Asianet Suvarna News Asianet Suvarna News

Prashant Kishor ಕಾಂಗ್ರೆಸ್‌ ಸೇರಲ್ಲ ಅನ್ನೋದನ್ನ ಮೊದಲ ದಿನವೇ ಹೇಳಿದ್ದರಂತೆ Rahul Gandhi

Prashant Kishor - Rahul Gandhi: ಇದುವರೆಗೂ ಕಾಂಗ್ರೆಸ್‌ ಪಕ್ಷ ಸೇರುವ ಸಂಬಂಧ ಒಟ್ಟೂ ಎಂಟು ಬಾರಿ ಪ್ರಶಾಂತ್‌ ಕಿಶೋರ್‌ ಮಾತುಕತೆ ನಡೆಸಿದ್ದಾರೆ. ಆದರೆ ಒಮ್ಮೆಯೂ ಮಾತುಕತೆ ಸಫಲವಾಗಿಲ್ಲ. ಈ ಕಾರಣಕ್ಕಾಗಿಯೇ ಈ ಬಾರಿಯೂ ಹೀಗೇ ಆಗಲಿದೆ ಎಂದು ರಾಹುಲ್‌ ಗಾಂಧಿ ಮೊದಲೇ ಹೇಳಿದ್ದರಂತೆ.

Rahul Gandhi predicted Prashant Kishor refusl from day one of talks
Author
Bengaluru, First Published Apr 28, 2022, 10:57 AM IST

ನವದೆಹಲಿ (ಏ. 28): ರಾಹುಲ್‌ ಗಾಂಧಿ (Rahul Gandhi) ಪ್ರಶಾಂತ್‌ ಕಿಶೋರ್‌ (Prashanth Kishor) ಕಾಂಗ್ರೆಸ್‌ಗೆ ಸೇರುವುದಿಲ್ಲ ಎಂಬುದನ್ನು ಮೊದಲ ದಿನದ ಮಾತುಕತೆಯ ನಂತರವೇ ಹೇಳಿದ್ದರಂತೆ ಎಂಬ ಮಾತು ಕಾಂಗ್ರೆಸ್‌ ಆಪ್ತ ವಲಯದಿಂದ ಕೇಳಿಬಂದಿದೆ. ಬೇರೆ ರಾಜಕೀಯ ಪಕ್ಷಗಳ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಕಾಂಗ್ರೆಸ್‌ ಪಕ್ಷವನ್ನು ಪ್ರಶಾಂತ್ ಕಿಶೋರ್ ದಾಳವಾಗಿ ಬಳಸಿಕೊಂಡಿದ್ದಾರೆ ಎಂಬ ಚರ್ಚೆ ಕಾಂಗ್ರೆಸ್‌ ಪಕ್ಷದೊಳಗೀಗ ಆರಂಭವಾಗಿದೆ. ಆದರೆ ಇತ್ತ ಪ್ರಶಾಂತ್‌ ಕಿಶೋರ್‌ ತಂಡದ ಮೂಲಗಳು ಹೇಳುವ ಪ್ರಕಾರ ಅನುಮಾನ ಮತ್ತು ತಪ್ಪು ಅಭಿಪ್ರಾಯ ಎರಡೂ ಕಡೆ ಇದ್ದವು ಎಂದಿದ್ದಾರೆ. ಸಬಲ ಕಾಂಗ್ರೆಸ್‌ ಸಮಿತಿ (Empowered Congress Committee) ಪ್ರಶಾಂತ್‌ ಕಿಶೋರ್‌ಗೆ ಚುನಾವಣೆ ಸಂಬಂಧ ಕ್ರಿಯಾತ್ಮಕ ಜವಾಬ್ದಾರಿ ಹೊಣೆ ಹೊತ್ತುಕೊಳ್ಳುವಂತೆ ಆಫರ್‌ ನೀಡಿತ್ತು. ಆದರೆ ಮಂಗಳವಾರ ಪ್ರಶಾಂತ್‌ ಕಿಶೋರ್‌ ಕಾಂಗ್ರೆಸ್‌ನ ಆಫರ್‌ ನಿರಾಕರಿಸಿದ್ದರು. 

