ರೈಲಿನಲ್ಲಿ ಮತ್ತು ರೈಲ್ವೆ ಆವರಣದಲ್ಲಿ ಮೊಬೈಲ್ ಸ್ಪೀಕರ್ ಆನ್ ಮಾಡಿ ಜೋರಾಗಿ ಹಾಡು ಅಥವಾ ವಿಡಿಯೋ ಕೇಳುವುದನ್ನು ಭಾರತೀಯ ರೈಲ್ವೆ ನಿಷೇಧಿಸಿದೆ. ನಿಯಮ ಉಲ್ಲಂಘಿಸಿದರೆ 1000 ರೂ. ದಂಡ ಅಥವಾ ಟಿಕೆಟ್ ವಶಪಡಿಸಿಕೊಳ್ಳಬಹುದು. ಪದೇ ಪದೇ ಈ ತಪ್ಪು ಮಾಡಿದರೆ 6 ತಿಂಗಳ ಜೈಲು ಶಿಕ್ಷೆ ಅಥವಾ 5000 ರೂ. ದಂಡ ವಿಧಿಸಲು ಅವಕಾಶವಿದೆ.
ದೆಹಲಿ: ಮೊಬೈಲ್ ಬಿಟ್ಟು ಬದುಕೇಇಲ್ಲ ಎನ್ನುವವರು ಹಲವರು. ಆದರೆ ಕೆಲವರಿಗೆ ಕಾಮನ್ಸೆನ್ಸ್ ಎನ್ನುವುದೂ ಇರದೇ, ಬೇರೆಯವರಿಗೆ ಡಿಸ್ಟರ್ಬ್ ಆಗುತ್ತದೆ ಎನ್ನುವ ಪರಿಜ್ಞಾನವೂ ಇರದೇ, ಮೊಬೈಲ್ನಲ್ಲಿ ಜೋರಾಗಿ ಸಂಗೀತ ಹಾಕುವುದು ಮಾಡುತ್ತಾರೆ. ಆ ಸಂಗೀತ ಅವರಿಗೆ ಸುಮಧುರ ಎನ್ನಿಸಿದರೂ ಮತ್ತೆ ಕೆಲವರಿಗೆ ಅದು ಕರ್ಕಶ ಎನ್ನಿಸಬಹುದು. ಇಯರ್ ಫೋನ್, ಇಯರ್ ಬಡ್ಸ್ ಏನೇ ಇದ್ದರೂ, ತಮ್ಮನ್ನು ಬೇರೆಯವರು ನೋಡಲಿ ಎನ್ನುವ ಖಯಾಲಿ ಕೆಲವರಿಗೆ ಆದರೆ, ಮತ್ತೆ ಕೆಲವರಿಗೆ ತಾವು ಎಲ್ಲಿ ಇದ್ದೇವೆ ಎನ್ನುವ ಜ್ಞಾನ ಇಲ್ಲದೇ ತಮ್ಮದೇ ಲೋಕದಲ್ಲಿ ತೇಲಾಡುತ್ತಿರುತ್ತಾರೆ. ತಮ್ಮಿಂದ ಬೇರೆಯವರಿಗೆ ಡಿಸ್ಟರ್ಬ್ ಆಗ್ತಿದೆಯೋ ನೋಡುವುದೇ ಇಲ್ಲ. ಇಂಥ ಸಮಸ್ಯೆ ಹೆಚ್ಚಾಗಿ ಬಸ್ಗಳಲ್ಲಿ, ರೈಲ್ವೆಗಳಲ್ಲಿ ಕಂಡು ಬರುವುದು ಇದೆ.
