ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯನ್ನು ಟೀಕಿಸಿದ ರಾಹುಲ್ ಗಾಂಧಿ, ನಾಯಕರನ್ನು ಅಪ್ಪಿಕೊಳ್ಳುವುದೇ ರಾಜತಾಂತ್ರಿಕತೆಯಲ್ಲ ಎಂದರು. ವೇದಿಕೆಯಲ್ಲೇ ಸಂದೀಪ್ ದೀಕ್ಷಿತ್ ಅವರನ್ನು ಅಪ್ಪಿಕೊಂಡು ಅವರು ವ್ಯಂಗ್ಯವಾಡಿದ್ದಾರೆ.
ನವದೆಹಲಿ (ಆ.13): ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದ್ದು, "ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವುದೇ ರಾಜತಾಂತ್ರಿಕತೆ ಎಂದು ಪ್ರಧಾನಿ ಭಾವಿಸಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ. 'ರಚನಾತ್ಮಕ ಕಾಂಗ್ರೆಸ್' ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ಅವರಿಗೆ ಈ ರೀತಿಯ ಕಲ್ಪನೆ ಎಲ್ಲಿಂದ ಬಂತೋ ನನಗಂತೂ ಗೊತ್ತಿಲ್ಲ. ಜನರ ತಲೆಯಲ್ಲಿ ಇಂತಹ ವಿಚಿತ್ರ ಕಲ್ಪನೆಗಳು ಹೊಳೆಯುತ್ತವೆ. ವಿದೇಶಾಂಗ ನೀತಿ ಎಂದರೆ ಇದೇ ಎಂದು ಅವರು ಅಂದುಕೊಂಡಿದ್ದಾರೆ," ಎಂದು ಹೇಳುತ್ತಲೇ ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರನ್ನು ಬಿಗಿಯಾಗಿ ಅಪ್ಪಿಕೊಂಡರು.
ಈ ವೇಳೆ ಸಂದೀಪ್ ದೀಕ್ಷಿತ್ ತಮಾಷೆಯಾಗಿ, "ನೀವು ನನ್ನನ್ನು 'ಮೆಲೋನಿ' (ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ) ಎಂದು ಭಾವಿಸಿ ಅಪ್ಪಿಕೊಳ್ಳುತ್ತಿಲ್ಲವಲ್ಲ?" ಎಂದು ಪ್ರಶ್ನಿಸಿದರು. ಅದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ರಾಹುಲ್, "ನಾನಿನ್ನೂ ಆ ಹಂತಕ್ಕೆ ತಲುಪಿಲ್ಲ!" ಎಂದು ನಗೆಚಟಾಕಿ ಹಾರಿಸಿದ್ದು, ಉಪಸ್ಥಿತರಿದ್ದ ಸಭಿಕರಲ್ಲಿ ನಗೆಯ ಅಲೆ ಎಬ್ಬಿಸಿತು.
ಇಂದಿರಾ ಗಾಂಧಿಯಂತಹ ನಾಯಕರಿದ್ದಿದ್ದರೆ ಭಾರತಕ್ಕೆ ದೊಡ್ಡ ಅವಕಾಶ ಸಿಗುತ್ತಿತ್ತು
ನಂತರ ಮತ್ತೆ ಪ್ರಧಾನಿ ಮೋದಿ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದ ರಾಹುಲ್, "ವಿದೇಶಾಂಗ ನೀತಿ ಎಂದರೆ ಕೇವಲ ನಾಯಕರನ್ನು ಅಪ್ಪಿಕೊಳ್ಳುವುದು ಎನ್ನುವ ಆಲೋಚನೆ ಮೋದಿ ಅವರಿಗೆ ಎಲ್ಲಿಂದ ಬಂತೋ ನನಗಂತೂ ತಿಳಿದಿಲ್ಲ," ಎಂದು ಆಕ್ಷೇಪಿಸಿದರು. ಇದೇ ವೇಳೆ ಭಾರತ ಮತ್ತು ಅಮೆರಿಕ ಸಂಬಂಧಗಳ ಕುರಿತು ಮಾತನಾಡಿದ ಅವರು, ಇರಾನ್ ಸಂಘರ್ಷದ ವೇಳೆ ಮಧ್ಯಸ್ಥಿಕೆ ವಹಿಸುವಲ್ಲಿ ಪಾಕಿಸ್ತಾನ ವಹಿಸಿದ ಪಾತ್ರವನ್ನು ಉಲ್ಲೇಖಿಸಿ, ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ಭಾರತದ ರಾಜತಾಂತ್ರಿಕ ನಿಲುವನ್ನು ಪ್ರಶ್ನಿಸಿದರು.
ಇರಾನ್‌ನಲ್ಲಿ ಯುದ್ಧ ಪ್ರಾರಂಭವಾಯಿತು. ಭಾರತಕ್ಕೆ—ಅದು ತನ್ನದೇ ಆದ ಶಕ್ತಿಯನ್ನು ಅರಿತುಕೊಂಡಿದ್ದರೆ ಮತ್ತು ನಮ್ಮ ದೇಶದ ನಾಯಕಿ ಇಂದಿರಾ ಗಾಂಧಿಯವರಂತಿದ್ದರೆ—ಇದು ಜಗತ್ತಿನಲ್ಲೇ ಅತ್ಯಂತ ದೊಡ್ಡ ರಾಜತಾಂತ್ರಿಕ ಅವಕಾಶವಾಗುತ್ತಿತ್ತು. ಎಂತಹ ಅವಕಾಶ ಗೊತ್ತಾ? ಇರಾನ್ ನಮ್ಮ ಹಳೆಯ ಸ್ನೇಹಿತ ರಾಷ್ಟ್ರ, ಅಮೆರಿಕ ನಮಗೆ ಮಿತ್ರ ಹಾಗೂ ರಷ್ಯಾ ಕೂಡ ನಮ್ಮ ಮಿತ್ರರಾಷ್ಟ್ರವಾಗಿತ್ತು. ನಾವು ಮುಂದೆ ಬಂದು ಪ್ರಮುಖ ಪಾತ್ರ ವಹಿಸಿ, ಈ ಎಲ್ಲ ಮೈತ್ರಿಗಳನ್ನು ಭಾರತದ ಹಿತಾಸಕ್ತಿಗೆ ಬಳಸಿಕೊಳ್ಳಬಹುದಿತ್ತು. ಆದರೆ ವಾಸ್ತವವಾಗಿ ಆಗಿದ್ದೇನು? ಅಂತಹದ್ದೇನೂ ನಡೆಯಲಿಲ್ಲ. ಬದಲಾಗಿ, ನಮ್ಮ ಜಾಗಕ್ಕೆ ಪಾಕಿಸ್ತಾನ ಕಾಲಿಟ್ಟು ಮಧ್ಯಸ್ಥಿಕೆ ವಹಿಸಿತು; ಭಾರತ ಮತ್ತು ಮೋದಿ ಜೀ ಅವರು ಬರೀ ನೋಡುತ್ತಾ ಕುಳಿತರು," ಎಂದು ರಾಹುಲ್ ಕಿಡಿಕಾರಿದ್ದಾರೆ.


