2022ರಲ್ಲಿ ನಡೆದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕ್ರಿಕೆಟರ್‌ ರಿಷಭ್ ಪಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ ಯುವಕ ತನ್ನ ಗೆಳತಿಯ ಜೊತೆ ಸೇರಿ ಸಾವಿಗೆ ಶರಣಾಗಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.

ಮುಜಾಫರ್‌ನಗರ್: 2022ರಲ್ಲಿ ನಡೆದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕ್ರಿಕೆಟರ್‌ ರಿಷಭ್ ಪಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ ಯುವಕ ತನ್ನ ಗೆಳತಿಯ ಜೊತೆ ಸೇರಿ ಸಾವಿಗೆ ಶರಣಾಗಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ದುರಾದೃಷ್ಟಕಾರಿ ಘಟನೆಯಲ್ಲಿ ಆತನ ಗೆಳತಿ ಸಾವನ್ನಪ್ಪಿದ್ದಾಳೆ. ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಫೆಬ್ರವರಿ 9 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 25 ವರ್ಷದ ರಜತ್‌ ಕುಮಾರ್‌ ತನ್ನ ಗೆಳತಿ ಮನು ಕಶ್ಯಪ್ ಜೊತೆ ಸೇರಿಕೊಂಡು ವಿಷ ಸೇವಿಸಿದ್ದಾನೆ. ಈ ದುರಂತದಲ್ಲಿ ಗೆಳತಿ ಮನು ಕಶ್ಯಪ್ ಜೀವ ಹೋಗಿದೆ. ವಿಷ ಸೇವಿಸಿದ ಗೆಳತಿ ಮನು ಕಶ್ಯಪ್‌ಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ. ಮುಜಾಫರ್‌ನಗರ ಜಿಲ್ಲೆಯ ಬುಚ್ಚಬಸ್ತಿ ಗ್ರಾಮದಲ್ಲಿ ಈ ದುರಂತ ನಡೆದಿದೆ. 

ವಿಷ ಸೇವನೆಯಿಂದ ಗೆಳತಿ ಮೃತಪಟ್ಟರೆ ಇತ್ತ ರಜತ್‌ ಕುಮಾರ್‌ ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನು ಕಶ್ಯಪ್ ಹಾಗೂ ರಜತ್‌ ಕುಮಾರ್ ಬೇರೆ ಬೇರೆ ಜಾತಿಗೆ ಸೇರಿದ್ದರಿಂದ ಪೋಷಕರು ಇವರ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಬೇರೆಯವರೊಂದಿಗೆ ಮದುವೆ ನಿಗದಿ ಮಾಡಿದ್ದರು. ಇದರಿಂದ ಮನನೊಂದು ಈ ಜೋಡಿ ಸಾವಿಗೆ ಯತ್ನಿಸಿದ್ದಾರೆ. ಆದರೆ ಈ ದುರಂತದಲ್ಲಿ ಹುಡುಗಿ ಮೃತಪಟ್ಟರೆ ಯುವಕನ ಸ್ಥಿತಿ ಗಂಭೀರವಾಗಿದೆ. ಇತ್ತ ಮಗಳು ಮನು ಕಶ್ಯಪ್ ಸಾವಿನ ನಂತರ ಆಕೆಯ ಪೋಷಕರು ರಜತ್‌ಕುಮಾರ್ ವಿರುದ್ಧ ತಮ್ಮ ಮಗಳನ್ನು ಅಪಹರಿಸಿ ವಿಷ ನೀಡಿದ್ದಾನೆ ಎಂಬ ಆರೋಪ ಮಾಡಿದ್ದಾರೆ. 

ರಜತ್‌ ಕುಮಾರ್ 2022ರ ಡಿಸೆಂಬರ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ರಜತ್‌ಕುಮಾರ್‌ ಹಾಗೂ ಮತ್ತೊಬ್ಬ ಸ್ಥಳೀಯ ನಿವಾಸಿ ನಿಶು ಕುಮಾರ್ ಎಂಬುವವರು ಭಾರತ ಕ್ರಿಕೆಟ್ ತಂಡದ ಆಟಗಾರ ರಿಷಭ್ ಪಂತ್ ಭೀಕರ ಅಪಘಾತಕ್ಕೊಳಗಾದ ನಂತರ ಅವರನ್ನು ಆಸ್ಪತ್ರೆಗೆ ಸೇರಿಸಿ ರಕ್ಷಣೆ ಮಾಡುವ ಮೂಲಕ ಪ್ರಸಿದ್ಧಿಗೆ ಬಂದಿದ್ದರು. ರಿಷಭ್‌ ಪಂತ್ ದೆಹಲಿಯಿಂದ ಉತ್ತರಾಖಂಡಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಮರ್ಸಿಡಿಸ್ ಕಾರು ರೂರ್ಕಿ ಬಳಿ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಈ ಘಟನೆಯಲ್ಲಿ ರಿಷಭ್ ತೀವ್ರವಾಗಿ ಗಾಯಗೊಂಡಿದ್ದರು. 

ರಜತ್ ಹಾಗೂ ನಿಶು ಕುಮಾರ್‌ ಹತ್ತಿರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಅಪಘಾತವನ್ನು ನೋಡಿ ಸಹಾಯ ಮಾಡಲು ಧಾವಿಸಿದರು. ಅವರು ಪಂತ್ ಅವರನ್ನು ಬೆಂಕಿಯಾಹುತಿಯಾದ ವಾಹನದಿಂದ ಹೊರಗೆಳೆದು ತುರ್ತು ವೈದ್ಯಕೀಯ ಸಹಾಯಕ್ಕೆ ವ್ಯವಸ್ಥೆ ಮಾಡಿದರು. ಅವರ ತ್ವರಿತ ಕ್ರಮವನ್ನು ವ್ಯಾಪಕವಾಗಿ ಪ್ರಶಂಸಿಸಲಾಗಿತ್ತು ಮತ್ತು ಅವರ ಧೈರ್ಯವನ್ನು ಗುರುತಿಸಿ, ನಂತರದಲ್ಲಿ ಪಂತ್ ಅವರಿಗೆ ಸ್ಕೂಟರ್‌ಗಳನ್ನು ಉಡುಗೊರೆಯಾಗಿ ನೀಡಿದರು. ಘಟನೆಯ ಬಳಿಕ ಪಂತ್ ಗಮನಾರ್ಹವಾಗಿ ಚೇತರಿಸಿಕೊಂಡರು ಮತ್ತು ಮುಂದಿನ ವರ್ಷ ಕ್ರಿಕೆಟ್‌ಗೆ ಮರಳಿದರು.