ರೈತರ ಹೆಸರಲ್ಲಿ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದ ಆಪ್‌ನಿಂದ ರೈತರ ಮೇಲೆ ಲಾಠಿಚಾರ್ಜ್!
ಕೃಷಿ ಕಾಯ್ದೆ ವಿಚಾರದಲ್ಲಿ ಪಂಜಾಬ್‌ನ ರೈತರನ್ನು ಬೆಂಬಲಿಸಿ ಅವರ ಅಪಾರ ಬಲದೊಂದಿಗೆ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದಿದ್ದ ಆಮ್ ಆದ್ಮಿ ಪಾರ್ಟಿ ಈಗ, ರೈತರ ಮೇಲೆ ಲಾಠಿಚಾರ್ಜ್ ಮಾಡಿದೆ. ಸಿಎಂ ಭಗವಂತ್ ಮಾನ್ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತರ ಮೇಲೆ ಪಂಜಾಬ್ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
ಚಂಡೀಗಢ (ನ.30): ರೈತರ ಶ್ರೇಯೋಭಿವೃದ್ಧಿ ಮಾಡುವುದಾಗಿ, ರೈತರ ಬಲದಿಂದಲೇ ಪಂಜಾಬ್‌ನಲ್ಲಿ ದೊಡ್ಡ ಮಟ್ಟದ ಗೆಲುವು ಪಡೆದು ಅಧಿಕಾರ ಹಿಡಿದಿದ್ದ ಆಮ್ ಆದ್ಮಿ ಪಾರ್ಟಿಯ ಮುಖ್ಯಮಂತ್ರಿ ಭಗವಂತ್ ಮಾನ್, ಬುಧವಾರ ಪ್ರತಿಭಟನಾನಿರತ ರೈತ ಕಾರ್ಮಿಕರ ಮೇಲೆ ಪೊಲೀಸರಿಂದ ಲಾಠಿಚಾರ್ಜ್ ಮಾಡಿಸಿದ್ದಾರೆ. ಕಾರ್ಮಿಕರು ತಮ್ಮ ಬೇಡಿಕೆಗಳಿಗೆ ಆಗ್ರಹಿಸಿ ಭಾರತೀಯ ಖೇತ್ ಮಜ್ದೂರ್ ಯೂನಿಯನ್ ನೇತೃತ್ವದಲ್ಲಿ ಸಂಗ್ರೂರಿನ ಸಿಎಂ ಭಗವಂತ್ ಮಾನ್ ನಿವಾಸದ ಎದುರು ಪ್ರತಿಭಟನೆಗೆ ನೆರೆದಿದ್ದರು ಅಷ್ಟರಲ್ಲಿ ಪೊಲೀಸರು ಬೆನ್ನಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಹಲವು ಕಾರ್ಮಿಕರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಂಜಾಬ್‌ನ ವಿವಿಧ ಟ್ರೇಡ್ ಯೂನಿಯನ್‌ಗಳ ಸದಸ್ಯರು ಬೆಳಿಗ್ಗೆಯೇ ಸಂಗ್ರೂರ್‌ನ ಬೈಪಾಸ್‌ನಲ್ಲಿ ಜಮಾಯಿಸಿದರು. ಇಲ್ಲಿಂದ ಭಾರತೀಯ ಖೇತ್ ಮಜ್ದೂರ್ ಯೂನಿಯನ್ ಬ್ಯಾನರ್ ಅಡಿಯಲ್ಲಿ ಸಿಎಂ ನಿವಾಸದತ್ತ ಪಾದಯಾತ್ರೆ ನಡೆಸಿದರು. ಈ ಪ್ರದರ್ಶನದ ಬಗ್ಗೆ ಸಂಘಟನೆಗಳು ಈಗಾಗಲೇ ಆಡಳಿತಕ್ಕೆ ತಿಳಿಸಿದ್ದವು. ಹೀಗಾಗಿ ಸಿಎಂ ನಿವಾಸಕ್ಕೆ ತೆರಳುವ ರಸ್ತೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಸಿಎಂ ನಿವಾಸದ 1 ಕಿಲೋಮೀಟರ್ ದೂರದಲ್ಲಿ ಪಾದಯಾತ್ರೆಗೆ ತಡೆ: ಮುಖ್ಯಮಂತ್ರಿ ನಿವಾಸದತ್ತ ಪಾದಯಾತ್ರೆ ಮಾಡುತ್ತಿದ್ದ ರೈತ ಕಾರ್ಮಿಕರನ್ನು ಸಿಎಂ ನಿವಾಸದ ಒಂದು ಕಿಲೋಮೀಟರ್ ದೂರದಲ್ಲೇ ತಡೆ ಹೇರಲಾಯಿತು. ಈ ವೇಳೆ ಕಾರ್ಮಿಕರು ಪಂಜಾಬ್ ಸರ್ಕಾರ ಹಾಗೂ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಘೋಷಣೆಗಳನ್ನು ಕೂಗಿಸಿದರು. ಬ್ಯಾರಿಕೇಡ್‌ಗಳನ್ನು ದಾಟಿಕೊಂಡು ಮುಂದೆ ಹೋಗುವ ಯತ್ನದಲ್ಲಿ ಪೊಲೀಸರೊಂದಿಗೆ ಅವರ ಘರ್ಷಣೆ ಆರಂಭವಾಗಿತ್ತು. ಅದಾದ ಬಳಿಕ ಪೊಲೀಸರು ಪ್ರತಿಭಟನೆಗೆ ಬಂದಿದ್ದ ರೈತ ಕಾರ್ಮಿಕರ ಮೇಲೆ ಲಾಠಿ ಚಾರ್ಜ್ ಮಾಡಿದರು. ಈ ವೇಳೆ ಹಲವಾರು ರೈತರು ಹಾಗೂ ಕಾರ್ಮಿಕರು ಗಾಯಗೊಂಡಿದ್ದಾರೆ.
