ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದ ಘಟನೆ ನ್ಯಾಯಾಂಗ ವ್ಯವಸ್ಥೆಯನ್ನೇ ಅಲುಗಾಡಿಸಿದೆ. ವಿಷ್ಣು ವಿಗ್ರಹ ಮರುಸ್ಥಾಪನೆ ಅರ್ಜಿಯ ಕುರಿತ ಸಿಜೆಐ ಹೇಳಿಕೆ ಮತ್ತು ದರ್ಗಾ ಪ್ರಕರಣಗಳಲ್ಲಿನ ಸುಪ್ರೀಂ ಕೋರ್ಟ್‌  ತೀರ್ಪಿನ ವ್ಯತ್ಯಾಸ ವಿವಾದಕ್ಕೆ ಕಾರಣವಾಗಿದೆ. 

ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವ ರೀತಿಯಲ್ಲಿ ವಕೀಲರೊಬ್ಬರು ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಮೇಲೆ ಶೂ ಎಸೆದು ವಿವಾದ ಸೃಷ್ಟಿಸಿದ್ದಾರೆ. ಇದಾಗಲೇ ಇದು ಜಾತಿಯ ಸ್ವರೂಪವನ್ನೂ ಪಡೆದು ರಾಜಕೀಯ ತಿರುವನ್ನೂ ಪಡೆದುಕೊಂಡಿದೆ. ಅಷ್ಟಕ್ಕೂ ಈ ಘಟನೆಗೆ ಕಾರಣವಾದದ್ದು ಸಿಜೆಐ ಗವಾಯಿ ಅವರು ವಿಷ್ಣುವಿನ ಕುರಿತು ಆಡಿದ ಮಾತುಗಳು. ಮಧ್ಯಪ್ರದೇಶದ ಜವಾರಿ ದೇವಾಲಯದಲ್ಲಿ 7 ಅಡಿ ಎತ್ತರದ ವಿಷ್ಣುವಿನ ವಿಗ್ರಹವನ್ನು ಮರು ಸ್ಥಾಪನೆ ಮಾಡಬೇಕು ಎಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿತ್ತು. ಯುನೆಸ್ಕೋ ವಿಶ್ವಪರಂಪರೆಯ ತಾಣವಾಗಿರುವ ಖಜುರಾಹೊದಲ್ಲಿರುವ ಜವಾರಿ ದೇವಾಲಯದಲ್ಲಿ 7 ಅಡಿ ಎತ್ತರದ ವಿಷ್ಣುವಿನ ವಿಗ್ರಹ ಇದಾಗಿದೆ. ಇದರ ಶಿರವು ತುಂಡಾಗಿರುವ ಕಾರಣ, ಅದನ್ನು ಮರುಸ್ಥಾಪಿಸಲು ಆದೇಶಿಸುವಂತೆ ಕೋರಿದ್ದರು. ಆಗ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರು ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಲ್ಲ, ಬದಲಿಗೆ ಇದು ಪ್ರಚಾರಕ್ಕಾಗಿ ಸಲ್ಲಿಸಿರುವ ಅರ್ಜಿ ಎಂದರು. ಅಷ್ಟೇ ಅಲ್ಲದೇ, ನೀವು ವಿಷ್ಣುವಿನ ಮಹಾನ್‌ ಭಕ್ತ ಎಂದು ಹೇಳಿಕೊಳ್ಳುತ್ತಿದ್ದೀರಿ ಅಲ್ಲವೆ, ಹಾಗಿದ್ದರೆ ನ್ಯಾಯ ಬೇಕು ಎಂದರೆ ದೇವರನ್ನೇ ಪ್ರಾರ್ಥಿಸಿ, ಧ್ಯಾನ ಮಾಡಿ. ಮರುಸ್ಥಾಪನೆಗೆ ಅವನೇ ದಾರಿ ತೋರಿಸಬಹುದು ಎಂದಿದ್ದರು.

