್ಕಾರದಿಂದ ಆಕ್ರೋಶಗೊಂಡ ಕೆಸಿಆರ್, ಟಿಡಿಪಿ ತೊರೆದು 2001 ರಲ್ಲಿ 'ತೆಲಂಗಾಣ ರಾಷ್ಟ್ರ ಸಮಿತಿ' (TRS/BRS) ಪಕ್ಷವನ್ನು ಕಟ್ಟಿ, ಪ್ರತ್ಯೇಕ 'ತೆಲಂಗಾಣ' ರಾಜ್ಯ ರಚನೆಗೆ ಹೋರಾಟ ನಡೆಸಿ ಯಶಸ್ವಿಯಾದರು.

ಒಟ್ಟಾರೆಯಾಗಿ, ಜನಪ್ರತಿನಿಧಿಗೆ ಮತ್ತು ಪ್ರಾದೇಶಿಕ ನಾಯಕರಿಗೆ ತೋರುವ ಸಣ್ಣ ಅಹಂಕಾರ ಮತ್ತು ತೇಜೋವಧೆಯು ಹೇಗೆ ಸುದೀರ್ಘ ಸಾಮ್ರಾಜ್ಯಗಳನ್ನೇ ಬುಡಮೇಲು ಮಾಡಬಲ್ಲದು ಎನ್ನುವುದಕ್ಕೆ 'ಟಿ. ಅಂಜಯ್ಯ ಮತ್ತು ರಾಜೀವ್ ಗಾಂಧಿ' ಪ್ರಕರಣವು ಭಾರತೀಯ ರಾಜಕೀಯ ಇತಿಹಾಸದಲ್ಲೇ ಒಂದು ಶಾಶ್ವತ ಉದಾಹರಣೆಯಾಗಿ ಉಳಿದುಕೊಂಡಿದೆ.