Chandrayaan 3: ಬಾಹ್ಯಾಕಾಶ ನೌಕೆಗೆ ನಾಳೆ ಬಹುದೊಡ್ಡ ಅಗ್ನಿಪರೀಕ್ಷೆ!
ನಾಳೆ ಅಂದರೆ ಆಗಸ್ಟ್ 5 ಭಾರತದ ಚಂದ್ರಯಾನ ಯೋಜನೆಗೆ ಪರೀಕ್ಷೆಯ ದಿನ. ಭಾರತ ಕಳಿಸಿರುವ ಚಂದ್ರಯಾನ ನೌಕೆಯ ಚಂದ್ರನ ಕ್ಷಕ್ಷೆಗೆ ಸೇರ್ಪಡೆಯಾಗುವ ದಿನ. ನಿಮಗೆ ನೆನಪಿರಲಿ ಈ ಸುದ್ದಿ ಬರೆಯುವ ಹೊತ್ತಿಗೆ ಬಾಹ್ಯಾಕಾಶ ನೌಕೆ ಚಂದ್ರನಿಂದ 40 ಸಾವಿರ ಕಿಲೋಮೀಟರ್ ದೂರದಲ್ಲಿದೆ.
ಬೆಂಗಳೂರು (ಆ.4): ವಾರ್ಷಿಕ ಪರೀಕ್ಷೆ ಬರೆಯುವ ಮುನ್ನ ಅರ್ಧವಾರ್ಷಿಕ ಪರೀಕ್ಷೆ ಅಂತಾ ಇರುತ್ತದೆಯಲ್ಲ.. ಅಂಥದ್ದೇ ಒಂದು ಅರ್ಧವಾರ್ಷಿಕ ಪರೀಕ್ಷೆ ಭಾರತದ ಚಂದ್ರಯಾನ-3 ನೌಕೆಗೆ ನಾಳೆ ನಡೆಯಲಿದೆ. ಚಂದ್ರನೂರಿಗೆ ತೆರಳುವ ನಿಟ್ಟಿನಲ್ಲಿ ಬಾಹ್ಯಾಕಾಶ ನೌಕೆಗೆ ನಾಳೆ ದೊಡ್ಡ ಪರೀಕ್ಷೆ ಎದುರಾಗಲಿದೆ. ಈಗಾಗಲೇ ಚಂದ್ರಯಾನ ತನ್ನ ಪ್ರಯಾಣ ಮೂರನೇ ಎರಡರಷ್ಟು ಪ್ರಯಾಣ ಮುಗಿಸಿದ್ದಾಗಿದೆ. ಬಾಹ್ಯಾಕಾಶ ನೌಕೆ ಈಗ ಚಂದ್ರನ ಸಮೀಪ ತಲುಪಿದ್ದು, ಈ ಸುದ್ದಿ ಬರೆಯುವ ಹೊತ್ತಿಗೆ ಚಂದ್ರನಿಂದ 40 ಸಾವಿರ ಕಿಲೋಮೀಟರ್ ದೂರದಲ್ಲಿದೆ. ಆದರೆ, ಆಗಸ್ಟ್ 5 ರಂದು ಚಂದ್ರನ ಕಕ್ಷಗೆ ನೌಕೆ ಸೇರ್ಪಡೆಯಾಗಬೇಕು. ಬಾಹ್ಯಾಕಾಶ ನೌಕೆ ಚಂದ್ರಯ ಕಕ್ಷಗೆ ಸೇರುವ ಪ್ರಯತ್ನವನ್ನು ಮಾಡಲಿದೆ. ಇದರಲ್ಲಿ ಯಶಸ್ವಿಯಾದಲ್ಲಿ, ಈ ಪರೀಕ್ಷೆಯಲ್ಲಿ ಗೆದ್ದಂತೆ. ಆ ನಂತರ ಇನ್ನೇನಿದ್ದರೂ ಆಗಸ್ಟ್ 23ರ ಲ್ಯಾಂಡಿಂಗ್ ದಿನವನ್ನು ಭಾರತ ನಿರೀಕ್ಷೆ ಮಾಡಬೇಕು. ನೌಕೆಯನ್ನು ಚಂದ್ರನ ಕಕ್ಷಗೆ ಸೇರಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಇಸ್ರೋ ಈಗಾಗಲೇ ತಿಳಿಸಿದೆ.
