ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಕೊರೋನಾ ಸೋಂಕು ಏರಿಕೆ| ಪ್ರಕರಣಗಳ ಸಂಖ್ಯೆ ಕಂಡು ತಮ್ಮೆಲ್ಲಾ ಚುನಾವಣಾ ಪ್ರಚಾರ ಸಮಾವೇಶ ರದ್ದುಗೊಳಿಸಿದ ಕಾಂಗ್ರೆಸ್‌ ನಾಯಕ| ಇತರ ಪಕ್ಷಗಳಿಗೂ ಹೀಗೇ ಮಾಡುವಂತೆ ಮನವಿ

ಕೋಲ್ಕತ್ತಾ(ಏ.18): ದೇಶಾದ್ಯಂತ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪಶ್ಚಿಮ ಬಂಗಾಳದಲ್ಲಿ ನಿಗಧಿಯಾಗಿದ್ದ ತಮ್ಮೆಲ್ಲಾ ಚುನಾವಣಾ ರ‍್ಯಾಲಿ ರದ್ದುಗೊಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಕೊರೋನಾ ಸೋಂಕು ಬಹಳ ವೇಗವಾಗಿ ಹಬ್ಬುತ್ತಿದೆ. ಹೀಗಾಗಿ ತಾನು ಈ ರ‍್ಯಾಲಿಗಳನ್ನು ರದ್ದುಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ. ಇಷ್ಟೇ ಅಲ್ಲದೇ ಇತರ ಪಕ್ಷಗಳಿಗೂ ರಾಹುಲ್ ಈ ಮನವಿಯನ್ನು ಮಾಡಿದ್ದಾರೆ.

ವೇಗವಾಗಿ ಹರಡುತ್ತಿದೆ ಕೊರೋನಾ

ದೇಶದಲ್ಲಿ ಆರಂಭವಾಗಿರುವ ಕೊರೋನಾ ಎರಡನೇ ಅಲೆ ನಿಯಂತ್ರಣ ತಪ್ಪಿದೆ. ವೇಗವಾಗಿ ಹಬ್ಬುತ್ತಿರುವ ಕೊರೋನಾ ಜನರನ್ನು ತನ್ನ ಬಲಿಪಶುವಾಗಿಸುತ್ತಿದೆ. ಕಳೆದ ಇಪ್ಪತ್ನಾಲ್ಕು ಗಂಟೆತಲ್ಲಿ ಎರಡು ಲಕ್ಷದ 60 ಸಾವಿರದ 533 ಕೊರೋನಾ ಪ್ರಕರಣಗಳು ವರದಿಯಾಗಿವೆ. ಇನ್ನು ಶನಿವಾರ 1492 ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನು ಈ ಸೋಂಕು ಹಬ್ಬುತ್ತಿರುವ ವೇಗ ಭಾರತದಲ್ಲಿ ಅತೀ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಭಾರತ ಉಳಿದೆಲ್ಲಾ ದೇಶಗಳನ್ನು ಹಿಂದಿಕ್ಕಲಿದೆ ಎಂಬುವುದು ತಜ್ಞರ ಮಾತಾಗಿದೆ.

Scroll to load tweet…

ಪಶ್ಚಿಮ ಬಂಗಾಳದಲ್ಲಿ ಈವರೆಗೂ ಹತ್ತು ಸಾವಿರಕ್ಕಿಂತ ಹೆಚ್ಚು ಸಾವು

ಪಶ್ಚಿಮ ಬಂಗಾಳದಲ್ಲಿ ಈವರೆಗೂ ಒಟ್ಟು 651508 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಇಲ್ಲಿ 7713 ಪ್ರಕರಣಗಳು ದಾಖಲಾಗಿದ್ದು, 34 ಮಂದಿ ಮೃತಪಟ್ಟಿದ್ದಾರೆ.