ಇಂದು ಧಾಮಿ, ಮಾ.28ಕ್ಕೆ ಸಾವಂತ್ ಪ್ರಮಾಣ ಸ್ವೀಕಾರ ಮೋದಿ, ಅಮಿತ್ ಶಾ ಸೇರಿ ಗಣ್ಯರು ಭಾಗಿ ಪರೇಡ್ ಗ್ರೌಂಡ್‌ನಲ್ಲಿ ಧಾಮಿ ಪ್ರಮಾಣವಚನ ಕಾರ್ಯಕ್ರಮ
ಡೆಹ್ರಾಡೂನ್(ಮಾ.23): ಉತ್ತರಾಖಂಡದ ನಿಯೋಜಿತ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಮಾ.23ರಂದು ಇಲ್ಲಿನ ಪರೇಡ್ ಗ್ರೌಂಡ್‌ನಲ್ಲಿ ಆಯೋಜಿಸಿರುವ ಅದ್ಧೂರಿ ಕಾರ‍್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ ಸಂಪುಟ ಸಚಿವರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನು ಗೋವಾ ನಿಯೋಜಿತ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾ.28ರಂದು ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಸ್ಟೇಡಿಯಂನಲ್ಲಿ ಆಯೋಜಿಸುವ ಕಾರ‍್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎರಡೂ ಕಾರ‍್ಯಕ್ರಮದಲ್ಲೂ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಬಿಜೆಪಿಯ ಪ್ರಮುಖ ಗಣ್ಯರು ಭಾಗಿಯಾಗಲಿದ್ದಾರೆ.
ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪುಷ್ಕರ್ ಸಿಂಗ್ ಧಾಮಿ ಅವರನ್ನೇ ಮುಖ್ಯಮಂತ್ರಿಯಾಗಿ ಮರು ಆಯ್ಕೆ ಮಾಡಲಾಗಿದೆ. ತನ್ಮೂಲಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರೂ ಪುಷ್ಕರ್ ಸಿಂಗ್ ಮತ್ತೆ ಮುಖ್ಯಮಂತ್ರಿ ಹುದ್ದೆಗೆ ಏರಿದ್ದಾರೆ.
ಮಣಿಪುರಿ ಶಾಲ್ ಉತ್ತರಾಖಂಡ್ ಟೋಪಿ... ಪ್ರಧಾನಿ ಧಿರಿಸಿನ ಬಗ್ಗೆ ಭಾರಿ ಚರ್ಚೆ
ಉತ್ತರಾಖಂಡದಲ್ಲಿ ಸತತ 2ನೇ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. 21 ವರ್ಷಗಳ ರಾಜ್ಯದ ಇತಿಹಾಸದಲ್ಲಿ 2ನೇ ಬಾರಿ ಅಧಿಕಾರ ಪಡೆದ ಮೊದಲ ಆಡಳಿತಾರೂಢ ಪಕ್ಷ ಎಂಬ ಇತಿಹಾಸ ಸೃಷ್ಟಿಸಿದೆ. ಆದರೆ ಹಾಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಖಟಿಮಾ ಕ್ಷೇತ್ರದಿಂದ 6,500 ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು. ಇದು ಬಿಜೆಪಿಗೆ ತೀವ್ರ ಮುಜುಗರ ತಂದಿತ್ತು. ಹೀಗಾಗಿ ರಾಜ್ಯದಲ್ಲಿ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ತೀವ್ರ ಕುತೂಹಲ ಸೃಷ್ಟಿಯಾಗಿತ್ತು. ಮುಖ್ಯಮಂತ್ರಿ ಧಾಮಿ, ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ತ್ರಿವೇಂದ್ರ ಸಿಂಗ್ ರಾವತ್ ನಡುವೆ ತೀವ್ರ ಪೈಪೋಟಿಯೂ ಆರಂಭವಾಗಿತ್ತು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪುಷ್ಕರ್ ಧಾಮಿ ಮುಖ್ಯಮಂತ್ರಿಯಾಗಿ ಪುನರಾಯ್ಕೆಯಾಗಿದ್ದಾರೆ. ಚುನಾವಣೆಗೂ ಕೆಲವೇ ತಿಂಗಳ ಮುನ್ನ ಸಂದಿಗ್ಧ ಕಾಲದಲ್ಲಿ ಅಧಿಕಾರಕ್ಕೇರಿದ್ದರೂ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಿಜೆಪಿ ಪುಷ್ಕರ್ ಧಾಮಿ ಅವರಿಗೆ ಮತ್ತೊಂದು ಅವಕಾಶ ನೀಡಿದೆ.
ಬಿಜೆಪಿ ಗೆಲುವಿನ ಹಿಂದೆ ಪ್ರಹ್ಲಾದ್ ಜೋಶಿ, ಚುನಾವಣಾ ಕಾರ್ಯತಂತ್ರ ಸೀಕ್ರೆಟ್ ಇದು!
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಧಾಮಿ ಅವರನ್ನು ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಗೆ ಹೋಲಿಸಿ, ‘ಧಾಮಿ ಒಳ್ಳೆಯ ಫಿನಿಶ್ಶರ್. ಬಿಜೆಪಿ ಗೆಲ್ಲಲು ಬೇಕಾದ ಓಟು ತರುವ ಶಕ್ತಿ ಹೊಂದಿದ್ದಾರೆ. ಧಾಮಿ ಮುಖ್ಯಮಂತ್ರಿಯಾಗಿ ಪಟ್ಟು ಬಿಡದೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಇವರು ಟೆಸ್ಟ್ ಮ್ಯಾಚ್ ಆಡುವ ಅಗತ್ಯವೂ ಇದೆ’ ಎಂದು ಹೇಳಿದ್ದರು.
ಧಮಿ ಹಿನ್ನೆಲೆ:
ಉತ್ತರಾಖಂಡದ ಗಡಿ ಜಿಲ್ಲೆ ಪಿತೋರ್‌ಗಢದವರಾದ ಪುಷ್ಕರ್ ಸಿಂಗ್ ಧಾಮಿ ಮಾಜಿ ಯೋಧರೊಬ್ಬರ ಮಗ. 1990-1999ರ ವರೆಗೆ ಎಬಿವಿಪಿಯಲ್ಲಿ ಹಲವು ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು. 2 ಬಾರಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದರು. 2 ಬಾರಿ ಶಾಸಕರಾಗಿ ಯುವ ಮುಖಂಡರಾಗಿದ್ದಾಗಲೇ ಸಾಕಷ್ಟುಹೆಸರು ಗಳಿಸಿದ್ದಾರೆ. ಈ ನಡುವೆ 2021ರಲ್ಲಿ ತೀರ್ಥ ಸಿಂಗ್ ರಾವತ್ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಪುಷ್ಕರ್ ಸಿಂಗ್ ಧಾಮಿ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಮೂಲಕ 45 ವರ್ಷಕ್ಕೇ ಮುಖ್ಯಮಂತ್ರಿಯಾದ ಮೊದಲಿಗರೆನಿಸಿಕೊಂಡಿದ್ದರು. ಧಾಮಿ ಲಖನೌ ವಿಶ್ವವಿದ್ಯಾಲಯದಲ್ಲಿ ಎಚ್‌ಆರ್ ಮ್ಯಾನೇಜ್‌ಮೆಂಟ್ ಮತ್ತು ಕಾನೂನು ವಿಷಯದಲ್ಲಿ ಪದವಿ ಪಡೆದಿದ್ದಾರೆ.
