ನವದೆಹಲಿ[ಮಾ.11]: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಪೆಟ್ರೋಲ್ ಬೆಲೆ ಕಡಿಮೆ ಮಾಡುವಂತೆ ಪಿಎಂ ಮೋದಿಗೆ ಮನವಿ ಮಾಡಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ಪಿಎಂ ಮೋದೀಜೀ, ನೀವು ಜನರಿಂದ ಆಯ್ಕೆಯಾಗಿ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವಲ್ಲಿ ತಲ್ಲೀನರಾಗಿದ್ದಾಗ ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಶೇ. 35ರಷ್ಟು ಕುಡಿದಿರುವುದನ್ನು ಗಮನಿಸುವಲ್ಲಿ ಎಡವಿದ್ದೀರಿ. ನೀವು ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 60 ರೂ. ಮಾಡಿ ಭಾರತೀಯರಿಗೆ ಲಾಭವುಂಟು ಮಾಡುತ್ತೀರಾ? ಇದು ಸ್ತಬ್ಧಗೊಂಡ ಆರ್ಥಿಕ ವ್ಯವಸ್ಥೆಗೆ ಕೊಂಚ ಬಲ ನೀಡಲಿದೆ' ಎಂದಿದ್ದಾರೆ. 

ಕಚ್ಚಾ ತೈಲ ಬೆಲೆ ಶೇ. 30 ಕುಸಿತ, ಭಾರತಕ್ಕೆ ಭರ್ಜರಿ ಲಾಭ!

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಭಾರೀ ಕುಸಿತಗೊಂಡಿದ್ದು, ಇದು ಭಾರತೀಯರಿಗೆ ಭಾರೀ ಲಾಭ ತಂದುಕೊಟ್ಟಿದೆ. ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಭಾರೀ ಕುಸಿತವಾಗಿದೆ. ಬುಧವಾರ ಪೆಟ್ರೋಲ್ ಬೆಲೆ 2 ರೂ. 69 ಪೈಸೆ ಕುಸಿತಗೊಂಡು, ಪ್ರತಿ ಲೀ. 70.20 ರೂ. ನಿದಗದಿಯಾಗಿದೆ. ಇನ್ನು ಡೀಸೆಲ್ ಬೆಲೆಯಲ್ಲಿ 2 ರೂ. 33 ಪೈಸೆ ಕುಸಿತವಾಗಿದ್ದು, 63.01 ರೂ. ನಿಗದಿಯಾಗಿದೆ.

ಸೌದಿ-ರಷ್ಯಾ ಸಮರ:

ಕೊರೋನಾ ಸೋಂಕಿನ ಪರಿಣಾಮ ಜಾಗತಿಕ ಮಟ್ಟದಲ್ಲಿ ತೈಲ ಬಳಕೆಯಲ್ಲಿ ಭಾರೀ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತೈಲ ಉತ್ಪಾದಕ ದೇಶಗಳ ಒಕ್ಕೂಟವಾದ ಒಪೆಕ್‌ ಮತ್ತು ರಷ್ಯಾದ ಜೊತೆ ಸೌದಿ ಅರೇಬಿಯಾ ಸಭೆಯೊಂದನ್ನು ಆಯೋಜಿಸಿತ್ತು. ಅದರಲ್ಲಿ ಬಳಕೆ ಪ್ರಮಾಣ ಇಳಿಕೆಯಿಂದಾದ ನಷ್ಟಭರಿಸುವ ನಿಟ್ಟಿನಲ್ಲಿ ಉತ್ಪಾದನೆ ಕಡಿತ ಮಾಡಿ, ಪರೋಕ್ಷವಾಗಿ ಬೆಲೆ ಏರಿಕೆಯ ವಾತಾವರಣ ಸೃಷ್ಟಿಸುವ ಪ್ರಸ್ತಾಪವನ್ನು ಸೌದಿ ಅರೇಬಿಯಾ ಮುಂದಿಟ್ಟಿತ್ತು. ಆದರೆ ಈ ಪ್ರಸ್ತಾಪವನ್ನು ರಷ್ಯಾ ತಿರಸ್ಕರಿಸಿದ ಕಾರಣ ಸಿಟ್ಟಿಗೆದ್ದ ಸೌದಿ ಅರೇಬಿಯಾ ದರ ಸಮರಕ್ಕೆ ಮುಂದಾಗಿದ್ದು, ಕಳೆದ 20 ವರ್ಷಗಳಲ್ಲೇ ಗರಿಷ್ಠ ಪ್ರಮಾಣದ ದರ ಕಡಿತ ಮಾಡಿದೆ. ಅಂದರೆ ತನ್ನ ಏಪ್ರಿಲ್‌ ತಿಂಗಳ ಕಚ್ಚಾತೈಲ ಪೂರೈಕೆ ದರವನ್ನು ಪ್ರತಿ ಬ್ಯಾರಲ್‌ಗೆ 4-7 ಡಾಲರ್‌ವರೆಗೆ ಇಳಿಕೆ ಮಾಡಿ ನಿರ್ಧಾರ ಪ್ರಕಟಿಸಿದೆ.

