ಮಹಾರಾಷ್ಟ್ರದಂತಹ ಜಾತಿಪ್ರಧಾನ ರಾಜ್ಯದಲ್ಲಿ ಬ್ರಾಹ್ಮಣ ರಾಜಕಾರಣಿ ಮಾಸ್ ಲೀಡರ್‌ ಆಗಿ ಬೆಳೆಯುವುದು ಕಷ್ಟ ಎನ್ನುವ ಸ್ಥಿತಿ ಇತ್ತು. ಆದರೆ ಈ 2 ವರ್ಷಗಳಲ್ಲಿ ಫಡ್ನವೀಸ್‌ ಗೆದ್ದಿರುವ ಕೋಟೆಗಳು ಮತ್ತು ರಾಜಕೀಯ ರಣತಂತ್ರಗಳ ಪರಿ ಗಮನಿಸಿದರೆ ಅಮಿತ್ ಶಾ ಮತ್ತು ಯೋಗಿ ನಂತರದ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ.

ಮಹಾರಾಷ್ಟ್ರದಂತಹ ಜಾತಿಪ್ರಧಾನ ರಾಜ್ಯದಲ್ಲಿ ಒಬ್ಬ ಬ್ರಾಹ್ಮಣ ರಾಜಕಾರಣಿ ಮಾಸ್ ಲೀಡರ್‌ ಆಗಿ ಬೆಳೆಯುವುದು ಕಷ್ಟ ಎನ್ನುವ ಸ್ಥಿತಿ ಇತ್ತು. ಆದರೆ ಈ 2 ವರ್ಷಗಳಲ್ಲಿ ದೇವೇಂದ್ರ ಫಡ್ನವೀಸ್‌ ಗೆದ್ದಿರುವ ಕೋಟೆಗಳು ಮತ್ತು ರಾಜಕೀಯ ರಣತಂತ್ರಗಳನ್ನು ಹೆಣೆಯುವ ಪರಿಯನ್ನು ಗಮನಿಸಿದರೆ ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥರ ನಂತರದ ಸ್ಥಾನದಲ್ಲಿ ಹೋಗಿ ಕುಳಿತುಕೊಂಡಿದ್ದಾರೆ.

-ಪ್ರಶಾಂತ್‌ ನಾತು

ಕಳೆದ ಒಂದು ತಿಂಗಳಿನಿಂದ ಯಾರೇ ಪತ್ರಕರ್ತರು ಪ್ರಶ್ನೆ ಕೇಳಿದರೂ ಮುಂಬೈಯಲ್ಲಿ ಮಹಾಯುತಿ ಒಕ್ಕೂಟದ ಹಿಂದೂ ಮರಾಠಿಯೇ ಮಹಾಪೌರರಾಗುತ್ತಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಮತ್ತು ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿಯೇ ಹೇಳುತ್ತಿದ್ದರು. ಆದರೆ ಫಲಿತಾಂಶ ಬಂದು 24 ಗಂಟೆ ಕಳೆಯುವುದರ ಒಳಗೆ ಬಿಜೆಪಿ ಮತ್ತು ಏಕನಾಥ ಶಿಂಧೆ ನಡುವೆ ಮುಂಬೈ ಮಹಾಪೌರ ಯಾರಾಗಬೇಕು ಎಂದು ಹಗ್ಗಜಗ್ಗಾಟ ಶುರುವಾಗಿದೆ. ಎಷ್ಟರ ಮಟ್ಟಿಗೆ ಅಂದರೆ, ಪಂಚತಾರಾ ಹೋಟೆಲ್ ಒಂದಕ್ಕೆ ತನ್ನ 29 ಪಾಲಿಕೆ ಸದಸ್ಯರನ್ನು ಕರೆತಂದ ಶಿಂಧೆ ಸಾಹೇಬರು, ‘ಬಿಜೆಪಿಯವರು ನಿಮ್ಮನ್ನು ಒಡೆಯುವ ಪ್ರಯತ್ನ ಮಾಡಬಹುದು. ಹೀಗಾಗಿ 72 ಗಂಟೆ ಇಲ್ಲೇ ಇರಿ’ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ, ಬಾಳಾ ಠಾಕ್ರೆಯವರ ಜನ್ಮ ಶತಮಾನೋತ್ಸವ ಇರುವುದರಿಂದ ಮುಂಬೈ ಮಹಾಪೌರ ಸ್ಥಾನವನ್ನು 2.5 ವರ್ಷ ತಮಗೆ ಕೊಡಬೇಕು ಎಂದು ಬಿಜೆಪಿ ಮೇಲೆ ಶಿಂಧೆ ಒತ್ತಡ ಹಾಕುತ್ತಿದ್ದಾರೆ. ಬಿಜೆಪಿ ಜೊತೆ ಹೇಗೂ ಕಾಂಗ್ರೆಸ್, ಓವೈಸಿ ಮತ್ತು ಉದ್ಧವ್‌ ಠಾಕ್ರೆ ಒಟ್ಟಿಗೆ ಬರುವುದಿಲ್ಲ. ಹೀಗಾಗಿ ಅಧಿಕಾರ ಹಿಡಿಯಬೇಕಾದರೆ ಬಿಜೆಪಿಗೆ ತಾನು ಅನಿವಾರ್ಯ ಎಂಬ ಲೆಕ್ಕಾಚಾರದ ಮೇಲೆ ಶಿಂಧೆ ಬಿಜೆಪಿಯ ಮೂಗು ಹಿಡಿದು ಬಾಯಿ ತೆಗೆಸುವ ಪ್ರಯತ್ನದಲ್ಲಿದ್ದಾರೆ. ಒಂದು ರೀತಿಯಲ್ಲಿ ಮಹಾರಾಷ್ಟ್ರದ ಇವತ್ತಿನ ರಾಜಕೀಯ ಮೈತ್ರಿಗಳು ‘ಯಾರಿಗೆ ಯಾರುಂಟು ಎರವಿನ ಸಂಸಾರ, ನೀರ ಮೇಲಿನ ಗುಳ್ಳೆ ನಿಜವಲ್ಲ’ ಅಷ್ಟೇ.

