ಜುಲೈ 1 ರಿಂದ ಆಧಾರ್ ದೃಢೀಕೃತ ಬಳಕೆದಾರರು ಮಾತ್ರ ಐಆರ್‌ಸಿಟಿಸಿ ಅಪ್ಲಿಕೇಶನ್ ಮೂಲಕ ತತ್ಕಾಲ್ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ. ಜುಲೈ 15 ರಿಂದ ತತ್ಕಾಲ್ ಬುಕಿಂಗ್‌ಗಳಿಗೆ ಆಧಾರ್ ಆಧಾರಿತ OTP ದೃಢೀಕರಣ ಕಡ್ಡಾಯ.
ನವದೆಹಲಿ (ಜೂ.11): ಜುಲೈ 1 ರಿಂದ ಆಧಾರ್ ದೃಢೀಕೃತ ಬಳಕೆದಾರರು ಮಾತ್ರ ಐಆರ್‌ಸಿಟಿಸಿ ಅಪ್ಲಿಕೇಶನ್ ಮೂಲಕ ತತ್ಕಾಲ್ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ ಎಂದು ರೈಲ್ವೆ ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಜೂನ್ 10ರಂದು ಹೊರಡಿಸಿದ ಸುತ್ತೋಲೆಯಲ್ಲಿ, "ತತ್ಕಾಲ್ ಯೋಜನೆಯ ಪ್ರಯೋಜನಗಳನ್ನು ಸಾಮಾನ್ಯ ಬಳಕೆದಾರರು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು" ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯವು ಎಲ್ಲಾ ರೈಲ್ವೆ ವಲಯಗಳಿಗೆ ತಿಳಿಸಿದೆ.
01-07-2025 ರಿಂದ ಜಾರಿಗೆ ಬರುವಂತೆ, ತತ್ಕಾಲ್ ಯೋಜನೆಯಡಿಯಲ್ಲಿ ಟಿಕೆಟ್‌ಗಳನ್ನು IRCTC ವೆಬ್‌ಸೈಟ್ / ಅದರ ಅಪ್ಲಿಕೇಶನ್ ಮೂಲಕ ಆಧಾರ್ ದೃಢೀಕೃತ ಬಳಕೆದಾರರು ಮಾತ್ರವೇ ಬುಕ್ ಮಾಡಬಹುದು" ಎಂದು ಸಚಿವಾಲಯ ತಿಳಿಸಿದೆ. ಇನ್ನು ಜುಲೈ 15 ರಿಂದ ತತ್ಕಾಲ್ ಬುಕಿಂಗ್‌ಗಳಿಗೆ ಆಧಾರ್ ಆಧಾರಿತ OTP ದೃಢೀಕರಣವನ್ನು ಕಡ್ಡಾಯ ಮಾಡಲಾಗುತ್ತದೆ.
"ಸಿಸ್ಟಮ್-ರಚಿತ OTP ಯ ದೃಢೀಕರಣದ ನಂತರವೇ ಭಾರತೀಯ ರೈಲ್ವೆಗಳು/ಅಧಿಕೃತ ಏಜೆಂಟ್‌ಗಳ ಗಣಕೀಕೃತ PRS (ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್) ಕೌಂಟರ್‌ಗಳ ಮೂಲಕ ಬುಕಿಂಗ್ ಮಾಡಲು ತತ್ಕಾಲ್ ಟಿಕೆಟ್‌ಗಳು ಲಭ್ಯವಿರುತ್ತವೆ, ಇದನ್ನು ಯೂಸರ್‌ಗಳು ಬುಕಿಂಗ್ ಸಮಯದಲ್ಲಿ ಒದಗಿಸಿದ ಮೊಬೈಲ್ ಸಂಖ್ಯೆಯ ಮೂಲಕ ಕಳುಹಿಸಲಾಗುತ್ತದೆ. ಇದನ್ನು 15/07/2025 ರಿಂದ ಜಾರಿಗೆ ತರಲಾಗುವುದು" ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಭಾರತೀಯ ರೈಲ್ವೆಯ ಅಧಿಕೃತ ಟಿಕೆಟ್ ಏಜೆಂಟ್‌ಗಳು ತತ್ಕಾಲ್ ಬುಕಿಂಗ್ ವಿಂಡೋದ ಮೊದಲ 30 ನಿಮಿಷಗಳ ಅವಧಿಯಲ್ಲಿ ಆರಂಭಿಕ ದಿನದ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಅನುಮತಿಸಲಾಗುವುದಿಲ್ಲ ಎಂದು ಸುತ್ತೋಲೆಯಲ್ಲಿ ನಿರ್ದಿಷ್ಟಪಡಿಸಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಬೆಳಿಗ್ಗೆ 10.00 ರಿಂದ ಬೆಳಿಗ್ಗೆ 10.30 ರವರೆಗೆ ಎಸಿ ಕ್ಲಾಸ್‌ಗಳಿಗೆ ಮತ್ತು ಬೆಳಿಗ್ಗೆ 11.00 ರಿಂದ ಬೆಳಿಗ್ಗೆ 11.30 ರವರೆಗೆ ಸ್ಲೀಪರ್ ಕ್ಲಾಸ್ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡುವುದನ್ನು ನಿರ್ಬಂಧಿಸಲಾಗುತ್ತದೆ.
ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ (CRIS) ಮತ್ತು IRCTC ಗೆ ವ್ಯವಸ್ಥೆಯಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಲು ಮತ್ತು ಈ ಬದಲಾವಣೆಗಳನ್ನು ಎಲ್ಲಾ ವಲಯ ರೈಲ್ವೆಗಳಿಗೆ ತಿಳಿಸಲು ಸಚಿವಾಲಯ ನಿರ್ದೇಶನ ನೀಡಿದೆ. ಇದಲ್ಲದೆ, ಸಾರ್ವಜನಿಕರಿಗೆ ತಿಳಿಸಲು ಲಭ್ಯವಿರುವ ಎಲ್ಲಾ ವಿಧಾನಗಳ ಮೂಲಕ ಈ ಮಾರ್ಪಾಡುಗಳಿಗೆ ವ್ಯಾಪಕ ಪ್ರಚಾರ ನೀಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