ಇದರ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್‌ಗೆ 31ರಿಂದ 36 ಡಾಲರ್‌ ಆಸುಪಾಸಿಗೆ ಕುಸಿದಿದೆ. 2014ರಲ್ಲಿ ಕಚ್ಚಾತೈಲ ಬೆಲೆ 30 ಡಾಲರ್‌ ಆಸುಪಾಸಿಗೆ ಬಂದಿದ್ದು ಬಿಟ್ಟರೆ, ಮತ್ತೆ ಆ ಪ್ರಮಾಣಕ್ಕೆ ಎಂದೂ ಬಂದಿರಲಿಲ್ಲ.

ಭಾರತಕ್ಕೆ ಭರ್ಜರಿ ಲಾಭ:

ಕಳೆದ ಜನವರಿ ತಿಂಗಳಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 70 ಡಾಲರ್‌ ತಲುಪಿತ್ತು. ಅದೀಗ ಕೇವಲ 30 ಡಾಲರ್‌ಗೆ ಇಳಿದಿದೆ. ಅಂದರೆ 3 ತಿಂಗಳಲ್ಲಿ ಶೇ.50ಕ್ಕಿಂತಲೂ ಹೆಚ್ಚಿನ ಕುಸಿತ ದಾಖಲಾಗಿದೆ. ಇದು ಆರ್ಥಿಕ ಹಿಂಜರಿತ ಸೇರಿದಂತೆ ನಾನಾ ಕಾರಣಗಳಿಂದಾಗಿ ತೆರಿಗೆ ಸಂಗ್ರಹದ ಕಡಿತ ಎದುರಿಸುತ್ತಿದ್ದ ಕೇಂದ್ರ ಸರ್ಕಾರಕ್ಕೆ ಭರ್ಜರಿ ಲಾಭ ತಂದುಕೊಡಲಿದೆ. ಕಾರಣ ಕಚ್ಚಾತೈಲ ಬೆಲೆಯಲ್ಲಿನ ಇಳಿಕೆ, ತೈಲ ಖರೀದಿಗಾಗಿ ಸರ್ಕಾರ ಮಾಡುತ್ತಿದ್ದ ವೆಚ್ಚವನ್ನು ಶೇ.50ರಷ್ಟುಕಡಿತ ಮಾಡಲಿದೆ. ಅಲ್ಲದೆ ತೈಲ ಪೂರೈಕೆ ದೇಶಗಳಿಗೆ ಡಾಲರ್‌ ರೂಪದಲ್ಲಿ ಪಾವತಿ ಮಾಡಲು ಮಾಡಬೇಕಿದ್ದ ವೆಚ್ಚ ಉಳಿಯಲಿದೆ. ಜೊತೆಗೆ ದೇಶದ ವಿದೇಶಿ ವಿನಿಮಯ ಸಂಗ್ರಹವೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ.

2019-20ನೇ ಹಣಕಾಸು ವರ್ಷದಲ್ಲಿ ಭಾರತದ ಕಚ್ಚಾತೈಲ ಆಮದಿನ ಪ್ರಮಾಣ 101 ಶತಕೋಟಿ ಡಾಲರ್‌ (7.37 ಲಕ್ಷ ಕೋಟಿ ರು.) ಇತ್ತು. ಒಂದು ವೇಳೆ ಕಚ್ಚಾತೈಲ ದರ ಈಗಿನ ಪ್ರಮಾಣದಲ್ಲೇ ಮುಂದುವರೆದರೆ ಪ್ರಸಕ್ತ ಸಾಲಿನಲ್ಲಿ ಭಾರತದ ತೈಲ ಖರೀದಿ ಮೊತ್ತ ಅಂದಾಜು 80 ಶತಕೋಟಿ ಡಾಲರ್‌ಗೆ (5.84 ಲಕ್ಷ ಕೋಟಿ ರು.) ಇಳಿವ ನಿರೀಕ್ಷೆ ಇದೆ. ಅಂದರೆ ಸುಮಾರು 21 ಶತಕೋಟಿ ಡಾಲರ್‌ ಹಣ ಸರ್ಕಾರದ ಬೊಕ್ಕಸದಲ್ಲಿ ಉಳಿಯಲಿದೆ.