ಸಾಮಾನ್ಯ ಜನರಂತೆ ಏರ್‌ಪೋರ್ಟ್ ಸೆಕ್ಯುರಿಟಿ ಚೆಕ್‌ನಲ್ಲಿ ನಿಂತ ರಾಹುಲ್ ಗಾಂಧಿ!
ಭಾರತ್ ಜೋಡೋ ಯಾತ್ರೆಯ ಬಳಿಕ ರಾಹುಲ್ ಗಾಂಧಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸರ್ಕಾರವನ್ನು ದೂಷಿಸುವ ನಿಟ್ಟಿನಲ್ಲೂ ಎಚ್ಚರಿಕೆಯಿಂದಲೂ ಮಾತನಾಡಿದ್ದಾರೆ. ಈ ನಡುವೆ ಅವರು ಏರ್‌ಪೋರ್ಟ್‌ನಲ್ಲಿ ಸಾಮಾನ್ಯ ಜನರಂತೆ ಸೆಕ್ಯುರಿಟಿ ಚೆಕ್‌ಗೆ ನಿಂತ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು (ಜು.19): ಮೋದಿ ಸರ್‌ನೇಮ್ ಕೇಸ್‌ನಲ್ಲಿ ಕೋರ್ಟ್‌ನಿಂದ ಶಿಕ್ಷೆ ಹಾಗೂ ಭಾರತ್ ಜೋಡೋ ಯಾತ್ರೆಯ ಬಳಿಕ ರಾಹುಲ್ ಗಾಂಧಿ ಅವರ ಮನೋಭಾವದಲ್ಲಿ ಭಾರೀ ಬದಲಾವಣೆಗಳಾಗಿವೆ. ಪ್ರಧಾನಿಯನ್ನು ದೂಷಿಸುವ ನಿಟ್ಟಿನಲ್ಲೂ ಎಚ್ಚರಿಕೆ ಮಿಶ್ರಿತ ಮಾತುಗಳನ್ನು ಅವರು ಆಡುತ್ತಾರೆ. ಈ ನಡುವೆ ಅವರು ಏರ್‌ಪೋರ್ಟ್‌ನಲ್ಲಿ ಸೆಕ್ಯುರಿಟಿ ಚೆಕ್‌ಗೆ ಸಾಮಾನ್ಯ ಜನರ ರೀತಿ ನಿಂತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 'ರಾಹುಲ್ ಗಾಂಧಿ ಸಾಮಾನ್ಯರಂತೆ ವಿಮಾನ ನಿಲ್ದಾಣದ ಭದ್ರತಾ ತಪಾಸಣೆಯಲ್ಲಿ ಭಾಗಿಯಾದರು. ಅವರ ಸರಳತೆ ಮುಂದಿನ ಹಂತ ಇದು' ಎಂದು ಶಂತನು ಎನ್ನುವವರು 9 ಸೆಕೆಂಡ್‌ನ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಬಿಳಿ ಟೀ ಶರ್ಟ್‌ನೊಂದಿಗೆ ಸೀದಾ ಸಾದಾ ಚಪ್ಪಲಿ ಧರಿಸಿರುವ ರಾಹುಲ್ ಗಾಂಧಿ, ಭದ್ರತಾ ತಪಾಸಣೆಗಾಗಿ ಸಿಬ್ಬಂದಿಯ ಎದುರು ನಿಲ್ಲುತ್ತಾರೆ. ಕೆಲ ಸೆಕೆಂಡ್ ಸಿಬ್ಬಂದಿಯನ್ನು ರಾಹುಲ್ ಗಾಂಧಿ ನೋಡಿದರೆ, ಅವರ ಎದುರಿಗಿದ್ದ ವ್ಯಕ್ತಿ ರಾಹುಲ್ ಗಾಂಧಿಯ ತಪಾಸಣೆ ನಡೆಸುತ್ತಾರೆ. ಆ ಬಳಿಕ ಕಿಸೆಯಲ್ಲಿ ಕೈ ಹಾಕಿಕೊಂಡು ಮುಂದೆ ಹೋಗುವ ರಾಹುಲ್ ಗಾಂಧಿ, ತಮ್ಮ ಲಗೇಜ್‌ಗಾಗಿ ಕಾಯಲು ಮುಂದಾಗುತ್ತಾರೆ.