ನಾಳೆ ಚಂದ್ರಯಾನ-3ಗೆ ಅತ್ಯಂತ ಮಹತ್ವದ ದಿನ. ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ಅನ್ನು ಚಂದ್ರನ ಕಕ್ಷೆಗೆ ಸೇರಿಸಲು ಸಾಧ್ಯವಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಚಂದ್ರಯಾನ-3 ರ ಲೂನಾರ್ ಆರ್ಬಿಟ್ ಇಂಜೆಕ್ಷನ್ (LOI) ಅನ್ನು ಆಗಸ್ಟ್ 5 ರಂದು ಸಂಜೆ 7 ಗಂಟೆಯ ಸುಮಾರಿಗೆ ಮಾಡಲಾಗುತ್ತದೆ. ಅದರ ಅರ್ಥ ಚಂದ್ರಯಾನ-3 ನೌಕೆಯನ್ನು ಚಂದ್ರನ ಮೊದಲ ಕಕ್ಷಗೆ ಸೇರ್ಪಡೆಗೊಳಿಸಲಾಗುತ್ತದೆ.
ಆಗಸ್ಟ್ 6 ರಂದು ರಾತ್ರಿ 11 ಗಂಟೆ ಸುಮಾರಿಗೆ ಚಂದ್ರಯಾನವನ್ನು ಚಂದ್ರನ ಎರಡನೇ ಕಕ್ಷೆಗೆ ಸೇರಿಸಲಾಗುತ್ತದೆ, ಮೂರನೇ ಕಕ್ಷೆಗೆ ಇಳಿಸುವ ಕಾರ್ಯ ಆಗಸ್ಟ್ 9 ರಂದು ಮಧ್ಯಾಹ್ನ 2.45 ರ ಸುಮಾರಿಗೆ ನಡೆಯಲಿದೆ. ನಾಲ್ಕನೇ ಚಂದ್ರನ ಕಕ್ಷಗೆ ಇಳಿಸುವ ಇಂಜೆಕ್ಷನ್ ಆಗಸ್ಟ್ 14 ರಂದು ಮಧ್ಯಾಹ್ನ 12 ರ ಸುಮಾರಿಗೆ ಮತ್ತು ಐದನೇ ಚಂದ್ರನ ಕಕ್ಷೆಯ ಇಂಜೆಕ್ಷನ್ ಆಗಸ್ಟ್ 16 ರಂದು ಬೆಳಿಗ್ಗೆ 8.30 ರ ಸುಮಾರಿಗೆ ನಡೆಯಲಿದೆ. ಆಗಸ್ಟ್ 17 ರಂದು, ಪ್ರೊಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಮಾಡ್ಯೂಲ್ ಪ್ರತ್ಯೇಕಗೊಳ್ಳುತ್ತದೆ.
ಆಗಸ್ಟ್ 17 ವಿಶೇಷ ದಿನ: ಆಗಸ್ಟ್ 17 ಚಂದ್ರಯಾನ-3 ಪಾಲಿಗೆ ವಿಶೇಷ ದಿನ. ಅಂದು ಈ ನೌಕೆ ಚಂದ್ರನ ಮೇಲ್ಮೈಯಿಂದ ಕೇವಲ 100 ಕಿಲೋಮೀಟರ್ ದೂರದಲ್ಲಿ ಇರಲಿದೆ. ಅಗಸ್ಟ್ 18 ರಿಂದ 20ರವರೆಗೆ ಈ ನೌಕೆಯ ಈ ಆರ್ಬಿಟಿಂಗ್ ನಡೆಯಲಿದೆ. ಅಂದರೆ, ಲ್ಯಾಂಡರ್ ಇಳಿಯುವ ಪ್ರಕ್ರಿಯೆ. ಹಂತ ಹಂತವಾಗಿ ಚಂದ್ರನ ಕಕ್ಷೆಯನ್ನು ಕಡಿಮೆ ಮಾಡುವ ಕೆಲಸ ನಡೆಯಲಿದೆ. 100* 30 ಕಿ.ಮೀ ಅಂತರದಲ್ಲಿ ಲ್ಯಾಂಡರ್ ಇಳಿಯಲಿದೆ. ಆಗಸ್ಟ್ 23ರಂದು ಸಂಜೆ 5.47ರ ವೇಳೆಗೆ ಚಂದ್ರನ ಮೇಲೆ ನೌಕೆ ಲ್ಯಾಂಡ್ ಆಗಬೇಕು. ಆದರೆ, ಇದಕ್ಕಾಗಿ ಇನ್ನೂ 19 ದಿನಗಳು ಬಾಕಿ ಇದೆ. ಅದಕ್ಕೂ ಮುನ್ನ ನೌಕೆಗೆ ಸಾಕಷ್ಟು ಸವಾಲುಗಳು ಎದುರಾಗಲಿವೆ.
