ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಮಧ್ಯಪ್ರದೇಶದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲವಾದರೂ, ರೈಲಿನ ಬಿ-4 ಕೋಚ್‌ನ ಗಾಜುಗಳು ಪುಡಿಪುಡಿಯಾಗಿವೆ. 

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಶುಕ್ರವಾರ ಹೊರಟಿದ್ದ ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಮಧ್ಯಪ್ರದೇಶದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಆಘಾತಕಾರಿ ಘಟನೆ ನಡೆದಿದೆ.

ಬೆಂಗಳೂರಿನಿಂದ ದೆಹಲಿಗೆ 36 ಗಂಟೆಗಳ ಕಾಲ ಪ್ರಯಾಣಿಸಿ ತಲುಪಬೇಕಿದ್ದ ರೈಲು. ಆದರೆ ಮಧ್ಯಪ್ರದೇಶದ ರಾಣಿ ಕಮಲಾಪತಿ ಮತ್ತು ಭೋಪಾಲ್ ರೈಲು ನಿಲ್ದಾಣಗಳ ನಡುವೆ ಬರುತ್ತಿದ್ದಂತೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕಿಡಿಗೇಡಿಗಳ ಕೃತ್ಯದಿಂದ ಈ ರೈಲಿನ ಬಿ-4 ಕೋಚ್‌ನ ಗಾಜುಗಳು ಪುಡಿಪುಡಿಯಾಗಿವೆ.

ಕೆಲವು ಕಲ್ಲುಗಳು ಪ್ರಯಾಣಿಕರ ಊಟದ ತಟ್ಟೆಗಳ ಮೇಲೆ ಬಿದ್ದಿದ್ದು, ಭಯದ ವಾತಾವರಣ ಸೃಷ್ಟಿಯಾಗಿತ್ತು. ಅದೃಷ್ಟವಶಾತ್, ಯಾರಿಗೂ ಗಾಯಗಳಾಗಿಲ್ಲ. ಪ್ರಯಾಣಿಕರು ಘಟನೆಯ ದೃಶ್ಯಗಳನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೆಲವು ಗಂಟೆಗಳ ಹಿಂದೆ ಈ ಘಟನೆ ನಡೆದಿದೆ. ಈ ಘಟನೆಯಿಂದ ಪ್ರಯಾಣಿಕರ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದ್ದು, ರೈಲ್ವೆ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಒತ್ತಾಯ ಕೇಳಿಬಂದಿದೆ.

ದೂರು ದಾಖಲು

ಪ್ರಯಾಣಿಕನೊಬ್ಬ ಊಟ ಮಾಡುತ್ತಿದ್ದ ವೇಳೆ ಕಿಟಕಿ ಗಾಜುಗೆ ಕಲ್ಲೇಸೆದ ಕಿಡಿಗೇಡಿಗಳು. ರಾತ್ರಿ 10.30 ರ ಸುಮಾರಿಗೆ ಘಟನೆ ನಡೆದಿದೆ. 10.42 ಕ್ಕೆ ರೈಲ್ವೆ ಇಲಾಖೆ ದೂರು ನೀಡಲಾಗಿದೆ. ಬಿ-4 ಕೋಚ್‌ನ ಸೀಟ್ ಸಂಖ್ಯೆ 41 ರಲ್ಲಿದ್ದ ದೀಪಕ್ ಕುಮಾರ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಆರ್‌ಪಿಎಫ್ ಭೋಪಾಲ್ ವಿಭಾಗದ ಕಮಾಂಡೆಂಟ್ ಪ್ರಶಾಂತ್‌ ಕುಮಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆಗೆ ಮುಂದಾಗಿದ್ದಾರೆ.

ಮಹಾರಾಷ್ಟ್ರ ಬಿಜೆಪಿ ನಾಯಕ ಸ್ವಲ್ಪದರಲ್ಲೇ ಪಾರು

ಮಹಾರಾಷ್ಟ್ರದ ಬಿಜೆಪಿ ನಾಯಕ ಚಂದನ್ ಗೋಸ್ವಾಮಿ ಕೂಡ ಇದೇ ಕೋಚ್ ನಲ್ಲಿದ್ದರು ಎನ್ನಲಾಗಿದೆ. ಬಿ -4 ಕೋಚ್‌ನ ಸೀಟ್ ಸಂಖ್ಯೆ 9 ರಲ್ಲಿ ಕುಳಿತಿದ್ದ ಚಂದನ್ ಗೋಸ್ವಾಮಿ. ಕಲ್ಲೇಸೆತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.