ಸ್ಪಷ್ಟನೆ ನೀಡಿದ್ದ ಸಿಜೆಐ ಗವಾಯಿ

ಇದಾಗುತ್ತಿದ್ದಂತೆಯೇ ಇವರ ಮಾತುಗಳು ಭಾರಿ ವಿರೋಧಕ್ಕೆ ಕಾರಣವಾಗಿದ್ದವು. ಸನಾತನ ಧರ್ಮದ ಬಗ್ಗೆ ಸಿಜೆಐ ಗವಾಯಿ ಅವರು ಕೀಳಾಗಿ ಮಾತಾಡಿದ್ದಾರೆ, ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದಾರೆ ಎಂದು ಹಲವರು ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು, ಮಾತ್ರವಲ್ಲದೇ ನಿಮ್ಮ ಹೇಳಿಕೆಯನ್ನ ವಾಪಸ್‌ ಪಡೆಯಿರಿ ಎಂದು ಹಲವರು ವಕೀಲರು ಅವರಿಗೆ ಪತ್ರವನ್ನೂ ಬರೆದಿದ್ದರು. ಬಳಿಕ ಗವಾಯಿ ಅವರು, ತಮ್ಮ ಮಾತಿಗೆ ಸ್ಪಷ್ಟನೆ ಕೊಟ್ಟು, ನಾನು ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ. ಅರ್ಜಿ ವಿಚಾರಣೆ ಸಮಯದಲ್ಲಿ ನಾನು ಹೇಳಿದ ಮಾತುಗಳನ್ನು ಬೇರೆಯ ರೀತಿಯಲ್ಲಿ ಅರ್ಥೈಸಲಾಗಿದೆ. ನಾನು ಪ್ರತಿ ಧರ್ಮವನ್ನೂ ಅಪಾರವಾಗಿ ಗೌರವಿಸುತ್ತೇನೆʼ ಎಂದು ತಿಳಿಸಿದ್ದಾರೆ. ಅದರ ನಡುವೆಯೇ, ವಿಷ್ಣುವಿನ ಬಗ್ಗೆ ಮುಖ್ಯ ನ್ಯಾಯಮೂರ್ತಿ ಆಡಿದ ಮಾತಿಗೆ 71 ವರ್ಷದ ವಕೀಲರು ರೊಚ್ಚಿಗೆದ್ದು ಶೂ ಎಸೆದಿದ್ದಾರೆ. ಈ ರೀತಿಯಾಗಿ ಅವರು ನ್ಯಾಯಾಂಗದ ಘನತೆಗೆ ಧಕ್ಕೆ ತಂದಿದ್ದಾರೆ.

ದರ್ಗಾ ಕುರಿತು ಸುಪ್ರೀಂ ಕೋರ್ಟ್‌ ಆದೇಶ

ವಿಷ್ಣುವಿನ ಬಗ್ಗೆ ಹೇಳಿಕೆಯ ಕುರಿತು ಅಲ್ಲಿಗೇ ತಣ್ಣಗಾಗುತ್ತಿತ್ತೋ ಏನೋ. ಆದರೆ, ಜಸ್ಟೀಸ್‌ ಬಿವಿ ನಾಗರತ್ನ ಮತ್ತು ಜಸ್ಟೀಸ್‌ ಆರ್‌ ಮಹದೇವನ್‌, ದರ್ಗಾದ ಪ್ರಕರಣವೊಂದರಲ್ಲಿ ನೀಡಿದ್ದ ತೀರ್ಪನ್ನು ಇದಕ್ಕೆ ತಾಳೆ ಹಾಕಲಾಗುತ್ತಿದೆ. 

ಆಶಿಕ್ ಅಲ್ಲಾ ದರ್ಗಾ ಮತ್ತು ಬಾಬಾ ಫರೀದ್ ಅವರ ಚಿಲ್ಲಾಘ ಕಟ್ಟಡಗಳನ್ನು ಕೆಡವುವ ಕಾರ್ಯಾಚರಣೆಯಿಂದ ರಕ್ಷಿಸುವಂತೆ ಕೋರಿ ಜಮೀರ್ ಅಹ್ಮದ್ ಜುಮ್ಲಾನಾ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್‌ ಪೀಠ ಈ ಆದೇಶ ನೀಡಿತ್ತು. ಐತಿಹಾಸಿಕ ಮಹತ್ವದ್ದಾಗಿದ್ದರೂ, ಮೆಹ್ರೌಲಿ ಹಸಿರು ವಲಯದಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಾಗ ಡಿಡಿಎ ಅವುಗಳನ್ನು ಅತಿಕ್ರಮಣಗಳೆಂದು ಪರಿಗಣಿಸುತ್ತಿದೆ ಎಂದು ಅರ್ಜಿದಾರರು ವಾದಿಸಿದ್ದರು.

