30 ವಿಧದ ಅಪರೂಪದ ರಾಗಿ ತಳಿಗಳನ್ನು ರಕ್ಷಿಸಿ, ನೂರಾರು ಮಹಿಳೆಯರಿಗೆ ತರಬೇತಿ ನೀಡಿರುವ ಒಡಿಶಾದ ಬುಡಕಟ್ಟು ಮಹಿಳೆ ರೈಮತಿ ಘಿಯುರಿಯಾ ಅವರ ಸಾಹಸಗಾಥೆ ಇಲ್ಲಿದೆ.
ಕೆಲವು ಎಲೆಮರೆಯ ಕಾಯಿಗಳಂತೆ ಕೆಲಸ ಮಾಡುವ ಜನರಿಂದ ಇಂದು ನಮ್ಮ ಪರಿಸರ ನಮ್ಮ ಭೂಮಿ ನಮ್ಮ ನೆಲ ಜಲ ಉಳಿದಿದೆ. ಅಂತಹ ಒಬ್ಬರು ಮಹಿಳೆಯರಲ್ಲಿ ಒಡಿಶಾದ ಕೊರಾಪುಟ್ ಜಿಲ್ಲೆಯ ಬುಡಕಟ್ಟು ಸಮುದಾಯದ ಮಹಿಳೆ ರೈಮತಿ ಘಿಯುರಿಯಾ ಒಬ್ಬರು. ಇವರು ಸುಮಾರು 30 ವಿಧದ ಅಪರೂಪದ ರಾಗಿಯ ತಳಿಗಳನ್ನು ರಕ್ಷಿಸಿದ್ದಾರೆ. ಕುಲಾಂತರಿ ಬೆಳೆಗಳಿಂದಾಗಿ ಇಂದಿನ ಕಾಲಘಟ್ಟದಲ್ಲಿ ಸ್ವತಃ ರೈತರ ಬಳಿಯೇ ಮುಂದಿನ ಬಿತ್ತನೆಗೆ ಬೇಕಾದ ಬೀಜಗಳಿಲ್ಲ, ಬಿತ್ತನೆ ಬೀಜಗಳಿಗಾಗಿ ರೈತರು ಬಿತ್ತನೆ ಕೇಂದ್ರಗಳ ಮುಂದೆ ಕಾಯುವುದನ್ನು ನೀವು ನೋಡಬಹುದು. ಆದರೆ ಬುಡಕಟ್ಟು ಮಹಿಳೆ ರೈಮತಿ ಅವರು ತಮ್ಮ ಬಳಿ 30 ತಳಿಯ ರಾಗಿ ತಳಿಯ ಬೀಜಗಳನ್ನು ಉಳಿಸಿ ರಕ್ಷಣೆ ಮಾಡಿದ್ದಾರೆ. ಜೊತೆಗೆ ಇವರು ನೂರಾರು ಮಹಿಳೆಯರಿಗೆ ಈ ಬಗ್ಗೆ ತರಬೇತಿ ನೀಡಿದ್ದಾರೆ.
ಇವರ ಈ ಯಶೋಗಾಥೆ ದೇಶ ಹಾಗೂ ಪ್ರಪಂಚದ ಗಮನ ಸೆಳೆದಿದ್ದು, 2023ರಲ್ಲಿ ಆ ವರ್ಷ ನಡೆದ ಜಿ 20 ಶೃಂಗಸಭೆಗೆ ಇವರು ಸೇರಿದಂತೆ 19 ದೇಶಗಳ ಜಾಗತಿಕ ಪ್ರತಿನಿಧಿಗಳು ಭಾಗವಹಿಸಿದ್ದರು. ಗೋಧಿ ಮತ್ತು ಅಕ್ಕಿಯಂತಹ ಧಾನ್ಯಗಳಿಂದ ಕಳೆದುಹೋಗಿರುವ ರಾಗಿಗಳ ಮೇಲಿನ ಆಸಕ್ತಿಯನ್ನು ಮತ್ತೆ ಸ್ಥಾಪಿಸುವ ಉದ್ದೇಶದೊಂದಿಗೆ ಅಂದು ಅಂತರರಾಷ್ಟ್ರೀಯ ರಾಗಿ ವರ್ಷವನ್ನು ಆಚರಿಸಲು ಬುಡಕಟ್ಟು ರೈತನನ್ನು ಆಹ್ವಾನಿಸಲಾಗಿತ್ತು.
ಒಡಿಶಾದ ಕೊರಾಪುಟ್ ಜಿಲ್ಲೆಯ ಒಂದು ಸಣ್ಣ ಬುಡಕಟ್ಟು ಹಳ್ಳಿಯಿಂದ ಬಂದ ರೈಮತಿ, ಸೆಪ್ಟೆಂಬರ್ 9, 2023 ರಂದು ನವದೆಹಲಿಯಲ್ಲಿ G20 ಶೃಂಗಸಭೆಯಲ್ಲಿ ಸಾಂಪ್ರದಾಯಿಕ ಅಕ್ಕಿ ಹಾಗೂ ರಾಗಿ ಪ್ರಬೇಧಗಳನ್ನು ಉಳಿಸುವುದಕ್ಕೆ ತಾವು ಮಾಡಿದ ಕೆಲಸವನ್ನು ಈ ಸಭೆಯಲ್ಲಿ ವಿವರಿಸಿದ್ದರು. ಈ ಸಭೆಯಲ್ಲಿ ತಮ್ಮಗಾದ ಅನುಭವವನ್ನು ಹೇಳಿಕೊಳ್ಳುವ ಅವರು ನಮ್ಮ ಹಳ್ಳಿ ಮತ್ತು ರಾಗಿ ಸಂರಕ್ಷಣೆಯಲ್ಲಿ ನಮ್ಮ ಕೊಡುಗೆಗಳ ಬಗ್ಗೆ ಪ್ರಪಂಚದಾದ್ಯಂತದ ಜನರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಿತು. ಅವರು ನನ್ನನ್ನು 'ರಾಗಿ ರಾಣಿ' ಎಂದು ಕರೆದರು. ಅಲ್ಲಿ ಫೋಟೋ ತೆಗೆದುಕೊಳ್ಳಲು ಅನೇಕ ಜನರು ನನ್ನನ್ನು ಸುತ್ತುವರೆದಿದ್ದರು. ಇದು ನನಗೆ ಒಂದು ವಿಶಿಷ್ಟ ಅನುಭವವಾಗಿತ್ತು ಎಂದು ಅವರು ನೆನಪು ಮಾಡಿಕೊಳ್ಳುತ್ತಾರೆ.

ಆ ಸಭೆಯಲ್ಲಿ ಸಾಂಪ್ರದಾಯಿಕ ಸೀರೆ ಉಟ್ಟು, ಕೂದಲನ್ನು ಹೂವುಗಳಿಂದ ಅಲಂಕರಿಸಿಕೊಂಡು, ಅವರು G20 ಶೃಂಗಸಭೆಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವಾರು ಜನರ ಗಮನ ಸೆಳೆದಿದ್ದರು. ಅದು ತುಂಬಾ ಒಳ್ಳೆಯ ಕ್ಷಣವಾಗಿತ್ತು. ನಾನು ರಾಷ್ಟ್ರಪತಿಗಳನ್ನು ಭೇಟಿಯಾಗಬಹುದೆಂದು ನಾನು ಎಂದಿಗೂ ಕನಸು ಕಂಡಿರಲಿಲ್ಲ ಎಂದು ಅವರು ಹೇಳುತ್ತಾರೆ.
