ವೈರಲ್ ವಿಡಿಯೋ.. ಪಡಿತರ ಗೋಧಿ ಪಡೆಯಲು ಮರ್ಸಿಡೀಸ್‌ನಲ್ಲಿ ಬಂದ 'ಬಡವ' !
ಬಡವರಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯಗಳು ಸಿಗಬೇಕು ಎನ್ನುವ ನಿಟ್ಟಿನಲ್ಲಿ ವಿವಿಧ ರಾಜ್ಯ ಸರ್ಕಾರಗಳು ಪಡಿತರ ವಿತರಣೆ ಮಾಡುತ್ತದೆ. ವಿವಿಧ ರೀತಿಯ ಧಾನ್ಯಗಳು, ಅಕ್ಕಿ , ಗೋಧಿಯನ್ನು ರೇಷನ್ ಕಾರ್ಡ್‌ನಲ್ಲಿ ನೀಡಲಾಗುತ್ತದೆ. ಆದರೆ, ಪಂಜಾಬ್‌ನಲ್ಲಿ ಮರ್ಸಿಡೀಸ್ ಕಾರ್‌ನಲ್ಲಿ ಬಂದ ವ್ಯಕ್ತಿ ಪಡಿತರ ಗೋಧಿ ಚೀಲವನ್ನು ಕಾರಿನಲ್ಲಿ ತುಂಬಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಚಂಡೀಗಢ (ಸೆ.6): ಬಡವರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ರೀತಿಯ ಯೋಜನೆಗಳನ್ನು ಪ್ರಕಟಿಸುತ್ತದೆ. ಬಡವರು ಹಸಿವಿನಿಂದ ಬಳಬಾರದು ಎನ್ನುವ ಉದ್ದೇಶಕ್ಕಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕ ಕಡಿಮೆ ಬೆಲೆಯಲ್ಲಿ ಪಡಿತರವನ್ನು ವಿತರಣೆ ಮಾಡುತ್ತದೆ. ಇದರ ಬಹುತೇಕ ಲಾಭವನ್ನು ಶ್ರೀಮಂತರು ಕೂಡ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳ ನಡುವೆ ಪಂಜಾಬ್‌ನಲ್ಲಿ ವಿಡಿಯೋವೊಂದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಕಡಿಮೆ ಬೆಲೆಯಲ್ಲಿ ಸಿಗುವ ಪಡಿತರ ಗೋಧಿಯನ್ನು ಪಡೆದುಕೊಳ್ಳಲು ಮರ್ಸಿಡೀಸ್ ಕಾರ್‌ನಲ್ಲಿ ಬಂದಿದ್ದಾರೆ. ಪಂಜಾಬ್‌ಬಲ್ಲಿ ಪ್ರತಿ ಕೆಜಿ ಗೋಧಿಯನ್ನು 2 ರೂಪಾಯಿಯಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ನೀಡಲಾಗುತ್ತದೆ. ಇಂಥ ಗೋಧಿಯ ಕೆಲವು ಚೀಲಗಳನ್ನು ವ್ಯಕ್ತಿಯೊಬ್ಬ ತನ್ನ ಮರ್ಸಿಡೀಸ್ ಕಾರ್‌ನಲ್ಲಿ ತುಂಬುತ್ತಿರುವ ದೃಶ್ಯ ಇದಾಗಿದೆ. ಕಾರ್‌ಅನ್ನು ನ್ಯಾಯಬೆಲೆಯ ಅಂಗಡಿಯ ಹೊರಗಡೆ ನಿಲ್ಲಿಸುವ ವ್ಯಕ್ತಿ, ಅಂಗಡಿಗೆ ಹೋಗಿ ನಾಲ್ಕು ಚೀಲ ಗೋಧಿಯನ್ನು ತನ್ನ ಡಿಕ್ಕಿಯಲ್ಲಿ ಹಾಕಿ ಹೊರಟುಹೋಗಿದ್ದಾರೆ. ಇನ್ನು ಮರ್ಸಿಡೀಸ್ ಕಾರ್‌ನ ನಂಬರ್ ಕೂಡ ವಿಐಪಿಯದ್ದಾಗಿದೆ. ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ಇದರ ವಿಡಿಯೋವನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾನೆ. ಇದರ ನಡುವೆ ಪಂಜಾಬ್‌ನ ಆಹಾರ ಸರಬರಾಜು ಇಲಾಖೆಯ ಸಚಿವ ಲಾಲಚಂದ್ ಕಟಾರುಚಾ ಪ್ರಕರಣದ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ.
