ಆತ್ಮಹತ್ಯೆ ಮಾಡಿಕೊಂಡ NEET ವಿದ್ಯಾರ್ಥಿಯ ಕೋಣೆಯಲ್ಲಿ ಸಿಕ್ಕ ನೋಟ್‌ನಲ್ಲಿತ್ತು 'ಹ್ಯಾಪಿ ಬರ್ತ್‌ಡೇ ಅಪ್ಪ..'
ಆ ಹುಡುಗ ವೈದ್ಯನಾಗುವ ಕನಸು ಕಂಡಿದ್ದ. ಆದರೆ, ಪರೀಕ್ಷೆಯ ಒತ್ತಡ, ಕುಟುಂಬದ ಒತ್ತಡ ತಾಳಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ನೋಟ್‌ನಲ್ಲಿ ಅಪ್ಪನಿಗೆ ಬರ್ತ್‌ಡೇ ವಿಶ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
ನವದೆಹಲಿ (ಆ.4): ಹೃದಯ ಬಿರಿಯುವಂಥ ಘಟನೆಯಲ್ಲಿ ವೈದ್ಯನಾಗುವ ಕನಸು ಕಂಡು ನೀಟ್ ಪರೀಕ್ಷೆಗೆ ಸಿದ್ಧನಾಗುತ್ತಿದ್ದ 17 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದು, ದೊಡ್ಡ ವೈದ್ಯನಾಗುವ ಆಸೆಯಲ್ಲಿದ್ದ ವಿದ್ಯಾರ್ಥಿಯ ಪಾಲಿಗೆ ಪರೀಕ್ಷೆಯ ಒತ್ತಡ, ಕುಟುಂಬದ ನಿರೀಕ್ಷೆಗಳೇ ಮುಳುವಾಗಿದೆ. ವಿದ್ಯಾರ್ಥಿಗಳು ನೇಣು ಹಾಕಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಕೋಟಾದ ಹಾಸ್ಟೆಲ್‌ನಲ್ಲಿ ಫ್ಯಾನ್‌ಗಳನ್ನು ಹಾಕಲಾಗಿದ್ದರೂ, ಮುಖಕ್ಕೆ ಪ್ಲಾಸ್ಟಿಕ್ ಕವರ್ ಕಟ್ಟಿಕೊಂಡು ಮಂಜೋತ್ ಚಾಬ್ರಾ ಹೆಸರಿನ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗುರುವಾರ ನಡೆದಿದೆ. ಉತ್ತರ ಪ್ರದೇಶದ ರಾಮ್‌ಪುರ ನಗರದವರಾದ ಚಾಬ್ರಾ, ಕೋಟಾದ ವಿಜ್ಞಾನ ನಗರ ಪೊಲೀಸ್ ಠಾಣೆಯ ಪ್ರದೇಶದಲ್ಲಿರುವ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಬುಧವಾರ ಹಾಗೂ ಗುರುವಾರದ ಮಧ್ಯರಾತ್ರಿಯಲ್ಲಿ ಮಂಜೋತ್ ಸಾವು ಕಂಡಿದ್ದಾನೆ ಎನ್ನಲಾಗಿದೆ ಗುರುವಾರ ಬೆಳಗ್ಗೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ತಂದೆ-ತಾಯಿ ಮಂಜೋತ್ ಚಾಬ್ರಾಗೆ ಸಾಕಷ್ಟು ಬಾರಿ ಕರೆ ಮಾಡಿದರೂ, ಸ್ವೀಕರಿಸದೇ ಇದ್ದಾಗ ಹಾಸ್ಟೆಲ್‌ನ ಕೇರ್‌ಟೇಕರ್‌ಗೆ ಇದರ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕೇರ್‌ಟೇಕರ್ ಮಂಜೋತ್ ಅವರ ಕೋಣೆಯ ಬಾಗಿಲನ್ನು ಒಡೆದು ನೋಡಿದಾಗ, ವಿದ್ಯಾರ್ಥಿಯ ಶವ ಪತ್ತೆಯಾಗಿದೆ.
ಚಾಬ್ರಾ ಅವರ ಕೊಠಡಿಯಲ್ಲಿನ ಸೀಲಿಂಗ್ ಫ್ಯಾನ್‌ಗೆ 'ಆತ್ಮಹತ್ಯಾ ವಿರೋಧಿ ಸಾಧನ' ಅಳವಡಿಸಲಾಗಿತ್ತು. ಆದರೆ, ಸಾಯಲೇಬೇಕು ಎಂದು ನಿರ್ಧಾರ ಮಾಡಿದ್ದ ಚಾಬ್ರಾ, ತನ್ನ ಮುಖವನ್ನು ಪ್ಲಾಸ್ಟಿಕ್ ಚೀಲದಿಂದ ಮುಚ್ಚಿಕೊಂಡು ಅದರು ಸುತ್ತ ಬಟ್ಟೆಯನ್ನು ಕಟ್ಟಿಕೊಂಡು ಸಾವು ಕಂಡಿದ್ದಾನೆ ಎಂದು ವಿಜ್ಞಾನ ನಗರದ ಸರ್ಕಲ್ ಇನ್ಸ್‌ಪೆಕ್ಟರ್ ಧರ್ಮವೀರ್ ಸಿಂಗ್ ಹೇಳಿದ್ದಾರೆ.
ವೈದ್ಯನಾಗುವ ಮಹತ್ವಾಕಾಂಕ್ಷೆಯ ಕನಸುಗಳೊಂದಿಗೆ ಕೋಟಾಗೆ ಬಂದಿದ್ದ ಚಾಬ್ರಾ, ತಮ್ಮ ಪರಿಶ್ರಮದ ಕಾರಣಕ್ಕಾಗಿಯೇ ಸ್ನೇಹಿತರ ವಲಯದಲ್ಲಿ ಹೆಸರುವಾಸಿಯಾಗಿದ್ದರು. ಆದರೆ, ಸ್ಮರ್ಧಾತ್ಮಕ ಪರೀಕ್ಷೆಯ ಅಪಾರ ಒತ್ತಡ ಹಾಗೂ ತನ್ನ ಕನಸುಗಳನ್ನು ಸಾಧಿಸಬೇಕು ಎನ್ನುವ ನಿರೀಕ್ಷೆ ಅವರ ಮಾನಸಿಕ ಸ್ವಾಸ್ಥದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಇಡೀ ದೇಶದಲ್ಲಿ ಯಾವುದಾದರೂ ರಾಜಧಾನಿ ಇದ್ದರೆ ಅದು ರಾಜಸ್ಥಾನದ ಕೋಟಾ. ಅದೇ ರೀತಿ ಅಪಾರ ಒತ್ತಡ ವಿದ್ಯಾರ್ಥಿಗಳ ಆತ್ಮಹತ್ಯೆಗೂ ಕಾರಣವಾಗುತ್ತದೆ. ಅದೇ ರೀತಿ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯ ಬಗ್ಗೆ ಚರ್ಚೆ ಆಗುವ ಸಮಯದಲ್ಲಿ, ಬಹುಶಃ ಮುಂದೆ ಅದು ನಾನೇ ಆಗಬಹುದು ಎಂದು ಮಂಜೋತ್ ಚಾಬ್ರಾ ಹೇಳುತ್ತಿದ್ದ ಎಂದು ಆತನ ಸಹಪಾಠಿಗಳು ತಿಳಿಸಿದ್ದಾರೆ, ಆದರೆ, ಇದನ್ನು ತಾವು ಅರ್ಥಮಾಡಿಕೊಳ್ಳಲು ವಿಫಲವಾಗಿದ್ದಕ್ಕೆ ಈಗ ವಿಷಾದವಾಗುತ್ತಿದೆ ಎಂದು ಹೇಳಿದ್ದಾರೆ.
ನೀಟ್ ಪಾಸಾದವರು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಜು.21 ಕೊನೆ ದಿನ: ಇಂದೇ ಅರ್ಜಿ ಸಲ್ಲಿಸಿ
ಇನ್ನು ತಮ್ಮ ಸೂಸೈಡ್ ನೋಟ್‌ನಲ್ಲಿ ಮಂಜೋತ್ ಚಾಬ್ರಾ ತನ್ನ ತಂದೆಗೆ ಬರ್ತ್‌ಡೇ ವಿಶ್ ಕೂಡ ಮಾಡಿದ್ದು, ತಾವು ತೆಗೆದುಕೊಂಡ ನಿರ್ಧಾರದ ಬಗ್ಗೆ ಇಡೀ ಕುಟುಂಬದವರ ಕ್ಷಮೆಯನ್ನೂ ಕೇಳಿದ್ದಾರೆ. ನನ್ನ ಈ ನಿರ್ಧಾರಕ್ಕೆ ನನ್ನ ಸಹಪಾಠಿಗಳನ್ನಾಗಲಿ, ಯಾರನ್ನೂ ಕೂಡ ದೂಷಣೆ ಮಾಡಬಾರದು ಎಂದು ಬರೆದು ಗೋಡೆಯ ಮೇಲೆ ಅಂಟಿಸಿದ್ದಾರೆ. ಒಂದು ನೋಟ್‌ನಲ್ಲಿ ''ಹ್ಯಾಪಿ ಬರ್ತ್‌ಡೇ ಪಾಪಾ..' ಎಂದು ಬರೆದಿದ್ದು, ಇನ್ನೊಂದು ನೋಟ್‌ನಲ್ಲಿ ತಾವು ಎದುರಿಸಿದ ತೀರಾ ಭಾವುಕ ಕ್ಷಣಗಳ ಬಗ್ಗೆ ಬರೆದಿದ್ದಾರೆ.