ಅದರಲ್ಲಿಯೂ ರೈಲ್ವೆಗೆ ಹೋಗುವವರಿಗೆ ಇದೊಂದು ನುಂಗಲಾಗದ ತುತ್ತಾಗಿ ಬಿಡುತ್ತದೆ. ರಾತ್ರಿಯ ವೇಳೆಯೂ ಜೋರಾಗಿ ಸಂಗೀತ ಹಾಕಿಕೊಂಡು ಬೇರೆಯವರಿಗೆ ಡಿಸ್ಟರ್ಬ್ ಮಾಡುವ ಒಂದಷ್ಟು ಜನರಿಗೆ ಪಾಠ ಕಲಿಸಲು ರೈಲ್ವೆ ಇಲಾಖೆ ಮುಂದಾಗಿದೆ. ರೈಲಿನ ಒಳಗೆ ಮಾತ್ರವಲ್ಲದೇ, ರೈಲ್ವೆ ಆವರಣಗಳಲ್ಲಿ ಮೊಬೈಲ್ ಫೋನ್ಗಳಲ್ಲಿ ಸ್ಪೀಕರ್ ಮೋಡ್ ಬಳಸಿ ಸಂಗೀತ, ವಿಡಿಯೋ ಅಥವಾ ಇತರ ಆಡಿಯೊಗಳನ್ನು ಪ್ಲೇ ಮಾಡದಂತೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯು ಎಚ್ಚರಿಕೆ ನೀಡಿದೆ.
ರೈಲ್ವೆ ಇಲಾಖೆ ಎಚ್ಚರಿಕೆ
ಈ ಕುರಿತು ಇಲಾಖೆ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ರೀತಿ ಮಾಡಿ ಇತರರಿಗೆ ತೊಂದರೆ ಉಂಟುಮಾಡುವ ಪ್ರಯಾಣಿಕರನ್ನು ರೈಲ್ವೆ ಆವರಣದಿಂದ ಹೊರಹಾಕಬಹುದು ಮತ್ತು ಅವರಿಗೆ ಒಂದು ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಬಹುದು ಎಂದು ತಿಳಿಸಲಾಗಿದೆ. ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು, ರೈಲ್ವೆ ಅಧಿಕಾರಿಗಳು ಅಂತಹ ಪ್ರಯಾಣಿಕರ ಟಿಕೆಟ್ ಅಥವಾ ಪಾಸ್ ಅನ್ನು ವಶಪಡಿಸಿಕೊಳ್ಳಬಹುದು. ಟಿಕೆಟ್ ಪರೀಕ್ಷಕರು ಮತ್ತು ರೈಲ್ವೆ ವಿಭಾಗದ ಹಿರಿಯ ಅಧಿಕಾರಿಗಳಿಗೆ ಈ ದಂಡವನ್ನು ವಿಧಿಸುವ ಅಧಿಕಾರ ನೀಡಲಾಗಿದೆ.
ಜೈಲೂಟ ಫಿಕ್ಸ್!
ಈ ಮಾರ್ಗಸೂಚಿಯ ಪ್ರಕಾರ, ಒಬ್ಬ ಪ್ರಯಾಣಿಕನು ಪದೇ ಪದೇ ಈ ನಿಯಮವನ್ನು ಉಲ್ಲಂಘಿಸಿದರೆ, ಆ ವ್ಯಕ್ತಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಐದು ಸಾವಿರ ರೂಪಾಯಿಗಳವರೆಗೆ ದಂಡ, ಅಥವಾ ಇವೆರಡನ್ನೂ ವಿಧಿಸಬಹುದಾಗಿದೆ ಎಂದು ಇಲಾಖೆ ತಿಳಿಸಿದೆ. ಈ ಕುರಿತು, ಸಾರ್ವಜನಿಕ ಘೋಷಣೆಗಳು ಮತ್ತು ನಿಲ್ದಾಣಗಳಲ್ಲಿನ ಸೂಚನಾ ಫಲಕಗಳ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸುವಂತೆ ತನ್ನ ವಿವಿಧ ವಿಭಾಗಗಳಿಗೆ ನಿರ್ದೇಶನ ನೀಡಿದೆ.


