2009ರಲ್ಲಿ ಜಾತಿ ಕೇಳಲ್ಲ, 2023ರಲ್ಲಿ ಎಲ್ಲರ ಜಾತಿ ಗೊತ್ತಾಗಬೇಕು;ರಾಹುಲ್ ಯೂಟರ್ನ್ ವಿಡಿಯೋ ವೈರಲ್!
2009ರ ಯುಪಿಎ ಸರ್ಕಾರ ಇದ್ದಾಗ ರಾಹುಲ್ ಗಾಂಧಿ ನಾನು ಯಾರ ಜಾತಿಯೂ ಕೇಳುವುದಿಲ್ಲ ಎಂದು ಹೇಳಿದ್ದರು. ಇದೀಗ ಬಿಜೆಪಿ ಸರ್ಕಾರದಲ್ಲಿ ಎಲ್ಲರ ಜಾತಿ ಗೊತ್ತಾಗಲೇಬೇಕು ಎನ್ನುತ್ತಿದ್ದಾರೆ. ರಾಹುಲ್ ಗಾಂಧಿ ದ್ವಂಧ್ವ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.

ನವದೆಹಲಿ(ಅ.08) ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಇದೀಗ ಜಾತಿ ಗಣತಿ ವಿಚಾರವನ್ನು ರಾಷ್ಟ್ರಮಟ್ಟದಲ್ಲಿ ಹೋರಾಟದ ಭಾಗವಾಗಿ ಪರಿವರ್ತಿಸಿದೆ. ಒಬಿಸಿ ಜಾತಿಯವರು ಎಷ್ಟಿದ್ದಾರೆ. ಒಬಿಸಿ ಮುಖ್ಯಮಂತ್ರಿ, ಒಬಿಸಿ ಅಧಿಕಾರಿಗಳು, ಒಬಿಸಿ ಪತ್ರಕರ್ತರು ಎಷ್ಟಿದ್ದಾರೆ? ಇದೇ ಕಾರಣಕ್ಕೆ ಜಾತಿ ಗಣತಿ ಅವಶ್ಯಕ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಬಿಜೆಪಿ ಜಾತಿ ಗಣತಿಯನ್ನು ವಿರೋಧಿಸುತ್ತಿದೆ. ಬಿಜೆಪಿಗೆ ಹಿಂದುಳಿದ ವರ್ಗ, ಕೆಳವರ್ಗಕ್ಕೆ ಅನ್ಯಾಯ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸುತ್ತಿದ್ದಾರೆ. ರಾಹುಲ್ ಗಾಂಧಿ ಆರೋಪ ತೀವ್ರಗೊಳ್ಳುತ್ತಿದ್ದಂತೆ ಇದೀಗ ವಿಡಿಯೋ ಒಂದು ವೈರಲ್ ಆಗಿದೆ. 2009ರಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ ಹಾಗೂ 2023ರಲ್ಲಿ ರಾಹುಲ್ ಗಾಂಧಿ ಹೇಳುತ್ತಿರುವುದಕ್ಕೆ ಹೋಲಿಕೆ ಇಲ್ಲದಾಗಿದೆ. 2009ರಲ್ಲಿ ರಾಹುಲ್ ಗಾಂಧಿ, ನಾನು ಯಾರಲ್ಲೂ ಜಾತಿ ಕೇಳುವುದಿಲ್ಲ ಎಂದಿದ್ದಾರೆ. ಇದೀಗ ನನಗೆ ಜಾತಿ ಗೊತ್ತಾಗಬೇಕು ಎಂದಿರುವ ವಿಡಿಯೋದಿಂದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಯೂರ್ನ್ ಬಯಲಾಗಿದೆ.
