One Nation One Ration Card ಯೋಜನೆಯಿಂದ ಅಂಗಡಿಗಳಿಗೆ ತಲೆಬಿಸಿ!
ಅಂಗಡಿಗಳಿಗೆ ‘1 ದೇಶ, 1 ಪಡಿತರ ಚೀಟಿ’ ತಲೆಬಿಸಿ. ಯೋಜನೆ ಜಾರಿ ನಂತರ ವಲಸಿಗರಿಂದ ಪಡಿತರ ಬೇಡಿಕೆ ಹೆಚ್ಚಳ. ಆದರೆ ಸರ್ಕಾರದಿಂದ ಹೆಚ್ಚುವರಿ ರೇಷನ್ ಪೂರೈಕೆ ಇಲ್ಲ
ಸಂಪತ್ ತರೀಕೆರೆ
ಬೆಂಗಳೂರು (ಜು.31): ವಲಸಿಗ ಕಾರ್ಮಿಕರಿಗೆ ‘ಒಂದು ದೇಶ ಒಂದು ರೇಷನ್ ಕಾರ್ಡ್’ ಯೋಜನೆ ವರದಾನ ನಿಜ. ಆದರೆ, ಆಹಾರ ಇಲಾಖೆ ಆ ಕಾರ್ಮಿಕರಿಗೆ ನೀಡಲು ಹೆಚ್ಚುವರಿ ಪಡಿತರ ಆಹಾರ ಧಾನ್ಯವನ್ನು ನ್ಯಾಯಬೆಲೆ ಅಂಗಡಿಗಳಿಗೆ ಹಂಚಿಕೆ ಮಾಡುತ್ತಿಲ್ಲ. ಇದು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ. ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಪ್ರತಿದಿನ ಸಾವಿರಾರು ವಲಸೆ ಕಾರ್ಮಿಕರು ಬರುತ್ತಿದ್ದಾರೆ. ಹಾಗೆಯೇ ‘ಒಂದು ದೇಶ ಒಂದು ರೇಷನ್ ಕಾರ್ಡ್’ ಯೋಜನೆಯಡಿ ಪಡಿತರಕ್ಕಾಗಿ ನಿತ್ಯವೂ ಇಲ್ಲಿನ ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರಕ್ಕಾಗಿ ಕಾದು ನಿಲ್ಲುವವರ ಸಂಖ್ಯೆ ನಾಲ್ಕು ಪಟ್ಟಾಗಿದೆ. ಅದರಲ್ಲಿ ಸ್ಥಳೀಯರಿಗಿಂತ ವಲಸೆ ಕಾರ್ಮಿಕರ ಸಂಖ್ಯೆಯೇ ಹೆಚ್ಚಾಗಿರುವುದು ನ್ಯಾಯಬೆಲೆ ಅಂಗಡಿ ಮಾಲೀಕರ ಪರದಾಟಕ್ಕೆ ಕಾರಣವಾಗಿದೆ. ಒಂದು ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಎಷ್ಟುಕುಟುಂಬಗಳು ಪಡಿತರ ಚೀಟಿ ಹೊಂದಿವೆ ಎಂಬುದರ ಆಧಾರದಲ್ಲಿ ಆ ಅಂಗಡಿಗೆ ನಿಗದಿತ ಪ್ರಮಾಣದಲ್ಲಿ ಪಡಿತರ ಆಹಾರ ಧಾನ್ಯಗಳು ಹಂಚಿಕೆಯಾಗಿರುತ್ತವೆ. ಒಂದು ದೇಶ ಒಂದು ರೇಷನ್ ಕಾರ್ಡ್ ಯೋಜನೆಯಿಂದ ಒಮ್ಮೆಗೆ ಎಂಟತ್ತು ಕುಟುಂಬಗಳು ಹೆಚ್ಚುವರಿಯಾಗಿ ಸೇರ್ಪಡೆಯಾದರೆ ನ್ಯಾಯಬೆಲೆ ಅಂಗಡಿಗೆ ದಾಸ್ತಾನು ಕೊರತೆ ಉಂಟಾಗುತ್ತದೆ. ನಿಗದಿತ ಪ್ರಮಾಣದಲ್ಲಿ ಲಭ್ಯವಿರುವ ಪಡಿತರವನ್ನು ಒಂದು ವೇಳೆ ಹೆಚ್ಚುವರಿ ಕುಟುಂಬಗಳಿಗೆ ಕೊಟ್ಟರೆ ಮೂಲ ಕಾರ್ಡುದಾರರಿಗೆ ಆಹಾರ ಧಾನ್ಯ ಹಂಚಿಕೆ ಸಾಧ್ಯವಾಗುವುದಿಲ್ಲ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಬೇಡಿಕೆ ಪ್ರಸ್ತಾವನೆ ಕೊಡಲಿ: ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆಯಲ್ಲಿ ಯಾವ ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಕೊಡುವುದನ್ನು ನಿರಾಕರಿಸುವಂತಿಲ್ಲ. ಹೆಚ್ಚುವರಿ ಪಡಿತರ ಆಹಾರ ಧಾನ್ಯ ಬೇಕಿದ್ದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಬೇಡಿಕೆ ಪ್ರಸ್ತಾವನೆ ಕಳುಹಿಸಿ ಪಡೆದುಕೊಳ್ಳಬೇಕು ಎಂದು ಆಹಾರ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ವಲಸೆ ಕಾರ್ಮಿಕರೇ ಹೆಚ್ಚಾಗಿರುವ ಬೆಂಗಳೂರಿನ ಕೆಂಗೇರಿ, ವೈಟ್‌ಫೀಲ್ಡ್, ಮಹದೇವಪುರ, ಬೊಮ್ಮನಹಳ್ಳಿ, ಪೀಣ್ಯ, ಮಡಿವಾಳ, ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿ, ದಾಸರಹಳ್ಳಿ, ಸುಂಕದಕಟ್ಟೆಸೇರಿದಂತೆ ಹಲವಡೆ ಅನೇಕ ವಲಸೆ ಕಾರ್ಮಿಕ ಕುಟುಂಬಗಳಿಗೆ ಪ್ರತಿ ತಿಂಗಳು ಪಡಿತರ ಸಿಗದೆ ಪರದಾಡುವಂತ ಸ್ಥಿತಿ ಇದೆ ಎಂದು ಹಲವು ವಲಸೆ ಕಾರ್ಮಿಕರು ಆರೋಪಿಸಿದ್ದಾರೆ.
ಹಾವೇರಿಯ ಬ್ಯಾಡಗಿಯಿಂದ ಬಂದು ಬೆಂಗಳೂರಿನಲ್ಲಿ ಫ್ಯಾಕ್ಟರಿಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದೇನೆ. ಮೊದಲೆಲ್ಲಾ ಊರಿಗೆ ಹೋಗಿಯೇ ನಮ್ಮ ಕುಟುಂಬದ ಪಾಲಿನ ರೇಷನ್ ಪಡೆಯುತ್ತಿದ್ದೆ. ಲಾಕ್‌ಡೌನ್ ಬಳಿಕ ಇಲ್ಲೇ ರೇಷನ್ ಕೊಡುತ್ತಿದ್ದರು. ಆದರೆ, ಈಗ ನಿಮ್ಮ ಕಾರ್ಡ್ ಎಲ್ಲಿದೆಯೋ ಅಲ್ಲಿಗೆ ಹೋಗಿ ರೇಷನ್ ಪಡೆಯಿರಿ ಎನ್ನುತ್ತಿದ್ದಾರೆ. ಸರ್ಕಾರ ಕೊಡುತ್ತಿದ್ದ ಅಕ್ಕಿ, ಬೇಳೆಯಿಂದ ಜೀವನ ಹೇಗೋ ನಡೆಯುತ್ತಿತ್ತು ಎಂದು ಪೀಣ್ಯದ ಕೈಗಾರಿಕಾ ಪ್ರದೇಶದ ದಿನಗೂಲಿ ಕಾರ್ಮಿಕ ಹನುಮಂತಪ್ಪ ಅವರು ಕನ್ನಡಪ್ರಭದೊಂದಿಗೆ ಅಳಲು ತೋಡಿಕೊಂಡಿದ್ದಾರೆ.
