ಹೆದ್ದಾರಿ ಪಕ್ಕ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಟ್ರಕ್, 12 ಮಂದಿಯ ದಾರುಣ ಸಾವು
Road accident: ಜೈಪುರ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ವೇಗವಾಗಿ ಬಂದ ಟ್ರಕ್ ನಿಂತಿದ್ದ ಪ್ರಯಾಣಿಕರ ಬಸ್‌ಗೆ ಡಿಕ್ಕಿ ಹೊಡೆದಿದ್ದರಿಂದ 12 ಮಂದಿ ದಾರುಣ ಸಾವು ಕಂಡಿದ್ದಾರೆ. ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.
ಜೈಪುರ (ಸೆ.13): ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಜೈಪುರ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಿಂತಿದ್ದ ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ 4.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮಾಹಿತಿಗಳ ಪ್ರಕಾರ, ಗುಜರಾತ್‌ನಿಂದ ಮಥುರಾಗೆ ತೆರಳುತ್ತಿದ್ದ ಬಸ್ ಕೆಟ್ಟು ಹೋಗಿದ್ದ ಕಾರಣಕ್ಕೆ ಹೆದ್ದಾರಿಯ ಪಕ್ಕದಲ್ಲಿ ನಿಂತಿತ್ತು. ಈ ವೇಳೆ ವೇಗವಾಗಿ ಬಂದ ಟ್ರಕ್ ಬಸ್‌ನ ಹಿಂಭಾಗಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದೆ. ಅಪಘಾತ ನಡೆದ ತಕ್ಷಣವೇ ಸ್ಥಳೀಯ ಜನರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದರು. ಅಪಘಾತ ಎಷ್ಟಯ ಭೀಕರವಾಗಿತ್ತೆಂದರೆ, ಪ್ರಯಾಣಿಕರ ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. 12ಕ್ಕೂ ಅಧಿಕ ಮಂದಿ ಗಾಯಾಳುವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬಸ್‌ನಲ್ಲಿ ಒಟ್ಟು 57 ಜನ ಪ್ರಯಾಣಿಕರಿದ್ದರು ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ.ಲಖನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಆಗ್ರಾ-ಜೈಪುರ ರಾಷ್ಟ್ರೀಯ ಹೆದ್ದಾರಿ-21ರ ಹಂತಾರ ಬಳಿ ಮುಂಜಾನೆ 4:30ಕ್ಕೆ ಈ ಅಪಘಾತ ಸಂಭವಿಸಿದೆ. ಮೃತಪಟ್ಟವರಲ್ಲಿ 7 ಮಹಿಳೆಯರು ಮತ್ತು 5 ಪುರುಷರು ಸೇರಿದ್ದು, ಮೃತರೆಲ್ಲರೂ ಗುಜರಾತ್‌ನ ಭಾವನಗರ ನಿವಾಸಿಗಳು ಎನ್ನಲಾಗಿದೆ.
ಪೊಲೀಸರ ಪ್ರಕಾರ, ಬಸ್ ಗುಜರಾತ್‌ನ ಭಾವನಗರದಿಂದ ಮಥುರಾ ಮಾರ್ಗದಲ್ಲಿ ಹರಿದ್ವಾರಕ್ಕೆ ಪ್ರಯಾಣ ಮಾಡುತ್ತಿತ್ತು. ಬುಧವಾರ ಮುಂಜಾನೆ, ಬಸ್‌ನ ಡೀಸೆಲ್ ಪೈಪ್ ಒಡೆದು ಹೋಗಿದ್ದ ಕಾರಣಕ್ಕೆ ಹೆದ್ದಾರಿಯ ಪಕ್ಕದಲ್ಲಿ ನಿಂತುಕೊಂಡಿತ್ತು. ಈ ವೇಳೆ ಡ್ರೈವರ್ ಸೇರಿದಂತೆ 10-12 ಮಂದಿ ಪ್ರಯಾಣಿಕರು ಬಸ್‌ನಿಂದ ಕೆಳಗೆ ಇಳಿದಿದ್ದರು. ಚಾಲಕ ಹಾಗೂ ಇತರ ವ್ಯಕ್ತಿಗಳು ಪೈಪ್‌ಅನ್ನು ರಿಪೇರಿ ಮಾಡಿ, ಡೀಸೆಲ್ ತರಲು ತೆರಳಿದ್ದರು. ಆಗ ವೇಗವಾಗಿ ಬಂದ ಟ್ರಕ್ ಬಸ್‌ನ ಹಿಂಭಾಗಕ್ಕೆ ಗುದ್ದಿದೆ. ಈ ವೇಳೆ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದವರನ್ನು ಕಂಡ ಇತರೆ ವಾಹನಗಳ ಚಾಲಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಎಲ್ಲರ ಮೃತದೇಹಗಳನ್ನು ಭರತ್‌ಪುರ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಅಪಘಾತದ ನಂತರ ಮೃತದೇಹಗಳು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಲ್ಲಿದ್ದ ಜನರು ಪ್ರತಿ ಮೃತದೇಹವನ್ನು ರಸ್ತೆಯ ಮಧ್ಯದಿಂದ ತೆಗೆದು ಪಕ್ಕದಲ್ಲಿಟ್ಟರು. ಇದೇ ವೇಳೆ ಹೆದ್ದಾರಿಯಲ್ಲಿ ಜಾಮ್ ಉಂಟಾಯಿತು. ಯಾವ ವಾಹನ ಡಿಕ್ಕಿ ಹೊಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ. ಪ್ರಜ್ಞೆ ಬಂದ ನಂತರ ಆತನನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಹಾರ ಘೋಷಣೆ ಮಾಡಿದ ಪ್ರಧಾನಿ ಮೋದಿ: ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಅನುಮೋದಿಸಿದ್ದಾರೆ. "ಭರತ್‌ಪುರದಲ್ಲಿ ಸಂಭವಿಸಿದ ದುರ್ಘಟನೆಯಿಂದಾಗಿ ಪ್ರಾಣ ಕಳೆದುಕೊಂಡವರ ಮುಂದಿನ ಸಂಬಂಧಿಕರಿಗೆ ಪ್ರಧಾನಿ ಮೋದಿ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿಗಳ ಪರಿಹಾರವನ್ನು ಪ್ರಧಾನಮಂತ್ರಿ ಅನುಮೋದಿಸಿದ್ದಾರೆ. ಗಾಯಾಳುಗಳಿಗೆ ತಲಾ 50,000 ರೂಪಾಯಿಗಳನ್ನು ನೀಡಲಾಗುವುದು" ಎಂದು ಪ್ರಧಾನಿ ತಿಳಿಸಿದ್ದಾರೆ.
ಅಥಣಿ: ರಸ್ತೆ ಅಪಘಾತ, ರಜೆಗೆ ಬಂದಿದ್ದ ಯೋಧ ಸಾವು
ಇನ್ನು ಮಂಗಳವಾರ, ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿ ಜೀಪ್ ಮತ್ತು ಬಸ್‌ಗೆ ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ. ಹನುಮಾನ್‌ಗಢ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಲಖೋವಾಲಿ ಬಳಿ ಅಪಘಾತ ಸಂಭವಿಸಿದೆ. ಮೃತರನ್ನು ನಂದ್ರಾಂ ಜಾಟ್ (70), ನೀತು ಜಾಟ್ (60), ದೀಪು ಜಾಟ್ (13) ಮತ್ತು ಅರ್ಜುನ್ ಜಾಟ್ (40) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿತ್ರದುರ್ಗದ ಮಲ್ಲಾಪುರ ಬಳಿ ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ದುರ್ಮರಣ!