ಠಾಕ್ರೆ ‘ಆಮ್ಲಜನಕ’ ಸ್ಥಗಿತ

70 ಸಾವಿರ ಕೋಟಿ ರು. ಬಜೆಟ್ ಇರುವ ಮುಂಬೈ ಪಾಲಿಕೆಯನ್ನು ತೆಕ್ಕೆಗೆ ತೆಗೆದುಕೊಳ್ಳದೆ ಠಾಕ್ರೆಗಳನ್ನು ರಾಜಕೀಯವಾಗಿ ಮಣಿಸಲು ಸಾಧ್ಯವಿಲ್ಲ ಎಂದು ಬಿಜೆಪಿಗೆ ಅರ್ಥವಾಗಿದ್ದು 2020ರಲ್ಲಿ. ಅದು ಕೂಡ ಉದ್ಧವ್ ಠಾಕ್ರೆ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ ಮತ್ತು ಶರದ್ ಪವಾರ್‌ರ ಎನ್‌ಸಿಪಿ ಜೊತೆಗೆ ಹೋದಾಗ. ಹೀಗಾಗಿಯೇ ಪ್ರಧಾನಿ ಮೋದಿ, ಅಮಿತ್ ಶಾ, ದೇವೇಂದ್ರ ಫಡ್ನವೀಸ್‌ ಯೋಚನೆ ಮಾಡಿ ಏಕನಾಥ ಶಿಂಧೆಯನ್ನು ಒಡೆದು ತಮ್ಮ ಬಳಿಗೆ ತಂದಿದ್ದು. ಲೋಕಸಭೆಯಲ್ಲಿ ಬಿಜೆಪಿ ಪ್ಲ್ಯಾನ್‌ ಪೂರ್ತಿ ತಿರುವು ಮುರುವು ಆಯಿತು. ಆದರೆ ವಿಧಾನಸಭೆ ಮತ್ತು ಮುಂಬೈ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಎಣಿಸಿದಂತೆಯೇ ಆಗಿದೆ. 35 ವರ್ಷಗಳ ತರುವಾಯ ಠಾಕ್ರೆಗಳ ಕೈಯಿಂದ ಚಿನ್ನದ ಮೊಟ್ಟೆ ಇಡುವ ಕೋಳಿ ಬಿಜೆಪಿ ಮತ್ತು ಶಿಂಧೆ ಶಿವಸೇನೆಯ ಪಾಲಾಗಿದೆ. ಮಹಾರಾಷ್ಟ್ರದ ಚುನಾವಣೆಗಳಲ್ಲಿ ದುಡ್ಡಿಗೂ ನೀರಿಗೂ ಏನು ವ್ಯತ್ಯಾಸ ಇಲ್ಲ. ಆ ದೃಷ್ಟಿಯಿಂದ ನೋಡಿದಾಗ ಮಾತ್ರ ಮುಂಬೈಯಲ್ಲಿನ ಅಧಿಕಾರವನ್ನು ಠಾಕ್ರೆ ಕುಟುಂಬ ಕಳೆದುಕೊಳ್ಳುವುದು ಮತ್ತು ಬಿಜೆಪಿ ಗಳಿಸಿಕೊಳ್ಳುವುದರ ಮಹತ್ವ ಅರ್ಥವಾದೀತು. ಮುಂಬೈ ಪಾಲಿಕೆ ಮೇಲಿನ ಪ್ರಭುತ್ವ ಎಂದರೆ ಆಫ್ರಿಕಾದ ಅನೇಕ ದೇಶಗಳ ಸರ್ಕಾರಗಳನ್ನು ನಡೆಸಿದ ಹಾಗೆ. ಮುಂಬೈ ಪಾಲಿಕೆಯಿಂದ ಪೂರೈಕೆ ಆಗುತ್ತಿದ್ದ ಆಮ್ಲಜನಕದ ಹೊರತಾಗಿಯೂ ಠಾಕ್ರೆ ಕುಟುಂಬ ತನ್ನ ರಾಜಕೀಯವನ್ನು ಹೇಗೆ ನಡೆಸಿಕೊಂಡು ಹೋಗಬಹುದು ಎನ್ನುವುದು ಕೂಡ ಕುತೂಹಲದ ಪ್ರಶ್ನೆ.

