ಪಂಚ ರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯ ಗೆದ್ದ ಬಿಜೆಪಿಗೆ ಖುಷಿಗಿಂತ ತಲೆನೋವೇ ಹೆಚ್ಚಾಗಿದೆ. ಮೂರು ರಾಜ್ಯದಲ್ಲಿ ಸಿಎಂ ಆಯ್ಕೆ ಕಗ್ಗಂಟಾಗುತ್ತಿದೆ. ಈ ಪೈಕಿ ರಾಜಸ್ಥಾನದಲ್ಲಿ ಅಧಿಕಾರ ಕೈತಪ್ಪು ಭೀತಿಯೂ ಎದುರಾಗುತ್ತಿದೆ. ಹೊಸ 30 ಶಾಸಕರನ್ನು ಮನೆಗೆ ಕರೆಸಿಕೊಂಡು ಸಭೆ ನಡೆಸಿರುವ ಮಾಜಿ ಸಿಎಂ, ಬಿಜೆಪಿ ನಾಯಕಿ ವಸುಂಧರಾ ರಾಜೆ, ಸಿಎಂ ಮಾಡದಿದ್ದರೆ ಪಕ್ಷಾಂತರ ಮಾಡುವ ಸಾಧ್ಯತೆಗಳಿವೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ನವದೆಹಲಿ(ಡಿ.07) ಪಂಚ ರಾಜ್ಯ ಚುನಾವಣೆಯಲ್ಲಿ ತೆಲಂಗಾಣ ಮಾತ್ರ ಗೆದ್ದ ಕಾಂಗ್ರೆಸ್‌ನಲ್ಲಿರುವ ಖುಷಿ, ಮೂರು ರಾಜ್ಯ ಗೆದ್ದ ಬಿಜೆಪಿ ಪಾಳಯದಲ್ಲಿ ಕಾಣಿಸುತ್ತಿಲ್ಲ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತಿಸಘಡದಲ್ಲಿ ಸಿಎಂ ಆಯ್ಕೆ ತೀವ್ರ ತಲೆನೋವಾಗಿ ಪರಿಣಮಿಸುತ್ತಿದೆ. ಈ ಪೈಕಿ ರಾಜಸ್ಥಾನ ಇದೀಗ ಬಿಜೆಪಿ ಹೈಕಮಾಂಡ್‌ಗೆ ಕಗ್ಗಂಟಾಗಿದೆ. ರಾಜಸ್ಥಾನದಲ್ಲಿ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಮಾಜಿ ಸಿಎಂ ಬಿಜೆಪಿ ಹಿರಿಯ ನಾಯಕಿ ವಸಂಧರಾ ರಾಜೆ ತೆರೆಮರೆಯಲ್ಲಿ ಸಭೆ ನಡೆಸುತ್ತಿದ್ದಾರೆ. ಹೊಸದಾಗಿ ಗೆದ್ದಿರುವ 30 ಶಾಸಕರನ್ನು ತಮ್ಮ ಮನೆಗೆ ಕರೆಸಿ ಸಭೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ತಮ್ಮನ್ನು ಸಿಎಂ ಮಾಡುವಂತೆ ಬಿಜೆಪಿ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. 

ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ತಮ್ಮನ್ನು ಆಯ್ಕೆ ಮಾಡದಿದ್ದರೆ, ಹೊಸದಾಗಿ ಆಯ್ಕೆಯಾಗಿರುವ ಹಾಗೂ ವಸುಂಧರಾ ರಾಜೆ ಮೇಲೆ ನಿಷ್ಠೆ ಹೊಂದಿರು 30 ಶಾಸಕರು ಜೊತೆ ಬಿಜೆಪಿಯಿಂದ ಹೊರನಡೆಯುವ ಸಾಧ್ಯತೆಗಳನ್ನು ಕೆಲ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಇತರ ರಾಜಕೀಯ ಪಕ್ಷ ಸೇರಿಕೊಂಡ ಹೊಸ ಸರ್ಕಾರ ರಚಿಸುತ್ತಾರಾ ಅಥವಾ ಕಾಂಗ್ರೆಸ್ ಸೇರಿಕೊಳ್ಳುತ್ತಾರಾ ಅನ್ನೋ ಕುರಿತು ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಆದರೆ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಗೆದ್ದ ಮೂರು ರಾಜ್ಯಗಳಿಗೂ ಹೊಸ ಸಿಎಂ ನೇಮಕಕ್ಕೆ ಮುಂದಾದ ಬಿಜೆಪಿ ಹೈಕಮಾಂಡ್‌!

ರಾಹುಲ್ ಗಾಂಧಿ, ಸೋನಿಯ ಗಾಂಧಿ ಬೆಂಬಲಿಗರು ಇದೀಗ ಈ ಮಾಹಿತಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಕುರಿತು ಯಾವುದೇ ಸ್ಪಷ್ಟ ಮಾಹಿತಿಗಳು ಲಭ್ಯವಿಲ್ಲ. ಆದರೆ ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಯುತ್ತಿರುವುದು ಸತ್ಯ. ಇತ್ತ ಬಿಜೆಪಿ ಹೈಕಮಾಂಡ್‌ಗೂ ರಾಜಸ್ಥಾನ ಸಿಎಂ ಆಯ್ಕೆ ಕಗ್ಗಂಟಾಗುತ್ತಿರುವುದು ಅಚ್ಚರಿ ವಿಚಾರವೇನಲ್ಲ. 

Scroll to load tweet…

ಇದರ ನಡುವೆ ದೆಹಲಿ ತಲುಪಿರುವ ವಸುಂಧರಾ ರಾಜೆ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ರಾಜಸ್ಥಾನ ಹಾಗೂ ಇತರ ಎರಡು ರಾಜ್ಯಗಳ ಸಿಎಂ ಆಯ್ಕೆಗೆ ಸತತ ಸಭೆ ನಡೆಸುತ್ತಿದೆ. ಇದರ ಬೆನ್ನಲ್ಲೇ ವಸುಂಧರಾ ರಾಜೆಗೆ ಹೈಕಮಾಂಡ್ ಬುಲಾವ್ ನೀಡಿದ್ದಾರೋ ಅಥವಾ ತಾವೇ ಶಕ್ತಿ ಪ್ರದರ್ಶನ ಮಾಡಲು ದೆಹಲಿಗೆ ತೆರಳಿದ್ದಾರೋ ಅನ್ನೋ ಕುರಿತು ಸ್ಪಷ್ಟತೆ ಇಲ್ಲ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ವಸುಂಧರಾ ರಾಜೆ, ಸೊಸೆಯನ್ನು ನೋಡಲು ದೆಹಲಿಗೆ ಆಗಮಿಸಿದ್ದಾರೆ ಎಂದಿದ್ದಾರೆ. ಈ ಎಲ್ಲಾ ಬೆಳವಣಿಗೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಎಲ್ಲಾ 10 ಬಿಜೆಪಿ ಸಂಸದರು ಲೋಕಸಭೆಗೆ ರಾಜೀನಾಮೆ