ವೆನೆಜುವೆಲಾದ ವಿಪಕ್ಷ ನಾಯಕಿ ಮಾರಿಯಾ ಕೊರಿನಾ ಮಚಾಡೋ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ, ಭಾರತದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ ರಾಹುಲ್ ಗಾಂಧಿಯವರಿಗೂ ಈ ಪ್ರಶಸ್ತಿ ಸಿಗಬೇಕಿತ್ತು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.  

ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸಲು ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ಶಾಂತಿಯುತ ಪರಿವರ್ತನೆಗಾಗಿ ಪ್ರತಿಪಾದಿಸುವ ಅಚಲ ಬದ್ಧತೆಗಾಗಿ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವೆನೆಜುವೆಲಾದ ಪ್ರಮುಖ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೋ ಅವರಿಗೆ ಸಂದಿದೆ. ಅತ್ತ ಹಲವು ರಾಷ್ಟ್ರಗಳ ಯುದ್ಧವನ್ನು ನಿಲ್ಲಿಸಿರುವ ತಮಗೆ ಈ ಪ್ರಶಸ್ತಿ ಸಿಕ್ಕಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಗೋಳೋ ಎನ್ನುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿದ್ದ ಸಂಘರ್ಷವನ್ನೂ ತಾವೇ ನಿಲ್ಲಿಸಿರುವುದಾಗಿ ಸುಳ್ಳು ವರದಿಯನ್ನು ಪ್ರಕಟಿಸುವ ಮೂಲಕ ಈ ಪ್ರಶಸ್ತಿಗಾಗಿ ಹಂಬಲಿಸುತ್ತಿದ್ದ ಟ್ರಂಪ್​ಗೆ ಮರ್ಮಾಘಾತವಾಗಿರುವ ಬೆನ್ನಲ್ಲೇ, ಭಾರತದಲ್ಲಿ ಸಂವಿಧಾನದ ಉಳಿವಿಗೆ ಹೋರಾಡುತ್ತಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಈ ಪ್ರಶಸ್ತಿ ಸಂದಬೇಕಿತ್ತು ಎಂದು ಕಾಂಗ್ರೆಸ್​ ನಾಯಕರು ಹೇಳುತ್ತಿದ್ದಾರೆ.

ರಾಹುಲ್​ ಗಾಂಧಿಗೆ ಏಕಿಲ್ಲ?

ಮಾರಿಯಾ ಕೊರಿನಾ ಮಚಾಡೋ (Maria Corina Machado) ಅವರು ಕೂಡ ಅಲ್ಲಿಯ ವಿಪಕ್ಷ ನಾಯಕಿ ಹಾಗೂ ಪ್ರಜಾಪ್ರಭುತ್ವಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಅವರಂತೆಯೇ ರಾಹುಲ್​ ಗಾಂಧಿ ಕೂಡ ಭಾರತದಲ್ಲಿ ಅದನ್ನೇ ಮಾಡುತ್ತಿರುವುದಾಗಿ ಕಾಂಗ್ರೆಸ್ ವಕ್ತಾರ ಸುರೇಂದ್ರ ರಜಪೂತ್ ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಐದು ಬಾರಿ ಲೋಕಸಭಾ ಸಂಸದೆಯಾಗಿರುವ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೋ ಮಚಾಡೋ ಅವರ ಜೊತೆಗೆ ಇರುವ ಚಿತ್ರವನ್ನು ಹಂಚಿಕೊಂಡ ಸುರೇಂದ್ರ ರಜಪೂತ್, ರಾಹುಲ್​ ಗಾಂಧಿಯವರಿಗೂ ಈ ಪ್ರಶಸ್ತಿ ನೀಡಬೇಕಿದೆ ಎಂದು ಆಗ್ರಹಿಸಿದ್ದಾರೆ.

ಚರ್ಚೆ ಹುಟ್ಟುಹಾಕಿದ ಪೋಸ್ಟ್​

ಇದೀಗ ಈ ಪೋಸ್ಟ್​ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಕೈಯಲ್ಲಿ ಸದಾ ಸಂವಿಧಾನದ ಪುಸ್ತಕವನ್ನು ಹಿಡಿದುಕೊಂಡು ಓಡಾಡುತ್ತಿರುವ ರಾಹುಲ್​ ಗಾಂಧಿ (Rahul Gandhi), ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದ್ದಾರೆ. ಅವರನ್ನು ಮಚಾಡೋ ಜೊತೆ ಹೋಲಿಕೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಟೀಕಿಸಿದೆ.

ವಿಚಿತ್ರ ಆಸೆ ಎಂದ ಬಿಜೆಪಿ!

ಪೋಸ್ಟ್‌ನಲ್ಲಿ ರಾಹುಲ್ ಗಾಂಧಿಯವರ ಉಲ್ಲೇಖವನ್ನು "ವಿಚಿತ್ರ" ಎಂದು ಕರೆದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, “ವಿಚಿತ್ರ ಕಾಂಗ್ರೆಸ್ ರಾಹುಲ್ ಬಾಬಾ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ಬೇಡುತ್ತಿದೆ, 1) ಬೂಟಾಟಿಕೆ 2) ಸುಳ್ಳು ಹೇಳುವುದು 3) 99 ಬಾರಿ ಚುನಾವಣೆಗಳಲ್ಲಿ ಸೋಲುವುದು! 4) 1975 ಮತ್ತು 1984 ರಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಕೊಲೆ ಮಾಡುವುದು ಇವೆಲ್ಲವೂ ಸೇರಿರುವಾಗ ಇಂಥದ್ದೊಂದು ವಿಚಿತ್ರ ಬೇಡಿಕೆ ಇಡುತ್ತಿರುವುದು ಅತ್ಯಂತ ವಿಚಿತ್ರವಾಗಿದೆ ಎಂದಿದ್ದಾರೆ ಅವರು.