ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿರುವ ಪ್ರಕರಣದಲ್ಲಿ ಮೂರು ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಪ್ರಮುಖ ಆರೋಪಿಯಾಗಿರುವ ಮೊಹಮದ್‌ ಇಲ್ತಾಜ್‌, ರಾಹುಲ್‌ ಗಾಂಧಿಯವರ ಜೊತೆ ಭಾರತ್‌ ಜೋಡೀ ಯಾತ್ರೆಯಲ್ಲಿ ಭಾಗವಹಿಸಿದ್ದ ಫೋಟೋ ವೈರಲ್‌ ಆಗಿದೆ. 

ನವದೆಹಲಿ (ಮಾ.6): ವಿಧಾನಸೌಧದ ಅವರಣದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವ ಘೋಷಣೆ ಕೂಗಿದ ವಿಚಾರವನ್ನು ರಾಜ್ಯ ಸರ್ಕಾರ ತಣ್ಣಾಗಾಗಿಸುವ ಪ್ರಯತ್ನ ಮಾಡಿದರೂ, ಕೊನೆಗೆ ಎಫ್‌ಎಸ್‌ಎಲ್‌ ವರದಿಯಲ್ಲಿ ಅಲ್ಲಿ ಕೂಗಿದ್ದು ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವುದು ಖಚಿತಗೊಂಡಿದೆ. ಇದರ ಬೆನ್ನಲ್ಲಿಯೇ ಪ್ರಕರಣದ ಮೂರು ಪ್ರಮುಖ ಆರೋಪಿಗಳನ್ನು ರಾಜ್ಯ ಸರ್ಕಾರ ಬಂಧಿಸಿದೆ. ಇದರಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಮೊಹಮದ್ ಇಲ್ತಾಜ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಆಪ್ತ ವ್ಯಕ್ತಿ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ ಬಳಿಕ ಈ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಒಂದೆಡೆ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರ ಮಾಡುತ್ತಿದ್ದರೆ, ಇನ್ನೊಂದೆಡೆ ದೇಶ ವಿರೋಧಿಗಳ ಜೊತೆ ಸೇರಿ ಭಾರತ್‌ ತೋಡೋ ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ರಾಹುಲ್‌ ಗಾಂಧಿ ಅವರೊಂದಿಗೆ ಭಾರತ್‌ ಜೋಡೋ ಯಾತ್ರೆಯಲ್ಲಿ ಮೊಹಮದ್‌ ಇಲ್ತಾಜ್‌ ಭಾಗಿಯಾಗಿರುವ ಸಾಕಷ್ಟು ಫೋಟೋ ವೈರಲ್‌ ಆಗಿದೆ. ಅದರೊಂದಿಗೆ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರು ಹಾಗೂ ಸಚಿವರೊಂದಿಗೆ ಮೊಹಮದ್‌ ಇಲ್ತಾಜ್‌ ಇರುವ ಚಿತ್ರಗಳು ಸೋಶಿಯಲ್‌ ಮೀಡಿಯಾದಲ್ಲಿ ಪ್ರಕಟವಾಗುತ್ತಿದೆ.

ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ತೇಜಸ್ವಿ ಸೂರ್ಯ, ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಇಲ್ತಾಜ್, ವಯನಾಡ್ ಸಂಸದ ಮತ್ತು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆಪ್ತರು. ಇದೇ ಕಾರಣಕ್ಕಾಗಿ ಪ್ರಕರಣದಲ್ಲಿ ಕ್ರಮ ತೆಗೆದುಕೊಳ್ಳಲು ಸಿದ್ಧರಾಮಯಯ ಸಾಕಷ್ಟು ದಿನಗಳನ್ನು ತೆಗೆದುಕೊಂಡಿದ್ದರು. ಇದು ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ದಯನೀಯ ಸ್ಥಿತಿ ಎಂದು ಬರೆದುಕೊಂಡಿದ್ದಾರೆ.

ಪಾಕ್‌ ಪರ ಘೋಷಣೆ ಪ್ರಕರಣ: ನಾಸಿರ್‌ ಹುಸೇನ್ ವಿಚಾರಣೆ ಇಲ್ವಾ?

ರಾಜ್ಯಸಭೆ ಚುನಾವಣೆ ಮುಗಿದ ಬೆನ್ನಲ್ಲಿಯೇ ಗೆಲುವು ಕಂಡಿದ್ದ ಕಾಂಗ್ರೆಸ್‌ನ ನಾಸಿರ್‌ ಹುಸೇನ್‌ ಪರ ಬೆಂಬಲಿಗರು ವಿಧಾನಸೌಧದ ಆವರಣದಲ್ಲಿಯೇ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ್ದರು. ಆದರೆ, ಕಾಂಗ್ರೆಸ್‌ನ ಕೆಲವು ನಾಯಕರು ಅಲ್ಲಿ ಕೂಗಿದ್ದು ನಾಸಿರ್‌ ಸಾಬ್‌ ಜಿಂದಾಬಾದ್‌ ಎಂದು ಕೂಗಿದ್ದಾಗಿ ಹೇಳಿದ್ದರು. ಕೊನೆಗೆ ಎಫ್‌ಎಸ್‌ಎಲ್‌ ವರದಿಯಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದೇ ಘೋಷಣೆ ಕೂಗಿದ್ದಾಗಿ ಖಚಿತವಾಗಿತ್ತು. ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದವರನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ವಿಧಾನಸೌಧದ ಒಳಗೆ ಹಾಗೂ ಹೊರಗೆ ಪ್ರತಿಭಟನೆ ನಡೆಸಿತ್ತು. ದೆಹಲಿಯಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ಸಂಚಾಲಕರಾಗಿರುವ ಮೊಹಮದ್‌ ಇಲ್ತಾಜ್‌ರನ್ನು ಬಂಧಿಸಿದ ಬೆನ್ನಲ್ಲಿಯೇ ಕಾಂಗ್ರೆಸ್‌ ವಿರುದ್ಧ ಟೀಕೆ ವ್ಯಕ್ತವಾಗಿದೆ. ರಾಹುಲ್‌ ಗಾಂಧಿ, ಇಲ್ತಾಜ್‌ನ ಹೆಗಲ ಮೇಲೆ ಕೈ ಇರಿಸಿಕೊಂಡಿರುವ ಚಿತ್ರವನ್ನು ಪ್ರಕಟಿಸಿ, ಕಾಂಗ್ರೆಸ್‌ನ ಕೈ ದೇಶದ್ರೋಹಿಯ ಹೆಗಲ ಮೇಲಿದೆ ಎಂದು ಟೀಕೆ ಮಾಡಲಾಗಿದೆ.

ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ನಿಜ: ಸಚಿವ ಪರಮೇಶ್ವರ್‌