'ಒನ್ ನೇಷನ್ ಒನ್ ರೇಷನ್' ಯೋಜನೆ ಜಾರಿ, ದೇಶಾದ್ಯಂತ ಎಲ್ಲಿಂದ ಬೇಕಾದ್ರೂ ಪಡಿತರ ಪಡೆಯ್ಬೋದು!
ಹೆಚ್ಚುವರಿ ಪಡಿತರ ಕೊಡಿ: ವಲಸೆ ಕಾರ್ಮಿಕರು ಹೆಚ್ಚು ವಾಸವಿರುವೆಡೆ ನ್ಯಾಯಬೆಲೆ ಅಂಗಡಿಗಳಿಗೆ ಶೇ.10ರಿಂದ 15ರಷ್ಟುಹೆಚ್ಚುವರಿ ಪಡಿತರವನ್ನು ಆಹಾರ ಇಲಾಖೆ ಕೊಟ್ಟರೆ ಒಳ್ಳೆಯದು. ಇದರಿಂದ ಹೆಚ್ಚುವರಿಯಾಗಿ ಬರುವ ಕಾರ್ಡುದಾರರಿಗೆ ಪಡಿತರ ವಿತರಿಸಬಹುದು. ಈಗಿನ ವ್ಯವಸ್ಥೆಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಶೇ.5ರಷ್ಟುಸಹ ಮೋಸ ಮಾಡಲು ಸಾಧ್ಯವಿಲ್ಲದಂತ ವ್ಯವಸ್ಥೆ ಇದೆ. ಈ ಬಗ್ಗೆ ಆಹಾರ ಇಲಾಖೆ ಚಿಂತನೆ ನಡೆಸಬೇಕು.
- ವಿಜಯಕುಮಾರ್, ರಾಜ್ಯಾಧ್ಯಕ್ಷ, ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ
ಬಡತನ ಮುಕ್ತ ಕರ್ನಾಟಕ ನಮ್ಮ ಪರಿಕಲ್ಪನೆ: ಪ್ರಧಾನಿ ಮೋದಿ
ಪ್ರತಿ ಫಲಾನುಭವಿಗೆ 10 ಕೆಜಿ ಪಡಿತರ: ರಾಜ್ಯದಲ್ಲಿ 10,95,592 ಅಂತ್ಯೋದಯ(ಫಲಾನುಭವಿಗಳು 45,62,377), ಬಿಪಿಎಲ್ 1,16,27,984 (3,90,79,454), ಎಪಿಎಲ್ 1,19,703 (6,12,717) ಕಾರ್ಡುಗಳಿವೆ. ಪ್ರತಿ ತಿಂಗಳು 2.17 ಲಕ್ಷ ಮೆಟ್ರಿಕ್ ಟನ್ ಪಡಿತರ ಆಹಾರ ಧಾನ್ಯ ಹಂಚಿಕೆಯಾಗುತ್ತಿದೆ. ಜೊತೆಗೆ ಕಳೆದ 22 ತಿಂಗಳಿನಿಂದ ಕೇಂದ್ರ ಸರ್ಕಾರವೂ ಕೂಡ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಪ್ರತಿ ಫಲಾನುಭವಿಗೆ ತಲಾ 5 ಕೆಜಿ ಅಕ್ಕಿ ವಿತರಿಸುತ್ತಿದೆ. ಹೀಗಾಗಿ ಪ್ರತಿ ಫಲಾನುಭವಿಗೆ ಕೇಂದ್ರ ಮತ್ತು ರಾಜ್ಯದಿಂದ ಒಟ್ಟು 7 ಕೆಜಿ ಅಕ್ಕಿ ಮತ್ತು 3 ಕೆಜಿ ರಾಗಿ ಹಂಚಿಕೆಯಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ಈ ಯೋಜನೆ ಮುಕ್ತಾಯಗೊಳ್ಳಲಿದ್ದು ಆಗ ರಾಜ್ಯದಿಂದ ಕೇವಲ 5 ಕೆ.ಜಿ. ಅಕ್ಕಿ ಮಾತ್ರ ಸಿಗಲಿದೆ.