ಈ ವಿಡಿಯೋಗೆ ಈಗಾಗಲೇ 4.19 ಲಕ್ಷ ವೀವ್ಸ್‌ಗಳು ಬಂದಿದ್ದರೆ, 6 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಬಂದಿವೆ. ಹೆಚ್ಚಿನವರು ಇದರಲ್ಲೇನು ವಿಶೇಷ ಎಂದಿದ್ದರೆ, ಇನ್ನೂ ಕೆಲವರು ರಾಹುಲ್ ಗಾಂಧಿಯ ಸರಳತೆಯನ್ನು ಶ್ಲಾಘಿಸಿದ್ದಾರೆ.
'ಪ್ರಧಾನಿ ಮೋದಿ ಅವರ ಫೋಟೋ ಅಥವಾ ವಿಡಿಯೋ ಪೋಸ್ಟ್ ಆದಲ್ಲಿ, ಇದೇ ಜನ, ಪ್ರತಿ ಬಾರಿಯೂ ಇವರು ಕ್ಯಾಮೆರಾ ತೆಗೆದುಕೊಂಡೇ ಹೋಗ್ತಾರಾ? ಅಂತಾ ಪ್ರಶ್ನೆ ಮಾಡ್ತಾರೆ. ಆದರೆ, ಈ ವ್ಯಕ್ಯಿ . ಪ್ರಸ್ತುತ ಈಗ ಕನಿಷ್ಠ ಎಂಪಿ ಕೂಡ ಅಲ್ಲ. ಹಾಗಿದ್ದರೂ ಎಲ್ಲಾ ಕಡೆ ಕ್ಯಾಮೆರಾ ಅವರ ಮೇಲೆ ಫೋಕಸ್ ಆಗಿರುತ್ತದೆ. ಟೀಕೆ ಮಾಡುವವರು ಈಗ ಎಲ್ಲಿ ಹೋದರು ಅನ್ನೋದು ಗೊತ್ತಾಗ್ತಾ ಇಲ್ಲ' ಎಂದು ಬೆಂಗಳೂರು ಮೂಲಕದ ವೈದ್ಯ ಡಾ. ದೀಪಕ್ ಕೃಷ್ಣಮೂರ್ತಿ ಟ್ವೀಟ್ ಮಾಡಿದ್ದಾರೆ. 'ಸಾಮಾನ್ಯ ಜನರಂತೆ ಏನು, ಆತ ಈಗ ಸಾಮಾನ್ಯ ವ್ಯಕ್ತಿಯೇ. ಯಾವುದೇ ಸಂಸದ ಕೂಡ ಅಲ್ಲ, ಮಾಜಿ ಸಚಿವ ಕೂಡ ಅಲ್ಲ. ಸಾಮಾನ್ಯ ಜನರ ಲೈನ್‌ನಲ್ಲಿಯೇ ಅವರು ಹೋಗಬೇಕು' ಎಂದು ವಿಜಯ್ ಕುಮಾರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
'ಸಾಮಾನ್ಯ ಮನುಷ್ಯ ಯಾರೂ ಖಾಸಗಿ ಜೆಟ್‌ಅಲ್ಲಿ ಬರೋದಿಲ್ಲ. ಶ್ರೀಮಂತ ವ್ಯಕ್ತಿ ಮಾತ್ರವೇ ಬರ್ತಾರೆ. ರಾಹುಲ್ ಗಾಂಧಿ ಈಗ ಕನಿಷ್ಠ ಎಂಪಿ ಕೂಡ ಅಲ್ಲ. ಹಾಗಾಗಿ ಅವರು ಏರ್‌ಪೋರ್ಟ್‌ನಲ್ಲಿ ಸೆಕ್ಯುರಿಟಿ ಚೆಕ್‌ನಲ್ಲಿ ಭಾಗಿಯಾಗಲೇಬೇಕು. ರತನ್ ಟಾಟಾ ಹಾಗೂ ಎಲಾನ್ ಮಸ್ಕ್ ಕೂಡ ಸೆಕ್ಯುರಿಟಿ ಚೆಕ್‌ಗೆ ಒಳಗಾಗಬೇಕು. ಯಾಕೆ ಕಾಂಗ್ರೆಸಿಗರು ಈತನನ್ನು ರಾಜನಂತೆ ನೋಡ್ತಾರೆ ಹಾಗೂ ಭಾರತವನ್ನು ಅವರಪ್ಪನ ಆಸ್ತಿ ಎನ್ನುವಂತೆ ನೋಡ್ತಾರೆ ಅನ್ನೋದು ಗೊತ್ತಾಗೋದಿಲ್ಲ' ಎಂದು ಸ್ವಾತಿ ಬೆಲ್ಲಮ್ ಟ್ವೀಟ್ ಮಾಡಿದ್ದಾರೆ.
