ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವದ ಅಂಗವಾಗಿ ಬಿಡುಗಡೆ ಮಾಡಿರುವ ಅಂಚೆಚೀಟಿ ಮತ್ತು ವಾಜಪೇಯಿ ಅವಧಿಯಲ್ಲಿ ಬಿಡುಗಡೆಯಾದ ಅಂಚೆಚೀಟಿಗಳ ಕುತೂಹಲದ ಸ್ಟೋರಿ ಇಲ್ಲಿದೆ…

ನವರಾತ್ರಿಯ ಶುಭದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು, ವಿಶೇಷ ನಾಣ್ಯ ಮತ್ತು ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಕಾರಣ, ಈ ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತನ್ನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಇದರ ಹಿನ್ನೆಲೆಯಲ್ಲಿ ಭಾರತ ಮಾತೆಯ ಚಿತ್ರ ಇರುವ ನಾಣ್ಯ ಮತ್ತು 1963ರ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ಭಾಗವಹಿಸುವುದನ್ನು ತೋರಿಸುವ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಭಾರತದ ನಾಣ್ಯವೊಂದರಲ್ಲಿ ಭಾರತ ಮಾತೆಯ ಚಿತ್ರ ಮುದ್ರಿತವಾಗಿರುವುದು ವಿಶೇಷವಾಗಿದೆ. ನಾಣ್ಯದ ಮುಂಬದಿಯಲ್ಲಿ 100 ರೂಪಾಯಿಯನ್ನು ಗುರುತಿಸುವ ಅಂಕಿ ಇದ್ದರೆ, ಹಿಂಬದಿಯಲ್ಲಿ 'ವರದ ಮುದ್ರೆ'ಯಲ್ಲಿ ಸಿಂಹದ ಮೇಲೆ ಕುಳಿತಿರುವ ಭಾರತ ಮಾತೆಯ ಚಿತ್ರವಿದೆ ಮತ್ತು ಸ್ವಯಂಸೇವಕರು ಆಕೆಯ ಮುಂದೆ ಸಮರ್ಪಣಾ ಭಾವದಿಂದ ನಮಸ್ಕರಿಸುವ ಚಿತ್ರ ಮುದ್ರಿಸಲಾಗಿದೆ. ಅದರೊಂದಿಗೆ ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100 ವರ್ಷ ಎಂದು ಬರೆಯಲಾಗಿದೆ.

ಅಂಚೆಚೀಟಿಯ ಹಿನ್ನೆಲೆ...

ಇನ್ನು ಅಂಚೆಚೀಟಿಯ ಕುರಿತು ಹೇಳುವುದಾದರೆ, ಇದರಲ್ಲಿ 1963ರ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ಭಾಗವಹಿಸುವುದನ್ನು ನೋಡಬಹುದಾಗಿದೆ. ಇದೇ ಸಮಯದಲ್ಲಿ ಇನ್ನೊಂದು ಕುತೂಹಲವೂ ಬೆಳಕಿಗೆ ಬಂದಿದೆ. ಅದೇನೆಂದರೆ ಅಟಲ್​ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿಯೂ ವಿಶೇಷ ಅಂಚೆಚೀಟಿಯೊಂದನ್ನು ಬಿಡುಗಡೆ ಮಾಡಲಾಗಿತ್ತು. ಅದು, RSS ಸ್ಥಾಪಕರಾಗಿರುವ ಡಾ. ಕೆ.ಬಿ. ಹೆಡ್ಗೆವಾರ್ ಅವರನ್ನು ಗೌರವಿಸುವ ಹಿನ್ನೆಲೆಯಲ್ಲಿ, ಅವರ ಜನ್ಮಶತಮಾನೋತ್ಸವಕ್ಕಾಗಿ ಈ ಅಂಚೆಚೀಟಿಯನ್ನು ಬಿಡುಗಡೆ ಮಾಡಲಾಗಿತ್ತು. ಮಾರ್ಚ್ 18, 1999 ರಂದು ಇದು ಬಿಡುಗಡೆಯಾಗಿತ್ತು. ಮೂರು ರೂಪಾಯಿ ಮುಖಬೆಲೆಯ ಅಂಚೆ ಚೀಟಿ ಇದಾಗಿದೆ.