ಚಂದ್ರನ ಕಕ್ಷೆ ಸೇರುವ ಹೆದ್ದಾರಿಯಲ್ಲಿದೆ ಚಂದ್ರಯಾನ-3, ಮುಂದಿರುವ ಸವಾಲೇನು
ಚಂದ್ರಯಾನ-3 ಸುತ್ತ ರಕ್ಷಣಾ ಕವಚವನ್ನು ಹಾಕಲಾಗಿದೆ. ಇದು ಬಾಹ್ಯಾಕಾಶದಲ್ಲಿ ಬೆಳಕಿನ ವೇಗದಲ್ಲಿ ಚಲಿಸುವ ಉಪಪರಮಾಣು ಕಣಗಳಿಂದ ರಕ್ಷಿಸುತ್ತದೆ. ಈ ಕಣಗಳನ್ನು ವಿಕಿರಣ ಎಂದು ಕರೆಯಲಾಗುತ್ತದೆ. ಒಂದೇ ಒಂದು ಕಣ ಉಪಗ್ರಹಕ್ಕೆ ತಾಗಿದರೂ, ಅದು ಒಡೆಯುತ್ತದೆ. ಅದರಿಂದ ಹೊರಬರುವ ಕಣಗಳು ದ್ವಿತೀಯಕ ವಿಕಿರಣವನ್ನು ಉತ್ಪತ್ತಿ ಮಾಡುತ್ತವೆ. ಇದು ಉಪಗ್ರಹ ಅಥವಾ ಬಾಹ್ಯಾಕಾಶ ನೌಕೆಯ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಸೂರ್ಯನಿಂದ ಚಾರ್ಜ್ಡ್ ಕಣಗಳು ಬಾಹ್ಯಾಕಾಶ ನೌಕೆಯನ್ನು ಹಾನಿಗೊಳಿಸಬಹುದು ಅಥವಾ ನಾಶಪಡಿಸಬಹುದು. ಬಲವಾದ ಭೂಕಾಂತೀಯ ಚಂಡಮಾರುತವು ಬಾಹ್ಯಾಕಾಶ ನೌಕೆಗೆ ಹಾನಿಯನ್ನುಂಟುಮಾಡುತ್ತದೆ. ಆದರೆ ಚಂದ್ರಯಾನ-3 ಸುರಕ್ಷಿತವಾಗಿದೆ. ಅದರ ಸುತ್ತಲೂ ವಿಶೇಷ ರಕ್ಷಾಕವಚವಿದೆ ಅದು ಅದನ್ನು ರಕ್ಷಿಸುತ್ತದೆ.
Video: ಕಡುಕತ್ತಲ ದಾರಿಯಲ್ಲಿ ಚಂದ್ರನೂರಿಗೆ ಭಾರತದ ಯಾನ, ಟೆಲಿಸ್ಕೋಪ್‌ನಲ್ಲಿ ಸೆರೆಯಾಯ್ತು ಚಂದ್ರಯಾನ!
ಬಾಹ್ಯಾಕಾಶ ಧೂಳು. ಅವುಗಳನ್ನು ಕಾಸ್ಮಿಕ್ ಧೂಳು ಎಂದೂ ಕರೆಯುತ್ತಾರೆ. ಬಾಹ್ಯಾಕಾಶ ನೌಕೆಯನ್ನು ತಾಕಿದ ನಂತರ ಅವು ಪ್ಲಾಸ್ಮಾ ಆಗಿ ಬದಲಾಗುತ್ತವೆ. ಹೆಚ್ಚಿನ ವೇಗ ಮತ್ತು ಘರ್ಷಣೆಯಿಂದಾಗಿ ಇದು ಸಂಭವಿಸುತ್ತದೆ. ಈ ಕಾರಣದಿಂದಾಗಿ, ಬಾಹ್ಯಾಕಾಶ ನೌಕೆಯು ಹಾನಿಗೊಳಗಾಗಬಹುದು.