ಬರೀ ರಾಗಿ ಮಾತ್ರವಲ್ಲ, ಅವರು ಇಲ್ಲಿಯವರೆಗೆ 72 ಸಾಂಪ್ರದಾಯಿಕ ಭತ್ತದ ತಳಿಗಳು ಮತ್ತು ಕನಿಷ್ಠ 30 ಬಗೆಯ ರಾಗಿಗಳನ್ನು ಸಂರಕ್ಷಿಸಿದ್ದಾರೆ. ಕೃಷಿಕ ಕುಟುಂಬದಲ್ಲಿ ಹುಟ್ಟಿ ಬೆಳೆದ ರೈಮತಿ 7 ನೇ ತರಗತಿಯವರೆಗೆ ಓದಿದ್ದಾರೆ. ಈಗ, ಶಾಲೆಯಲ್ಲಿ ಕಲಿತ ಯಾವುದೇ ಪಾಠ ನನಗೆ ನೆನಪಿಲ್ಲ ಆದರೆ ಹೊಲದಲ್ಲಿ ಕಲಿತ ರಾಗಿಗಳನ್ನು ಹೇಗೆ ಸಂರಕ್ಷಿಸುವುದು ಮತ್ತು ಬೆಳೆಸುವುದು ಎಂಬ ವಿಚಾರ ನನಗೆ ತಿಳಿದಿದೆ ಎಂದು ಅವರು ನಗುತ್ತಾರೆ.
ಅಂದಹಾಗೆ ರೈಮತಿ ಅವರಿಗೆ ಸ್ಪೂರ್ತಿಯಾಗಿದ್ದು ಕಮಲಾ ಪೂಜಾರಿ ಎಂಬ 70 ವರ್ಷದ ಮಹಿಳೆ ನೂರಾರು ಬಗೆಯ ಭತ್ತದ ತಳಿಗಳನ್ನು ರಕ್ಷಿಸಲ್ಪಟ್ಟಿದ್ದಕ್ಕಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಮಹಿಳೆ ಕಮಲಾ ಪೂಜಾರಿ. ಬಾಲ್ಯದಲ್ಲಿ ನಾನು ಅವರೊಂದಿಗೆ ಹೋಗುತ್ತಿದೆ. ಅವರು ಹೊಲದಲ್ಲಿ ನನಗೆ ಪರಾಗಸ್ಪರ್ಶವನ್ನು ಪ್ರಾರಂಭಿಸುವುದು ಸೇರಿದಂತೆ ವಿವಿಧ ರೀತಿಯ ಸ್ಥಳೀಯ ಧಾನ್ಯಗಳ ಸಂರಕ್ಷಣೆಯಂತಹ ಸಾಂಪ್ರದಾಯಿಕ ಕೃಷಿ ತಂತ್ರಗಳನ್ನು ಅವರು ನನಗೆ ಕಲಿಸಿದ್ದರು ಎಂದು ರೈಮತಿ ಹೇಳುತ್ತಾರೆ.
16ನೇ ವಯಸ್ಸಿನಲ್ಲಿ ಮದುವೆಯಾದ ರೈಮತಿ ಅವರು ಅಲ್ಲೂ ತಾವು ಕಲಿತ ಕೆಲಸವನ್ನು ಮುಂದುವರಿಸಿದರು. ಇಂದು ಅವರು ನಾಲ್ಕು ಎಕರೆ ಕೃಷಿ ಭೂಮಿಯಲ್ಲಿ ರಾಗಿ ಬೆಳೆಯುತ್ತಿದ್ದಾರೆ. ವರ್ಷಗಳಲ್ಲಿ, ರಾಗಿ ಕೃಷಿಯ ಇಳುವರಿ ಮತ್ತು ಗುಣಮಟ್ಟವನ್ನು ಸುಧಾರಿಸಲು ಅವರು ಉತ್ತಮ ತಂತ್ರಜ್ಞಾನ ಮತ್ತು ವೈಜ್ಞಾನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ.