ಕೆ.ಬಿ. ಹೆಡ್ಗೆವಾರ್ ಶತಮಾನೋತ್ಸವ

ಇನ್ನು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕ ಡಾ. ಕೆ.ಬಿ. ಹೆಡ್ಗೆವಾರ್ ಶತಮಾನೋತ್ಸವ (Dr. K.B. Hedgewar centenary) ವರ್ಷದ ಆಚರಣೆ ಕೂಡ ಭಾರತದ ಇತಿಹಾಸದಲ್ಲಿ ದಾಖಲಾಗಿದೆ. 1989 ರ ಆಗಸ್ಟ್ ಅಂತ್ಯದಲ್ಲಿ ಬಕಿಂಗ್‌ಹ್ಯಾಮ್‌ಶೈರ್ ಪಟ್ಟಣದ ಮಿಲ್ಟನ್ ಕೀನ್ಸ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಇವರ ಜನ್ಮ ಶತಮಾನೋತ್ಸವವನ್ನು ಆಚರಿಸುವ ಸಲುವಾಗಿ ಜಮಾಯಿಸಿದ್ದರು. ಈ ಅಸಾಧಾರಣ ಸಂದರ್ಭವು ವಿದೇಶಗಳಲ್ಲಿ ಹಿಂದೂ ರಾಷ್ಟ್ರೀಯತಾವಾದಿ ಚಳವಳಿಯ ಇತಿಹಾಸದಲ್ಲಿ ಅತ್ಯಂತ ಸಾಂಪ್ರದಾಯಿಕ ಮತ್ತು ಅದ್ಭುತ ಕ್ಷಣಗಳಲ್ಲಿ ಒಂದು ಎಂದು ದಾಖಲಾಗಿದೆ. ವಿರಾಟ್ ಹಿಂದೂ ಸಮ್ಮೇಳನ - ಮಹಾ ಹಿಂದೂ ಸಭೆ ಎಂದೆಲ್ಲಾ ಕರೆಸಿಕೊಳ್ಳುವ ಈ ಸಭೆಯು ಭಾರತದ ಹೊರಗೆ ಹಿಂದೂಗಳ ಅತಿದೊಡ್ಡ ವೈಯಕ್ತಿಕ ಸಭೆ ಎಂದೂ ಕರೆಯಲ್ಪಟ್ಟಿದೆ.

ಮಿನಿ-ಕುಂಭ ಮೇಳ

ಇದನ್ನು "ಮಿನಿ-ಕುಂಭ ಮೇಳ" ಎಂದು ಕೂಡ ಉಲ್ಲೇಖಿಸಲಾಗಿದೆ. ಈ ಸಂದರ್ಭದಲ್ಲಿ 300 ಕ್ಕೂ ಹೆಚ್ಚು ಹಿಂದೂ ಸಂಘಟನೆಗಳು ಇದಕ್ಕೆ ವಿಶ್ವಾದ್ಯಂತ ಬೆಂಬಲ ಸೂಚಿಸಿದ್ದವು. ವಿಶ್ವ ಹಿಂದೂ ಪರಿಷತ್, ಯುನೈಟೆಡ್ ಕಿಂಗ್‌ಡಮ್ ಮತ್ತು ಹಿಂದೂ ಸ್ವಯಂಸೇವಕ ಸಂಘದ ಪ್ರತಿನಿಧಿಗಳನ್ನು ಹೊಂದಿರುವ ಸಂಘಟನೆಗಳು ಇದರ ಆಚರಣೆ ಮಾಡಿದ್ದವು. 250 ಪುಟಗಳ "ಸ್ಮರಣಿಕೆ" ಪ್ರಕಟಣೆಯ ರೂಪದಲ್ಲಿ ಬ್ರಿಟಿಷ್ ಹಿಂದುತ್ವದ ಅತ್ಯಂತ ಸಮಗ್ರ ದಾಖಲೆಗಳಲ್ಲಿ ಒಂದನ್ನು ತಯಾರಿಸಿದ ಈ ಕಾರ್ಯಕ್ರಮವು ಹಿಂದೂ ರಾಷ್ಟ್ರೀಯತಾವಾದಿ ಚಳವಳಿಯ ಪ್ರತಿಮಾಶಾಸ್ತ್ರ, ಸಿದ್ಧಾಂತ ಮತ್ತು ನಾಯಕತ್ವದಿಂದ ತುಂಬಿತ್ತು.

ಭಾರತದಲ್ಲಿ ಉತ್ತುಂಗಕ್ಕೇರುತ್ತಿದ್ದ ರಾಮ ಮಂದಿರ ಚಳವಳಿಯು ಸಮ್ಮೇಳನಕ್ಕೆ ನಿರ್ಣಾಯಕ ಸಂದರ್ಭವನ್ನು ರೂಪಿಸಿದ್ದು ಕೂಡ ಹೆಡ್ಗೆವಾರ್ ಅವರ ಜನ್ಮ ವಾರ್ಷಿಕೋತ್ಸವವೇ ಎನ್ನಲಾಗಿದೆ.

ಇದನ್ನೂ ಓದಿ: 'ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರ ನಾಣ್ಯದ ಮೇಲಿದೆ..' ಆರೆಸ್ಸೆಸ್‌ ಶತಮಾನೋತ್ಸವಕ್ಕೆ ವಿಶೇಷ ನಾಣ್ಯ ರಿಲೀಸ್‌ ಮಾಡಿದ ಮೋದಿ!