ಸರ್ಕಾರಿ ಶಾಲೆಯೊಂದರಲ್ಲಿ, ಶಿಕ್ಷಕಿಯೊಬ್ಬರು ತಮ್ಮ 500 ರೂಪಾಯಿ ಕಳೆದುಕೊಂಡಿದ್ದಕ್ಕೆ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದ್ದು, ಘಟನೆಯ ಸತ್ಯಾಸತ್ಯತೆಯ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಜೈಪುರ: ವಿದ್ಯಾರ್ಥಿನಿಯರು ಕಣ್ಣೀರು ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋ ರಾಜಸ್ಥಾನದ ಸವಾವಿ ಮಾಧೋಪುರದ ಸರ್ಕಾರಿ ಶಾಲೆಯದ್ದು ಎಂದು ಹೇಳಲಾಗುತ್ತಿದೆ. ಶಾಲೆಯಲ್ಲಿ ನಡೆದ ಈ ಘಟನೆಯನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಅಷ್ಟಕ್ಕೂ ಆ ಶಾಲೆಯಲ್ಲಿ ಆಗಿದ್ದೇನು? ವಿದ್ಯಾರ್ಥಿನಿಯರು ಕಣ್ಣೀರು ಹಾಕುತ್ತಿರೋದ್ಯಾಕೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಮಾಧೋಪುರದ ಸರ್ಕಾರಿ ಶಾಲೆಯ ಶಿಕ್ಷಕಿಯ 500 ರೂಪಾಯಿ ನೋಟು ಕಾಣೆಯಾಗಿತ್ತು. ಹಣ ಕಳೆದುಕೊಂಡ ಶಿಕ್ಷಕಿ, ನನ್ನ 500 ರೂಪಾಯಿ ಹಿಂದಿರುಗಿಸಿ, ಇಲ್ಲವಾದ್ರೆ ಎಲ್ಲರ ಬಟ್ಟೆ ಬಿಚ್ಚಿಸಿ ಪರಿಶೀಲನೆ ಮಾಡಲು ಮುಂದಾಗಿದ್ರು ಎಂಬ ಆರೋಪ ಕೇಳಿ ಬಂದಿದೆ. ಈ ವಿಡಿಯೋ ವೈರಲ್ ಬಳಿಕ ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಶಿಕ್ಷಕಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ.
500 ರೂಪಾಯಿಗೆ ಶಿಕ್ಷಕಿ ಮಾಡಿದ್ದೇನು?
ತನ್ನ 500 ರೂಪಾಯಿ ಕಾಣದಿದ್ದಾಗ ಶಿಕ್ಷಕಿ ಅನುಮಾನದಿಂದ ಮಕ್ಕಳನ್ನು ಪ್ರಶ್ನೆ ಮಾಡಿದ್ದಾರೆ. ಮಕ್ಕಳು ತಾವ್ಯಾರು ಹಣ ತೆಗೆದುಕೊಂಡಿಲ್ಲ ಎಂದು ಹೇಳಿದಾಗ ಶಿಕ್ಷಕಿ ನಿಯಮಿತವಾಗಿ ತಪಾಸಣೆ ಮಾಡಬಹುದಿತ್ತು. ಅದರ ಬದಲಾಗಿ ಎಲ್ಲಾ ಎಲ್ಲೆಯನ್ನು ಮೀರಿದ ಶಿಕ್ಷಕಿ, ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಲು ಮುಂದಾಗಿದ್ದಾರೆ ಎಂಬ ಆರೋಪವಿದೆ. ವಿದ್ಯಾರ್ಥಿನಿಯರು ಬಟ್ಟೆ ಬಿಚ್ಚಲು ಒಪ್ಪದಿದ್ದಾಗ 500 ರೂಪಾಯಿ ನೀಡಿ ಶಾಲೆಯಿಂದ ಹೋಗುವಂತೆ ಹೇಳಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ವಿಡಿಯೋ ಬಗ್ಗೆ ಒಂದಿಷ್ಟು ಅನುಮಾನ?
ಈ ಘಟನೆ ಸಂಬಂಧ ಮೂರ್ನಾಲ್ಕು ವಿಡಿಯೋ ತುಣುಕುಗಳು ವೈರಲ್ ಆಗಿರೋದನ್ನು ಕಾಣಬಹುದಾಗಿದೆ. ವಿಡಿಯೋದಲ್ಲಿ ವಿದ್ಯಾರ್ಥಿನಿಯರು ಕಣ್ಣೀರು ಹಾಕುತ್ತಿರೋದನ್ನು ಕಾಣಬಹುದು. ಆದ್ರೆ ಶಿಕ್ಷಕಿ ಯಾರು ಎಂಬುದರ ಬಗ್ಗೆ ಸ್ಪಷ್ಟವಾಗಿ ತೋರಿಸಿಲ್ಲ. ವಿದ್ಯಾರ್ಥಿನಿಯರ ಕಣ್ಣೀರು ಹಾಕಲು ನಿಜವಾದ ಕಾರಣ ಏನು ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ಇದನ್ನೂ ಓದಿ: ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ: ವಿಸ್ತರಣೆಯಾಗುತ್ತಾ ಹುಬ್ಬಳ್ಳಿ ಟ್ರೈನ್?
ಈ ವಿಡಿಯೋ ನೋಡಿದ ಜನರು, ಇಂದಿನ ಕಾಲದಲ್ಲಿ ಶಿಕ್ಷಕರು ಈ ರೀತಿಯಾಗಿ ಮಾಡಿರಲ್ಲ. ಹಾಗಾಗಿ ವಿಡಿಯೋ ಸಂಬಂಧ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಹಾಗೆಯೇ ಒಂದಿಷ್ಟು ಜನರು, ಶಿಕ್ಷಕಿ ಮಾಡಿದ್ದು ಆಕೆಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ರಾಜಸ್ಥಾನ ಭಾಗದಲ್ಲಿ ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.


