ರಾಹುಲ್ ಗಾಂಧಿಯವರ ನಕಲಿ ಮತದಾರರ ಆರೋಪಕ್ಕೆ ಮಾಜಿ ಚುನಾವಣಾ ಆಯುಕ್ತ ಒಪಿ ರಾವತ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಹದೇವಪುರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಕಲಿ ಮತದಾರರಿದ್ದಾರೆ ಎಂಬ ಆರೋಪದ ತನಿಖೆಗೆ ಒತ್ತಾಯಿಸಿದ್ದಾರೆ. 

ಬೆಂಗಳೂರು (ಆ.9) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಕಲಿ ಮತದಾರರ ಆರೋಪಕ್ಕೆ ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ ಪಿ ರಾವತ್ ಬೆಂಬಲ ಸೂಚಿಸಿ ಚರ್ಚೆ ಮತ್ತಷ್ಟು ಬಿಸಿಗೊಳಿಸಿದ್ದಾರೆ. ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಕಲಿ ಮತದಾರರಿದ್ದಾರೆ ಎಂಬ ರಾಹುಲ್ ಗಾಂಧಿಯವರ ಆರೋಪವನ್ನು ಚುನಾವಣಾ ಆಯೋಗ ತನಿಖೆ ಮಾಡಬೇಕು ಎಂದು ರಾವತ್ ಒತ್ತಾಯಿಸಿದ್ದಾರೆ.

ದಿ ಟೆಲಿಗ್ರಾಫ್‌ಗೆ ಹೇಳಿಕೆ ನೀಡಿರುವ ರಾವತ್, 'ನಾನು ಆಯುಕ್ತನಾಗಿದ್ದಾಗ, ಯಾವುದೇ ಪಕ್ಷದ ಹಿರಿಯ ಕಾರ್ಯಕರ್ತ ಆರೋಪ ಮಾಡಿದರೆ, ನಾವು ಸ್ವಯಂಚಾಲಿತವಾಗಿ ತನಿಖೆ ನಡೆಸುತ್ತಿದ್ದೆವು. ಜನರಲ್ಲಿ ವ್ಯವಸ್ಥೆಯ ಮೇಲಿನ ನಂಬಿಕೆ ಉಳಿಯುವಂತೆ ಸತ್ಯವನ್ನು ಮಂಡಿಸುತ್ತಿದ್ದೆವು. ದೂರು ನೀಡಲು ಮೊದಲು ಕೇಳುತ್ತಿರಲಿಲ್ಲ' ಎಂದು ಹೇಳಿದರು.

ರಾಹುಲ್ ಗಾಂಧಿಯ ಆರೋಪ ಏನು?

ಗುರುವಾರ (ಆಗಸ್ಟ್ 7, 2025) ರಾಹುಲ್ ಗಾಂಧಿ, ಬೆಂಗಳೂರು ಕೇಂದ್ರ ಸಂಸದೀಯ ಕ್ಷೇತ್ರದ ಮಹದೇವಪುರದಲ್ಲಿ ಒಂದು ಲಕ್ಷಕ್ಕೂ ಅಧಿಕ ನಕಲಿ ಮತದಾರರಿದ್ದಾರೆ ಎಂದು ಆರೋಪಿಸಿದ್ದಾರೆ. ಕನಿಷ್ಠ ಒಬ್ಬ ಮತದಾರ ಎರಡು ಮತಗಟ್ಟೆಗಳಲ್ಲಿ ನೋಂದಾಯಿಸಿ, ಎರಡೂ ಕಡೆ ಮತ ಚಲಾಯಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಮತದಾರರ ಪಟ್ಟಿಯ ಸ್ಲೈಡ್‌ಗಳನ್ನು ತೋರಿಸಿ ಒಬ್ಬರೇ ಮತದಾರನನ್ನು ಹಲವು ಬಾರಿ ನೋಂದಾಯಿಸಲಾಗಿದೆ, ವಿಳಾಸಗಳು ತಪ್ಪಾಗಿವೆ, ಒಂದು ಕೋಣೆಯ ಮನೆಯಲ್ಲಿ 80 ಜನ ನೋಂದಾಯಿಸಿಕೊಂಡಿದ್ದಾರೆ, ಮತ್ತು ಮಹದೇವಪುರದ ಮತದಾರರು ಇತರ ರಾಜ್ಯಗಳಲ್ಲಿಯೂ ನೋಂದಣಿಯಾಗಿದ್ದಾರೆ ಎಂದು ವಿವರಿಸಿದ್ದರು.