ಇನ್ನು ಮರ್ಸಿಡೀಸ್‌ನಲ್ಲಿ ಗೋಧಿ ಚೀಲವನ್ನು ತುಂಬಿದ್ದ ವ್ಯಕ್ತಿಯನ್ನು ಪತ್ತೆ ಮಾಡಲಾಗಿದೆ. ಈ ವೇಳೆ ಆತ, ನಾನು ಬಡವ. ಈ ಮರ್ಸಿಡೀಸ್ ಕಾರು ನನ್ನ ಸಂಬಂಧಿಗೆ ಸೇರಿದ್ದು, ನನ್ನ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ ಎಂದು ಹೇಳಿದ್ದಾರೆ. ಮರ್ಸಿಡೀಸ್ ಕಾರ್‌ಅನ್ನು (Mercedes Car) ಮಾಲೀಕನಾಗಿರುವ ವ್ಯಕ್ತಿ ವಿದೇಶದಲ್ಲಿ ನೆಲೆಸುತ್ತಾನೆ. ನನ್ನ ಮನೆಯ ಸಮೀಪದಲ್ಲಿಯೇ ಇರುವ ಜಮೀನಿನಲ್ಲಿ ಈ ಕಾರ್‌ಅನ್ನು ಪಾರ್ಕ್ ಮಾಡಲಾಗುತ್ತದೆ. ಇದು ಡೀಸೆಲ್ ಕಾರ್ ಆಗಿರುವ ಕಾರಣ ಕೆಲವೊಮ್ಮೆ ನಾನೂ ಕೂಡ ಡ್ರೈವ್ ಮಾಡುತ್ತೇನೆ. ನನ್ನ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ನ್ಯಾಯಬೆಲೆಯ ಅಂಗಡಿಯ ಸಮೀಪದಲ್ಲಿಯೇ ನನ್ನ ಮಕ್ಕಳು ಕೂಡ ನಿಂತಿದ್ದರು. ನಾನು ಸಣ್ಣಪುಟ್ಟ ವಿಡಿಯೋಗ್ರಫಿ ಕೆಲಸ ಮಾಡುತ್ತೇನೆ. ಆದರೆ, ನನ್ನ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ವ್ಯಕ್ತಿ ಈ ಕಾರು ನನ್ನದೆಂದೇ ಹೇಳುತ್ತಿದ್ದಾರೆ. ಈ ಕಾರ್‌ನ ಯಾವ ದಾಖಲೆಗಳೂ ನನ್ನ ಹೆಸರಿನಲ್ಲಿಲ್ಲ. ನಾನೊಬ್ಬ ಬಡವ ಎಂದು ವ್ಯಕ್ತಿ ಹೇಳಿದ್ದಾರೆ.
One Nation One Ration Card ಯೋಜನೆಯಿಂದ ಅಂಗಡಿಗಳಿಗೆ ತಲೆಬಿಸಿ!
ಕಾರ್ಡ್ ಕೊಟ್ಟಿರೋದು ಸರ್ಕಾರ: ಇನ್ನು ನ್ಯಾಯಬೆಲೆ ಅಂಗಡಿಯ ಅಧಿಕಾರಿ, ಆತನಿಗೆ ಗೋಧಿ (wheat ) ನೀಡಿರುವುದರಲ್ಲಿ ನನ್ನ ಪಾತ್ರಏನೂ ಇಲ್ಲ. ಇದು ಸರ್ಕಾರ (Punjab) ಹಾಗೂ ಆಹಾರ ಇಲಾಖೆಗೆ ಸಂಬಂಧಪಟ್ಟ ವಿಚಾರ. ಪಡಿತರ ಚೀಟಿ ಹೊಂದಿರುವ ಬಡವನಿಗೆ ರೇಷನ್ ನೀಡುವುದಷ್ಟೇ ನಮ್ಮ ಕೆಲಸ. ಆತನ ಕೈಯಲ್ಲಿ ಈ ಕಾರ್ಡ್ ಹೇಗೆ ಬಂತು ಎನ್ನುವುದೂ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಏಪ್ರಿಲ್‌ನಿಂದ ಪಡಿತರ ಗೋಧಿ ಸಿಗಲ್ಲ: ಕೇಂದ್ರದ 5 ಕೆ ಜಿ ಅಕ್ಕಿಗೂ ಕೊಕ್ಕೆ!
ಮನೆ ಮನೆಗೆ ಹಿಟ್ಟು ನೀಡುವ ಯೋಜನೆ: ಕಡಿಮೆ ದರದಲ್ಲಿ ಗೋಧಿಯನ್ನು ನ್ಯಾಯಬೆಲೆ ಅಂಗಡಿಗಳ ನೀಡುವ ಯೋಜನೆ ಘೋಷಣೆ ಮಾಡಿದ್ದ ಪಂಜಾಬ್‌ನ ಆಪ್ ಸರ್ಕಾರ (AAP) ಈಗ ಪ್ರತಿ ಬಡವನ ಮನೆಗೂ ಹಿಟ್ಟುಗಳನ್ನು ತಲುಪಿಸುವ ಯೋಜನೆ ರೂಪಿಸಿದೆ. ಅಕ್ಟೋಬರ್ 1 ರಿಂದ ಮನೆ ಮನೆಗೆ ಹಿಟ್ಟುಗಳನ್ನು ನೀಡುವ ಯೋಜನೆ ಜಾರಿಯಾಗಲಿದೆ. ಆ ಮೂಲಕ, ಯಾರೆಲ್ಲ ಸುಳ್ಳು ಹೇಳಿ ಪಡಿತರ ಚೀಟಿಯನ್ನು ಪಡೆದುಕೊಂಡಿದ್ದಾರೆ ಎನ್ನುವುದನ್ನು ಸರ್ಕಾರ ಪಟ್ಟಿ ಮಾಡಲಿದೆ. ಪ್ರಸ್ತುತ ಶ್ರೀಮಂತರೂ ಕೂಡ ರಹಸ್ಯವಾಗಿ ಬಡವರ ಪಡಿತರ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಮನೆ ಮನೆಗೆ ಹಿಟ್ಟು (Home Delivery) ನೀಡುವ ಯೋಜನೆ ಆರಂಭವಾದ ಬಳಿಕ, ಇವರ ಬಂಡವಾಳ ತಿಳಿಯಲಿದೆ ಎನ್ನುವುದು ಸರ್ಕಾರದ ಮಾತು.