ಕಾಂಗ್ರೆಸ್‌ಗೆ ನನಗಿಂತ ಮುಖ್ಯವಾಗಿ ಬೇಕಿರುವುದು ನಾಯಕತ್ವ: ಪ್ರಶಾಂತ್ ಕಿಶೋರ್
Prashanth Kishor denies joining congress: ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರಾದರೂ, ಕಡೆ ಕ್ಷಣದಲ್ಲಿ ಪಕ್ಷ ಸೇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನವದೆಹಲಿ: ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಪ್ರಶಾಂತ್ ಕಿಶೋರ್ ಮತ್ತು ಕಾಂಗ್ರೆಸ್ ನಡುವಿನ ಮಾತುಕತೆ ಈಗ ತಾರ್ಕಿಕ ಅಂತ್ಯ ಸಿಕ್ಕಿದ್ದು, ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದ್ದು, ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಮುನ್ನಡೆಯಾಗಲಿದೆ ಎಂದು ಭಾವಿಸಿದ್ದ ಕಾಂಗ್ರೆಸ್ ಚಿಂತನೆಗೆ ಹಿನ್ನಡೆಯಾಗಿದೆ. ಜತೆಗೆ ಮೇ ತಿಂಗಳಲ್ಲಿ ನಡೆಯಲಿರುವ ಕಾಂಗ್ರೆಸ್ ರಾಷ್ಟ್ರೀಯ ಚಿಂತನಾ ಕಾರ್ಯಗಾರಕ್ಕೂ ಪ್ರಶಾಂತ್ ಕಿಶೋರ್ ಅವರೇ ಪ್ರೇರಣೆ ಎನ್ನಲಾಗಿತ್ತು. ಇದೀಗ ಕಾಂಗ್ರೆಸ್ ಚಿಂತನಾ ಸಮಾವೇಶ ನಡೆಯಲಿದೆಯಾ, ನಡೆದರೆ ರೂಪುರೇಷೆ ಏನಿರಲಿದೆ ಎಂಬುದನ್ನು ಕಾಂಗ್ರೆಸ್ ಪಕ್ಷವೇ ಉತ್ತರಿಸಬೇಕು.
ಕಳೆದ ಕೆಲ ದಿನಗಳಿಂದ ಪ್ರಶಾಂತ್ ಕಿಶೋರ್ ಮತ್ತು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಮತ್ತಿತರ ಕಾಂಗ್ರೆಸ್ ನಾಯಕರ ನಡುವೆ ಮಾತುಕತೆ ನಡೆದಿತ್ತು. ಹಲವು ಸುತ್ತಿನ ಮಾತುಕತೆಗಳ ನಂತರ, ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎನ್ನಲಾಗಿತ್ತು. ಇನ್ನೊಂದು ಮೂಲಗಳ ಪ್ರಕಾರ ಪ್ರಶಾಂತ್ ಕಿಶೋರ್ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುಖ್ಯ ತಂತ್ರಗಾರನಾಗಿ ಕಾರ್ಯನಿರ್ವಹಿಸಲಿದ್ದಾರೆ, ಅವರು ಪಕ್ಷ ಸೇರುವುದಿಲ್ಲ ಎನ್ನಲಾಗಿತ್ತು. ಈ ಎಲಾ ಊಹಾಪೋಹಗಳಿಗೆ ಪ್ರಶಾಂತ್ ಕಿಶೋರ್ ತೆರೆ ಎಳೆದಿದ್ದು, ಕಾಂಗ್ರೆಸ್ ಪಕ್ಷವನ್ನು ಸೇರುವುದಿಲ್ಲ ಎಂದಿದ್ದಾರೆ.