ಚತುರಮತಿ ಫಡ್ನವೀಸ್‌ ತಂತ್ರ

ಮಹಾರಾಷ್ಟ್ರದಲ್ಲಿ ಪೇಶ್ವೆಗಳು ಮರಾಠಾ ಸಾಮ್ರಾಜ್ಯದ ಮಂತ್ರಿಗಳಾಗಿ ಅಧಿಕಾರದ ಕೇಂದ್ರವಾದಾಗಿನಿಂದಲೂ ಬ್ರಾಹ್ಮಣರು ಮತ್ತು ಮರಾಠರ ನಡುವೆ ಒಂದು ಸಾಮಾಜಿಕ, ರಾಜಕೀಯ ಕಂದಕ ಇದ್ದೇ ಇತ್ತು. ಹೀಗಾಗಿ ಮಹಾರಾಷ್ಟ್ರದಂತಹ ಜಾತಿಪ್ರಧಾನ ರಾಜ್ಯದಲ್ಲಿ ಒಬ್ಬ ಬ್ರಾಹ್ಮಣ ರಾಜಕಾರಣಿ ಮಾಸ್ ಲೀಡರ್‌ ಆಗಿ ಬೆಳೆಯುವುದು ಕಷ್ಟ ಎನ್ನುವ ಸ್ಥಿತಿ ಇತ್ತು. ಆದರೆ ದೇವೇಂದ್ರ ಫಡ್ನವೀಸ್‌ರಂತಹ ಚತುರ ರಾಜಕಾರಣಿ ವಿಧಾನಸಭೆಯಿಂದ ಹಿಡಿದು 29ರಲ್ಲಿ 25 ಮಹಾನಗರ ಪಾಲಿಕೆಗಳು, 100ಕ್ಕೂ ಹೆಚ್ಚು ನಗರ ಪಾಲಿಕೆಗಳನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಂಡು ಸೋಜಿಗಕ್ಕೆ ಕಾರಣರಾಗಿದ್ದಾರೆ. ಬರೀ ಶೇ.3 ಇರುವ ಬ್ರಾಹ್ಮಣ ಸಮುದಾಯದಿಂದ ಬಂದು ಬಲಾಢ್ಯ ಮರಾಠಾ ಸಮುದಾಯದ ಮೀಸಲಾತಿ ಆಂದೋಲನ ತನ್ನದೇ ವಿರುದ್ಧ ತಿರುಗಿದರೂ, ಚಾಣಾಕ್ಷತನದಿಂದ ಉಳಿದ ಸಮುದಾಯಗಳ ಮತಗಳನ್ನು ಒಟ್ಟಿಗೆ ತಂದು ವಿಧಾನಸಭೆ ಗೆದ್ದುಕೊಂಡ ಫಡ್ನವೀಸ್‌ ಈಗ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಶರದ್‌ ಪವಾರ್‌ ಮತ್ತು ಠಾಕ್ರೆ ಕುಟುಂಬಗಳನ್ನು ರಾಜಕೀಯವಾಗಿ ದುರ್ಬಲ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ನಿತಿನ್ ಗಡ್ಕರಿ, ವಿನೋದ್‌ ತಾವಡೆ, ಪಂಕಜ್‌ ಮುಂಡೆಯವರಂತಹ ಬಿಜೆಪಿ ನಾಯಕರಿಗೂ ಮಹಾರಾಷ್ಟ್ರದಲ್ಲಿ ನಾನೇ ಫೈನಲ್ ಎಂಬ ಸಂದೇಶವನ್ನು ಚುನಾವಣಾ ಫಲಿತಾಂಶದ ಮೂಲಕ ಕೊಟ್ಟಿದ್ದಾರೆ. ಬಹುತೇಕ ಇವತ್ತಿನ ಪರಿಸ್ಥಿತಿ ನೋಡಿದರೆ ರಣತಂತ್ರಗಳು, ಆಡಳಿತ ಮತ್ತು ರಾಜಕೀಯ ನಡೆಗಳಲ್ಲಿ ದೇವೇಂದ್ರರನ್ನು ಮೀರಿಸುವವರು ಯಾರೂ ಕಾಣುತ್ತಿಲ್ಲ. ಮೋದಿ ಸಾಹೇಬರು ಗುಜರಾತ್‌ನಲ್ಲಿ ಮಾಡಿದ ‘ಜಾತಿ ತಟಸ್ಥ’ ಪ್ರಯೋಗಗಳನ್ನು ದೇವೇಂದ್ರ ಫಡ್ನವೀಸ್‌ ಮರಾಠಾ ಬಾಹುಳ್ಯ ಪಶ್ಚಿಮ ಮಹಾರಾಷ್ಟ್ರ ಮತ್ತು ಮರಾಠಾವಾಡದಂತಹ ದೊಡ್ಡ ಜಾತಿಗಳ ಕೋಟೆಗಳಲ್ಲಿ ಮಾಡಿದ್ದು ಅಧಿಕಾರ ಸಿಗುವಂತೆ ಮಾಡಿದಂತೆ ಕಾಣುತ್ತಿದೆ. ಈ 2 ವರ್ಷಗಳಲ್ಲಿ ದೇವೇಂದ್ರ ಫಡ್ನವೀಸ್‌ ಗೆದ್ದಿರುವ ಕೋಟೆಗಳು ಮತ್ತು ರಾಜಕೀಯ ರಣತಂತ್ರಗಳನ್ನು ಹೆಣೆಯುವ ಪರಿಯನ್ನು ಗಮನಿಸಿದರೆ ಮೋದಿ ನಂತರ ಯಾರು ಎಂಬ ಪಟ್ಟಿಯಲ್ಲಿ ನಿಸ್ಸಂದೇಹವಾಗಿ ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥರ ನಂತರದ ಸ್ಥಾನದಲ್ಲಿ ಹೋಗಿ ಕುಳಿತುಕೊಂಡಿದ್ದಾರೆ.

ಠಾಕ್ರೆ ಅಭಿ ಜಿಂದಾ ಹೈ!