ಧರಣಿಗೆ ಇಳಿದ ಪ್ರತಿಭಟನಾಕಾರರು: ಮತ್ತೊಂದೆಡೆ, ಲಾಠಿಚಾರ್ಜ್ ನಂತರ ಕಾರ್ಮಿಕ ಸಂಘಟನೆಗಳ ಸದಸ್ಯರು ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಮನೆ ಇರುವ ಕಾಲೋನಿಯ ಗೇಟ್ ಮುಂದೆ ಧರಣಿಗೆ ಕುಳಿತಿದ್ದರು. ಕಾಲೋನಿಯೊಳಗೆ ಹೋಗಲು ಇದ್ದ ದಾರಿಯನ್ನು ತಡೆದಿದ್ದಾರೆ. ಪಂಜಾಬ್ ಪೊಲೀಸರ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ಕಾರ್ಮಿಕ ಸಂಘಟನೆಗಳ ಸದಸ್ಯರು ಹೇಳಿದ್ದಾರೆ.
ದೆಹಲಿ ಸಿಎಂಗೆ 'ಚೋರ್ ಚೋರ್', 'ಮೋದಿ ಮೋದಿ' ಘೋಷಣೆ ಕೂಗಿದ ಗುಜರಾತ್ ಜನತೆ; ಕಪ್ಪು ಬಾವುಟ ಪ್ರದರ್ಶನ
ಬೇಡಿಕೆಗಳ ಈಡೇರಿಕಾಗಿ ಪ್ರತಿಭಟನೆ: ಸಂಗ್ರೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾರ್ಮಿಕ ಸಂಘಟನೆಗಳ ಎರಡು ಪ್ರಮುಖ ಬೇಡಿಕೆಗಳಿವೆ. ರೈತರಿಗೆ ಹಾಗೂ ಕಾರ್ಮಿಕರಿಗೆ ಸ್ವಂತ ಮನೆಗಳನ್ನು ನಿರ್ಮಿಸಲು ನಿವೇಶನಗಳನ್ನು ನೀಡುವುದು ಮತ್ತು ಶಾಸ್ವತ ಉದ್ಯೋಗ ನೀಡಬೇಕು ಎನ್ನುವ ಬೇಡಿಕೆ ಸೇರಿವೆ. ಮನ್ರೇಗಾ ಮತ್ತು ಕೆಲಸ ಮಾಡಿದ ಕಾರ್ಮಿಕರಿಗೆ ದಿನಗೂಲಿ ಸಿಗುತ್ತಿಲ್ಲ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.
ಕುಡಿದು ವಿಮಾನ ಹತ್ತಿದ್ದರೇ Bhagwant Mann..? ನಾಗರಿಕ ವಿಮಾನಯಾನ ಸಚಿವಾಲಯದಿಂದ ತನಿಖೆ
ಹಲವಾರು ಸುತ್ತಿನ ಸಭೆ: ಪ್ರತಿಭಟನಾಕಾರರ ಪ್ರಕಾರ ಈಗಾಗಲೇ ಬೇಡಿಕೆ ಈಡೇರಿಕೆಗಾಗಿ ಆಪ್ ಸರ್ಕಾರದೊಂದಿಗೆ ಸಾಕಷ್ಟು ಸುತ್ತಿನ ಸಭೆಗಳನ್ನು ನಡೆಸಲಾಗಿದೆ. ಆದರೆ, ಪಂಜಾಬ್ ಸರ್ಕಾರ ಉದ್ದೇಶಪೂರ್ವಕವಾಗಿ ತಮ್ಮ ಬೇಡಿಕೆಯನ್ನು ನಿರ್ಲಕ್ಷ್ಯ ಮಾಡುತ್ತಿದೆ. ಪಂಜಾಬ್ ಸರ್ಕಾರವು ಮನ್ರೇಗಾ ಹಣವನ್ನು ಪಂಚಾಯತ್‌ಗಳಿಗೆ ನೀಡುತ್ತಿಲ್ಲ. ಹೀಗಿರುವಾಗ ಮನೆ ನಡೆಸುವುದೇ ದುಸ್ತರವಾಗಿದೆ. ಇಂದಿಗೂ ಪಂಜಾಬ್‌ನಲ್ಲಿ ಕಾರ್ಮಿಕರ ಕೂಲಿ 250 ರೂಪಾಯಿ ಆಗಿದೆ. ಕೂಲಿ ಹೆಚ್ಚಿಸುವ, ನಿವೇಶನ ನೀಡುವ, ಸಾಲ ಮನ್ನಾ ಮಾಡುವ ಭರವಸೆಗಳನ್ನು ಸರ್ಕಾರ ಈವರೆಗೂ ಈಡೇರಿಸಿಲ್ಲ ಎಂದಿದ್ದಾರೆ.