ಬಿಹಾರ ಸರ್ಕಾರ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್ ಇದೀಗ ಜಾತಿ ಗಣತಿ ಹೋರಾಟ ಆರಂಭಿಸಿದೆ. ಕಾಂಗ್ರೆಸ್ ಸರ್ಕಾರದ ರಾಜ್ಯಗಳು ಜಾತಿ ಗಣತಿ ನಡೆಸಿ ವರದಿ ಬಿಡುಗಡೆ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ನೂತನ ಸಂಸತ್ ಭವನದಲ್ಲಿ ರಾಹುಲ್ ಗಾಂಧಿ ಜಾತಿ ಗಣತಿ ಹಾಗೂ ಸರ್ಕಾರ ನಡೆಸುತ್ತಿರುವ ಸೆಕ್ರಟರಿಗಳಲ್ಲಿ ಎಷ್ಟು ಮಂದಿ ಒಬಿಸಿ ಇದ್ದಾರೆ? ಅನ್ನೋ ಪ್ರಶ್ನೆ ಎತ್ತಿದ ರಾಹುಲ್ ಗಾಂಧಿ ಬಳಿಕ ಹಂತ ಹಂತವಾಗಿ ಕೇಂದ್ರದ ವಿರುದ್ಧ ಜಾತಿ ಅಸ್ತ್ರ ಪ್ರಯೋಗಿಸಿದ್ದಾರೆ. ಇದೀಗ ರಾಜಸ್ಥಾನ ಸರ್ಕಾರದ ಜಾತಿ ಗಣತಿ ವರದಿ ಬಿಡುಗಡೆ ಸೂಚನೆ ನೀಡಿದ್ದಾರೆ. ಇತ್ತ ಕರ್ನಾಟಕ ಸರ್ಕಾರಕ್ಕೂ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಜಾತಿ ಅಸ್ತ್ರ ಝಳಪಿಸುತ್ತಿರುವ ರಾಹುಲ್ ಗಾಂಧಿ ದ್ವಂಧ್ವ ಹೇಳಿಕೆ ವೈರಲ್ ಆಗಿದೆ.
2009ರಲ್ಲಿ ಯುಪಿ ಸರ್ಕಾರ ಆಡಳಿತದಲ್ಲಿತ್ತು. ಈ ವೇಳೆ ರಾಹುಲ್ ಗಾಂಧಿ ನೀಡಿದ ಹೇಳಿಕೆ ಇದೀಗ ನೀಡುತ್ತಿರುವ ಹೇಳಿಕೆಗೂ ಹೋಲಿಕೆ ಇಲ್ಲ. 2009ರಲ್ಲಿ ರಾಹುಲ್ ಗಾಂಧಿ, ನಾನು ವಿಶ್ವವಿದ್ಯಾಲಯಕ್ಕೆ ತೆರಳಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುತ್ತೇನೆ, ಇದೇ ರೀತಿ ಚಾಯ್‌ವಾಲ ಬಳಿ ಹೋಗಿ ಮಾತನಾಡುತ್ತೇನೆ. ಆದರೆ ನಾನು ಅವರ ಬಳಿ ನಿಮ್ಮ ಜಾತಿ ಯಾವುದು ಎಂದು ಕೇಳುವುದಿಲ್ಲ. ನೀನು ದಲಿತನೋ ಎಂದು ಚಾಯ್‌ವಾಲನನ್ನು ಕೇಳುವುದಿಲ್ಲ. ನನ್ನ ಪಾಲಿಗೆ ಅವರು ವ್ಯಕ್ತಿ ಅಷ್ಟೇ. ಜಾತಿ ಮುಖ್ಯವಲ್ಲ ಎಂದಿದ್ದರು. ಇದೀಗ ರಾಹುಲ್ ಗಾಂಧಿ, ದೇಶದ ಮುಂದಿರುವ ಅತೀ ದೊಡ್ಡ ವಿಚಾರ ಎಂದರೆ ಜಾತಿ ಗಣತಿ. ಒಬಿಸಿ ಎಷ್ಟಿದ್ದಾರೆ. ಅವರಿಗೆ ಪಾಲುದಾರಿಕೆ ಎಷ್ಟಿರಬೇಕು? ಇದು ಹಿಂದುಸ್ತಾನದ ಮುಂದಿರುವ ಸವಾಲು. ಕಾಂಗ್ರೆಸ್ ಸರ್ಕಾರ ಬಂದರೆ ಮೊದಲ ಕೆಲಸ ಜಾತಿ ಗಣತಿ ವರದಿಯನ್ನು ತರಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ವಿರುದ್ಧ ಪ್ರಧಾನಿ ಮೋದಿ ಪ್ರಚೋದನಕಾರಿ ಹೇಳಿಕೆ: ಕಾಂಗ್ರೆಸ್ ಪ್ರತಿಭಟನೆ
ಈ ಎರಡು ಹೇಳಿಕೆಯ ವಿಡಿಯೋ ವೈರಲ್ ಆಗಿದೆ. ಜಾತಿ ಕೇಳಲ್ಲ, ಜಾತಿ ಅಪ್ರಸ್ತುತ ಎಂದಿದ್ದ ರಾಹುಲ್ ಗಾಂಧಿ ಇದೀಗ ಜಾತಿಯೇ ಮುಖ್ಯ ಎನ್ನುತ್ತಿದ್ದಾರೆ. ಮೋದಿ ಸರ್ಕಾರದ ವಿರುದ್ದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್‌ಗೆ ಹೋರಾಡಲು ಸಾಧ್ಯವಿಲ್ಲ ಅನ್ನೋದು ಅರಿವಾಗಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಕೀಳುಮಟ್ಟದ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ.