ನವದೆಹಲಿ(ಮೇ. 11)    ಕೋವಿಡ್ -19 ರ ಸಂದರ್ಭದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ನಡವಳಿಕೆ ಕ್ಷುಲ್ಲಕವಾಗಿದೆ ಎಂದು  ಹೇಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಈ ವಿಚಾರಕ್ಕೆ ಸಂಬಂಧಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ರಾಹುಲ್ ಸೇರಿದಂತೆ ಕೆಲ ನಾಯಕರ ನಡವಳಿಕೆ ಮತ್ತು ವರ್ತನೆ ಕ್ಷುಲ್ಲಕ ಎಂದೇ ದಾಖಲಾಗಿಬಿಡುತ್ತದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮೋದಿ ಸರ್ಕಾರವು ವ್ಯಾಕ್ಸಿನೇಷನ್ ಜವಾಬ್ದಾರಿ ಮರೆತಿದೆ ಎಂದು ಆರೋಪ ಮಾಡುತ್ತದೆ. ಆದರೆ ಕಾಂಗ್ರೆಸ್ ತಾನು ಆಡಳಿತದಲ್ಲಿ ಇರುವ ರಾಜ್ಯಗಳೊಡನೆ ಯಾವ ರೀತಿ ಸಂಬಂಧ ಇಟ್ಟುಕೊಂಡಿದೆ ಎಂಬುದನ್ನು ನೋಡಬೇಕಾಗುತ್ತದೆ ಎಂದು ನಡ್ಡಾ ಹೇಳಿದ್ದಾರೆ.

ಕಾಂಗ್ರೆಸ್ ಹೊಸ ಅಧ್ಯಕ್ಷರ ನೇಮಕ ಸಭೆ ನಡೆದಿತ್ತು. ಅಲ್ಲಿ ಅನೇಕರು ಮೋದಿ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದರು ಎಂಬ ವಿಚಾರದ ನಂತರ ನಡ್ಡಾ ಪತ್ರ ಬರೆದಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರ ನಡುವೆ ಪತ್ರ ವ್ಯವಹಾರ ನಡೆದಂತೆ ಆಗಿದೆ.

ಮೋದಿ ತಿವಿದ ಸೋನಿಯಾಗೆ ನಡ್ಡಾ ಕೊಟ್ಟ ದಾಖಲೆಗಳ ಉತ್ತರ

ಕಾಂಗ್ರೆಸ್ ನ ಮುಖ್ಯಮಂತ್ರಿಗಳು ಸೇರಿದಂತೆ ಹಲವು ನಾಯಕರು ಲಸಿಕೆಯ ಬಗ್ಗೆ ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇದು ಕೊರೋನಾ ವಾರಿಯರ್ಸ್ ಮತ್ತು ದೇಶದ ವಿಜ್ಞಾನಿಗಳಿಗೆ ಮಾಡುವ ಅಪಮಾನ ಎಂದು ನಡ್ಡಾ ಆಕ್ರೋಶ ಹೊರ ಹಾಕಿದ್ದಾರೆ.

ಕಾಂಗ್ರೆಸ್ ನ ಕೆಲ ನಾಯಕರು ನಡೆದುಕೊಳ್ಳುತ್ತಿರುವ ರೀತಿ, ಅವರು ನೀಡುತ್ತಿರುವ ಹೇಳಿಕೆ ಬೇಸರ ತಂದಿದೆ. ಆದರೆ ಇಲ್ಲಿ ಅಚ್ಚರಿ ಪಡುವಂತದು ಏನೂ ಇಲ್ಲ. ಅವರ ವರ್ತನೆಯನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ ಎಂದು ನಡ್ಡಾ ವ್ಯಂಗ್ಯವಾಗಿಯೇ ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಸುಳ್ಳು ಸುದ್ದಿ ಹಬ್ಬಿಸುತ್ತ ಭಯಪಡಿಸುವ ಕೆಲಸ ಮಾಡುವುದನ್ನು ಬಿಟ್ಟು ಜನರಿಗೆ ತಿಳುವಳಿಕೆ ಮತ್ತು  ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ನಡ್ಡಾ ಪತ್ರದಲ್ಲಿ ಕೋರಿಕೊಂಡಿದ್ದಾರೆ.