"ಕಾಂಗ್ರೆಸ್‌ ನೀಡಿದ ಉತ್ತಮ ಅವಕಾಶವನ್ನು ನಾನು ನಿರಾಕರಿಸುತ್ತಿದ್ದೇನೆ. ಚುನಾವಣಾ ತಂತ್ರಗಾರನಾಗಿ ನಾನು ಕಾಂಗ್ರೆಸ್‌ ಸೇರುವುದಿಲ್ಲ. ಕಾಂಗ್ರೆಸ್‌ಗೆ ಈಗ ನನಗಿಂತ ಮುಖ್ಯವಾಗಿ ಬೇಕಿರುವುದು ನಾಯಕತ್ವ. ಎಲ್ಲರೂ ಒಗ್ಗೂಡಿ ಸರಿಯಾದ ನಿರ್ಧಾರ ಮಾಡಬೇಕು ಮತ್ತು ಸಂಘಟನೆಯಲ್ಲಿರುವ ತೊಡಕುಗಳನ್ನು ಬಲಪಡಿಸಲು ಸಂಪೂರ್ಣ ಪರಿವರ್ತನೆಯ ಅಗತ್ಯವಿದೆ," ಎಂದು ಮಾರ್ಮಿಕವಾಗಿ ಟ್ವೀಟ್‌ ಮಾಡಿದ್ದರು.

ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, ಕಾಂಗ್ರೆಸ್‌ ಪ್ರಶಾಂತ್‌ ಕಿಶೋರ್‌ಗೆ ಆಫರ್‌ ನೀಡಲಾಗಿತ್ತು. ಎಲ್ಲಾ ಮಾತುಕತೆ ಸರಿಯಾಗಿಯೇ ನಡೆದಿತ್ತು, ಆದರೆ ಪಿಕೆ ಯಾವ ಕಾರಣಕ್ಕೆ ನಿರಾಕರಿಸಿದರು ಎಂಬುದು ಈಗಲೂ ಸ್ಪಷ್ಟವಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಚಿದಂಬರಂ ಕೂಡ ಸಬಲ ಕಾಂಗ್ರೆಸ್‌ ಸಮಿತಿಯ ಸದಸ್ಯರು. ಇನ್ನೊಂದು ಮೂಲಗಳ ಪ್ರಕಾರ ಪ್ರಶಾಂತ್ ಕಿಶೋರ್‌ ಒಂದೋ ಕಾಂಗ್ರೆಸ್‌ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ಹುದ್ದೆ ಅಲಂಕರಿಸಬೇಕು ಎಂದುಕೊಂಡಿದ್ದರು, ಇಲ್ಲವಾದಲ್ಲಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪಟ್ಟದ ಮೇಲೆ ಕಣ್ಣಿಟ್ಟಿದ್ದರು. ಆದರೆ ಅದಕ್ಕೆ ಕಾಂಗ್ರೆಸ್‌ ಒಪ್ಪಲಿಲ್ಲ ಎಂಬ ಕಾರಣಕ್ಕೆ ಪ್ರಶಾಂತ್‌ ಕಿಶೋರ್‌ ಪಕ್ಷ ಸೇರಲು ನಿರಾಕರಿಸಿದರು ಎನ್ನಲಾಗಿದೆ. 

ಇದನ್ನೂ ಓದಿ: ಕಾಂಗ್ರೆಸ್‌ಗೆ ನನಗಿಂತ ಮುಖ್ಯವಾಗಿ ಬೇಕಿರುವುದು ನಾಯಕತ್ವ: ಪ್ರಶಾಂತ್ ಕಿಶೋರ್‌

ಕಾಂಗ್ರೆಸ್‌ ಉನ್ನತ ಮೂಲಗಳ ಪ್ರಕಾರ, ಪ್ರಶಾಂತ್‌ ಕಿಶೋರ್‌ ಕಾಂಗ್ರೆಸ್‌ ಪಕ್ಷ ಸೇರುವ ಸಂಬಂಧ ಇದುವರೆಗೂ ಎಂಟು ಬಾರಿ ಮಾತುಕತೆಗಳಾಗಿವೆ, ಆದರೆ ಒಮ್ಮೆಯೂ ಸಫಲವಾಗಿಲ್ಲ. "ರಾಹುಲ್‌ ಗಾಂಧಿ ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡೇ, ಪಿಕೆ ಈ ಬಾರಿಯೂ ಕಾಂಗ್ರೆಸ್‌ ಸೇರುವುದಿಲ್ಲ ಎಂದು ಮೊದಲ ದಿನದ ಮಾತುಕತೆ ವೇಳೆಯೇ ಹೇಳಿದ್ದರು. ಈಗ ಅದೇ ರೀತಿ ಆಗಿದೆ," ಎನ್ನುತ್ತಾರೆ ಪಕ್ಷದ ಹಿರಿಯ ಸದಸ್ಯರೊಬ್ಬರು. 

ಇದನ್ನೂ ಓದಿ: Declare Assets 3 ತಿಂಗಳ ಒಳಗೆ ಆಸ್ತಿ ವಿವರ ಘೋಷಿಸಿ, ಸಚಿವರಿಗೆ ಯೋಗಿ ಖಡಕ್ ಸೂಚನೆ!

ಒಂದೆಡೆ ಕಾಂಗ್ರೆಸ್‌ ಜತೆ ಮಾತುಕತೆ ನಡೆಯುತ್ತಿದ್ದಾಗಲೇ ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಜತೆಗೂ ಪ್ರಶಾಂತ್‌ ಕಿಶೋರ್‌ ಅವರ ಐಪ್ಯಾಕ್‌ (Indian Political Action Committee)  ಮಾತುಕತೆ ನಡೆಸಿತ್ತು. ಮತ್ತೊಂದೆಡೆ ಕಾಂಗ್ರೆಸ್‌ ಈಗಾಗಲೇ ಕರ್ನಾಟಕ ವಿಧಾನಸಭೆ ಚುನಾವಣೆಯ ತಂತ್ರಗಾರಿಕೆ ಹೊಣೆಯನ್ನು ಸುನೀಲ್‌ ಕನುಗೊಳ್‌ ಅವರ ತಂಡಕ್ಕೆ ನೀಡಿದೆ.
ರಾಷ್ಟ್ರ ಮಟ್ಟದಲ್ಲಿ ಚುನಾವಣಾ ಒಪ್ಪಂದಕ್ಕೆ ಕಾಂಗ್ರೆಸ್‌ ಮತ್ತು ಪ್ರಶಾಂತ್‌ ಕಿಶೋರ್‌ ಇಬ್ಬರೂ ಮಾತುಕತೆ ನಡೆಸಿದ್ದರು. ಆದರೆ ಇನ್ನೊಂದು ಕಡೆ ಇಬ್ಬರೂ, ರಾಜ್ಯ ಮಟ್ಟದಲ್ಲಿ ಬೇರೆ ಬೇರೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ವಿಚಾರಗಳನ್ನು ಗಮನಿಸಿದರೆ, ಪ್ರಶಾಂತ್‌ ಕಿಶೋರ್‌ ಮತ್ತು ಕಾಂಗ್ರೆಸ್‌ ಒಬ್ಬರ ಮೇಲೊಬ್ಬರು ನಂಬಿಕೆ ಇರಿಸಿಲ್ಲ ಎಂದೇ ಅನಿಸುತ್ತದೆ.

ಮಾತುಕತೆ ಕೂಡಿಬಂದಿಲ್ಲ ಎಂದಿದ್ದ ಕಾಂಗ್ರೆಸ್‌:

ಪ್ರಶಾಂತ್‌ ಕಿಶೋರ್‌ಗೆ ಪಕ್ಷ ಸೇರುವಂತೆ ಕಾಂಗ್ರೆಸ್‌ ಪಕ್ಷ ಆಫರ್‌ ನೀಡಿತ್ತು, ಆದರೆ ಅವರು ಅದನ್ನು ನಿರಾಕರಿಸಿದ್ದಾರೆ. ಪಕ್ಷ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಪ್ರಶಾಂತ್‌ ಕಿಶೋರ್‌ ಸಲಹೆ ನೀಡಿದ್ದಾರೆ. ಅವರ ಸಲಹೆಗೆ ಮತ್ತು ಪ್ರಯತ್ನಕ್ಕೆ ಧನ್ಯವಾದ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಂದೀಪ್‌ ಸಿಂಗ್‌ ಸುರ್ಜೆವಾಲ ಮಂಗಳವಾರ ತಿಳಿಸಿದ್ದರು. 

Follow Us:
Download App:
  • android
  • ios