ಶಾಲಾ ಬಾಲಕಿಯರ ಕುಡಿಯುವ ನೀರಿನ ಬಾಟಲ್‌ನಲ್ಲಿ ಮೂತ್ರ ಮಿಕ್ಸ್, ಮಧ್ಯಪ್ರದೇಶದಲ್ಲಿ ಮತ್ತೊಂದು ಘಟನೆ!
'ರಾಹುಲ್ ಗಾಂಧಿ ಬೆಂಗಳೂರಿಗೆ ಖಾಸಗಿ ಜೆಟ್‌ನಲ್ಲಿ ಬಂದಿದ್ದರು ಅನ್ನೋದನ್ನು ನೀವು ತಿಳಿಸಬೇಕು' ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ. 'ಸಾಮಾನ್ಯ ಮನುಷ್ಯನಂತೆ ವರ್ತಿಸಲು ಈ ಲಜೆಂಡ್ ತ್ಯಾಗ ಮತ್ತು ಹೋರಾಟವನ್ನು ಅನುಭವಿಸಿದ್ದಾರೆ' ಎಂದು ಇನ್ನೊಬ್ಬ ವ್ಯಕ್ತಿ ಬರೆದಿದ್ದಾರೆ.
PUBG ಲವರ್ ಸೀಮಾ ಹೈದರ್ ಸೋದರ, ಅಂಕಲ್ ಪಾಕ್ ಸೇನೆಯಲ್ಲಿ ಕೆಲಸ: ಪಾಕ್ ಮಹಿಳೆ ಬಗ್ಗೆ ಮತ್ತಷ್ಟು ಅನುಮಾನ
'ಎಂಪಿ ಸ್ಥಾನದಿಂದ ಅನರ್ಹರಾಗಿದ್ದಕ್ಕೆ ಇದಾಗಿದೆ. ಇದೇನು ಅವರ ಸರಳತೆಯಲ್ಲ. ಸಂಸದನಾಗಿದ್ದಾಗಲೂ ಈ ರೀತಿ ಮಾಡಿದ್ದರೆ ಅದನ್ನು ಸರಳತೆ ಎನ್ನಬಹುದಿತ್ತು' ಎಂದು ಖುಷಿ ಎನ್ನುವವರು ಟ್ವೀಟ್ ಮಾಡಿದ್ದಾರೆ. 'ರಾಹುಲ್ ಗಾಂಧಿ ಪ್ರಧಾನಿಯಲ್ಲ. ವಿಪಕ್ಷದ ನಾಯಕನಲ್ಲ. ಸಚಿವನೂ ಅಲ್ಲ. ಕನಿಷ್ಠ ಸಂಸದರೂ ಅಲ್ಲ. ಯಾವ ಕಾರಣಕ್ಕಾಗಿ ಅವರನ್ನು ಭಿನ್ನವಾಗಿ ನೋಡಬೇಕು ಅನ್ನೋದನ್ನು ನೀವು ಹೇಳಿ' ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.