ಎದುರಾಳಿ ಎಷ್ಟೇ ಶಕ್ತಿಯುತನಾಗಿರಲಿ, ದೊಡ್ಡ ದೊಡ್ಡ ತೋಪುಗಳನ್ನು ತರಲಿ, ಹಣದ ಹೊಳೆಯನ್ನೇ ಹರಿಸಲಿ; ಒಂದು ವೇಳೆ ಸೇನಾಧಿಪತಿಗಳೆಲ್ಲ ತಮ್ಮ ಆಂತರಿಕ ಜಗಳಗಳನ್ನು ಬಗೆಹರಿಸಿಕೊಂಡು, ಸೈನಿಕರ ಏಕನಿಷ್ಠ ಭಾವನೆಗಳ ಜೊತೆಗೆ ಯುದ್ಧ ಮಾಡಿದರೆ ಸೋಲಬಹುದು, ಆದರೆ ನಿಮ್ಮನ್ನು ಸಾಯಿಸಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಎದುರಾಳಿಗೆ ಮುಂಬೈ ಯುದ್ಧ ತೋರಿಸಿಕೊಟ್ಟಿದೆ. 2022ರಲ್ಲಿ ಬಿಜೆಪಿ ಉದ್ಧವ್‌ ಠಾಕ್ರೆ ಪಕ್ಷವನ್ನೇ ಶೇ.75ರಷ್ಟು ಒಡೆಯಿತು. ನಂತರ ಬಿಜೆಪಿ ಮತ್ತು ಶಿಂಧೆ ಸೇರಿ ಉದ್ಧವ್ ಠಾಕ್ರೆಯ 84ರಲ್ಲಿ 55 ಪಾಲಿಕೆ ಸದಸ್ಯರು, 100ಕ್ಕೂ ಹೆಚ್ಚು ಶಾಖಾ ಪ್ರಮುಖರನ್ನು ಒಡೆದರು. 4 ವರ್ಷ ಪಾಲಿಕೆ ಚುನಾವಣೆಯನ್ನು ವಿಳಂಬ ಮಾಡಿ ಉದ್ಧವ್‌ ಠಾಕ್ರೆಯವರ ಆರ್ಥಿಕ ಶಕ್ತಿಯನ್ನು ಕುಂದಿಸುವ ಪ್ರಯತ್ನ ನಡೆಯಿತು. ಯಾವಾಗ ಬದುಕಿ ಉಳಿಯುವುದು ಒಮ್ಮೊಮ್ಮೆ ಗೆಲ್ಲುವುದಕ್ಕಿಂತ ಮುಖ್ಯ ಎನ್ನುವುದು ಉದ್ಧವ್‌ ಮತ್ತು ರಾಜ್ ಇಬ್ಬರಿಗೂ ಅರ್ಥವಾಯಿತೋ ಹಳೆಯ ದ್ವೇಷ ಮರೆತು ಒಟ್ಟಾದರು.

ಮುಸ್ಲಿಂ ಮತಗಳು ವಿಭಜನೆಯಾಗುತ್ತವೆ ಎಂದು ಗೊತ್ತಿದ್ದರೂ ಕಾಂಗ್ರೆಸ್‌ನಿಂದ ಮೈತ್ರಿ ಕಡಿದುಕೊಂಡು ಬರೀ ಮರಾಠಿ ಮಾಣೂಸ್ ಪ್ರಚಾರ ಶುರು ಮಾಡಿದರು. ಇದರಿಂದ ಗುಜರಾತಿಗಳು, ಮಾರ್ವಾಡಿಗಳು, ತಮಿಳರು, ಬಿಹಾರಿಗಳು ಪೂರ್ತಿ ಬಿಜೆಪಿಯತ್ತ ವಾಲಿದ್ದು ಹೌದಾದರೂ, ಮೂಲ ಬಾಳಾ ಠಾಕ್ರೆಯನ್ನು ಇಷ್ಟಪಡುತ್ತಿದ್ದ ಸುಮಾರು ಶೇ.50 ಕಟ್ಟಾ ಮರಾಠಿ ಮತದಾರರು ಉದ್ಧವ್‌ ಮತ್ತು ರಾಜ್ ಠಾಕ್ರೆ ಜೊತೆ ಉಳಿದುಕೊಂಡಿದ್ದಾರೆ. ಮುಂಬೈಯಲ್ಲಿ ಅಧಿಕಾರ ಹೋದರೂ ಠಾಕ್ರೆ ಬ್ರ್ಯಾಂಡ್ ಮತದಾರ ಕೈಬಿಟ್ಟು ಹೋಗಿಲ್ಲ ಎನ್ನುವುದು ಠಾಕ್ರೆಗಳಿಗೆ ಸಮಾಧಾನ ತರುವ ಸಂಗತಿ. ಯುದ್ಧಶಾಸ್ತ್ರದಲ್ಲಿ ಒಂದು ಮಾತು ಚಾಲ್ತಿಯಲ್ಲಿದೆ. ‘ರಣರಂಗದಲ್ಲಿ ಗಾಯವಾದರೂ ಸರಿ, ಕೆಲವೊಮ್ಮೆ ಸೋತರೂ ಸರಿ. ಹೋರಾಟ ಮಾಡಿ ಬದುಕುಳಿಯಬೇಕು. ಇನ್ನೊಂದು ದಿನ ಹೋರಾಟ ಮಾಡಬಹುದು.’ ಈ ಚುನಾವಣೆಯಲ್ಲಿ ಠಾಕ್ರೆ ಸಹೋದರರು ಒಟ್ಟಿಗೆ ಬಂದು ಇದನ್ನೇ ಮಾಡಿದಂತೆ ಕಾಣುತ್ತಿದೆ.