ಪದ್ಮಶ್ರೀ ಕಮಲಾ ಪೂಜಾರಿಯವರ ಸಹಾಯದಿಂದ ಚೆನ್ನೈ ಮೂಲದ ಲಾಭರಹಿತ ಸಂಸ್ಥೆಯಾದ ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ ಸಂಪರ್ಕಕ್ಕೆ ಬಂದ ರೈಮತಿಗೆ 2000ನೇ ಇಸವಿಯಿಂದ, ಈ ಸ್ವಾಮಿನಾಥ್ನ ಪ್ರತಿಷ್ಠಾನವೂ ಭತ್ತದ ತೀವ್ರತೆ ವ್ಯವಸ್ಥೆ (SRI), ಭತ್ತದ ಕೃಷಿಗಾಗಿ ಸಾಲು ಕಸಿ ವಿಧಾನ, ಬೀಜ ಗುಣಾಕಾರ ಸೂಚ್ಯಂಕ (SMI),ರಾಗಿಗಳಿಗೆ ಸಾಲು ಕಸಿ ವಿಧಾನ, ಸಾವಯವ ಕೃಷಿಯನ್ನು ಉತ್ತೇಜಿಸಲು ಜೈವಿಕ ಒಳಹರಿವುಗಳನ್ನು ತಯಾರಿಸುವುದು ಸೇರಿದಂತೆ ವೈಜ್ಞಾನಿಕ ಸಂರಕ್ಷಣಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಹಲವು ರೀತಿಯ ಸಹಾಯ ಮಾಡಿದೆ.
ಹಾಗೆಯೇ ಸ್ವಾಮಿನಾಥನ್ ಪ್ರತಿಷ್ಠಾನವೂ ನೀಡಿದ ತರಬೇತಿಯನ್ನು ಬಳಸಿಕೊಂಡ ರೈಮತಿ ಈ ಕೆಲಸವನ್ನು ಮುಂದಿನ ಪೀಳಿಗೆಯೂ ಮುಂದುವರಿಕೊಂಡು ಹೋಗುವಂತಾಗಲು ತನ್ನ ಬ್ಲಾಕ್‌ನಲ್ಲಿ 2,500 ಇತರ ರೈತರಿಗೆ ರಾಗಿ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳಲು ತರಬೇತಿ ನೀಡಿದ್ದಾರೆ. ಸ್ವಾಮಿನಾಥನ್ ಪ್ರತಿಷ್ಠಾನವೂ ಗ್ರಾಮೀಣ ಪ್ರದೇಶಗಳಲ್ಲಿ ಬಡ ಮಹಿಳೆಯರ ಉದ್ಯೋಗ ಹೆಚ್ಚಳವನ್ನು ನೇರವಾಗಿ ಗುರಿಯಾಗಿಸಿಕೊಂಡು ಆರ್ಥಿಕ ಬೆಳವಣಿಗೆಗೆ ತಂತ್ರಗಳನ್ನು ಅಭಿವೃದ್ಧಿಪಡಿಸುವ ಮತ್ತು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಒಟ್ಟಿನಲ್ಲಿ ರೈತರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕಾದರೆ ಇಂತಹ ಸವಲತ್ತುಗಳನ್ನು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಜೊತೆ ತಮ್ಮ ಮುಂದಿನ ಬಿತ್ತನೆಗೆ ಬೇಕಾದಂತಹ ಬೀಜಗಳನ್ನು ತಾವೇ ಸಂಗ್ರಹಿಸುವ ಉಳಿಸುವ ಪ್ರಯತ್ನ ಮಾಡಬೇಕು, ಹೀಗಾದಲ್ಲಿ ಬಿತ್ತನೆ ಕೇಂದ್ರಗಳ ಮುಂದೆ ಸಾಲು ನಿಲ್ಲುವುದು ತಪ್ಪುವ ಜೊತೆ ಸಮಯವೂ ಉಳಿತಾಯವಾಗುತ್ತದೆ.