ಕಾಂಗ್ರೆಸ್‌ನಿಂದ ಪ್ರತಿಭಟನೆ

ಈ ವಿಷಯಕ್ಕೆ ಸಂಬಂಧಿಸಿ ಕಾಂಗ್ರೆಸ್ ಶುಕ್ರವಾರ (ಆಗಸ್ಟ್ 8, 2025) ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು. ಆದರೆ, ಮತದಾರರ ಪಟ್ಟಿಯ ಡೌನ್‌ಲೋಡ್ ಲಿಂಕ್‌ಗೆ ಕೆಲವರು ಪ್ರವೇಶಿಸಲಾಗದೇ ಇದ್ದಾಗ, ಚುನಾವಣಾ ಆಯೋಗವು ಪಟ್ಟಿಯನ್ನು ತಿರುಚುತ್ತಿದೆ ಎಂಬ ಆರೋಪಗಳು ಕೇಳಿಬಂದವು. ಅದ್ಯಾಗೂ ಚುನಾವಣಾ ಆಯೋಗದ ಇದನ್ನು ತಳ್ಳಿಹಾಕಿವೆ.

ಚುನಾವಣಾ ಆಯೋಗವು ರಾಹುಲ್ ಗಾಂಧಿಯವರಿಗೆ ಸವಾಲು ಹಾಕಿ, ಪ್ರತಿ ನಕಲಿ ಮತದಾರನ ಬಗ್ಗೆ ದೂರು ದಾಖಲಿಸಿ ಅಥವಾ ಕ್ಷಮೆಯಾಚಿಸಿ ಎಂದು X ಪೋಸ್ಟ್‌ನಲ್ಲಿ ತಿಳಿಸಿದೆ. ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಯೂ ಕಾಂಗ್ರೆಸ್‌ಗೆ ದಾಖಲೆಗಳೊಂದಿಗೆ ಜ್ಞಾಪಕ ಪತ್ರ ಸಲ್ಲಿಸುವಂತೆ ಕೋರಿದ್ದಾರೆ. ಆದರೆ ನಿನ್ನೆ ಪ್ರತಿಭಟನೆ ಬಳ ರಾಹುಲ್ ಗಾಂಧಿ ಚುನಾವಣಾ ಆಯುಕ್ತರ ಭೇಟಿ ರದ್ದಾಗಿದೆ. ಇದು ಭದ್ರತಾ ಕಾರಣಗಳಿಗಾಗಿ ಎಂದು ಕಾಂಗ್ರೆಸ್ ಪಕ್ಷ ಹೇಳಿಕೊಂಡಿದ್ದರೂ ಇನ್ನೊಂದು ಮೂಲಗಳ ಪ್ರಕಾರ, ಘೋಷಣಾ ಪತ್ರಕ್ಕೆ ಸಹಿ ಹಾಕಬೇಕಾದ ಇಕ್ಕಟ್ಟಿನಿಂದ ತಪ್ಪಿಸಲು ಬೇಟಿ ರದ್ದುಗೊಂಡಿದೆ ಎನ್ನಲಾಗಿದೆ.

ರಾಹುಲ್ ಗಾಂಧಿಯ ಆರೋಪಗಳು ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಯ ಬಗ್ಗೆ ಚರ್ಚೆಗೆ ಕಾರಣವಾಗಿವೆ. ಮಾಜಿ ಆಯುಕ್ತರ ಬೆಂಬಲದೊಂದಿಗೆ, ಈ ವಿವಾದವು ಚುನಾವಣಾ ಆಯೋಗದ ಮೇಲೆ ತನಿಖೆಗೆ ಒತ್ತಡ ಹೇರಿದೆ.