ಅಮೆರಿಕದಲ್ಲಿ ರಾಹುಲ್ ಗಾಂಧಿ ರಾಮನನ್ನು "ಪೌರಾಣಿಕ ವ್ಯಕ್ತಿ" ಎಂದು ಕರೆದಿದ್ದು ಬಿಜೆಪಿ ಟೀಕೆಗೆ ಗುರಿಯಾಗಿದೆ. ಬಿಜೆಪಿ, ರಾಹುಲ್ ಹಿಂದೆ ರಾಮಮಂದಿರ ವಿರೋಧಿಸಿದ್ದನ್ನು, ರಾಮನನ್ನು "ಕಾಲ್ಪನಿಕ" ಎಂದಿದ್ದನ್ನು ಸ್ಮರಿಸಿದೆ. ರಾಹುಲ್ "ಬಿಜೆಪಿ ಹಿಂದುತ್ವ"ವನ್ನು ಒಪ್ಪುವುದಿಲ್ಲ, ಹಿಂದೂ ಚಿಂತನೆ ಹೆಚ್ಚು ಸ್ವೀಕಾರಾರ್ಹ ಎಂದಿದ್ದಾರೆ. ಬಿಜೆಪಿ ಇದನ್ನು "ರಾಮನ ಅವಮಾನ" ಎಂದು ಖಂಡಿಸಿದೆ.

ನವದೆಹಲಿ (ಮೇ.4): ಅಮೆರಿಕ ಪ್ರವಾಸದ ವೇಳೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ರಾಮನ ಬಗ್ಗೆ ನೀಡಿದ ಹೇಳಿಕೆ ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ. ‘ಭಗವಾನ್‌ ರಾಮ ಪೌರಾಣಿಕ ವ್ಯಕ್ತಿ’ ಎಂದು ರಾಹುಲ್‌ ಕರೆದಿದ್ದನ್ನು ಪ್ರಶ್ನಿಸಿರುವ ಬಿಜೆಪಿ, ‘ಈ ಹಿಂದೆ ರಾಮನನ್ನು ಕಾಲ್ಪನಿಕ ವ್ಯಕ್ತಿ ಎಂದು ಕರೆದು ರಾಮಮಂದಿರ ವಿರೋಧಿಸಿದವರು ಇಂದು ಬೂಟಾಟಿಕೆ ಪ್ರದರ್ಶಿಸುತ್ತಿದ್ದಾರೆ’ ಎಂದಿದೆ.

ಅಮೆರಿಕದ ಬ್ರೌನ್‌ ವಿವಿ ಸಂವಾದದಲ್ಲಿ ರಾಹುಲ್‌ 2 ವಾರ ಹಿಂದೆ ಭಾಗಿಯಾಗಿದ್ದರು. ಇದರ ಯೂಟ್ಯೂಬ್ ವಿಡಿಯೋ ಈಗ ಬಿಡುಗಡೆ ಆಗಿದೆ. ಅದರಲ್ಲಿ ರಾಹುಲ್‌ ಗಾಂಧಿ ಅ‍ವರು, ಹಿಂದೂ ರಾಷ್ಟ್ರವಾದದ ಈ ಸಂದರ್ಭದಲ್ಲಿ ಎಲ್ಲ ಸಮುದಾಯಗಳನ್ನು ಗೌರವಿಸುವ ಜಾತ್ಯತೀತ ರಾಜಕಾರಣ ಹೇಗೆ ರೂಪಿಸಲು ಸಾಧ್ಯ ಎಂಬ ಪ್ರಶ್ನೆಗೆ ರಾಮನ ಉದಾಹರಣೆ ನೀಡಿ ಉತ್ತರಿಸಿದ್ದಾರೆ.

ಇದನ್ನೂ ಓದಿ: 1984ರ ಸಿಖ್ ವಿರೋಧಿ ದಂಗೆ ರಾಹುಲ್ ಗಾಂಧಿ ತಪ್ಪೊಪ್ಪಿಗೆ | ಗಲಭೆಯಲ್ಲಿ ಭಾಗಿಯಾದ ಸ್ಯಾಮ್‌ ಪಿತ್ರೋಡಾ ಉಚ್ಚಾಟಿಸಿ ನೋಡೋಣ: ಬಿಜೆಪಿ

‘ರಾಮನೂ ಸೇರಿ ನಮ್ಮ ಎಲ್ಲಾ ಪೌರಾಣಿಕ ವ್ಯಕ್ತಿಗಳು ಸಹಾನುಭೂತಿಯುಳ್ಳವರಾಗಿದ್ದರು. ರಾಮ ಕ್ಷಮಾಶೀಲ, ಕರುಣಾಮಯಿ ಆಗಿದ್ದ. ನಾನು ಬಿಜೆಪಿ ಹಿಂದುತ್ವವನ್ನು ಒಪ್ಪುವುದಿಲ್ಲ. ನನ್ನ ಪ್ರಕಾರ ಹಿಂದೂ ಚಿಂತನೆ ಹೆಚ್ಚು ಬಹುತ್ವವಾದಿ ಮತ್ತು ಹೆಚ್ಚು ಸ್ವೀಕಾರಾರ್ಹವಾಗಿದೆ. ಜತೆಗೆ ಹೆಚ್ಚು ಸ್ನೇಹಪರ, ಹೆಚ್ಚು ಸಹಿಷ್ಣು ಮತ್ತು ಮುಕ್ತವಾಗಿದೆ’ ಎಂದಿದ್ದಾರೆ.

ಬಿಜೆಪಿ ವಕ್ತಾರ ಶೆಹಜಾದ್‌ ಪೂನವಾಲಾ ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು ಹಿಂದೂಗಳು, ‘ರಾಮನ ಅವಮಾನಿಸುವುದು ಕಾಂಗ್ರೆಸ್ಸಿಗರ ಹುಟ್ಟುಗುಣ. ರಾಮನ ಅಸ್ವಿತ್ವವನ್ನೇ ತಿರಸ್ಕರಿಸಿದವರು, ರಾಮಮಂದಿರ ನಿರ್ಮಾಣ ವಿರೋಧಿಸಿದವರು, ಹಿಂದೂ ಉಗ್ರವಾದ ಪದ ಬಳಸಿದವರು, ಈಗ ಭಗವಾನ್‌ ರಾಮನನ್ನು ಪೌರಾಣಿಕ ವ್ಯಕ್ತಿ ಎನ್ನುತ್ತಿದ್ದಾರೆ. ಕಾಂಗ್ರೆಸ್ಸಿಗರು ರಾಮವಿರೋಧಿಯಷ್ಟೇ ಅಲ್ಲ, ದೇಶ ವಿರೋಧಿಗಳೂ ಹೌದು. ಅವರನ್ನು ಜನ ಎಂದಿಗೂ ಕ್ಷಮಿಸಲ್ಲ’ ಎಂದು ಕಿಡಿಕಾರಿದ್ದಾರೆ.