ಆದರೆ ಕುತೂಹಲ ಇಲ್ಲಿಗೇ ನಿಲ್ಲುವುದಿಲ್ಲ. ಪಕ್ಷ ಸೇರದ ಮಾತ್ರಕ್ಕೆ ಚುನಾವಣಾ ತಂತ್ರ ಹೆಣೆಯುವುದಿಲ್ಲ ಎನ್ನಲಾಗುವುದಿಲ್ಲ. ಪ್ರಶಾಂತ್ ಕಿಶೋರ್ ಮುಂದಿನ ನಡೆಯೇನು ಮತ್ತು ಕಾಂಗ್ರೆಸ್ ಪಕ್ಷ ಸೇರದಿದ್ದರೂ, ಪಕ್ಷದ ಮುಖ್ಯ ಚುನಾವಣಾ ತಂತ್ರಗಾರರನ್ನಾಗಿ ಕಿಶೋರ್ ಜೊತೆ ಒಪ್ಪಂದ ಮಾಡಿಕೊಳ್ಳಲಿದೆಯಾ ಎಂಬುದನ್ನು ಕಾದು ನೋಡಬೇಕು. ಆದರೆ, ಪ್ರಶಾಂತ್ ಕಿಶೋರ್ ಮಾಡಿರುವ ಟ್ವೀಟ್‌ನಲ್ಲಿ "ಕಾಂಗ್ರೆಸ್ ನೀಡಿದ ಉತ್ತಮ ಅವಕಾಶವನ್ನು ನಾನು ನಿರಾಕರಿಸುತ್ತಿದ್ದೇನೆ. ಚುನಾವಣಾ ತಂತ್ರಗಾರನಾಗಿ ನಾನು ಕಾಂಗ್ರೆಸ್ ಸೇರುವುದಿಲ್ಲ. ಕಾಂಗ್ರೆಸ್‌ಗೆ ಈಗ ನನಗಿಂತ ಮುಖ್ಯವಾಗಿ ಬೇಕಿರುವುದು ನಾಯಕತ್ವ. ಎಲ್ಲರೂ ಒಗ್ಗೂಡಿ ಸರಿಯಾದ ನಿರ್ಧಾರ ಮಾಡಬೇಕು ಮತ್ತು ಸಂಘಟನೆಯಲ್ಲಿರುವ ತೊಡಕುಗಳನ್ನು ಬಲಪಡಿಸಲು ಸಂಪೂರ್ಣ ಪರಿವರ್ತನೆಯ ಅಗತ್ಯವಿದೆ," ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಏರಿಗೆ, ಪ್ರಶಾಂತ್ ಕಿಶೋರ್ ನೀರಿಗೆ:
ಒಂದೆಡೆ ಕಾಂಗ್ರೆಸ್ ಜತೆ ಮಾತುಕತೆ ನಡೆಯುತ್ತಿದ್ದಾಗಲೇ ಇತ್ತ ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಜತೆಗೂ ಪ್ರಶಾಂತ್ ಕಿಶೋರ್ ಅವರ ಐಪ್ಯಾಕ್ (Indian Political Action Committee) ಮಾತುಕತೆ ನಡೆಸಿದೆ. ಮತ್ತೊಂದೆಡೆ ಕಾಂಗ್ರೆಸ್ ಈಗಾಗಲೇ ಕರ್ನಾಟಕ ವಿಧಾನಸಭೆ ಚುನಾವಣೆಯ ತಂತ್ರಗಾರಿಕೆ ಹೊಣೆಯನ್ನು ಸುನೀಲ್ ಕನುಗೊಳ್ ಅವರ ತಂಡಕ್ಕೆ ನೀಡಿದೆ.
ಒಂದೆಡೆ ರಾಷ್ಟ್ರ ಮಟ್ಟದಲ್ಲಿ ಚುನಾವಣಾ ಒಪ್ಪಂದಕ್ಕೆ ಕಾಂಗ್ರೆಸ್ ಮತ್ತು ಪ್ರಶಾಂತ್ ಕಿಶೋರ್ ಇಬ್ಬರೂ ಮಾತುಕತೆ ನಡೆಸಿದ್ದರು. ಆದರೆ ಇನ್ನೊಂದು ಇಬ್ಬರೂ, ರಾಜ್ಯ ಮಟ್ಟದಲ್ಲಿ ಬೇರೆ ಬೇರೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ವಿಚಾರಗಳನ್ನು ಗಮನಿಸಿದರೆ, ಪ್ರಶಾಂತ್ ಕಿಶೋರ್ ಮತ್ತು ಕಾಂಗ್ರೆಸ್ ಒಂದಾಗುವುದು ಸಾಧ್ಯವಿಲ್ಲ ಎಂದು ಕೆಲ ರಾಜಕೀಯ ನಿಪುಣರು ಅಭಿಪ್ರಾಯಪಡುತ್ತಿದ್ದಾರೆ.
ಮಾತುಕತೆ ಕೂಡಿಬಂದಿಲ್ಲ ಎಂದ ಕಾಂಗ್ರೆಸ್:
ಪ್ರಶಾಂತ್ ಕಿಶೋರ್‌ಗೆ ಪಕ್ಷ ಸೇರುವಂತೆ ಕಾಂಗ್ರೆಸ್ ಪಕ್ಷ ಆಫರ್ ನೀಡಿತ್ತು, ಆದರೆ ಅವರು ಅದನ್ನು ನಿರಾಕರಿಸಿದ್ದಾರೆ. ಅವರು ಪಕ್ಷ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದಾರೆ. ಅವರ ಸಲಹೆಗೆ ಮತ್ತು ಪ್ರಯತ್ನಕ್ಕೆ ಧನ್ಯವಾದ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೆವಾಲ ತಿಳಿಸಿದ್ದಾರೆ.