ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವನ್ನು ಭೇಟಿಯಾಗಲು ನಿರ್ಧರಿಸಿದ್ದ ರಾಹುಲ್ ಗಾಂಧಿ, ಇಂದು ತೆರಳದಿರಲು ನಿರ್ಧರಿಸಿದ್ದಾರೆ. ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಭೇಟಿ ರದ್ದಾಗಿದೆ ಎನ್ನಲಾಗಿದ್ದು, ಕಾನೂನು ಇಕ್ಕಟ್ಟಿನ ಭಯವೂ ಕಾರಣ ಎನ್ನಲಾಗಿದೆ.

ಬೆಂಗಳೂರು, (ಆಗಸ್ಟ್ 8): ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, 2024ರ ಚುನಾವಣೆಯ ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವನ್ನು ಭೇಟಿಯಾಗಲು ಇಂದು ತೆರಳದಿರಲು ನಿರ್ಧರಿಸಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರ್ ಭದ್ರತಾ ಕಾರಣಗಳಿಂದ ಆಯೋಗಕ್ಕೆ ತೆರಳದಂತೆ ಮನವಿ ಮಾಡಿದ್ದು, ಈ ಭೇಟಿಗೆ ಅನುಮತಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

ಭದ್ರತೆಯ ಜೊತೆಗೆ ಮತ್ತೊಂದು ಕಾರಣವೂ ಇರಬಹುದು ಎನ್ನಲಾಗಿದೆ. ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ತೆರಳಿದರೆ, ರಾಹುಲ್ ಗಾಂಧಿಯವರು ಪ್ರಮಾಣ ಪತ್ರ ಅಥವಾ ಘೋಷಣಾ ಪತ್ರಕ್ಕೆ ಸಹಿ ಹಾಕಬೇಕಾಗುತ್ತದೆ. ಆದರೆ, ಆರೋಪಗಳನ್ನು ಸಾಬೀತುಪಡಿಸದಿದ್ದರೆ, ಬಿಎನ್ಎಸ್ ಮತ್ತು ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಬಹುದು. ಈ ಕಾನೂನು ಇಕ್ಕಟ್ಟಿನ ಭಯದಿಂದ ರಾಹುಲ್ ಹಿಂದೇಟು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ, ದೂರು ಸಲ್ಲಿಸುವ ಜವಾಬ್ದಾರಿಯನ್ನು ರಾಜ್ಯ ನಾಯಕರಿಗೆ ವಹಿಸಿದ್ದಾರೆ.ಈ ಬೆಳವಣಿಗೆಯಿಂದ ರಾಹುಲ್ ಗಾಂಧಿ ಕಾನೂನಾತ್ಮಕ ಹಾಗೂ ರಾಜಕೀಯ ಒತ್ತಡದಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದ್ದು, ಈ ವಿಷಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಮತಗಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದ ರಾಹುಲ್ ಗಾಂಧಿಯವರಿಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಅವರು ಪತ್ರ ಬರೆದು, ಮತದಾರರ ಪಟ್ಟಿಯಲ್ಲಿ ಅಕ್ರಮಗಳೆಂಬ ಆರೋಪಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಿತ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಸೂಚಿಸಿದ್ದರು.

ಅನ್ಬು ಕುಮಾರ್ ಅವರು ತಮ್ಮ ಪತ್ರದಲ್ಲಿ, ಮತದಾರರ ಪಟ್ಟಿಯ ತಯಾರಿಕೆಯು ಕಾಲಕಾಲಕ್ಕೆ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದ್ದರು. 2024ರ ನವೆಂಬರ್‌ನಲ್ಲಿ ಕರಡು ಮತದಾರರ ಪಟ್ಟಿಯನ್ನು ಮತ್ತು 2025ರ ಜನವರಿಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಕಾಂಗ್ರೆಸ್ ನಾಯಕರಿಗೆ ಒದಗಿಸಲಾಗಿದೆ. ಆದರೆ, ಈ ಪಟ್ಟಿಗಳ ಬಗ್ಗೆ ಕಾಂಗ್ರೆಸ್‌ನಿಂದ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗಿಲ್ಲ. ಎರಡನೇ ಹಂತದಲ್ಲಿ ಚುನಾವಣಾಧಿಕಾರಿಗಳ ಮುಂದೆಯೂ ಯಾವುದೇ ಆಕ್ಷೇಪಣೆಗಳನ್ನು ಎತ್ತಿಲ್ಲ. ಚುನಾವಣೆಯ ನಡವಳಿಕೆಯ ಬಗ್ಗೆ ಆಕ್ಷೇಪಣೆಗಳಿದ್ದರೆ, ಅವುಗಳನ್ನು ಎಲೆಕ್ಷನ್ ಪಿಟಿಷನ್ ಮೂಲಕ ಹೈಕೋರ್ಟ್‌ನಲ್ಲಿ ಸಲ್ಲಿಸಬೇಕಿತ್ತು.

 ಆದರೆ, ರಾಹುಲ್ ಗಾಂಧಿಯವರು ಕಾನೂನಾತ್ಮಕ ಕ್ರಮಕ್ಕಿಂತ ಸುದ್ದಿಗೋಷ್ಠಿಯ ಮೂಲಕ ಆರೋಪ ಮಾಡಿರುವುದು ಸರಿಯಲ್ಲ ಎಂದಿದ್ದ ಚುನಾವಣಾ ಆಯೋಗ. ಅದರಂತೆ ಕಾಂಗ್ರೆಸ್ ನಿಯೋಗವು ಆಗಸ್ಟ್ 8ರಂದು ಚುನಾವಣಾಧಿಕಾರಿಗಳನ್ನು ಭೇಟಿಯಾಗಲು ಸಮಯ ಖಚಿತಪಡಿಸಿರುವುದಾಗಿ ವರದಿಗಳು ಬಂದಿದ್ದವು. ಇಂದು ಚುನಾವಣೆ ಆಯೋಗವನ್ನು ರಾಹುಲ್ ಗಾಂಧಿ ಭೇಟಿಯಾಗಬೇಕಿತ್ತು. ಆದರೆ ಭದ್ರತೆ ಕಾರಣ ಹೇಳಿ ಹೋಗದಿರಲು ನಿರ್ಧಿಸಲಾಗಿದೆ.