ನವದೆಹಲಿ(ಡಿ.28): ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಮುದ್ದಿನ ಮಡದಿಗೆ ಚಂದ್ರನ ಮೇಲೆ 3 ಎಕರೆ ಭೂಮಿ ಖರೀದಿಸಿ ಉಡುಗೊರೆಯಾಗಿ ನೀಡುವ ಮೂಲಕ ರಾಜಸ್ಥಾನದ ವ್ಯಕ್ತಿಯೊಬ್ಬರು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಧರ್ಮೇಂದ್ರ ಅನಿಜಾ ಅವರೇ ಪ್ರೀತಿಯ ಪತ್ನಿ ಸಪ್ನಾ ಅನಿಜಾಗೆ ಈ ವಿಶೇಷ ಉಡುಗೊರೆ ನೀಡಿದ ವ್ಯಕ್ತಿ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಡಿ.24ಕ್ಕೆ ನಮ್ಮ ವಿವಾಹವಾಗಿ 8 ವರ್ಷ. ಈ ಹಿನ್ನೆಲೆಯಲ್ಲಿ ಪತ್ನಿಗೆ ಏನಾದರೂ ವಿಶೇಷ ಉಡುಗೊರೆ ನೀಡಬೇಕೆಂದು ಬಯಸಿ ಚಂದ್ರನಲ್ಲಿ ಭೂಮಿ ಖರೀದಿಸಿದೆ’ ಎಂದಿದ್ದಾರೆ. ಧರ್ಮೇಂದ್ರ ಅವರು ಲೂನಾ ಸೊಸೈಟಿ ಇಂಟರ್‌ನ್ಯಾಷನಲ್‌ ಮೂಲಕ ಚಂದ್ರನಲ್ಲಿ ಭೂಮಿ ಖರೀದಿಸಿದ್ದಾರೆ.

2018ರಲ್ಲಿ ದಿವಂಗತ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಕೂಡ ಚಂದ್ರನಲ್ಲಿ ಭೂಮಿ ಖರೀದಿಸಿದ್ದರು. ಕಳೆದ ಕೆಲವು ತಿಂಗಳ ಹಿಂದೆ ಬೋಧಗಯಾದ ನಿವಾಸಿ ನೀರಜ್‌ ಕುಮಾರ್‌ ಸಹ ಚಂದ್ರನಲ್ಲಿ ಒಂದು ಎಕರೆ ಖರೀದಿಸಿದ್ದರು.