ಉಳಿದವರು ಕಂಡಂತೆಮಹಾರಾಷ್ಟ್ರ ಪೂರ್ತಿ ಮಹಾಯುತಿಗಿಂತ ಬಿಜೆಪಿಮಯವಾಗಿದೆ ಎನ್ನುವುದು ವಾಸ್ತವ. ಪುಣೆ ಮತ್ತು ಪಿಂಪ್ರಿಯಂತಹ ತನ್ನ ಭದ್ರಕೋಟೆಗಳನ್ನು ಅಜಿತ್ ಪವಾರ್‌ ಕಳೆದುಕೊಂಡು ಬಿಜೆಪಿಗೆ ನೀಡಿದ್ದಾರೆ. ಪವಾರರ ಗಟ್ಟಿಭೂಮಿ ಸೊಲ್ಲಾಪುರ, ಸಾಂಗ್ಲಿ, ಸತಾರಾ, ಕೊಲ್ಹಾಪುರ, ಕರಾಡಗಳು ಕೂಡ ಬಿಜೆಪಿಮಯವಾಗಿವೆ. ಬಿಜೆಪಿ ಕಾರ್ಯಕರ್ತರು ಗಟ್ಟಿಯಾಗಿ ಅಜಿತ್ ಪವಾರ್‌ ಜೊತೆ ಮೈತ್ರಿ ಸಾಕು ಎಂದು ಹೇಳಲು ಶುರು ಮಾಡಿದ್ದಾರೆ. ಒಂದು ಅರ್ಥದಲ್ಲಿ ಅಜಿತ್ ದಾದಾ ಇನ್ನಷ್ಟು ರಾಜಕೀಯವಾಗಿ ದುರ್ಬಲರಾಗಿದ್ದಾರೆ. ಇನ್ನು ಏಕನಾಥ್‌ ಶಿಂಧೆ ಬಣ ಬಿಜೆಪಿ ಜೊತೆಗೆ ಸೇರಿ ಮುಂಬೈ, ಥಾಣೆ, ನಾಸಿಕ್, ನವಿ ಮುಂಬೈಯಲ್ಲಿ ಅಧಿಕಾರದ ಪಾಲು ತೆಗೆದುಕೊಂಡಿದೆ ಎಂಬುದು ಹೌದಾದರೂ ಮುಂಬೈಯಲ್ಲಿ ಮರಾಠಿ ಭಾಷಿಕ ವಾರ್ಡ್‌ಗಳಲ್ಲಿ ಉದ್ಧವ್‌ ಠಾಕ್ರೆ ಜೊತೆಗಿನ ನೇರ ಹೋರಾಟದಲ್ಲಿ ಮಣಿಸಲು ಸಾಧ್ಯವಾಗಿಲ್ಲ ಎನ್ನುವುದು ವಾಸ್ತವ. ಬಿಜೆಪಿಯ ಏಕಚಕ್ರಾಧಿಪತ್ಯದ ಕನಸಿಗೆ ಹಿಂದೆ ಉದ್ಧವ್‌ ಠಾಕ್ರೆ ಪಕ್ಷವನ್ನು ಒಡೆದಂತೆ ಮುಂದಿನ ದಿನಗಳಲ್ಲಿ ಅವಶ್ಯಕತೆ ಬಿದ್ದಲ್ಲಿ ಬಿಜೆಪಿಯು ಶಿಂಧೆ ಸೇನೆಯನ್ನು ಒಡೆದರೂ ಆಶ್ಚರ್ಯವಿಲ್ಲ.