ಮಂಜೋತ್ ಚಾಬ್ರಾ ಬುದ್ಧಿವಂತ ವಿದ್ಯಾರ್ಥಿ. ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾದ್ ಆಗಿದ್ದ. ಕಳೆದ ಏಪ್ರಿಲ್‌ನಲ್ಲಿ ತನ್ನ ಶಾಲಾ ಸಹಪಾಠಿಗಳ ಜೊತ ಕೋಟಾಗೆ ಬಂದಿದ್ದ. ಒಂದೇ ಹಾಸ್ಟೆಲ್‌ನ ಭಿನ್ನ ರೂಮ್‌ಗಳಲ್ಲಿ ಇವರೆಲ್ಲರೂ ವಾಸವಿದ್ದರು. ಮಂಜೋತ್ ಬುದ್ಧಿವಂತ ಮಾತ್ರವಲ್ಲ ಎಲ್ಲರನ್ನೂ ನಗಿಸುತ್ತಾ ತಾನೂ ನಗುತ್ತಾ ಇರುತ್ತಿದ್ದ ವ್ಯಕ್ತಿ. 12ನೇ ತರಗತಿಯಲ್ಲಿ ಶೇ. 93ರಷ್ಟು ಅಂಕ ಪಡೆದಿದ್ದ. ಇನ್ನು ಕೋಚಿಂಗ್ ಸಂಸ್ಥೆಯಲ್ಲೂ ಎಂದಿನ ಪರೀಕ್ಷೆಗಳಲ್ಲಿ ಉತ್ತಮ ಅಂಕ ಸಂಪಾದಿಸುತ್ತಿದ್ದ ಎಂದು ಆತನ ಸಹಪಾಠಿ ತಿಳಿಸಿದ್ದಾರೆ.
Chandrayaan 3: ಬಾಹ್ಯಾಕಾಶ ನೌಕೆಗೆ ನಾಳೆ ಬಹುದೊಡ್ಡ ಅಗ್ನಿಪರೀಕ್ಷೆ!
ರಾಜಸ್ಥಾನದ ಕೋಟಾವನ್ನು 'ಭಾರತದ ಕೋಚಿಂಗ್ ಕ್ಯಾಪಿಟಲ್' ಎಂದು ಕರೆಯಲಾಗುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಪ್ರಮಾಣದಿಂದಾಗಿ ಕುಖ್ಯಾತಿಯನ್ನು ಗಳಿಸಿದೆ. ನಗರವು ವಾರ್ಷಿಕವಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಬರುವ ಸಾವಿರಾರು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಹಾಗಿದ್ದರೂ, ತೀವ್ರ ಪೈಪೋಟಿ ಮತ್ತು ಹೆಚ್ಚಿನ ನಿರೀಕ್ಷೆಗಳು ಈ ಯುವ ಮನಸ್ಸುಗಳ ಮೇಲೆ ಅಪಾರ ಒತ್ತಡವನ್ನು ಉಂಟುಮಾಡುತ್ತವೆ,ಇದು ಆತ್ಮಹತ್ಯೆಗಳಂಥ ನಿರ್ಧಾರಗಳಿಗೆ ಕಾರಣವಾಗಿತ್ತದೆ. ಇದು ಈ ವರ್ಷ ಕೋಟಾದಲ್ಲಿ ಕೋಚಿಂಗ್ ವಿದ್ಯಾರ್ಥಿಯ 17ನೇ ಸಾವಿನ ಪ್ರಕರಣ. ಕಳೆದ ವರ್ಷ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.