ಈ ವೇಳೆ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠವು, ಅಗತ್ಯವಿದ್ದರೆ, ಸ್ಮಾರಕಗಳ ದುರಸ್ತಿ ಮತ್ತು ನವೀಕರಣವನ್ನು ಎ.ಎಸ್.ಐ ಮೇಲ್ವಿಚಾರಣೆಯಲ್ಲಿ ಕೈಗೊಳ್ಳಬೇಕು ಎಂದು ತೀರ್ಪು ನೀಡಿತು. "ದುರಸ್ತಿ ಮತ್ತು ನವೀಕರಣದ ವಿಷಯದಲ್ಲಿ ಪ್ರಶ್ನಾರ್ಹ ಸ್ಮಾರಕಗಳ ಮೇಲ್ವಿಚಾರಣೆಯನ್ನು ಎ.ಎಸ್.ಐ ತನ್ನ ಪರಿಗಣನೆಗೆ ತೆಗೆದುಕೊಳ್ಳಬೇಕು" ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

ಸ್ಮಾರಕಗಳನ್ನು ನಾಶಮಾಡುವ ಗುರಿಯನ್ನು ಹೊಂದಿಲ್ಲ, ಬದಲಿಗೆ ಅವುಗಳ ಸುತ್ತಲೂ ನಿರ್ಮಿಸಲಾದ ಅನಧಿಕೃತ ನಿರ್ಮಾಣಗಳನ್ನು - ಪಕ್ಕಾ ರಚನೆಗಳು ಮತ್ತು ವಿಸ್ತರಣೆಗಳನ್ನು - ತೆಗೆದುಹಾಕುವ ಗುರಿಯನ್ನು ಹೊಂದಿದೆ ಎಂದು ಡಿಡಿಎ ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ, ಈ ವರ್ಷದ ಆರಂಭದಲ್ಲಿ ಸಲ್ಲಿಸಲಾದ ಎಎಸ್‌ಐ ಸ್ಟೇಟಸ್‌ ರಿಪೋರ್ಟ್‌ಅನ್ನು ಪೀಠವು ಅವಲಂಬಿಸಿತ್ತು, ಅದು ಎರಡು ತಾಣಗಳ ಪಾರಂಪರಿಕ ಮೌಲ್ಯವನ್ನು ದೃಢಪಡಿಸಿತು.

ದರ್ಗಾದ ಅಕ್ರಮ ನಿರ್ಮಾಣಕ್ಕೆ ತಡೆ

ಅಷ್ಟೇ ಅಲ್ಲದೇ, ಮುಂಬೈನ ಉತ್ತನ್​ನಲ್ಲಿರುವ ಬೇಲ್ ಶಾ ಪೀರ್ ದರ್ಗಾದಲ್ಲಿ ಅಕ್ರಮ ನಿರ್ಮಾಣ ನಡೆಯುತ್ತಿದೆ ಎಂದು ಮನಗಂಡಿದ್ದ ಮಹಾರಾಷ್ಟ್ರ ಕಂದಾಯ ಸಚಿವರು ದರ್ಗಾವನ್ನು ಕೆಡವಲು ಆದೇಶಿಸಿತ್ತು. ಇದಕ್ಕೆ ಕೂಡ ಸಿಜೆಐ ಗವಾಯಿ ನೇತೃತ್ವದ ಪೀಠ ತಡೆ ನೀಡಿತ್ತು. ಈಗ ವಿಷ್ಣುವಿನ ವಿಗ್ರಹ ಮರುಸ್ಥಾಪನೆಗೆ ಕೋರಿದಾಗಿ ವಿಷ್ಣುವಿನಲ್ಲಿಯೇ ಹೋಗಿ ಕೇಳಿ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದರಿಂದ ಈಗ ಇವೆರಡಕ್ಕೂ ತಾಳೆ ಹಾಕಿ ನೋಡಲಾಗುತ್ತಿದೆ. ಇದೇ ವಿವಾದದ ಕೇಂದ್ರಬಿಂದುವಾಗಿ ಪರಿಣಮಿಸಿದೆ.

RSS ಕಾರ್ಯಕ್ರಮಕ್ಕೆ ನಕಾರ

ಅದೇ ಇನ್ನೊಂದೆಡೆ, ಅಕ್ಟೋಬರ್ 5 ರಂದು ನಡೆದಿದ್ದ RSSನ 100ನೇ ವಾರ್ಷಿಕೋತ್ಸವದಂದು ತಾವು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ತಾಯಿ ಕಮಲ್ ಗವಾಯಿ ಹೇಳಿದ್ದನ್ನು ಕೂಡ ಸೋಷಿಯಲ್​ ಮೀಡಿಯಾದಲ್ಲಿ ಮತ್ತೊಮ್ಮೆ ಸ್ಮರಿಸುತ್ತಿದ್ದಾರೆ. ವಿವಾದಾತ್ಮಕ ಸುದ್ದಿಗಳ ಸೃಷ್ಟಿ ಮತ್ತು ಆರೋಪ, ದೋಷಣೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸದಿರಲು ನಿರ್ಧರಿಸಿರುವುದಾಗಿ ಅವರು ಬಹಿರಂಗ ಪತ್ರದಲ್ಲಿ ತಿಳಿಸಿದ್ದರು.